ಕರಾವಳಿ ಟಾಪ್ 5 ನ್ಯೂಸ್
ಲಾಡ್ಜ್ ರೂಮಿನಲ್ಲಿ ಯುವಕ, ಗುಡ್ಡದಲ್ಲಿ ಮಹಿಳೆ ಆತ್ಮಹತ್ಯೆ
– ಬಂಟ್ವಾಳದಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಆತ್ಮಹತ್ಯೆ
– ಬೈಂದೂರು: ಬಾವಿಗೆ ಬಿದ್ದ ವ್ಯಕ್ತಿಯ ರಕ್ಷಣೆ
– ಮಂಜೇಶ್ವರ: ಆ್ಯಂಬುಲೆನ್ಸ್- ಕಾರು ಭೀಕರ ಅಪಘಾತ
– ಕೋಟಾ: ಕಾರ್ಮಿಕನ ಮೇಲೆ ಚಿರತೆ ದಾಳಿ: ಆಸ್ಪತ್ರೆಗೆ
NAMMUR EXPRESS NEWS
ಬಂಟ್ವಾಳ: ಬಿ.ಸಿ ರೋಡು ಬಸ್ ನಿಲ್ದಾಣದ ಬಳಿ ಇರುವ ಹೋಟೇಲಿನ ರೂಮಿನಲ್ಲಿ ಯುವಕ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಬೆಳಕಿಗೆ ಬಂದಿದೆ. ಮೃತ ವ್ಯಕ್ತಿಯನ್ನು ಮಂಗಳೂರು ಅತ್ತಾವರ ನಿವಾಸಿ ಪ್ರಜ್ವಲ್ (30) ಎಂದು ಗುರುತಿಸಲಾಗಿದೆ. ಭಾನುವಾರ (ಮೇ 5) ಹೋಟೆಲ್ ಕೃಷ್ಣಮಾದಲ್ಲಿ ರೂಂ ಮಾಡಿದ್ದ ಈತ ಸೋಮವಾರ (ಮೇ 6) ರಾತ್ರಿ ಊಟ ಮಾಡಿ ರೂಮಿನ ಬಾಗಿಲು ಹಾಕಿಕೊಂಡಿದ್ದ. ಮಂಗಳವಾರ ಬೆಳಿಗ್ಗೆ ರೂಂ ಬಾಗಿಲು ತೆರೆಯದೆ ಇದ್ದು, ಹೋಟೆಲ್ ಸಿಬ್ಬಂದಿಗಳು ಕರೆದರೂ ಯಾವುದೇ ಸ್ಪಂದನೆ ಇಲ್ಲದ ಕಾರಣ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಪೊಲೀಸರ ಸಮ್ಮುಖದಲ್ಲಿ ರೂಮಿನ ಬಾಗಿಲು ತೆರೆದಾಗ ಯುವಕನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದೆ. ಯುವಕನ ಆತ್ಮಹತ್ಯೆಗೆ ಸ್ಪಷ್ಟವಾದ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬಂಟ್ವಾಳ ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಬೆಂಜನಪದವಿನಲ್ಲಿ ನೇಣು ಬಿಗಿದು ಆತ್ಮಹತ್ಯೆ
ಬಂಟ್ವಾಳ: ಬೆಂಜನಪದವಿನ ನೈಕುಳಿಗುರಿಯ ಗುಡ್ಡದಲ್ಲಿ ಅಮ್ಮುಂಜೆ ಗ್ರಾಮದ ಕೊಳಂಬೆಕೋಡಿ ನಿವಾಸಿ ವಸಂತ (43) ಅವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ಅವರು ಬೆಂಜನಪದವಿನ ಸಹಕಾರಿ ಬ್ಯಾಂಕೊಂದರಲ್ಲಿ ಪಿಗ್ಮಿ ಸಂಗ್ರಾಹಕರಾಗಿದ್ದು, ಸಂಜೆಯ ಬಳಿಕ ಫಾಸ್ಟ್ಪುಡ್ ಹೊಟೇಲ್ನಲ್ಲಿ ಕೆಲಸ ಮಾಡುತ್ತಿದ್ದರು. ಮೇ 6ರಂದು ರಾತ್ರಿ ಮನೆಗೆ ಬಾರದ ಹಿನ್ನೆಲೆಯಲ್ಲಿ ಮೊಬೈಲ್ಗೆ ಕರೆ ಮಾಡಿದರೂ ಸ್ವೀಕರಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಮಂಗಳವಾರ ಹುಡುಕಾಡಿದಾಗ ಅವರ ಮೃತದೇಹ ನೈಕುಳಿಗುರಿಯ ಗುಡ್ಡದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅವರು ಸಾಲದ ಬಾಧೆ ಅಥವಾ ಇತರ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಪತ್ನಿ ನಮಿತಾ ಪೂಜಾರಿ ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ಬೈಂದೂರು : ಬಾವಿಗೆ ಬಿದ್ದ ವ್ಯಕ್ತಿಯ ರಕ್ಷಣೆ
