ಕರಾವಳಿ ಟಾಪ್ ನ್ಯೂಸ್
ಏಕಾಏಕಿ ವಾಂತಿ ಮಾಡಿಕೊಂಡು ಬಾಲಕಿ ಸಾವು!
– ಕಾಪುವಿನ ಮಣಿಪುರದಲ್ಲಿ 11 ವರ್ಷದ ಬಾಲಕಿ ಮೃತ್ಯು
– ಪುತ್ತೂರು: ಯುವಕನ ಸಾವು: ತಾಯಿ ಸೇರಿ ಮೂವರು ಅರೆಸ್ಟ್
– ಕುಂದಾಪುರ: ಮನೆಗೆ ಬೆಂಕಿ ಹಚ್ಚಿದವನ ಮೊಬೈಲ್ ಜಾಡು ಹಿಡಿದು ಬಂಧನ
NAMMUR EXPRESS NEWS
ಕಾಪು: ಧಿಡೀರ್ ಅಸ್ವಸ್ಥಗೊಂಡು 11 ವರ್ಷದ ಬಾಲಕಿ ಸಾವನ್ನಪ್ಪಿದ ದಾರುಣ ಘಟನೆ ಉಡುಪಿ ಕಾಪುವಿನ ಮಣಿಪುರ ಗ್ರಾಮದಲ್ಲಿ ನಡೆದಿದೆ. ಸಂದೇಶ್ ಅವರ 11 ವರ್ಷದ ಪುತ್ರಿ ಧನ್ವಿ ಮೃತ ಬಾಲಕಿ. 4ನೇ ತರಗತಿ ಮುಗಿಸಿದ್ದ ಧನ್ವಿ ಪ್ರಸ್ತುತ ಶಾಲೆಗೆ ರಜೆಯಾಗಿರುವುದರಿಂದ ಮನೆಯಲ್ಲಿಯೇ ಇದ್ದಳು. ಮೇ.8ರಂದು ಮನೆ ಮಂದಿಯ ಜೊತೆ ಊಟ ಮಾಡಿ ಮಲಗಿದ್ದ ಬಾಲಕಿ ಧನ್ವಿಯು ಮೇ. 9ರಂದು ಬೆಳಗ್ಗಿ ನ ಜಾವ 3 ಗಂಟೆಯ ಸುಮಾರಿಗೆ ನಿದ್ರೆಯಿಂದ ಎದ್ದು ವಾಂತಿ ಮಾಡಲು ಆರಂಭಿಸಿದ್ದಾಳೆ. ಬಳಿಕ ಮನೆಯವರು ಆಕೆಯನ್ನು ಉಪಚರಿಸಿ ನೀರನ್ನು ಕೊಟ್ಟು ಮಲಗಿಸಿದ್ದರೂ, ಆಕೆ ಗಂಟೆಗೊಮ್ಮೆ ಎದ್ದು ವಾಂತಿ ಮಾಡುತ್ತಿದ್ದಳು.
