ಕರಾವಳಿ ಬ್ರೇಕಿಂಗ್ ನ್ಯೂಸ್
ಕರಾವಳಿಯಲ್ಲೂ ಬಿಜೆಪಿಗೆ ಬಂಡಾಯದ ಬಿಸಿ!
– ಚುನಾವಣೆ: ಬಿಜೆಪಿ ಟಿಕೆಟ್ ಕೈತಪ್ಪಿದ್ದಕ್ಕೆ ಬೇಸರ
– ಸ್ವತಂತ್ರ ಸ್ಪರ್ಧೆ: ಮಾಜಿ ಶಾಸಕ ರಘುಪತಿ ಭಟ್ ಘೋಷಣೆ
NAMMUR EXPRESS NEWS
ಉಡುಪಿ: “ನೈರುತ್ಯ ಪದವೀಧರ ಕ್ಷೇತ್ರದ ಪಕ್ಷದ ಕಾರ್ಯಕರ್ತರ ಪ್ರತಿನಿಧಿಯಾಗಿ ಸ್ವತಂತ್ರವಾಗಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ”ಎಂದು ಬಿಜೆಪಿ ಮಾಜಿ ಶಾಸಕ ಹಾಗೂ ಟಿಕೆಟ್ ಆಕಾಂಕ್ಷಿಯಾಗಿದ್ದ ರಘುಪತಿ ಭಟ್ ಘೋಷಿಸಿದ್ದಾರೆ
ಜೂನ್ 3ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಉಡುಪಿ ಮಾಜಿ ಶಾಸಕ ಕೆ.ರಘುಪತಿ ಭಟ್ ಅವರು ಪಕ್ಷದ ವರಿಷ್ಠರ ನಿರ್ಧಾರಕ್ಕೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು. ” ಇದು ಪಕ್ಷದ ವಿರುದ್ಧವಲ್ಲ, ನಾನು ಶಿಕ್ಷಕರು ಮತ್ತು ಪದವೀಧರರಿಗಾಗಿ ಕೆಲಸ ಮಾಡಲು ಬಯಸುತ್ತೇನೆ ಹೀಗಾಗಿ ಸ್ವತಂತ್ರವಾಗಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ” ಎಂದು ಸ್ಪಷ್ಟಪಡಿಸಿದ್ದಾರೆ.
ವಿಧಾನಸಭಾ ಚುನಾವಣೆಗೂ ಆರಂಭದಲ್ಲಿ ನನಗೆ ಟಿಕೆಟ್ ನೀಡದ ಹಿನ್ನಲೆ ಪಕ್ಷದ ನಿರ್ಧಾರದ ಬಗ್ಗೆ ಅಸಮಾಧಾನ ಹೊಂದಿದ್ದು ನಿಜ. ಆದರೆ ನಂತರ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡಿ ಸುಮಾರು 33,000 ಮತಗಳ ಮುನ್ನಡೆ ನೀಡಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಿದ್ದೆ. ನಾನು ಈ ಹಿಂದೆಯೂ ರಾಜಕೀಯದಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೆ, ಆದರೆ ನಂತರ ಪಕ್ಷಕ್ಕಾಗಿ ಕೆಲಸ ಮಾಡುವಂತೆ ಪಕ್ಷದ ಹೈಕಮಾಡ್ ನನಗೆ ಮನವರಿಕೆ ಮಾಡಿದ್ದರು. ಆ ಸಂದರ್ಭದಲ್ಲಿ ನನಗೆ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವುದಾಗಿ ಪಕ್ಷದ ಹಿರಿಯರು ಭರವಸೆ ನೀಡಿದ್ದರು. ಆ ಪ್ರಕಾರ ಪದವೀಧರರ ಸದಸ್ಯತ್ವ ಅಭಿಯಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಅತಿ ಹೆಚ್ಚು 38,000 ಹೊಸ ಮತದಾರರನ್ನು ಸದಸ್ಯರನ್ನು ನೋಂದಾಯಿಸಿದ್ದೇನೆ. ಅಲ್ಲದೆ ಪಕ್ಷ ನೀಡಿದ ಶಿವಮೊಗ್ಗ ಲೋಕಸಭಾ ಚುನಾವಣಾ ಪ್ರಭಾರಿ ಜವಾಬ್ದಾರಿಯನ್ನು 40 ದಿನಗಳ ಕಾಲ ಶಿವಮೊಗ್ಗದಲ್ಲಿ ಉಳಿದು ಪಕ್ಷದ ಪರವಾಗಿ ಕೆಲಸ ಮಾಡಿದ್ದೇನೆ.