ಬೈಂದೂರು: ಬಾವಿಯ ಕೆಸರು ತೆಗೆಯಲು ಇಳಿಯುತ್ತಿದ್ದಾಗ ಆಕಸ್ಮಿಕವಾಗಿ ಬಿದ್ದ ವ್ಯಕ್ತಿಯನ್ನು ಬೈಂದೂರು ಅಗ್ನಿಶಾಮಕ ಠಾಣೆಯ ಸಿಬಂದಿ ರಕ್ಷಿಸಿದ್ದಾರೆ. ಕಾಲ್ತೊಡು ಮೆಟ್ಟಿನಹೊಳೆಯಲ್ಲಿ ಘಟನೆ ನಡೆದಿದೆ. ವ್ಯಕ್ತಿಯನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಶೀನ ನಾಯ್ಕ, ಆನಂದ್, ನಾಗಪ್ಪ ಪಟಗಾರ್, ಹರೀಶ್ ಕುಲಾಲ್, ಶ್ರೀನಿವಾಸ ನಾಯ್ಕ, ಕಿರಣ್ ಕುಮಾರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
– ಮಂಜೇಶ್ವರ: ಆ್ಯಂಬುಲೆನ್ಸ್- ಕಾರು ಭೀಕರ ಅಪಘಾತ
ಮಂಜೇಶ್ವರ: ಆ್ಯಂಬುಲೆನ್ಸ್ -ಕಾರು ಭೀಕರ ಅಪಘಾತ ಸಂಭವಿಸಿ ಮೂವರು ಮೃತಪಟ್ಟು ನಾಲ್ಕು ಜನರಿಗೆ ಗಾಯಗಳಾದ ಘಟನೆ ಮಂಜೇಶ್ವರ ಕುಂಜತ್ತೂರು ಬಳಿ ಮೇ. 7ರ ಮಂಗಳವಾರ ಸಂಭವಿಸಿದೆ. ಮಂಜೇಶ್ವರದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಈ ಅಪಘಾತ ಸಂಭವಿಸಿದ್ದು, ವಿರುದ್ದ ದಿಕ್ಕಿನಲ್ಲಿ ಬಂದ ಆ್ಯಂಬುಲೆನ್ಸ್ ಕಾರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಬೆಂಗಳೂರಿನಿಂದ ತ್ರಿಶೂರು ಭಾಗಕ್ಕೆ ಸಂಚರಿಸುತ್ತಿದ್ದ ಶರತ್, ಮೆನನ್, ಶ್ರೀನಾಥ್ ಸೇರಿದಂತೆ ಇನ್ನೊರ್ವ ವ್ಯಕ್ತಿಯ ಗುರುತು ಪತ್ತೆಯಾಗಬೇಕಾಗಿದೆ. ಕಾಸರಗೋಡು ಚಟ್ಟಂಚಾಲ್ ನಿಂದ ಅಪಘಾತಕ್ಕೀಡಾಗಿದ್ದ ಗಾಯಾಳು ಹಾಗೂ ಜೊತೆಗಿದ್ದ ಇಬ್ಬರನ್ನು ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ ಆ್ಯಂಬುಲೆನ್ಸ್ ಹಾಗೂ ಮಂಗಳೂರಿನಿಂದ ಕಾಸರಗೋಡು ತ್ರಿಶೂರು ಕಡೆ ಹೋಗುತ್ತಿದ್ದ ಕಾರು ನಡುವೆ ಅಪಘಾತ ನಡೆದಿದೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.
ಕೋಟಾ : ಕಾರ್ಮಿಕನ ಮೇಲೆ ಚಿರತೆ ದಾಳಿ!
ಕೋಟ: ಡೈರಿ ಫಾರ್ಮ್ ನಲ್ಲಿ ಹುಲ್ಲು ಕಟಾವು ನಡೆಸುತ್ತಿದ್ದ ಕಾರ್ಮಿಕನ ಮೇಲೆ ಚಿರತೆ ದಾಳಿ ನಡೆಸಿದ ಘಟನೆ ಶಿರೂರು ಮೂರ್ಕೈ ಸಮೀಪ ಹೆಗ್ಗುಂಜೆ ಗುಡ್ಡೆಯಲ್ಲಿ ಸಂಭವಿಸಿದೆ. ಸ್ಥಳೀಯ ನಿವಾಸಿ ಕೃಷ್ಣ ನಾಯ್ಕ್ ದಾಳಿಗೊಳಗಾದವರು. ಶಿರೂರು ಮೂರ್ಕೈ ಸಮೀಪವಿರುವ ವಿಖ್ಯಾತ್ ಕುಮಾರ್ ಶೆಟ್ಟಿ ಅವರ ಡೈರಿ ಫಾರ್ಮ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕೃಷ್ಣ ನಾಯ್ಕ್ ದನಗಳಿಗೆ ಹುಲ್ಲು ತರಲು ತೋಟಕ್ಕೆ ತೆರಳಿದ್ದರು. ಆಗ ಚಿರತೆ ದಾಳಿ ನಡೆಸಿತ್ತು. ಗಂಭೀರವಾಗಿ ಗಾಯಗೊಂಡ ಅವರನ್ನು ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಭಾಗದಲ್ಲಿ ಚಿರತೆ ಹಾವಳಿ ವ್ಯಾಪಕವಾಗಿದೆ. ಹಲವು ಬಾರಿ ಜಾನುವಾರುಗಳ ಮೇಲೆ ದಾಳಿ ನಡೆದಿದ್ದು, ಇದೀಗ ಮನುಷ್ಯರ ಮೇಲೆಯೂ ದಾಳಿ ನಡೆಸಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.