ಟಾಪ್ ನ್ಯೂಸ್ ಕರಾವಳಿ
ಕುಡಿದ ಮತ್ತಿನಲ್ಲಿ ತನ್ನ ಮನೆಗೆ ಬೆಂಕಿ ಹಚ್ಚಿದ ಮಾಲೀಕ!
– ಕೋಟಾದಲ್ಲಿ ನಡೆದ ಘಟನೆ: ಲಕ್ಷಾಂತರ ರೂ. ಮೌಲ್ಯದ ಆಸ್ತಿ ಹಾನಿ
– ಮಂಗಳೂರು: ರಿಕ್ಷಾ ಚಾಲಕನಿಗೆ ದುಷ್ಕರ್ಮಿಗಳಿಂದ ಚೂರಿ ಇರಿತ
– ಪುತ್ತೂರು: ಮದುವೆ ಸಮಾರಂಭದಲ್ಲಿ ಹುಡುಗಿಯರ ಫೋಟೋ ಕ್ಲಿಕ್ಕಿಸಿದ ಇಬ್ಬರು ಯುವಕರಿಗೆ ಧರ್ಮದೇಟು..!
– ಸುಳ್ಯ: ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಪತ್ತೆ: ಪರೀಕ್ಷೆ ಕಷ್ಟ ಎಂದು ಫ್ರೀ ಬಸ್ ಅಲ್ಲಿ ಓಡಾಟ!
NAMMUR EXPRESS NEWS
ಕೋಟ: ವ್ಯಕ್ತಿಯೋರ್ವ ಕುಡಿದು ಬಂದು ಪತ್ನಿಗೆ ಹೊಡೆದು ಮನೆಗೆ ಬೆಂಕಿ ಹಚ್ಚಿದ ಪರಿಣಾಮ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳಿಗೆ ಹಾನಿಯಾಗಿರುವ ಘಟನೆ ಕೋಟ ಎಂಬಲ್ಲಿ ನಡೆದಿದೆ. ಕುಡಿದ ಮತ್ತಿನಲ್ಲಿ ಮನೆಗೆ ಬೆಂಕಿ ಹಚ್ಚಿದ ವ್ಯಕ್ತಿ ಯಡಾಡಿ ಮತ್ಯಾಡಿ ಗ್ರಾಮದ ಕ್ಯಾಸನಮಕ್ಕಿ ಶುಭಲತಾ ಎಂಬವರ ಪತಿ ದಿನೇಶ ಎಂದು ಗುರುತಿಸಲಾಗಿದೆ. ದಿನೇಶ ಎಂಬಾತ ಮೇ 8ರಂದು ರಾತ್ರಿ ವಿಪರೀತ ಕುಡಿದು ಮನೆಗೆ ಬಂದು ವಿನಾಃಕಾರಣ ಪತ್ನಿಗೆ ಅವಾಚ್ಯ ಶಬ್ದದಿಂದ ಬೈದು ಕೈಯಿಂದ ಹೊಡೆದಿದ್ದನು. ಈ ಕಾರಣ ಶುಭಲತಾ ತನ್ನ ಮನೆ ಅಂಪಾರಿಗೆ ಹೋಗಿದ್ದರು. ಮರುದಿನ ಬೆಳಗ್ಗೆ ವಾಪಾಸ್ಸು ಮನೆಗೆ ಬಂದು ನೋಡುವಾಗ ದಿನೇಶನು ದ್ವೇಷದಿಂದ ಮನೆಗೆ ಬೆಂಕಿ ಹಚ್ಚಿರುವುದು ಕಂಡುಬಂದಿದೆ. ಇದರಿಂದ ಮನೆಯ ಹಿಂದಿನ ಭಾಗ ಬೆಂಕಿ ತಗುಲಿ ಮರದ ಉಪಕರಣ ಹಾಗೂ ಅಡುಗೆ ಮಾಡುವ ಸಾಮಗ್ರಿಗಳು ಮತ್ತು ಬಟ್ಟೆಗಳು, ಅಡುಗೆ ಆಹಾರ ಪದಾರ್ಥಗಳು ಬೆಂಕಿಯಲ್ಲಿ ಸುಟ್ಟು ಹೋಗಿದೆ. ಇದರಿಂದ ಒಟ್ಟು 3 ಲಕ್ಷ ರೂ. ಮೌಲ್ಯದ ಸೊತ್ತುಗಳು ನಷ್ಟವಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ಮಂಗಳೂರು: ರಿಕ್ಷಾ ಚಾಲಕನಿಗೆ ದುಷ್ಕರ್ಮಿಗಳಿಂದ ಚೂರಿ ಇರಿತ
