ಸೈಡ್ ಕೊಟ್ಟಿಲ್ಲ ಎಂದು ಸರ್ಕಾರಿ ಬಸ್ ಅಡ್ಡಗಟ್ಟಿ ಚಾಲಕನಿಗೆ ಹಲ್ಲೆ!
– ಎರಡು ಕಾರಿನಲ್ಲಿ ಬಂದಿದ್ದ ಯುವಕರ ಪುಂಡಾಟ: ದೂರು
– ಬಂಟ್ವಾಳ ಕಲ್ಲಡ್ಕ ಸಮೀಪದ ದಾಸಕೋಡಿಯಲ್ಲಿ ಘಟನೆ
– ಹಿರಿಯ ಕೊಂಕಣಿ ಸಾಹಿತಿ ರೊನಾಲ್ಡೊ ಸಿಕ್ವೇರಾ ನಿಧನ
– ಕೊಂಕಣಿ ಸಾಹಿತ್ಯ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ
NAMMUR EXPRESS NEWS
ಬಂಟ್ವಾಳ: ತಮ್ಮ ಕಾರಿಗೆ ಸೈಡ್ ಕೊಟ್ಟಿಲ್ಲ ಕಾರಣಕ್ಕಾಗಿ ಕೆ.ಎಸ್.ಆರ್.ಟಿ.ಸಿ.ಬಸ್ ಚಾಲಕನಿಗೆ ಅಪರಿಚಿತ ಯುವಕರ ತಂಡವೊಂದು ಹಲ್ಲೆ ನಡೆಸಿ, ಬಸ್ ಗೆ ಹಾನಿಗೊಳಿಸಿದ ಘಟನೆ ಕಲ್ಲಡ್ಕ ಸಮೀಪದ ದಾಸಕೋಡಿ ಎಂಬಲ್ಲಿ ನಡೆದಿದೆ.
ಪುಂಜಾಲಕಟ್ಟೆ ನಿವಾಸಿ ಕೃಷ್ಣಪ್ಪ ಅವರು ಬಸ್ ಚಾಲಕನಾಗಿದ್ದು, ಅವರ ಮೇಲೆ ಹಲ್ಲೆ ನಡೆಸಿ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಲಾಗಿದೆ ಎಂದು ಬಂಟ್ವಾಳ ನಗರ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ.
ಮಂಗಳೂರು ಡಿಪೋದಿಂದ ಸೋಮವಾರ ಪೇಟೆಗೆ ಪ್ರಯಾಣಿಕರನ್ನು ಕರೆದುಕೊಂಡು ಹೋಗುವ ಮಾರ್ಗದಲ್ಲಿ ಭಾನುವಾರ ಸುಮಾರು 4 ಗಂಟೆಗೆ ದಾಸಕೋಡಿಗೆ ಬಸ್ ತಲುಪಿದಾಗ ಕೆ.ಎ.03 ಎಮ್ .ಕೆ.8149 ಮತ್ತು ಕೆ.ಎ.05 ಎ.ಎನ್.6722 ನೊಂದಾವಣೆಯ ಕಾರುಗಳಲ್ಲಿ ಬಂದ ಆರು ಜನರು ಕಲ್ಲಡ್ಕ ಏಕಮುಖ ರಸ್ತೆಯಲ್ಲಿ ಈ ಎರಡು ಕಾರುಗಳಿಗೆ ಮುಂದೆ ಹೋಗಲು ಸೈಡ್ ಕೊಟ್ಟಿಲ್ಲ ಎಂಬ ಆರೋಪ ಮಾಡಿ, ಕೆ.ಎಸ್.ಆರ್.ಟಿ.ಸಿ.ಬಸ್ಸನ್ನು ಅಡ್ಡಗಟ್ಟಿ ಬಸ್ ನ ಸೈಡ್ ಮಿರರನ್ನು ಕಲ್ಲಿನಿಂದ ಹೊಡೆದು ಜಖಂಗೊಳಿಸಿದ್ದಾರೆ.ಬಳಿಕ ಚಾಲಕ ಕೃಷ್ಣಪ್ಪ ಅವರನ್ನು ಸೀಟಿನಿಂದ ಎಳೆದುಹಾಕಿ ಕೈಯಿಂದ ಹಣೆಗೆ ಮುಖಕ್ಕೆ ಎಡಕೈಗೆ ಹಿಗ್ಗಾಮುಗ್ಗ ಹೊಡೆದು ಅವ್ಯಾಚ್ಚ ಶಬ್ದಗಳಿಂದ ಬೈದು ಜೀವಬೆದರಿಕೆ ಹಾಕಿದ್ದಾರೆ. ಜೊತೆಗೆ ಬಸ್ ನ ಎದುರು ಭಾಗದ ಗಾಜನ್ನು ಕೈಯಿಂದ ಗುದ್ದಿ ಜಖಂ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ
ಘಟನೆಯಿಂದ ಸುಮಾರು 30 ಸಾವಿರ ರೂ ನಷ್ಟ ಸಂಭವಿಸಿದ್ದು, ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ತಂಡದ ಮೇಲೆ ಕಾನೂನು ಕ್ರಮಕ್ಕೆ ಕೃಷ್ಣಪ್ಪ ದೂರಿನಲ್ಲಿ ತಿಳಿಸಿದ್ದಾರೆ.