ಮೇ. 9ರಂದು ಬೆಳಿಗ್ಗೆ 9ಗಂಟೆಯ ಪೋಷಕರು ಆಕೆಯನ್ನು ಸಮೀಪದ ಕ್ಲಿನಿಕ್ ಕರೆದೊಯ್ದಿದ್ದಾರೆ. ಇಲ್ಲಿ ಪರೀಕ್ಷಿಸಿದ ವೈದ್ಯರು ಆಕೆಗೆ ಇಂಜೆಕ್ಷನ್ ಹಾಗೂ ಮದ್ದನ್ನು ನೀಡಿ ಗಂಟೆಗೊಮ್ಮ ಓಆರ್ಎಸ್ ಪೌಡರ್ ಕೊಡುವಂತೆ ಹಾಗೂ ಗಂಜಿ ಊಟ ನೀಡುವಂತೆ ತಿಳಿಸಿದ್ದಾರೆ. ನಂತರ ಮನೆಗೆ ಬಂದ ಧನ್ವಿಯು ಆರೋಗ್ಯವಾಗಿದ್ದಳು. ಆದರೆ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಕೈಕಾಲು ಸೆಟೆದುಕೊಂಡು ಪಿಟ್ಸ್ ಬಂದ ರೀತಿಯಲ್ಲಿ ವರ್ತಿಸಿದ್ದಾಳೆ. .ತಕ್ಷಣ ತಂದೆ ಸಂದೇಶ್ ಆಕೆಯನ್ನು ತನ್ನ ರಿಕ್ಷಾದಲ್ಲಿ ಉಡುಪಿಯ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದಾರೆ. ಆಕೆಯನ್ನು ಪರೀಕ್ಷಿಸಿದ ವೈದ್ಯರು ಬಾಲಕಿ ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಧ್ವನಿಯ ತಂದೆ ಕಾಪು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಠಾಣೆಯಲ್ಲಿ ಯು.ಡಿ.ಆರ್ ಕ್ರಮಾಂಕ 15/2024 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿದೆ.
ಯುವಕನ ಅನುಮಾನಸ್ಪದ ಸಾವು: ತಾಯಿ ಸೇರಿ ಮೂವರ ವಶ
ಪುತ್ತೂರು: 33 ವರ್ಷದ ಯುವಕನೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡಿದ್ದು ಯುವಕ ತಾಯಿ ಸೇರಿದಂತೆ ಮೂವರನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಪುತ್ತೂರಿನಲ್ಲಿ ನಡೆದಿದೆ. ಬೆಟ್ಟಂಪ್ಪಾಡಿ ಸಮೀಪದ ಪಾರೆ ಎಂಬಲ್ಲಿ ಚೇತನ್ (33) ಸಾವನ್ನಪ್ಪಿದ್ದ ಯುವಕನಾಗಿದ್ದಾನೆ. ಚೇತನ್ ನೇಣು ಬಿಗಿದು ಸಾವನ್ನಪ್ಪಿರುವ ಬಗ್ಗೆ ಚೇತನ್ ತಾಯಿ ಉಮಾವತಿ ಪೊಲೀಸರಿಗೆ ದೂರು ಸಲ್ಲಿದ್ದರು. ಆದರೆ ಮೃತದೇಹ ನೋಡಿ ಅನುಮಾನಗೊಂಡ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಗುರುವಾರ ರಾತ್ರಿ ಮದ್ಯ ಸೇವಿಸಿ ಮನೆಗೆ ಬಂದಿದ್ದ ಚೇತನ್ ತಾಯಿ ಜೊತೆ ಜಗಳ ಮಾಡಿಕೊಂಡಿದ್ದ. ಬಳಿಕ ನೆರೆಮನೆಯ ಯೂಸುಫ್ ಎಂಬವರ ಮನೆ ಬಾಗಿಲು ತಟ್ಟಿದ್ದು, ಆಗ ಆ ಮನೆಯವರು ಚೇತನ್ ತಾಯಿಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದ್ದರು ಎನ್ನಲಾಗಿದೆ. ನಂತರ ಯುಸೂಫ್ ಮನೆಗೆ ಬಂದಿದ್ದ ಚೇತನ್ ತಾಯಿ ಸಂಕೋಲೆ ಬಳಸಿ ಯೂಸುಫ್ ಸೇರಿದಂತೆ ಸ್ಥಳೀಯರ ಜೊತೆ ಸೇರಿ ಚೇತನ್ ನನ್ನು ತಮ್ಮ ಮನೆಗೆ ಎಳೆದೊಯ್ದಿದ್ದರು ಎಂದು ಹೇಳಲಾಗಿದೆ. ಸಂಕೋಲೆ ಕಟ್ಟಿ ಎಳೆದೊಯ್ಯುವ ಸಂದರ್ಭದಲ್ಲಿ ಚೇತನ್ ಕುತ್ತಿಗೆಗೆ ಸಂಕೋಲೆ ಬಿಗಿದು ಸಾವನ್ನಪ್ಪಿರುವುದಾಗಿ ಹೇಳಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಮೃತ ಚೇತನ್ ತಾಯಿ ಉಮಾವತಿ ಸೇರಿದಂತೆ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆಯ ಹಿನ್ನೆಲೆಯಲ್ಲಿ ಮರಣೋತ್ತರ ಪರೀಕ್ಷೆಗಾಗಿ ಚೇತನ್ ಮೃತದೇಹವನ್ನು ಮಂಗಳೂರಿಗೆ ತೆಗೆದುಕೊಂಡು ಹೋಗಲಾಗಿದ್ದು, ಪುತ್ತೂರು ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನೆಗೆ ಬೆಂಕಿ ಹಚ್ಚಿದ ಆರೋಪಿಯ ಮೊಬೈಲ್ ಜಾಡು ಹಿಡಿದು ಬಂಧನ: ತಾಯಿ ಮಗು ಪಾರು!