ಮಂಗಳೂರು: ನಗರದ ಪಣಂಬೂರು ಬೀಚ್ ನ ರಿಕ್ಷಾ ಚಾಲಕರು ಬಾಡಿಗೆಯ ವಿಷಯದಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಮಂಗಳೂರು ನಗರದ ರಿಕ್ಷಾ ಚಾಲಕ ಅರಾಫತ್ (30) ಎಂಬವರಿಗೆ ಚೂರಿಯಿಂದ ಇರಿದು ಹಲ್ಲೆ ನಡೆಸಿದ ಘಟನೆ ಪಣಂಬೂರು ಬೀಚ್ ಬಳಿ ಗುರುವಾರ ನಡೆದಿದೆ. ಅರಾಫತ್ ಎಂಬುವವರು ಎಂದಿನಂತೆ ಮಂಗಳೂರಿನಿಂದ ಪಣಂಬೂರು ಬೀಚ್ ಗೆ ಬಾಡಿಗೆ ಪ್ರಯಾಣಿಕರನ್ನು ಬಿಟ್ಟು ಅಲ್ಲಿಂದ ಮತ್ತೆ ಪ್ರಯಾಣಿಕರನ್ನು ಬಾಡಿಗೆಗೆ ಕರೆದೊಯ್ಯಲು ರಿಕ್ಷಾ ಪಾರ್ಕ್ ಬಳಿ ಕಾಯುತ್ತಿದ್ದಾಗ ಅಲ್ಲಿನ ಸ್ಥಳೀಯ ರಿಕ್ಷಾ ಚಾಲಕರು ಬಂದು ಬಾಡಿಗೆ ಮಾಡುವಂತಿಲ್ಲ ಎಂದು ಮಾತಿನ ಚಕಮಕಿ ನಡೆದಾಗ ಏಕಾಏಕಿ ಚಾಕುವಿನಿಂದ ಅರಾಫತ್ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಅರಾಫತ್ ಕೈಗೆ ಗಾಯವಾಗಿದ್ದು ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ಪುತ್ತೂರು: ಮದುವೆ ಸಮಾರಂಭದಲ್ಲಿ ಹುಡುಗಿಯರ ಫೋಟೋ ಕ್ಲಿಕ್ಕಿಸಿದ ಇಬ್ಬರು ಯುವಕರಿಗೆ ಧರ್ಮದೇಟು..!
ಪುತ್ತೂರು ಸಮೀಪ ಕರೆಯೋಲೆ ಇಲ್ಲದೇ ಮದುವೆ ಸಮಾರಂಭಕ್ಕೆ ಬಂದಿದ್ದ ಇಬ್ಬರು ಕದ್ದು ಮುಚ್ಚಿ ಸಿಕ್ಕ ಸಿಕ್ಕ ಹುಡುಗಿಯರ ಫೋಟೋ ಕ್ಲಿಕ್ಕಿಸಿ ರೆಡ್ಹ್ಯಾಂಡ್ ಆಗಿ ಸಿಕ್ಕಿ ಬಿದ್ದು, ಅಲ್ಲಿದ್ದವರಿಂದ ಧರ್ಮದೇಟು ತಿಂದ ಘಟನೆ ತಿಳಿದು ಬಂದಿದೆ.
ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಪತ್ತೆ
ಸುಳ್ಯ: ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಎಲಿಜಬೆತ್ ದೀಪಿಕಾ ಪೊನ್ನುರಾಜು ಅವರನ್ನು ಪೊಲೀಸರು ಸುಳ್ಯದ ಅರಂತೋಡಿನಲ್ಲಿ ಪತ್ತೆ ಮಾಡಿದ್ದಾರೆ. ಕ್ರಿಮಿನಾಲಜಿ ಮತ್ತು ಫಾರೆನ್ಸಿಕ್ ಸೈನ್ಸ್ ವಿಷಯದಲ್ಲಿ ಮೊದಲನೇ ವರ್ಷದ ಎಂಎಸ್ಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ದೀಪಿಕಾ ಮೇ 7 ರಂದು ಎರಡನೇ ಸೆಮಿಸ್ಟರ್ ಪರೀಕ್ಷೆ ಮುಗಿಸಿದ ಬಳಿಕ ನಾಪತ್ತೆಯಾಗಿದ್ದಳು. ದೀಪಿಕಾ ನಾಪತ್ತೆಯಾದ ಬಗ್ಗೆ ಮನೆಯವರು ಪಾಂಡೇಶ್ವರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೀಪಿಕಾ ಪುಸ್ತಕ ಮತ್ತು ಮೊಬೈಲ್ ಅನ್ನು ಕಾಲೇಜಿನಲ್ಲಿ ಬಿಟ್ಟು ನಾಪತ್ತೆಯಾಗಿದ್ದರಿಂದ ಭಾರೀ ಕುತೂಹಲ ಉಂಟಾಗಿತ್ತು. ಪೊಲೀಸರು ಹುಡುಕಾಟ ನಡೆಸಿದರು ಯಾವುದೇ ಸುಳಿವು ದೊರಕಿರಲಿಲ್ಲ. ಮೇ 9ರಂದು ಪಾಂಡೇಶ್ವರ ಠಾಣೆಗೆ ವಿದ್ಯಾರ್ಥಿನಿ ಸುಳ್ಯ ತಾಲೂಕಿನ ಅರಂತೋಡಿನಲ್ಲಿ ಇದ್ದಾಳೆ ಎಂಬ ಮಾಹಿತಿ ದೊರಕಿದ್ದು, ಆಕೆಯನ್ನು ಮಂಗಳೂರಿಗೆ ಕರೆತಂದು ಪೋಷಕರ ವಶಕ್ಕೆ ಒಪ್ಪಿಸಿದ್ದಾರೆ. ಎಂಎಸ್ಸಿ ಪರೀಕ್ಷೆಯನ್ನು ಎದುರಿಸುವುದು ಕಷ್ಟವಾಗಿತ್ತು. ಅತಿಯಾದ ಒತ್ತಡದಿಂದಾಗಿ ಸ್ವಲ್ಪ ವಿಶ್ರಾಂತಿ ಪಡೆಯಬೇಕೆಂದು ನಿರ್ಧರಿಸಿ ತೆರಳಿದ್ದಾಗಿ ಆಕೆ ಪೊಲೀಸರಿಗೆ ತಿಳಿಸಿದ್ದಾಳೆ.
ಫ್ರೀ ಬಸ್ ಬಳಕೆ ಮಾಡಿಕೊಂಡಳು!
ದೀಪಿಕಾ ಪರೀಕ್ಷೆ ಮುಗಿಸಿದ ಆಕೆ ಕಾಲೇಜಿನಿಂದ ಹೊರಬಂದು ಕಂಕನಾಡಿಯಲ್ಲಿ ಚಿಕ್ಕಮಗಳೂರಿಗೆ ತೆರಳುವ ಬಸ್ಸನ್ನು ಹತ್ತಿದ್ದಾಳೆ. ಕೆಎಸ್ಆರ್ ಟಿಸಿ ಬಸ್ಸಿನಲ್ಲಿ ಉಚಿತ ಇರುವುದರಿಂದ ನೇರವಾಗಿ ಚಿಕ್ಕಮಗಳೂರಿಗೆ ತೆರಳಿದ್ದು, ಅಲ್ಲಿಂದ ಮೈಸೂರಿಗೆ ಹೋಗುವ ಬಸ್ ಹತ್ತಿದ್ದಾಳೆ. ಮತ್ತೆ ಅಲ್ಲಿಂದ ಮಡಿಕೇರಿಗೆ ಬಸ್ಸಿನಲ್ಲಿ ಬಂದು ಬಸ್ ನಿಲ್ದಾಣದಲ್ಲಿ ತಮಿಳು ಮಾತನಾಡುವ ಹುಡುಗಿ ಒಬ್ಬಳು ಪರಿಚಯ ಆಗಿದ್ದು ಆಕೆಯೊಂದಿಗೆ ಬುಧವಾರ ಸುಳ್ಯಕ್ಕೆ ಬಂದಿದ್ದಾಳೆ. ಸುಳ್ಯದ ಅರಂತೋಡಿನಲ್ಲಿ ಆಕೆಯ ಮನೆಯಲ್ಲಿ ರಾತ್ರಿ ಉಳಿದುಕೊಂಡಿದ್ದಾಳೆ. ಮೂಲತ: ತಮಿಳುನಾಡಿನವಳಾಗಿದ್ದರಿಂದ ದೀಪಿಕಾಗೆ ತಮಿಳು ಬಿಟ್ಟರೆ ಕನ್ನಡ ಸರಿಯಾಗಿ ಮಾತನಾಡಲು ಬರುತ್ತಿರಲಿಲ್ಲ. ದೀಪಿಕಾ ತಂದೆ ತಾಯಿ ಮಂಗಳೂರಿನಲ್ಲಿ ನೆಲೆಸಿದ್ದಾರೆ. ಸುಳ್ಯದಲ್ಲಿ ಹುಡುಗಿ ಇರುವ ಬಗ್ಗೆ ಅವರ ಮನೆಯವರು ಪರಿಚಯದ ಮಂಗಳೂರಿನ ಪೊಲೀಸರಿಗೆ ತಿಳಿಸಿದ್ದಾರೆ. ಅದರಂತೆ ಪಾಂಡೇಶ್ವರ ಠಾಣೆಯ ಪೊಲೀಸರು ಅರಂತೋಡು ತೆರಳಿ ಆಕೆಯನ್ನು ಮಂಗಳೂರಿಗೆ ಕರೆತಂದಿದ್ದಾರೆ.