ಕರ್ನಾಟಕದಲ್ಲಿ ಮತ ದಾಖಲೆ!
– ಕಳೆದ ಬಾರಿಗಿಂತ ಏರಿಕೆ, ಮಂಡ್ಯದಲ್ಲಿ ಅತಿ ಹೆಚ್ಚು!
– ಕರುನಾಡಲ್ಲಿ ಶಾಂತಿಯುತ ಮತದಾನ
– ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಅತೀ ಕಡಿಮೆ
– 247 ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ
NAMMUR EXPRESS NEWS
ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆ 2024ರ ಮೊದಲ ಹಂತದ ಮತದಾನ ಶುಕ್ರವಾರ ಮುಕ್ತಾಯವಾಗಿದೆ. ಒಂದೆರಡು ಕಡೆ ಸಣ್ಣಪುಟ್ಟ ಅಹಿತಕರ ಘಟನೆಗಳು ಹೊರತುಪಡಿಸಿದರೆ ಎಲ್ಲೆಡೆ ಬಹುತೇಕ ಶಾಂತಿಯುತವಾಗಿ ಮತದಾನ ಜರುಗಿದ್ದು, 14 ಕ್ಷೇತ್ರಗಳಲ್ಲಿ ಸಂಜೆ 6 ಗಂಟೆವರೆಗೆ ಒಟ್ಟು ಶೇ.69.23 ಮತದಾನ ದಾಖಲಾಗಿದೆ. ಮಂಡ್ಯ ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾನವಾಗಿದ್ದು, ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಅತಿ ಕಡಿಮೆ ಮತದಾನ ದಾಖಲಾಗಿದೆ. ಮಂಡ್ಯ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ ಶೇ.81.48 ಮತದಾನವಾಗಿದ್ದು, ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಅತಿ ಕಡಿಮೆ ಅಂದರೆ 52.81 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಇನ್ನು ಮೊದಲ ಹಂತದಲ್ಲಿ ಒಟ್ಟು 2,88,08,182 ಮತದಾರರು ಮತ ಚಲಾಯಿಸಿದ್ದು, 14 ಕ್ಷೇತ್ರಗಳಲ್ಲಿ 118 ಪಕ್ಷೇತರ ಅಭ್ಯರ್ಥಿಗಳು ಸೇರಿ 247 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಇದರಲ್ಲಿ 226 ಪುರುಷ, 21 ಮಹಿಳಾ ಅಭ್ಯರ್ಥಿಗಳಿದ್ದಾರೆ. ಜೂನ್ 4ರಂದು ಫಲಿತಾಂಶ ಹೊರಬೀಳಲಿದೆ.
ಇಂಡಿಗನತ್ತ ಮತಗಟ್ಟೆಯಲ್ಲಿ ಮರು ಮತದಾನ ಸಾಧ್ಯತೆ
ಚಾಮರಾಜನಗರದ ಹನೂರು ತಾಲೂಕಿನ ಇಂಡಿಗನತ್ತ ಗ್ರಾಮದ ಮತಗಟ್ಟೆಯಲ್ಲಿ ಮರು ಮತದಾನ ನಡೆಯುವ ಸಾಧ್ಯತೆ ಇದೆ. ಶುಕ್ರವಾರ ಕೇವಲ 10 ಮತದಾರರು ಮಾತ್ರ ಹಕ್ಕು ಚಲಾವಣೆ ಮಾಡಿದ್ದಾರೆ. ಮತಗಟ್ಟೆಯಲ್ಲಿ ಮೂಲಸೌಕರ್ಯ ಇಲ್ಲ ಎಂದು ಮತದಾರರು ಅಸಮಾಧಾನ ಹೊರಹಾಕಿ ಮತದಾನ ಬಹಿಷ್ಕರಿಸಿದ್ದರು. ಹೀಗಾಗಿ 2 ದಿನಗಳೊಳಗೆ ಅಧಿಕಾರಿಗಳು ಮಾತುಕತೆ ನಡೆಸಿ ಮರು ಮತದಾನ ಮಾಡಿಸುವ ಸಾಧ್ಯತೆ ಇದೆ.
ಮತದಾನದ ಸಮಯ ಮುಕ್ತಾಯಗೊಳ್ಳುತ್ತಿದ್ದಂತೆ ಅಧಿಕಾರಿಗಳು ಗೇಟ್ ಮುಚ್ಚಿದರು. ಈ ವೇಳೆ ಮೊದಲೇ ಬಂದು ಸರತಿಯಲ್ಲಿ ಸಾಲಿನಲ್ಲಿ ನಿಂತವರಿಗೆ ಮಾತ್ರ ಅವಕಾಶ ನೀಡಲಾಯಿತು. ಕೆಲವರು ಅ ಬಳಿಕ ಬಂದರೂ ಅವರಿಗೆ ಅವಕಾಶ ನೀಡಲು ಹಿರಿಯ ಅಧಿಕಾರಿಗಳು ಒಪ್ಪಲಿಲ್ಲ. ಎಲ್ಲರೂ ಮತ ಚಲಾವಣೆ ಮಾಡಿದ ಬಳಿಕ ಹಿರಿಯ ಅಧಿಕಾರಿಗಳು ಇವಿಎಂ ಯಂತ್ರಗಳಿಗೆ ಸೀಲ್ ಮಾಡಿದರು. ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಅವರು ಮತ ಯಂತ್ರಗಳನ್ನು ಪ್ಯಾಕ್ ಮಾಡಿದರು. ಈ ಮತಪೆಟ್ಟಿಗಳು ಇನ್ನು ಭಾರೀ ಭದ್ರತೆಯೊಂದಿಗೆ ನಿಗದಿತ ಸ್ಟ್ರಾಂಗ್ ರೂಮ್ಗೆ ರವಾನೆಯಾಗಲಿವೆ.
ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ?
ಕ್ಷೇತ್ರ ಲೋಕಸಭಾ ಚುನಾವಣೆ-2024 ಮತ್ತು ಲೋಕಸಭಾ ಚುನಾವಣೆ-2019
ಉಡುಪಿ-ಚಿಕ್ಕಮಗಳೂರು ಶೇ. 76.06 ಶೇ. 76.07
ಹಾಸನ ಶೇ. 77.51 ಶೇ. 77.35
ದಕ್ಷಿಣ ಕನ್ನಡ ಶೇ. 77.43 ಶೇ. 77.99
ಚಿತ್ರದುರ್ಗ ಶೇ. 73.11 ಶೇ. 70.80
ತುಮಕೂರು ಶೇ. 77.70 ಶೇ. 77.43
ಮಂಡ್ಯ ಶೇ. 81.48 ಶೇ. 80.59
ಮೈಸೂರು–ಕೊಡಗು ಶೇ. 70.45 ಶೇ. 69.51
ಚಾಮರಾಜನಗರ ಶೇ. 76.59 ಶೇ. 75.35
ಬೆಂಗಳೂರು ಗ್ರಾಮಾಂತರ ಶೇ.67.29 ಶೇ. 64.98
ಬೆಂಗಳೂರು ಉತ್ತರ ಶೇ.54.42 ಶೇ. 54.76
ಬೆಂಗಳೂರು ಸೆಂಟ್ರಲ್ ಶೇ. 52.81 ಶೇ. 54.32
ಬೆಂಗಳೂರು ದಕ್ಷಿಣ ಶೇ. 53.15 ಶೇ. 53.70
ಚಿಕ್ಕಬಳ್ಳಾಪುರ ಶೇ. 76.82 ಶೇ. 76.74
ಕೋಲಾರ ಶೇ. 78.07 ಶೇ. 77.25