ಟಾಪ್ ನ್ಯೂಸ್ ಕರಾವಳಿ
ಕುಕ್ಕೆ ದೇಗುಲದ ಬಳಿಯೇ ಗಾಂಜಾ ಗಿಡ ಪತ್ತೆ!
– ಕಲ್ಯಾಣ ಮಂಟಪದ ಮೇಲೆ ಗಾಂಜಾ ಗಿಡ: ತನಿಖೆ
– ಬಂಟ್ವಾಳ: ಗಾಳಿ ಮಳೆಗೆ ವಿವಿಧೆಡೆ ಮನೆಗಳಿಗೆ ಹಾನಿ, ಅಪಾರ ನಷ್ಟ
– ಬೆಳ್ತಂಗಡಿ: ಅಕ್ರಮ ಜಾನುವಾರು ಸಾಗಾಟ ಪತ್ತೆ
– ಉಪ್ಪಿನಂಗಡಿ: ಒಂಟಿ ಮಹಿಳೆಯಿದ್ದ ಮನೆಗೆ ಬಂದು ಚೂರಿ ತೋರಿಸಿ ಚಿನ್ನಾಭರಣ ದೋಚಿದ ಅಪರಿಚಿತರು
NAMMUR EXPRESS NEWS
ಸುಬ್ರಹ್ಮಣ್ಯ: ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಆದಿ ಸುಬ್ರಹ್ಮಣ್ಯ ದೇವಸ್ಥಾನದ ಕಲ್ಯಾಣ ಮಂಟಪದ ಮೇಲ್ಬಾವಣಿಯಲ್ಲಿ ಗಾಂಜಾ ಗಿಡ ಪತ್ತೆಯಾದ ಘಟನೆ ಬೆಳಕಿಗೆ ಬಂದಿದೆ. ಆದಿ ಸುಬ್ರಹ್ಮಣ್ಯ ಕ್ಷೇತ್ರದ ಬಳಿಯಿರುವ ಕಲ್ಯಾಣ ಮಂಟಪದ ಮೇಲ್ಬಾವಣಿಯಲ್ಲಿ ನೀರಿನ ಟ್ಯಾಂಕ್ ಬಳಿ ಗಾಂಜಾ ಗಿಡ ಇದ್ದ ಬಗ್ಗೆ ಅಲ್ಲಿನ ಸ್ಥಳೀಯರ ಗಮನಕ್ಕೆ ಬಂದಿರುತ್ತದೆ. ಮಾಹಿತಿ ತಿಳಿದ ಸ್ಥಳೀಯರು ಅದನ್ನು ಪರಿಶೀಲಿಸಿ ಫೋಟೋ ತೆಗೆದು ಸ್ಥಳೀಯ ಪೊಲೀಸ್ ಠಾಣೆಗೆ ಮತ್ತು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ನೀಡಿದ ಕಾರ್ಯನಿರ್ವಹಣಾಧಿಕಾರಿಗಳ ಗಮನಕ್ಕೆ ಬಂದಿದೆ. ಕಲ್ಯಾಣ ಮಂಟಪದ ಉಸ್ತುವಾರಿ ರಾಮಕೃಷ್ಣ ಭಟ್ ಆ ಗಿಡವನ್ನು ಅಲ್ಲಿಂದ ತೆಗೆಸಿದ್ದಾರೆ.