ಹಿರಿಯ ಕೊಂಕಣಿ ಸಾಹಿತಿ, ಸಂಘಟಕ ರೊನಾಲ್ಡೊ ಸಿಕ್ವೇರಾ ನಿಧನ
ಖ್ಯಾತ ಕೊಂಕಣಿ ಸಾಹಿತಿ ಹಾಗೂ ಸಂಘಟಕ, ಕೆಡಬ್ಲ್ಯೂಎಎ ಅಧ್ಯಕ್ಷರಾಗಿದ್ದ ರೊನಾಲ್ಡೊ ಸಿಕ್ವೇರಾ(69) ಅಲ್ಪಕಾಲದ ಅನಾರೋಗ್ಯದಿಂದಾಗಿ ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಸೋಮವಾರ ಮುಂಜಾನೆ ನಿಧನರಾಗಿದ್ದಾರೆ. ರೊನಾಲ್ಡೊ ಅವರು ಕೊಂಕಣಿ ಸಾಹಿತ್ಯ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ಸಲ್ಲಿಸಿದ್ದಾರೆ. ಸಣ್ಣ ಕತೆ ಹಾಗೂ ಲಲಿತ ಪ್ರಬಂಧ ಸಾಹಿತ್ಯ ಪ್ರಕಾರಗಳಲ್ಲಿ ತಮ್ಮದೇ ಛಾಪು ಮೂಡಿಸಿಕೊಂಡಿದ್ದ ಸಿಕ್ವೇರಾ ಅವರು ಶಿಕೇರಾಮ್ ಸುರತ್ಕಲ್ ಕಾವ್ಯನಾಮದಲ್ಲಿ ಸುಮಾರು 40 ವರ್ಷಗಳ ಕಾಲ ಸಾಹಿತ್ಯ ರಚನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಸಿಕ್ವೇರಾ ಅವರ ಗರ್ಜೆಕ್ ಪಡತ್ ಕಥಾ ಸಂಗ್ರಹಕ್ಕೆ ಮಣಿಪಾಲದ ಡಾ.ಟಿಎಂಎ ಫೌಂಡೇಷನ್ ವತಿಯಿಂದ ವರ್ಷದ ಅತ್ಯುತ್ತಮ ಕೃತಿ ಎಂಬ ಮನ್ನಣೆ ಪಡೆದುಕೊಂಡಿದ್ದರು. ವೃತ್ತಿಯಲ್ಲಿ ಎಲೆಕ್ಟ್ರಿಕಲ್ ಕಾಂಟ್ರಾಕ್ಟರ್ ಆಗಿದ್ದರು ಕೂಡ ಸಾಹಿತ್ಯ ಕ್ಷೇತ್ರದ ಕಡೆಗೆ ಅವರು ಅಪಾರ ಒಲವು ಬೆಳೆಸಿಕೊಂಡಿದ್ದರು. ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಕೇಂದ್ರ ಸಾಹಿತ್ಯ ಅಕಾಡೆಮಿಯ ಕೊಂಕಣಿ ವಿಭಾಗ ಮುಖ್ಯಸ್ಥ ಕವಿ ಮೆಲ್ವಿನ್ ರೊಡ್ರಿಗಸ್, ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಸಿಎ ನಂದಗೋಪಾಲ ಶೆಣೈ, ವಿಶನ್ ಕೊಂಕಣಿ ಪುಸ್ತಕ ಪ್ರಾಧಿಕಾರದ ಪ್ರವರ್ತಕ ಮೈಕಲ್ ಡಿಸೋಜಾ ಸೇರಿದಂತೆ ಹಲವು ಮಂದಿ ಸಾಹಿತ್ಯಾಸಕ್ತರು ಹಾಗೂ ಗಣ್ಯರು ಸಿಕ್ವೇರಾ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.