ಘಟಾನುಘಟಿ ನಾಯಕರ ಮತ ಹಾಕಿದ್ರು!
– ಸಿದ್ದರಾಮನಹುಂಡಿಯಲ್ಲಿ ಮತದಾನ ಮಾಡಿದ ಸಿಎಂ ಸಿದ್ದರಾಮಯ್ಯ.!
– ದೊಡ್ಡಆಲಹಳ್ಳಿಯಲ್ಲಿ ಡಿ.ಕೆ ಶಿವಕುಮಾರ್, ಡಿ.ಕೆ ಸುರೇಶ್ ಮತದಾನ
– ಸೂಟು ಬೂಟು ಹಾಕಿಕೊಂಡು ಸ್ಟೈಲಾಗಿ ಮತದಾನ ಮಾಡಿದ ಜಮೀರ್ ಅಹಮ್ಮದ್
– ಹಾಸನದಲ್ಲಿ ಮತದಾನ ಮಾಡಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು
– ಕುಟುಂಬ ಸಮೇತರಾಗಿ ಮತದಾನ ಮಾಡಿದ ಕುಮಾರಸ್ವಾಮಿ
NAMMUR EXPRESS NEWS
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನ ಸಿದ್ದರಾಮನ ಹುಂಡಿಯಲ್ಲಿ ಮತದಾನ ಮಾಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಪ್ತ ಮತದಾನವಾಗಿದ್ದರಿಂದ ಎಷ್ಟು ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂಬುದನ್ನು ಹೇಳೋಕೆ ಆಗಲ್ಲ. ಆದರೆ ಹೆಚ್ಚು ಸ್ಥಾನದಲ್ಲಿ ಗೆಲ್ಲುತ್ತೇವೆ. ಚಾಮರಾಜನಗರ ಹಾಗೂ ಮೈಸೂರಿನಲ್ಲಿಯೂ ಗೆಲುವು ಸಾಧಿಸುತ್ತಾರೆ ಎಂದು ಹೇಳಿದರು.
ದೊಡ್ಡಆಲಹಳ್ಳಿಯಲ್ಲಿ ಡಿ.ಕೆ ಶಿವಕುಮಾರ್, ಡಿ.ಕೆ ಸುರೇಶ್ ಮತದಾನ:
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕನಕಪುರದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಂಸದ ಡಿ.ಕೆ ಸುರೇಶ್ ತಮ್ಮ ಹಕ್ಕು ಚಲಾಯಿಸಿದ್ದಾರೆ. ಇಂದು ಕನಕಪುರದ ದೊಡ್ಡಆಲನಹಳ್ಳಿಯ ಮತಗಟ್ಟೆಗೆ ತೆರಳಿದಂತ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹಾಗೂ ಸಂಸದ ಡಿ ಕೆ ಸುರೇಶ್ ಅವರು ಮತ ಚಲಾಯಿಸಿದರು.
ಸೂಟು ಬೂಟು ಹಾಕಿಕೊಂಡು ಸ್ಟೈಲಾಗಿ ಮತದಾನ ಮಾಡಿದ ಜಮೀರ್ ಅಹಮ್ಮದ್:
ಬೆಂಗಳೂರು: ಕರ್ನಾಟಕ ಲೋಕಸಭೆ ಚುನಾವಣೆ 2024 ರಲ್ಲಿ ಇಂದು ಹಲವು ರಾಜಕೀಯ ನಾಯಕರೂ ಮತದಾನ ಮಾಡಿದ್ದಾರೆ. ಅದರಲ್ಲೂ ವಿಶೇಷವಾಗಿ ಜಮೀರ್ ಅಹಮ್ಮದ್ ಮತದಾನ ಮಾಡಲು ಸ್ಟೈಲಾಗಿ ಬಂದಿದ್ದು ಎಲ್ಲರ ಗಮನ ಸೆಳೆಯಿತು. ಸೂಟು, ಬೂಟು ಜೊತೆಗೆ ಕಪ್ಪು ಕೂಲಿಂಗ್ ಗ್ಲಾಸ್ ಹಾಕಿಕೊಂಡು ಸಚಿವ ಜಮೀರ್ ಅಹಮ್ಮದ್ ಮತದಾನ ಮಾಡಲು ಫುಲ್ ರೆಡಿಯಾಗಿ ಬಂದಿದ್ದರು. ಶಿವನಗರದ ಮತಗಟ್ಟೆ 52 ರಲ್ಲಿ ಜಮೀರ್ ಅಹಮ್ಮದ್ ಮತದಾನ ಮಾಡಿದರು. ಬಳಿಕ ಮಾಧ್ಯಮಗಳಿಗೆ ಪೋಸ್ ನೀಡಿದ್ದಾರೆ.
ಹಾಸನದಲ್ಲಿ ಮತದಾನ ಮಾಡಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು:
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಹಾಸನಕ್ಕೆ ಆಗಮಿಸಿ, ಮತದಾನ ಮಾಡಿದ್ದಾರೆ. ದೇವೇಗೌಡರಿಗೆ ಅವರ ಪತ್ನಿ ಚೆನ್ನಮ್ಮ ಕೂಡ ಸಾಥ್ ಕೊಟ್ಟಿದ್ದಾರೆ. ಇದಕ್ಕೂ ಮುನ್ನ ದೇವಸ್ಥಾನಕ್ಕೆ ತೆರಳಿದ ದೇವೇಗೌಡರು, ರಾಾಜ್ಯದಲ್ಲಿ ಮೈತ್ರಿ ಸರ್ಕಾರ ಜಯಗಳಿಸಲಿ ಎಂದು ಪ್ರಾರ್ಥಿಸಿ, ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಕುಟುಂಬ ಸಮೇತರಾಗಿ ಮತದಾನ ಮಾಡಿದ ಕುಮಾರಸ್ವಾಮಿ:
ರಾಮನಗರ ಜಿಲ್ಲೆಯ ಬಿಡದಿ ಸಮೀಪದ ಕೇತಿಗಾನಹಳ್ಳಿ ಗ್ರಾಮದ ಮತಗಟ್ಟೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಕುಟುಂಬ ಸಮೇತವಾಗಿ ಮತದಾನ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಪ್ರಜಾಪ್ರಭುತ್ವದ ಗೆಲುವಿಗಾಗಿ ಮತದ ಹಕ್ಕು ಚಲಾಯಿಸಿದ್ದು ನನಗೆ ಬಹಳ ಸಂತೋಷ ತಂದಿದೆ. ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಬೇಕು ಎನ್ನುವುದು ನನ್ನ ಕಳಕಳಿ ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.