ಟಾಪ್ ನ್ಯೂಸ್ ಕರಾವಳಿ
ಮಂಗಳೂರು : ಮನೆಯ ಮೇಲೆ ಸಿಸಿಬಿ ದಾಳಿ
– ನಿಷೇಧಿತ ಎಂಡಿಎಂಎ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ
– ಉಪ್ಪಿನಂಗಡಿ: ಮಗು ಸಹಿತ ಮಹಿಳೆ ನಾಪತ್ತೆ
– ಉಡುಪಿ: ಸಮುದ್ರಪಾಲಾಗುತ್ತಿದ್ದ ಬಾಲಕನ ರಕ್ಷಣೆ.!
– ಬೆಳ್ತಂಗಡಿ: ಮನೆಗೆ ನುಗ್ಗಿ ಮಹಿಳೆ ಹಾಗೂ ಮಗನ ಮೇಲೆ ಹಲ್ಲೆ
NAMMUR EXPRESS NEWS
ಮಂಗಳೂರು : ಮನೆಯೊಂದರಲ್ಲಿ ಇಬ್ಬರು ವ್ಯಕ್ತಿಗಳು ಸೇರಿಕೊಂಡು ಬೃಹತ್ ಪ್ರಮಾಣದಲ್ಲಿ ಅಕ್ರಮವಾಗಿ MDMA ಎಂಬ ಮಾದಕ ವಸ್ತುವನ್ನು ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ ಘಟನೆ ನಗರದ ಕೋಟೆಕಾರ್ ಬೀರಿ ಎಂಬಲ್ಲಿ ನಡೆದಿದೆ. ಬಂಧಿತರನ್ನು ಮೊಹಮ್ಮದ್ ಇಶಾನ್ (35), ಜಾಫರ್ ಸಾಧಿಕ್ (35) ಎಂದು ಗುರುತಿಸಲಾಗಿದೆ. ಬೆಂಗಳೂರಿನಿಂದ ಮಾದಕ ವಸ್ತುವನ್ನು ಖರೀದಿಸಿ ತಂದು ಮಂಗಳೂರಿನಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಮಾರಾಟ ಮಾಡಿ ಹಣ ಸಂಪಾದನೆ ಮಾಡಲು ಪ್ರಯತ್ನಿಸುತ್ತಿದ್ದರು. ಆರೋಪಿಗಳಿಂದ 9,00,000/- ರೂ ಮೌಲ್ಯದ 407 ಗ್ರಾಂ ನಿಷೇಧಿತ MDMA ಮಾದಕ ವಸ್ತು, ಡಿಜಿಟಲ್ ತೂಕ ಮಾಪನ, ಮೊಬೈಲ್ ಫೋನ್ ಗಳು ಹಾಗೂ ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 16,13,800/- ರೂ. ಎಂದು ಅಂದಾಜಿಸಲಾಗಿದೆ.
ಆರೋಪಿಗಳಲ್ಲಿ ಜಾಫರ್ ಸಾದಿಕ್ ಎಂಬಾತನ ಮೇಲೆ ಈ ಹಿಂದೆ ಮಂಗಳೂರು ನಗರದ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಗಾಂಜಾ ಮಾರಾಟ, ಹಲ್ಲೆ ಹಾಗೂ ಕೊಲೆಯತ್ನ ಹಾಗೂ ಕೊಡಗು ಜಿಲ್ಲೆಯ ಕುಶಾಲ ನಗರ ಠಾಣೆಯಲ್ಲಿ ದರೋಡೆ ಪ್ರಕರಣಗಳು ಸೇರಿದಂತೆ ಒಟ್ಟು 09 ಪ್ರಕರಣಗಳು ದಾಖಲಾಗಿರುತ್ತವೆ. ಮೊಹಮ್ಮದ್ ಇಶಾನ್ ಎಂಬಾತನ ಮೇಲೆ ಈ ಹಿಂದೆ ಮಂಗಳೂರು ನಗರದ ಕೊಣಾಜೆ ಪೊಲೀಸ್ ಠಾಣೆಯಲ್ಲಿ MDMA ಮಾರಾಟ ಪ್ರಕರಣ ದಾಖಲಾಗಿರುತ್ತದೆ.