ಕುಂದಾಪುರ: ಪಾನಮತ್ತ ವ್ಯಕ್ತಿ ರಾತ್ರಿ ವೇಳೆ ಮನೆಗೆ ಬೆಂಕಿ ಹೆಚ್ಚಿದ ಘಟನೆ ಮೇ 9ರ ಮುಂಜಾನೆ ಕುಂದಾಪುರ ತಾಲೂಕಿನ ಯಡಾಡಿ ಮತ್ಯಾಡಿ ಗ್ರಾಮದ ಕ್ಯಾಸನಮಕ್ಕಿ ಎಂಬಲ್ಲಿ ಸಂಭವಿಸಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯನ್ನು ಹಾಲಾಡಿ ಮಾವಿನ ಕೊಡ್ಲುವಿನ ನಿವಾಸಿ ದಿನೇಶ್ ಮೊಗವೀರ (36) ಎಂದು ಗುರುತಿಸಲಾಗಿದ್ದು, ತಲೆಮರಿಸಿಕೊಂಡಿದ್ದ ದಿನೇಶ್ ಮೊಗವೀರನಿಗಾಗಿ ಕೋಟ ಪೊಲೀಸರು ಅವನ ಮೊಬೈಲ್ ಜಾಡು ಹಿಡಿದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಏನಿದು ಘಟನೆ?:
ಕ್ಯಾಸನಮಕ್ಕಿ ನಿವಾಸಿ ಶುಭಲತಾ ಹಾಗೂ ದಿನೇಶ್ ಮೊಗವೀರ ಕಳೆದ ೨ ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದು, ಈ ದಂಪತಿಗಳಿಗೆ ಏಳು ತಿಂಗಳ ಮಗುವಿದೆ. ದಿನೇಶ್ ಮೇ 8ರ ರಾತ್ರಿ ಪಾನಮತ್ತನಾಗಿ ಬಂದು ಪತ್ನಿ ಹಾಗೂ ಅವರ ಮನೆಯವರ ಜತೆಗೆ ಅನುಚಿತವಾಗಿ ವರ್ತಿಸಿ ಗಲಾಟೆಗೆ ಮಾಡತೊಡಗಿದ್ದಾರೆ. ಗಲಾಟೆ ನಿಲ್ಲಿಸಲು ಸಾಧ್ಯವಾಗದಿದ್ದಾಗ 112ಕ್ಕೆ ತುರ್ತುಕರೆ ಮಾಡಿ ಮನೆಯವರು ದೂರಿದ್ದಾರೆ. ಈ ಸಂದರ್ಭದಲ್ಲಿ ಕೋಟ ಪೊಲೀಸ್ ಎಎಸ್ಐ ಜಯಪ್ರಕಾಶ್ ರೈ ಹಾಗೂ ಸಿಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಈ ವೇಳೆ ಕರ್ತವ್ಯದಲ್ಲಿದ್ದ ಪೊಲೀಸರಿಗೂ ಕೂಡ ದಿನೇಶ್ ಅಡ್ಡಿಪಡಿಸಿದ್ದಾನೆ.
ಸಮಯ ಪ್ರಜ್ಞೆ ಮೆರೆದ ಎಎಸ್ಐ!
ಪ್ರಕರಣದ ಗಂಭೀರತೆಯನ್ನು ಅರಿತ ಪೊಲೀಸರು ತಾಯಿ ಮತ್ತು ಮಗುವಿನ ಸುರಕ್ಷತೆಯ ದೃಷ್ಟಿಯಿಂದ ತಕ್ಷಣ ಬೇರೆಡೆಗೆ ಸ್ಥಳಾಂತರಿಸಲು ಮನೆಯವರಿಗೆ ತಿಳಿಸಿದರು. ಇದರಂತೆ ತಾಯಿ ಮಗು ಬೇರೆಡೆ ಸ್ಥಳಾಂತರವಾದರು. ಈ ಗಲಾಟೆ ಮಾಡುತ್ತಿದ್ದ ದಿನೇಶ್ ಮನೆಯಲ್ಲಿ ಯಾರು ಇಲ್ಲದಿರುವುದನ್ನು ಅರಿತು ಬಾಗಿಲು ಮುರಿದು ಬೆಂಕಿ ಹಚ್ಚಿಸಿದ್ದಾನೆ ಎಂದು ಹೇಳಲಾಗಿದ್ದು, ಪರಿಣಾಮ ಇಡೀ ಮನೆಯೇ ಸಂಪೂರ್ಣ ಬೆಂಕಿಯ ಕೆನ್ನಾಲಿಗೆಗೆ ಗುರಿಯಾಗಿದೆ.ಬೆಂಕಿ ಹೊತ್ತಿಕೊಂಡು ಉರಿದ ಪರಿಣಾಮ ಮನೆಯೊಳಗಿದ್ದ ಸುಮಾರು ರೂ.1ಲಕ್ಷಕ್ಕೂ ಅಧಿಕ ಮೊತ್ತದ ಹೊಟೇಲ್ನ ಸಾಮಗ್ರಿಗಳು, ವಿದ್ಯುತ್ ಸಂಪರ್ಕ ಹೆಂಚು, ಪಕ್ಕಾಸು, ದವಸ ಧಾನ್ಯಗಳು, ಬಟ್ಟೆ, ಕಪಾಟು ಬೆಂಕಿಗೆ ಆಹುತಿಯಾಗಿದೆ.
ಹಾಲಾಡಿಯಲ್ಲಿ ಸೆರೆ ಸಿಕ್ಕ ಆರೋಪಿ!
ತಲೆಮರಿಸಿಕೊಂಡಿದ್ದ ದಿನೇಶ್ ಮೊಗವೀರನಿಗಾಗಿ ಕೋಟ ಪೊಲೀಸರು ಅವನ ಮೊಬೈಲ್ ಜಾಡು ಹಿಡಿದು ಶೋಧಕಾರ್ಯಕ್ಕೆ ಮುಂದಾದರು. ತದನಂತರ ಹಾಲಾಡಿ ಪರಿಸರದಲ್ಲಿಯೇ ವ್ಯಕ್ತಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾದರು. ಕೋಟ ಪೊಲೀಸ್ ಠಾಣೆಯ ಠಾಣಾಧಿಕಾರಿ ತೇಜಸ್ವಿ, ಪೊಲೀಸ್ ಸಿಬಂದಿ ಸ್ಥಳಕ್ಕೆ ಧಾವಿಸಿ, ಪರಿಶೀಲಿಸಿ ಪ್ರಕರಣ ದಾಖಲಿಸಿದ್ದಾರೆ.