ರೇವಣ್ಣ ಅರೆಸ್ಟ್!
– ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ
– ಜೆಡಿಎಸ್ ಶಾಸಕ ರೇವಣ್ಣ ಜೈಲುಪಾಲು?
– ಪ್ರಜ್ವಲ್ ಬಂಧನಕ್ಕೂ ಸಿದ್ಧತೆ
NAMMUR EXPRESS NEWS
ಬೆಂಗಳೂರು: ರಾಜ್ಯದ ರಾಜಕೀಯ ಇತಿಹಾಸದಲ್ಲಿ ಮಹತ್ವದ ಬೆಳೆವಣಿಗೆ ನಡೆದಿದ್ದು, ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಹಾಗೂ ಹೊಳೆನರಸೀಪುರ ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣ ಅವರನ್ನು ಎಸ್ಐಟಿ ಬಂಧಿಸಿದೆ. ಮಾಜಿ ಪ್ರಧಾನಿ ದೇವೇಗೌಡ ಅವರ ನಿವಾಸದಲ್ಲಿ ರೇವಣ್ಣ ಅವರನ್ನು ಬಂಧಿಸಲಾಗಿದೆ. ಇಂದು ರಾತ್ರಿಯೇ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ. ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಎಚ್ ಡಿ ರೇವಣ್ಣ ಅವರಿಗೆ ಜನಪ್ರತಿನಿಧಿ ನ್ಯಾಯಾಲಯ ಶನಿವಾರ ನಿರೀಕ್ಷಣಾ ಜಾಮೀನು ನಿರಾಕರಿಸಿದೆ. ಜಾಮೀನು ಸಿಗದ ಬೆನ್ನಲ್ಲೇ ಅವರನ್ನು ವಿಶೇಷ ತನಿಖಾ ತಂಡ ವಶಕ್ಕೆ ಪಡೆದಿದೆ.
ಎಚ್ ಡಿ ರೇವಣ್ಣರನ್ನು ವಶಕ್ಕೆ ಪಡೆದ ಅಧಿಕಾರಿಗಳು ನೇರವಾಗಿ ಎಸ್ಐಟಿ ಕಚೇರಿಗೆ ಕರೆದುಕೊಂಡು ಹೋಗಿದ್ದಾರೆ. ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ದೌರ್ಜನ್ಯದ ವಿಡಿಯೋಗಳಲ್ಲಿ ಕಾಣಿಸಿಕೊಂಡಿರುವ ಅನೇಕ ಮಹಿಳೆಯರಲ್ಲಿ ಒಬ್ಬರಾಗಿದ್ದ ತನ್ನ ತಾಯಿಯನ್ನು ಅಪಹರಿಸಿದ್ದಾರೆ ಎಂದು 20 ವರ್ಷದ ವ್ಯಕ್ತಿಯೊಬ್ಬರು ಮೈಸೂರಿನಲ್ಲಿ ಕೆಆರ್ ನಗರ ಠಾಣೆಯಲ್ಲಿ ಪೊಲೀಸ್ ದೂರು ದಾಖಲಿಸಿದ್ದಾರೆ. ಅಪಹರಣ, ದೌರ್ಜನ್ಯ ಪ್ರಕರಣದಲ್ಲಿ ರೇವಣ್ಣರನ್ನು ಎಸ್ಐಟಿ ವಶಕ್ಕೆ ಪಡೆದಿದೆ.
ಮಗನ ಅರೆಸ್ಟ್ ಸಾಧ್ಯತೆ?
ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ಮತ್ತು ಎಚ್ ಡಿ ರೇವಣ್ಣ ವಿರುದ್ಧ ಎಸ್ಐಟಿ ಶನಿವಾರ ಎರಡನೇ ಲುಕ್ಔಟ್ ನೋಟಿಸ್ ಜಾರಿ ಮಾಡಿದೆ. ಇದರ ಜೊತೆಗೆ ಕೇಂದ್ರ ತನಿಖಾ ದಳವು ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಜಾರಿ ಮಾಡುವ ಸಾಧ್ಯತೆಯಿದೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಹಿತಿ ನೀಡಿದೆ.
ರೇವಣ್ಣ ಸಹಚರರ ಬಂಧನ
ಎಚ್ ಡಿ ರೇವಣ್ಣ ಅವರ ಸಹಚರರು ತಮ್ಮ ತಾಯಿಯನ್ನು ಅಪಹರಿಸಿದ್ದಾರೆ ಎಂದು ಆರೋಪಿಸಿ 20 ವರ್ಷದ ಯುವಕನೊಬ್ಬ ಪೊಲೀಸ್ ದೂರು ದಾಖಲಿಸಿದ್ದಾರೆ. ಮಹಿಳೆಯನ್ನು ಹುಣಸೂರಿನಲ್ಲಿ ಪತ್ತೆಹಚ್ಚಲಾಗಿದೆ ಮತ್ತು ಪ್ರಸ್ತುತ, ಅವರು ಮಹಿಳೆಯಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಅಪಹರಣ ಪ್ರಕರಣದ ಆರೋಪಿ ಸತೀಶ್ ಬಾಬು ಅಲಿಯಾಸ್ ಸತೀಶ್ ಬಾಬಣ್ಣನನ್ನು ಪೊಲೀಸರು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಮಹಿಳೆಯರ ಗೌರವ ಕಾಪಾಡಿದ್ದೇವೆ: ಸರ್ಕಾರದ ಪೋಸ್ಟ್!
ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ. ನಮ್ಮ ಸರ್ಕಾರ ಮಹಿಳೆಯರ ಘನತೆ ಕಾಪಾಡಿದೆ. ಮಹಿಳೆಯರ ರಕ್ಷಣೆ ನಮ್ಮ ಹೊಣೆ ಎಂದು ಸರ್ಕಾರ ಪೋಸ್ಟ್ ಮಾಡಿದೆ.
ಜೆಡಿಎಸ್ ತಜ್ಞರ ತುರ್ತು ಸಭೆ
ರೇವಣ್ಣ ಬಂಧನದ ಬೆನ್ನಲ್ಲೇ ಜೆಡಿಎಸ್ ನಾಯಕರು, ಕಾನೂನು ತಜ್ಞರು ತಾಜ್ ವೆಸ್ಟ್ ಎಂಡ್ ಹೋಟೆಲಲ್ಲಿ ತುರ್ತು ಸಭೆ ಕರೆದಿದ್ದಾರೆ.