ಅಮ್ಮ..ಅಮ್ಮ..ಅಮ್ಮ..ಅಮ್ಮಂದಿರ ದಿನದ ಶುಭಾಶಯಗಳು!
– ಅಮ್ಮನ ಬಗ್ಗೆ ಹೇಳಲು ಪದಗಳೇ ಇಲ್ಲ
– ಯುಗ ಯುಗದಲ್ಲೂ ತಾಯಿಯೇ ಮೊದಲ ದೇವತೆ
NAMMUR EXPRESS NEWS
ಅಮ್ಮ… ಜಗತ್ತಿನ, ಬದುಕಿನ ಅತ್ಯಂತ ಪವಿತ್ರ ಪದ. ಅಮ್ಮಎಂದ ಕೂಡಲೆ ಮಧುರ ಭಾವನೆಗಳು ನಮ್ಮೊಳಗೆ ಸಂಭ್ರಮಿಸುತ್ತವೆ. ಹಾಗೆ ಮಕ್ಕಳ ಪಾಲಿಗೆ ಸೌಖ್ಯದ ಸವಿಯನ್ನು ಉಣಬಡಿಸುವ ಮೂರ್ತರೂಪ ಅಮ್ಮನೆ. ಈ ಜಗತ್ತಿನ ಅತೀ ದೊಡ್ಡ ಶಕ್ತಿ ತಾಯಿಯೇ. ನಮ್ಮೆಲ್ಲರ ಮೊದಲ ದೇವತೆ ತಾಯಿ. ತನ್ನ ನೋವು ನಿರಾಸೆಗಳನ್ನೆಲ್ಲಾ ಬತ್ತಿಯನ್ನಾಗಿ ಮಾಡಿ, ಆಸೆ-ಕನಸುಗಳನ್ನು ಎಣ್ಣೆಯಾಗಿಸಿ, ಮಕ್ಕಳ ಬದುಕಲ್ಲಿ ಸೌಖ್ಯದ ಹಣತೆ ಹಚ್ಚುತ್ತಾಳೆ. ರೆಕ್ಕೆಬಲಿಯದ ಮರಿಗಳಿಗೆ ಗುಟುಕು ನೀಡುವ ತಾಯಿ ಪಕ್ಷಿ, ಆಗ ತಾನೆ ಹುಟ್ಟಿದ ಕರುವಿನ ಮೈನೆಕ್ಕುವ ಹಸುವಿನಲ್ಲೂ ಅಗಾಧ ಪ್ರೇಮವನ್ನು ಕಾಣುತ್ತೇವೆ. ತ್ಯಾಗಮಯಿ, ಮಮತೆ, ಪ್ರೀತಿ, ಕರುಣೆ ಎಲ್ಲಾ ಗುಣಗಳು ಇರುವ ಏಕೈಕ ವ್ಯಕ್ತಿ ತಾಯಿ.
‘ಅಮ್ಮಾ’ ಪದವನ್ನು ವ್ಯಾಖ್ಯಾನಿಸುವುದು ಸುಲಭವೂ, ಸಾಧ್ಯವೂ ಅಲ್ಲದ್ದು. ‘ಮನೆಯೆ ಮೊದಲ ಪಾಠಶಾಲೆ ಜನನಿತಾನೆ ಮೊದಲಗುರು’ ಎಂಬಂತೆ ಗುರುವಾಗಿ, ಮಾರ್ಗದರ್ಶಕಳಾಗಿ, ಹಿತೈಷಿಣಿಯಾಗಿ, ವಿಮರ್ಶಕಳಾಗಿ, ಸ್ನೇಹಿತೆಯಾಗುವ ಅಮ್ಮ, ಸಮಯಪ್ರಜ್ಞೆ ಮೂಡಿಸಿ ಸಮಾಜಕ್ಕೆ ಸಾಕ್ಷೀಭೂತರಾಗುವ ಮಕ್ಕಳ ಬೆನ್ನ ಹಿಂದೆ ಸದಾ ಬೆಂಗಾವಲಾಗಿ ನಿಲ್ಲುತ್ತಾಳೆ. ಜನಪದದಲ್ಲಿ ‘ಕಣ್ಣು ಕಾಣುವ ತನಕ ಬೆನ್ನು ಬಾಗುವ ತನಕ ತಾಯಿಯಿರಲಿ, ತವರಿರಲಿ’ ಎಂದು ಹೇಳಿದ್ದಾರೆ. ಅಮ್ಮನನ್ನು ಕುರಿತ ಎಂಥ ಉದಾತ್ತ ನಿಲುವು? ಅಲ್ಲವೇ?! ತಾಯಿಗಿಂತ ಬಂಧುವಿಲ್ಲ ಉಪ್ಪಿಗಿಂತ ರುಚಿಯಿಲ್ಲ ಎಂಬಂತೆ ಬಂಧುಗಳ ಬಂಧು ಎಂದರೆ ತಾಯಿ ಜೀವವೆ.
ಅಮ್ಮನನ್ನು ಬಿಟ್ಟು ಅರ್ಥಾತ್ ಇತರರಿಗೆ ಸ್ಥಾನವಿಲ್ಲ. ಎಲ್ಲಾ ವಯೋಮಾನದವರಿಗೂ ಎಲ್ಲಾ ಸಂಬಂಧಗಳಿಗೂ ಕಡೆಯದಾಗಿ ಅಮ್ಮ ಪದವನ್ನು ಸೇರಿಸಿಕೊಳ್ಳುತ್ತೇವೆ. ಚಿಕ್ಕಮ್ಮ, ದೊಡ್ಡಮ್ಮ, ಅತ್ತಿಗೆಮ್ಮ, ಅತ್ಯಮ್ಮ. ತಂಗಮ್ಮ ಹೀಗೆ… ಯಾವುದೇ ಸಂಬಂಧ ಹೇಳದೇ ಇದ್ದಾಗಲೂ ಆವಮ್ಮ, ಈವಮ್ಮ ಎಂದಾದರೂ ಹೇಳಿಬಿಡುತ್ತೇವೆ. ಅಮ್ಮ ಈ ಪದಕ್ಕೆ ಬದಲಿ ಇಲ್ಲ. ಅಮ್ಮಾ ಎಂದರೆ ಧೈರ್ಯದ ಸಂಕೇತ. ನಾವೇನೇ ಕೇಳಿದರೂ ಇಲ್ಲ ಎನ್ನದ ಜೀವ ಮಾತ್ರ ಅಮ್ಮ. ಆನಂದಾಮೃತಕರ್ಷಿಣಿ, ಅಮೃತವರ್ಷಿಣಿ’ ಎಂಬಂತೆ ಮಕ್ಕಳ ಬದುಕಲ್ಲಿ ಆನಂದವನ್ನು ಅನಂತವಾಗಿ ತರಬಯಸುವವಳೆಂದರೆ ಅಮ್ಮಾ. ಸುಖಸ್ವರೂಪಿಣಿ, ಮಧುರಭಾಷಿಣಿಯಾಗಿ ನಮ್ಮನ್ನು ತಿದ್ದಿದ, ಈ ಜಗತ್ತಿಗೆ ತಂದ ಎಲ್ಲಾ ತಾಯಂದಿರಿಗೂ ಅಮ್ಮಂದಿರ ದಿನದ ಶುಭಾಶಯಗಳು.
ಅಮ್ಮಾ ಐ ಲವ್ ಯೂ…!