ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ಬಂದ ತಕ್ಷಣ ಎಸ್ಐಟಿ ವಶಕ್ಕೆ?
– ಮೇ 4ರಂದು ವಿಚಾರಣೆಗೆ ಹಾಜರಾಗುವ ಸಾಧ್ಯತೆ
– ಜರ್ಮನಿಯಲ್ಲಿರುವ ಹಾಸನ ಸಂಸದ
NAMMUR EXPRESS NEWS
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಅತೀವ ಕೋಲಾಹಲ ಸೃಷ್ಟಿಸಿರುವ ಹಾಸನದ ಪೆನ್ಡ್ರೈವ್ ಪ್ರಕರಣದ ಅಶ್ಲೀಲ ವಿಡಿಯೋದಲ್ಲಿರುವ ಪ್ರಧಾನ ಆರೋಪಿ, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಮೇ 3ರಂದು ತಡರಾತ್ರಿ ಬೆಂಗಳೂರಿಗೆ ಆಗಮಿಸಲಿದ್ದಾರೆ ಎಂದು ಗೊತ್ತಾಗಿದೆ. ಸದ್ಯ ಅವರು ಜರ್ಮನಿಯ ಫ್ರಾಂಕ್ಫರ್ಟ್ನಲ್ಲಿದ್ದಾರೆ. ಲುಪ್ತಾನ್ಸಾ ಏರ್ಲೈನ್ಸ್ನಲ್ಲಿ ಮೇ 3ರ ಪ್ರಯಾಣಕ್ಕೆ ಪ್ರಜ್ವಲ್ ಟಿಕೆಟ್ ಬುಕ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಮೇ 3 ಮಧ್ಯರಾತ್ರಿ ಕೆಂಪೇಗೌಡ ಏರ್ಪೋರ್ಟ್ಗೆ ಅವರು ಆಗಮಿಸಬಹುದು. ಮೇ 4ರಂದು ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ. ಅಥವಾ ಅವರು ವಿಮಾನದಿಂದ ಇಳಿದ ಕೂಡಲೇ ಅವರನ್ನು ವಿಶೇಷ ತನಿಖಾ ತಂಡ (SIT) ವಶಕ್ಕೆ ಪಡೆಯುವ ಸಾಧ್ಯತೆ ಇದೆ. ಮೊದಲ ಹಂತದ ಮತದಾನದ ದಿನವೇ ಪ್ರಜ್ವಲ್ ಅವರು ದೇಶ ಬಿಟ್ಟು ತೆರಳಿದ್ದರು. ಬ್ಯುಸಿನೆಸ್ ವೀಸಾವನ್ನು ಅವರು ಹೊಂದಿದ್ದಾರೆ. ಟೂರಿಸ್ಟ್ ವೀಸಾದಲ್ಲಿ ಅವರು ಜರ್ಮನಿಗೆ ತೆರಳಿದ್ದು, ಇದರ ಅವಧಿ 90 ದಿನಗಳ ಕಾಲ ಚಾಲೂ ಇರುತ್ತದೆ. CRPC41A ಸೆಕ್ಷನ್ ಪ್ರಕಾರ, ಅವರು ನೋಟೀಸ್ಗೆ ಸ್ಪಂದಿಸಿ ಹಾಜರಾಗದೆ ಇದ್ದರೆ ಅವರನ್ನು ಬಂಧಿಸಬಹುದಾಗಿದೆ.
ಆದರೆ ಹಾಗೆ ಏಕಾಏಕಿ ಯಾರನ್ನೂ ಬಂಧಿಸಲು ಮುಂದಾಗುವುದಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಇಂದು ಬೆಳಗ್ಗೆ ಹೇಳಿದ್ದಾರೆ. “ಅದಕ್ಕೆ ಪುರಾವೆಗಳು, ದೂರು, ದೂರಿನಲ್ಲಿ ಏನು ಹೇಳಿರುತ್ತಾರೆ ಅನ್ನೋದು ಮುಖ್ಯ. ಯಾವ ಸೆಕ್ಷನ್ ಬರುತ್ತೆ, ಅದರಲ್ಲಿ ಅರೆಸ್ಟ್ ಮಾಡಬಹುದಾ, ಬೇಲ್ ಕೇಸಾ, ನಾನ್ ಬೇಲ್ ಕೇಸಾ ಅಂತ ನೋಡಬೇಕು. ಅದಕ್ಕೆ 41A CRPC ಸೆಕ್ಷನ್ ಅಡಿ ನೊಟೀಸ್ ಕೊಟ್ಟಿದ್ದಾರೆ. ಅವರು 24 ಗಂಟೆ ಒಳಗೆ ಒಂದು ಹಾಜರಾಗಬೇಕು. ಹಾಜರಾಗದೇ ಹೋದರೆ SITಯವರು ಮುಂದಿನ ಪ್ರಕ್ರಿಯೆ ಮಾಡ್ತಾರೆ” ಎಂದಿದ್ದಾರೆ.