– ಬಂಟ್ವಾಳ: ಗಾಳಿ ಮಳೆಗೆ ವಿವಿಧೆಡೆ ಮನೆಗಳಿಗೆ ಹಾನಿ, ಅಪಾರ ನಷ್ಟ
ಬಂಟ್ವಾಳ ತಾಲೂಕಿನಲ್ಲಿ ಭಾನುವಾರ ಸಂಜೆ ಬೀಸಿದ ಗಾಳಿ ಹಾಗೂ ಮಳೆಗೆ ಕೆಲವೆಡೆ ಹಾನಿ ಸಂಭವಿಸಿದ್ದು, ನಷ್ಟ ಸಂಭವಿಸಿದೆ. ವಿಟ್ಲ ಪಡೂರು ಗ್ರಾಮದ ಕೋಡಪದವು ಶಾಲಾ ಕಟ್ಟಡದ ಮೇಲ್ಬಾವಣಿ ಗಾಳಿಯಿಂದಾಗಿ ಹಾನಿಯಾಗಿದೆ. ವೀರಕಂಭ ಗ್ರಾಮದ ಮಜಿ ಎಂಬಲ್ಲಿನ ನಿವಾಸಿ ಸರೋಜಿನಿ ಕೋಂ ಶಿವಪ್ಪ ಅವರ ಮನೆ ಮೇಲೆ ತೆಂಗಿನ ಮರ ಬಿದ್ದು ತೀವ್ರ ಹಾನಿ ಸಂಭವಿಸಿದೆ. ಪುಣಚ ಗ್ರಾಮದ ನಾರ್ಣಡ್ಕ ನಿವಾಸಿ ವಾಸು ಎಂಬವರ ವಾಸ್ತವ್ಯದ ಮನೆಗೆ ಮರ ಬಿದ್ದು ಹಾನಿಯಾಗಿದೆ. ಅಳಿಕೆ ಗ್ರಾಮದ ಚೆಂದುಕಳ ನಿವಾಸಿ ಹನೀಫ್ ಅವರ ಮನೆಗೆ ಮರ ಬಿದ್ದು ಭಾಗಶಃ ಹಾನಿ ಸಂಭವಿಸಿದೆ ಎಂದು ತಿಳಿಸಿದೆ.
– ಬೆಳ್ತಂಗಡಿ: ಅಕ್ರಮ ಜಾನುವಾರು ಸಾಗಾಟ ಪತ್ತೆ
ಬೆಳ್ತಂಗಡಿ: ಪಿಕಪ್ ವಾಹನದಲ್ಲಿ ಹಿಂಸಾತ್ಮಕವಾಗಿ ಕಟ್ಟಿ ಹಾಕಿ ಅಕ್ರಮ ಜಾನುವಾರು ಸಾಗಾಟ ಪ್ರಕರಣವನ್ನು ಉಪ್ಪಿನಂಗಡಿ ಪೊಲೀಸರು ಬೇಧಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ಕಕಣಿಯೂರು ಗ್ರಾಮದ ಪದ್ಮುಂಜ ಎಂಬಲ್ಲಿ ನಡೆದಿದೆ. ಅಕ್ರಮ ಜಾನುವಾರು ಸಾಗಾಟ ನಡೆಸುತ್ತಿದ್ದ ಆರೋಪಿಯನ್ನು ಬಂದರು ಗ್ರಾಮದ ಮೈರೋತ್ತಡ್ಕ ನಿವಾಸಿ ರಕ್ಷಿತ್ (25) ಎಂದು ಹೆಸರಿಸಲಾಗಿದೆ. ಕಣಿಯೂರು ಗ್ರಾಮದ ಪದ್ಮುಂಜ ಎಂಬಲ್ಲಿ ಕೆಎ21 ಬಿ8892 ನೋಂದಣಿ ಸಂಖ್ಯೆಯ ಪಿಕಪ್ ವಾಹನದಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಉಪ್ಪಿನಂಗಡಿ ಠಾಣಾ ಪಿಎಸ್ಸೆ ಭರತ್ ಕುಮಾರ್ ವಿ ಅವರ ನೇತೃತ್ವದ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಪಿಕಪ್ ವಾಹನವನ್ನು ಪೊಲೀಸರು ಪರಿಶೀಲನೆ ನಡೆಸಿದಾಗ ಮೂರು ಜಾನುವಾರುಗಳ ಕಾಲುಗಳನ್ನು ಕಟ್ಟಿ ಹಿಂಸಾತ್ಮಕ ರೀತಿಯಲ್ಲಿ ತುಂಬಿರುವುದು ಕಂಡು ಬಂದಿದೆ. ಆರೋಪಿ ರಕ್ಷಿತ್ ನಲ್ಲಿ ಜಾನುವಾರುಗಳ ಬಗ್ಗೆ ವಿಚಾರಿಸಿದಾಗ ಯಾವುದೇ ಪರವಾನಿಗೆ ಇಲ್ಲದೇ ಅವುಗಳನ್ನು ಕಡಿದು ಮಾಂಸ ಮಾಡಲು ಸಾಗಾಟ ಮಾಡುವುದಾಗಿ ತಿಳಿಸಿರುತ್ತಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಉಪ್ಪಿನಂಗಡಿ: ಒಂಟಿ ಮಹಿಳೆಯಿದ್ದ ಮನೆಗೆ ಬಂದು ಚೂರಿ ತೋರಿಸಿ ಚಿನ್ನಾಭರಣ ದೋಚಿದ ಅಪರಿಚಿತರು
ಉಪ್ಪಿನಂಗಡಿ : ಒಂಟಿ ಮಹಿಳೆಯಿದ್ದ ಮನೆಗೆ ಬಂದ ಅಪರಿಚಿತ ಗಂಡಸು ಹಾಗೂ ಹೆಂಗಸು ಕುಡಿಯಲು ನೀರು ಕೇಳಿ ಬಳಿಕ ಚೂರಿ ತೋರಿಸಿ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ಉಪ್ಪಿನಂಗಡಿ ಸಮೀಪದ ಕರಾಯ ಎಂಬಲ್ಲಿ ನಡೆದಿದೆ. ಕರಾಯ ನಿವಾಸಿ ಸುಹೈಬಾ (25) ಅವರ ಮನೆ ಅಂಗಳಕ್ಕೆ ಬಂದ ಅಪರಿಚಿತ ಓರ್ವ ಗಂಡಸು ಮತ್ತು ಓರ್ವ ಹೆಂಗಸು ಸುಹೈಬಾ ಅವರಲ್ಲಿ ಮಾತನಾಡಿ, ಮನೆಯಲ್ಲಿರುವ ಸದಸ್ಯರುಗಳ ಬಗ್ಗೆ ವಿಚಾರಿಸಿದ್ದಾರೆ. ಬಳಿಕ ಕುಡಿಯಲು ನೀರು ಕೇಳಿದ್ದಾರೆ. ಸುಹೈಬಾ ನೀರು ತರಲು ಮನೆಯೊಳಗೆ ತೆರಳಿದಾಗ, ಅಪರಿಚಿತರು ಮನೆಯೊಳಗೆ ಪ್ರವೇಶಿಸಿ, ಮನೆಯಲ್ಲಿದ್ದ ಗೋಡೇಜ್ ಬಾಗಿಲು ತೆರೆದು ಹುಡುಕಾಡಲು ಆರಂಭಿಸಿದ್ದಾರೆ. ಇದನ್ನು ಕಂಡ ಸುಹೈಬಾ ಅವರು ಬೊಬ್ಬೆ ಹಾಕಿ ತನ್ನ ಗಂಡಸರಿಗೆ ದೂರವಾಣಿ ಕರೆ ಮಾಡಲು ಯತ್ನಿಸಿದ್ದಾರೆ.
ಈ ಸಂದರ್ಭ ಅಪರಿಚಿತರು ಸುಹೈಬಾ ಕೈಯಲ್ಲಿದ್ದ ಮೊಬೈಲ್ ಫೋನ್ ನ್ನ ಎಳೆದು ಬಿಸಾಡಿ, ಹಲ್ಲೆ ನಡೆಸಿ, ಚೂರಿಯನ್ನು ತೋರಿಸಿ ಬೆದರಿಸಿ, ಸುಹೈಬಾ ಅವರ ಕೈಯಲ್ಲಿದ್ದ ಎರಡು ಚಿನ್ನದ ಉಂಗುರಗಳನ್ನು ಹಾಗೂ ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಸರವನ್ನು ಕಸಿದುಕೊಂಡಿರುತ್ತಾರೆ. ಈ ಸಂದರ್ಭ ಸುಹೈಬಾ ಅವರ ಬೊಬ್ಬೆ ಕೇಳಿ ನೆರೆಮನೆಯ ಮಹಿಳೆ ಬರುತ್ತಿರುವುದನ್ನು ಕಂಡ ಅಪರಿಚಿತರು ಮೋಟಾರ್ ಸೈಕಲಿನಲ್ಲಿ ಪರಾರಿಯಾಗಿದ್ದಾರೆ. ಅಪರಿಚಿತರು ದೋಚಿದ ಆಭರಣಗಳ ಮೌಲ್ಯ 1 ಲಕ್ಷ ರೂಪಾಯಿಗಳು ಎಂದು ಅಂದಾಜಿಸಲಾಗಿದೆ.