ಬದುಕಿನ ಪಯಣ ನಿಲ್ಲಿಸಿದ ತುಳು ಸಂಶೋಧಕ ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್
– ತುಳುನಾಡ ಸಾಂಸ್ಕೃತಿಕ ರಾಯಭಾರಿಯಾಗಿ ಸೇವೆ
– ಪುತ್ತೂರು ತಾಲೂಕಿನ ಪಾಲ್ತಾಡಿಯಲ್ಲಿ ಅಂತ್ಯಕ್ರಿಯೆ
NAMMUR EXPRESS NEWS
ಸುಳ್ಯ: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ, ಜಾನಪದ ವಿದ್ವಾಂಸ, ಸಾಹಿತಿ ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್ (79) ಅವರು ಮಂಗಳವಾರ ರಾತ್ರಿ ನಿಧನರಾಗಿದ್ದಾರೆ. ಸುಳ್ಯ ತಾಲೂಕಿನ ಪೆರುವಾಜೆಯಲ್ಲಿರುವ ಮಗಳ ಮನೆಯಲ್ಲಿದ್ದ ಅವರ ಆರೋಗ್ಯದಲ್ಲಿ ಏರುಪೇರು ಕಂಡುಬಂದಿತ್ತು. ಕೂಡಲೇ ಪಾಲ್ತಾಡಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಬೇಕಾದರೆ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಮೃತರ ಅಂತ್ಯಕ್ರಿಯೆ ಬುಧವಾರ ಪುತ್ತೂರು ತಾಲೂಕಿನ ಪಾಲ್ತಾಡಿ ಗ್ರಾಮದ ಸ್ವಗೃಹದಲ್ಲಿ ನಡೆಸಲಾಯಿತು. ಅವರು ಪತ್ನಿ ಸುಮಾ, ಪುತ್ರಿಯರಾದ ಕಿರಣ, ಸುಪ್ರಿಯ, ಮಗ ಹರ್ಷವರ್ಧನ ಅವರನ್ನು ಅಗಲಿದ್ದಾರೆ.
ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರು ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ಪೆಲತ್ತಾಜೆಯಲ್ಲಿ ಹುಟ್ಟಿ ಹೆಚ್ಚಿನ ಕಾಲವನ್ನು ಪಾಲ್ತಾಡಿಯಲ್ಲಿ ಕಳೆದಿದ್ದರು. ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಶಿಕ್ಷಣ ಮುಗಿಸಿ ಉಜಿರೆಯ ಸರಕಾರಿ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ಟಿಸಿಎಚ್ ಡಿಪ್ಲೋಮಾ ಮಾಡಿದ್ದರು. ಮುಂದೆ ಧಾರವಾಡ ವಿಶ್ವವಿದ್ಯಾಲಯದಿಂದ ಎಂಎ ಕನ್ನಡ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದು, ಜತೆಗೆ ಹಿಂದಿಯಲ್ಲಿ ರಾಷ್ಟ್ರಭಾಷಾ ವಿಶಾರದಾ ಪದವಿಯನ್ನೂ ಪೂರ್ಣಗೊಳಿಸಿದ್ದರು. ಶಿಕ್ಷಣದ ಬಳಿಕ ಉಪ್ಪಿನಂಗಡಿ, ಬೊಕ್ಕಪಟ್ಟಣ, ಬೆಟ್ಟಂಪಾಡಿ, ಕಾಣಿಯೂರು ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ವೃತ್ತಿ ನಡೆಸಿದ್ದರು.
ಮಕ್ಕಳ ಕವನ ಸಂಕಲನ, ಕಥಾ ಸಂಕಲನ, ಸಂವಹನ ಮಾಧ್ಯಮವಾಗಿ ಜಾನಪದ, ಜಾನಪದ ಕುಣಿತ, ದೈವಾರಾಧನೆ, ತುಳುನಾಡಿನ ಸಮಗ್ರ ಪ್ರದರ್ಶನ ಕಲೆ ಮತ್ತು ಸಾಕಷ್ಟು ಧ್ವನಿಸುರಳಿಗಳಿಗೆ ಸಾಹಿತ್ಯವನ್ನು ಒದಗಿಸಿದ ಪಾಲ್ತಾಡಿ ಅವರು ತುಳು ಭಾಷೆಯ ಬೆಳವಣಿಗೆಗೆ ವಿಶೇಷವಾದ ಕೊಡುಗೆ ನೀಡಿದ್ದರು.
ವಿಶ್ವ ತುಳು ಸಮ್ಮೇಳನದಲ್ಲಿ ಪ್ರಮುಖರಾಗಿದ್ದರು!
ಧರ್ಮಸ್ಥಳದಲ್ಲಿ ನಡೆದಿದ್ದ ವಿಶ್ವ ತುಳು ಸಮ್ಮೇಳನದ ಆಯೋಜನೆಯಲ್ಲಿಯೂ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದರು. ತುಳು ಅಕಾಡೆಮಿಯ ರಿಜಿಸ್ಟ್ರಾರ್ ಆಗಿ, ಬಾಲಭವನ ಅಭಿವೃದ್ಧಿ ಸಮಿತಿ ಸದಸ್ಯರಾಗಿ ಕೆಲಸ ಮಾಡಿದ್ದರು. ಕನ್ನಡ ಸಂಘ, ತುಳು ಸಂಘ, ಯಕ್ಷಗಾನ ಸಂಘ, ಸಮುದಾಯ ಸಂಘ ಮುಂತಾದ ಕೂಟಗಳನ್ನುಆರಂಭಿಸಿದ್ದರು. ಈ ರೀತಿ ಪಾಲ್ತಾಡಿ ಅವರು ತುಳುನಾಡಿನ ಸಂಸ್ಕೃತಿ ಮತ್ತು ಕಲೆಯ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದು, ನಲಿಕೆ ಜನಾಂಗದ ಕುಣಿತಗಳು ಎಂಬ ವಿಷಯದಲ್ಲಿ ಪಿಎಚ್ಡಿ ಪದವಿ ಪಡೆದುಕೊಂಡಿದ್ದರು.