– ಉಪ್ಪಿನಂಗಡಿ: ಮಗು ಸಹಿತ ಮಹಿಳೆ ನಾಪತ್ತೆ
ಉಪ್ಪಿನಂಗಡಿ: ಕೌಕ್ರಾಡಿ ಗ್ರಾಮದ ಕಟ್ಟೆ ಮಜಲು ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಉತ್ತರ ಪ್ರದೇಶ ಮೂಲದ ಸೋನು ಸೋಂಕರ್ ಎಂಬವರ ಪತ್ನಿ ರೀಮಾ ಸೋಂಕರ್ (26) ಮತ್ತು ಮಗು ರಿಯಾ (1) ಎಂಬಿಬ್ಬರು ನಾಪತ್ತೆಯಾಗಿ ರುವ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಂಟಿರಿಯರ್ ಡೆಕೊರೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸೋನು ಸೋಂಕರ್ ಉತ್ತರ ಪ್ರದೇಶದ ಅಜಾಮ್ ಘರ್ ಜಿಲ್ಲೆಯ ಅಮಹಾಮಾಫಿ ಗ್ರಾಮದ ನಿವಾಸಿಯಾಗಿದ್ದು, ಕೌಕ್ರಾಡಿಯಲ್ಲಿ ಕೃಷ್ಣಪ್ಪ ಎಂಬವರ ಬಾಡಿಗೆ ಮನೆಯಲ್ಲಿ ಕುಟುಂಬ ದೊಂದಿಗೆ ವಾಸವಿದ್ದರು. ಸೋನು ಸೋಂಕರ್ ಎ.22 ಬೆಳಗ್ಗೆ ಕೆಲಸಕ್ಕೆಂದು ಹೋಗಿದ್ದು ವಾಪಸ್ಸು ಸಂಜೆ 7.30 ಗಂಟೆಗೆ ಮನೆಗೆ ಬಂದಾಗ ಮನೆಯ ಬಾಗಿಲಿಗೆ ಬೀಗ ಹಾಕಲಾಗಿತ್ತು.
ಬಾಗಿಲು ತೆರೆದು ಒಳ ಪ್ರವೇಶಿಸಿದಾಗ ಮನೆಯಲ್ಲಿ ಪತ್ನಿ ರೀಮಾ ಸೋಂಕರ್ ಮತ್ತು 1 ವರ್ಷ ಪ್ರಾಯದ ಮಗು ರಿಯಾ ಮನೆಯಲ್ಲಿ ಇಲ್ಲದೇ ಆಕೆ ಉಪಯೋಗಿಸುತ್ತಿದ್ದ ಮೊಬೈಲ್ ಫೋನ್ ನೆಲದಲ್ಲಿ ಬಿದ್ದುಕೊಂಡಿತ್ತು. ಮನೆ ಮಾಲೀಕರು ಹಾಗೂ ಅಕ್ಕಪಕ್ಕದ ಮನೆಯವರಲ್ಲಿ ರೀಮಾಳ ಬಗ್ಗೆ ವಿಚಾರಿಸಿ ದಾಗ ಅವಳು ಬೆಳಿಗ್ಗೆ 10 ಗಂಟೆಗೆ ಮನೆಗೆ ಬೀಗ ಹಾಕಿ ಮಗುವಿನೊಂದಿಗೆ ಹೋಗುವುದನ್ನು ಕಂಡಿರುವುದಾಗಿ ತಿಳಿಸಿದ್ದು ನಂತರ ಎಲ್ಲಾ ಕಡೆ ಹುಡುಕಿದರು ಎಲ್ಲಿಯೂ ಪತ್ತೆಯಾಗದೇ ಇರುವುದರಿಂದ ವಿಳಂಬಿಸಿ ಪೊಲೀಸರಿಗೆ ದೂರು ನೀಡಲಾಗಿದೆ. ನಾಪತ್ತೆಯಾಗಿರುವ ತಾಯಿ ಮಗುವಿನ ಬಗ್ಗೆ ಯಾರಿಗಾರದರೂ ಸುಳಿವು ಸಿಕ್ಕಲ್ಲಿ ಉಪ್ಪಿನಂಗಡಿ ಠಾಣೆಗೆ ಮಾಹಿತಿ ನೀಡಬೇಕಾಗಿ ವಿನಂತಿಸಲಾಗಿದೆ.
– ಉಡುಪಿ: ಸಮುದ್ರಪಾಲಾಗುತ್ತಿದ್ದ ಬಾಲಕನ ರಕ್ಷಣೆ.!
