ಲೋಕಸಭಾ ಚುನಾವಣೆಗೆ ಕ್ಷಣಗಣನೆ ಶುರು!
– 14 ಕ್ಷೇತ್ರದಲ್ಲಿ 2ನೇ ಹಂತದ ಲೋಕಸಭಾ ಚುನಾವಣೆ
– ಮತದಾನಕ್ಕೆ ಸಕಲ ಸಿದ್ದತೆ: ಪೊಲೀಸ್ ಬಂದೋಬಸ್ತ್
– 2.59 ಕೋಟಿ ಮತದಾರರಿಗೆ ಹಕ್ಕು: ಕಣದಲ್ಲಿ 206 ಪುರುಷರು, 21 ಮಹಿಳಾ ಅಭ್ಯರ್ಥಿಗಳು!
NAMMUR EXPRESS NEWS
ಬೆಂಗಳೂರು: ಲೋಕಸಭೆ ಚುನಾವಣೆಯ ರಾಜ್ಯದ ಎರಡನೇ ಹಂತದ ಮತದಾನ ಮೇ 7ರಂದು ನಡೆಯಲಿದೆ. ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಈ ಹಿನ್ನೆಲೆ ಎಲ್ಲಾ ಕ್ಷೇತ್ರಗಳಲ್ಲೂ ಮತದಾನಕ್ಕೆ ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ. ಉತ್ತರ ಕರ್ನಾಟಕ ಭಾಗದ ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.
ಉತ್ತರ ಕರ್ನಾಟಕದ ಮಾಜಿ ಸಿಎಂಗಳಾದ ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿ 227 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ನಿರ್ಧರಿಸುವ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ.
ಮತಗಟ್ಟೆಗೆ ಬಂದ ಚುನಾವಣೆ ಸಿಬ್ಬಂದಿ!
ಸೋಮವಾರ ಬೆಳಗ್ಗೆ ಮಸ್ಟರಿಂಗ್ ಪ್ರಕ್ರಿಯೆ ನಡೆಯಲಿದೆ. ಚುನಾವಣಾ ಸಿಬ್ಬಂದಿ ಗುರುತಿಸಲ್ಪಟ್ಟ ಸ್ಥಳಗಳಿಂದ ಮತದಾನಕ್ಕೆ ಪೂರಕ ಸಾಮಗ್ರಿಗಳನ್ನು ನಿರ್ದಿಷ್ಟಪಡಿಸಿದ ಮತಗಟ್ಟೆಗಳಿಗೆ ಕೊಂಡೊಯ್ಯಲಿದ್ದಾರೆ. ಮತಗಟ್ಟೆಗಳಲ್ಲಿ ಮತದಾರರಿಗೆ ಚುನಾವಣಾ ಆಯೋಗ ಮೂಲಸೌಕರ್ಯ ಕಲ್ಪಿಸಿದೆ. ಬಿಸಿಲಿನ ಬೇಗೆಯಿಂದ ಮತದಾನ ಕಡಿಮೆಯಾಗದಂತೆ ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಮತಗಟ್ಟೆಗಳಲ್ಲಿ ಜ್ಯೂಸ್, ಕುಡಿಯಲು ನೀರು, ಕುಳಿತುಕೊಳ್ಳಲು ಕುರ್ಚಿ, ನೆರಳಿಗೆ ಶಾಮಿಯಾನ ಮತ್ತಿತರ ಸವಲತ್ತುಗಳನ್ನು ಕಲ್ಪಿಸಿದೆ.
2.59 ಕೋಟಿ ಮತದಾರರಿಗೆ ಹಕ್ಕು
ಒಟ್ಟು 2,59,52,958 ಮತದಾರರು ಮತದಾನ ಮಾಡುವ ಹಕ್ಕು ಪಡೆದಿದ್ದಾರೆ. ಒಟ್ಟು 28,269 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಎಲ್ಲ 14 ಕ್ಷೇತ್ರಗಳಲ್ಲೂ ಸ್ಪರ್ಧಿಸಿವೆ. ಬಿಎಸ್ಪಿ 9, ನೋಂದಾಯಿತ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಂದ 73 ಹಾಗೂ 117 ಸ್ವತಂತ್ರ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಈ ಪೈಕಿ 206 ಪುರುಷರು, 21 ಮಹಿಳಾ ಅಭ್ಯರ್ಥಿಗಳಿದ್ದಾರೆ.