ಪ್ರಜ್ವಲ್ ತನಿಖೆ ಮುಖ್ಯ!
ಸದ್ಯ ಪ್ರಜ್ವಲ್ ತನಿಖೆ ಎಸ್ಐಟಿಗೆ ತುಂಬಾ ಮುಖ್ಯವಾಗಿದೆ. ಎ1 ರೇವಣ್ಣ ಆಗಿದ್ದರೂ ಪ್ರಕರಣಗಳು ಹೊರಬಂದಿದ್ದು ಪ್ರಜ್ವಲ್ ರೇವಣ್ಣ ವಿಡೀಯೋಗಳಿಂದ ಆಗಿದೆ. ಹೀಗಾಗಿ ಪ್ರಜ್ವಲ್ ರೇವಣ್ಣ ಸ್ಟೇಟ್ಮೆಂಟ್ ಇಲ್ಲಿ ಅಗತ್ಯವಿದೆ. ಮಾಜಿ ಸಚಿವ ಎಚ್.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ಇವರಿಬ್ಬರ ಹೊಳೆನರಸೀಪುರ ಮನೆಯ ಬಾಗಿಲಿಗೆ ಇಂದು ನೊಟೀಸ್ ಅನ್ನು ಎಸ್ಐಟಿ (SIT) ಟೀಂ ಅಂಟಿಸಿದೆ. ಮನೆಯಲ್ಲಿ ಯಾರೂ ಇಲ್ಲದ ಕಾರಣ ಮನೆಯ ಬಾಗಿಲಿಗೆ ನೊಟೀಸ್ ಅಂಟಿಸಿದ್ದು, ಎಸ್ಐಟಿ ತನಿಖೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ ಎನ್ನಲಾಗಿದೆ. ತನಿಖೆಗೆ ಬೇಕು ಎಂದರೆ ಪ್ರಜ್ವಲ್ ಹಾಜರಾಗ್ತಾನೆ ಎಂದು ಹೆಚ್.ಡಿ ರೇವಣ್ಣ ಹೇಳಿದ್ದಾರೆ. ಪ್ರಜ್ವಲ್ ಬಾರದಿದ್ದಲ್ಲಿ ತನಿಖೆ ನಿಧಾನಗತಿಯಲ್ಲಿ ಸಾಗಬಹುದು. ಆದರೆ ಈಗಾಗಲೇ ಎಸ್ಐಟಿ ವಿಚಾರಣೆ ನೋಟೀಸ್ ಜಾರಿ ಮಾಡಿದೆ.
ಇದಕ್ಕೆ ಉತ್ತರಿಸದೆ ತಲೆ ಮರೆಸಿಕೊಂಡರೆ ಆರೋಪಿಗೆ ಇಂಟರ್ಪೋಲ್ ಮುಖಾಂತರ ರೆಡ್ ಕಾರ್ನರ್ ಅಥವಾ ಲುಕ್ ಔಟ್ ನೊಟೀಸ್ ಜಾರಿ ಮಾಡುವ ಸಾಧ್ಯತೆಯೂ ಎಸ್ಐಟಿ ಮುಂದಿದೆ. ಈಗಾಗಲೇ ಡ್ರೈವರ್ ಕಾರ್ತಿಕ್ನನ್ನು ಎಸ್ಐಟಿ ವಿಚಾರಣೆಗೊಳಪಡಿಸಿದೆ. ಹಾಗೂ ಸಂತ್ರಸ್ತೆಯ ಹೇಳಿಕೆಯನ್ನೂ ದಾಖಲಿಸಿದೆ. ನಾಳೆ ಅಥವ ನಾಡಿದ್ದು CRPC 164 ಅಡಿಯಲ್ಲಿ ಸ್ಟೆಟ್ಮೆಂಟ್ ಪಡೆಯಲಿದೆ. ವಿಚಾರಣೆ ಬಳಿಕ ಕಾರ್ತೀಕ್ ಮೊಬೈಲ್ ಸೀಜ್ ಮಾಡಿ ಎಫ್ಎಸ್ಎಲ್ಗೆ ವಿಧಿವಿಜ್ಞಾನ ಪರಿಶೀಲನೆಗಾಗಿ ಕಳಿಸಲಾಗಿದೆ.