ಉಡುಪಿ : ಮಲ್ಪೆ ಬೀಚ್ ಗೆ ಪ್ರವಾಸಕ್ಕೆ ಬಂದ ಬಾಲಕನೊಬ್ಬ ಸಮುದ್ರಪಾಲಾಗುತ್ತಿದ್ದ ವೇಳೆ ಲೈಫ್ ಗಾರ್ಡ್ ಬಾಲಕನ ರಕ್ಷಣೆ ಮಾಡಿದ ಘಟನೆ ನಿನ್ನೆ ನಡೆದಿದೆ. ಕುಟುಂಬದೊಂದಿಗೆ ಬಂದಿದ್ದ ಚಿಕ್ಕಬಳ್ಳಾಪುರ ಮೂಲದ ಶ್ರೇಯಸ್ (12), ನೀರಿನಲ್ಲಿ ಆಟವಾಡಲು ಸಮುದ್ರಕ್ಕಿಳಿದಿದ್ದ. ಈ ವೇಳೆ ಘಟನೆ ನಡೆದಿದ್ದು, ಕೂಡಲೇ ಎಚ್ಚೆತ್ತ ಮಲ್ಪೆ ಲೈಫ್ ಗಾರ್ಡ್ ಸಿಬ್ಬಂದಿಗಳು ಬಾಲಕನನ್ನು ರಕ್ಷಣೆ ಮಾಡಿದ್ದಾರೆ. ಪ್ರಾಥಮಿಕ ಚಿಕಿತ್ಸೆಯ ಬಳಿಕ ಬಾಲಕ ಕುಟುಂಬದವರೊಂದಿಗೆ ತೆರಳಿದಿದ್ದಾನೆ. ಈ ಕುರಿತು ಮಲ್ಪೆ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
– ಬೆಳ್ತಂಗಡಿ: ಮನೆಗೆ ನುಗ್ಗಿ ಮಹಿಳೆ ಹಾಗೂ ಮಗನ ಮೇಲೆ ಹಲ್ಲೆ
ಬೆಳ್ತಂಗಡಿ: ತಂಡವೊಂದು ಮನೆಗೆ ನುಗ್ಗಿ ಮಹಿಳೆ ಹಾಗೂ ಮಗನ ಮೇಲೆ ಹಲ್ಲೆ ನಡೆಸಿದ ಘಟನೆ ಬೆಳ್ತಂಗಡಿ ತಾಲೂಕಿನ ಕಳೆಂಜದಲ್ಲಿ ನಡೆದಿದ್ದು ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕಳೆಂಜ ಗ್ರಾಮದ ನಿವಾಸಿ ಸೇಸಮ್ಮ ಎಂಬವರ ಮನೆಯಲ್ಲಿ ಎ.30ರಂದು ರಾತ್ರಿ ಪೂಜಾ ಕಾರ್ಯ ನಡೆಯುತ್ತಿದ್ದ ಸಂದರ್ಭ ಅವರ ಸಂಬಂಧಿಕರೇ ಆದ ಯೋಗೀಶ್, ಆನಂದ ಬೀಜದಡಿ, ಶೇಖರ್, ಆನಂದ ಕುಲಾಡಿ, ಅಣ್ಣು ಗೌಡ, ಹರೀಶ್ ಹಾಗೂ ಇತರರು ಮನೆ ಬಳಿ ಬಂದು ಸೇಸಮ್ಮ ಅವರ ಮಗ ಹರೀಶ್ ನನ್ನು ಉದ್ದೇಶಿಸಿ ಅವಾಚ್ಯವಾಗಿ ಬೈದಿದ್ದಾರೆ. ಇದಾದ ಬಳಿಕ ಯೋಗೀಶ್ ಎಂಬಾತ ಬಂದು ಹರೀಶ್ ಹಾಗೂ ದೀಕ್ಷಿತ್ ಎಂಬವರ ಮೇಲೆ ಹಲ್ಲೆ ನಡೆಸಿದ್ದಾರೆ ಇದನ್ನು ನೋಡಿ ತಡೆಯಲು ಹೋದ ಸೇಸಮ್ಮ ಅವರನ್ನು ಆರೋಪಿಗಳು ಸೇರಿ ದೂಡಿ ಹಾಕಿ ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ ಕ್ರ 28/2024, ಕ್ರ : 448,504, 323,506 3 34 ಐ ಪಿ ಸಿ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.