ಟಿಕೆಟ್ ಘೋಷಣೆಯಾದಾಗ ನಾನು ಬೆಂಗಳೂರಿನ ಪಕ್ಷದ ಕಚೇರಿಯಲ್ಲಿದ್ದೆ, ಯಾವುದೇ ಹಿರಿಯ ನಾಯಕರಿಗೆ ಟಿಕೆಟ್ ನೀಡಿದರೆ ನನಗೆ ಸಂತೋಷವಾಗುತ್ತದೆ. ಆದರೆ ಧನಂಜಯ್ ಸರ್ಜೆ ಅವರು ಮೊನ್ನೆಯಷ್ಟೇ ಪಕ್ಷಕ್ಕೆ ಸೇರ್ಪಡೆಗೊಂಡರು. ನಾನು ಸಹಿತ ಇನ್ನೂ ಅನೇಕರು ಪಕ್ಷದಲ್ಲಿ ಆಕಾಂಕ್ಷಿಗಳೂ ಇದ್ದರು. ಆದರೆ ನನ್ನ ಸಹಿತ ಎಲ್ಲಾ ಹಿರಿಯ ಆಕಾಂಕ್ಷಿಗಳು ನಿರ್ಲಕ್ಷಿಸಲಾಗಿದೆ. ಬಿಜೆಪಿ ಕಾರ್ಯಕರ್ತರ ಪ್ರತಿನಿಧಿಯಾಗಿ ಸ್ಪರ್ಧೆ ಮಾಡುತ್ತೇನೆ. ಸೋತರೂ ಬಿಜೆಪಿಯಲ್ಲೇ ಇರುತ್ತೇನೆ, ಗೆದ್ದರೂ ಬಿಜೆಪಿಯಲ್ಲೇ ಇರುತ್ತೇನೆ. ಇದು ಯಾವುದೇ ಬಂಡಾಯ ಅಥವಾ ಪಕ್ಷ, ವ್ಯಕ್ತಿ ವಿರುದ್ಧವಲ್ಲ. ನನಗಾಗಿ, ಜನರ ಸೇವೆಗಾಗಿ ಕೆಲಸ ಮಾಡಲು ಈ ನಿರ್ಧಾರ ಮಾಡಿದ್ದೇನೆ ಎಂದು ಭಟ್ ಹೇಳಿದ್ದಾರೆ.
ಕರಾವಳಿಗೆ ಪಕ್ಷದಿಂದ ಅನ್ಯಾಯವಾಗಿದೆ. ಶಿಕ್ಷಕರ ಕ್ಷೇತ್ರದ ಟಿಕೆಟ್ ಜೆಡಿಎಸ್ ಪಕ್ಷದ ಚಿಕ್ಕಮಗಳೂರು ಅಭ್ಯರ್ಥಿಗೆ ನೀಡಿ ಪದವೀಧರ ಕ್ಷೇತ್ರದ ಟಿಕೆಟ್ ಶಿವಮೊಗ್ಗದ ಬಿಜೆಪಿ ಅಭ್ಯರ್ಥಿಗೆ ನೀಡಲಾಗಿದೆ. ಇದು ನಾಲ್ಕು ದಶಕಗಳಿಂದ ಬಿಜೆಪಿ ಸಂಪ್ರದಾಯ ಮುರಿದು ಕರಾವಳಿ ಭಾಗಕ್ಕೆ ನೀಡುತ್ತಿದ್ದ ಶಿಕ್ಷಕರ ಕ್ಷೇತ್ರದ ಟಿಕೆಟ್ ನೀಡದೆ ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು ಭಾಗದ ವಿದ್ಯಾವಂತ, ಪ್ರಜ್ಞಾವಂತ ಮತದಾರರಿಗೆ ಅನ್ಯಾಯ ಮಾಡಿದ ಹಾಗಾಗಿದೆ. ಪ್ರಸ್ತುತ ಸ್ಥಿತಿಯಲ್ಲಿ ಬಿಜೆಪಿಯ ನಿಲುವಿನಿಂದ ವಿಚಲಿತನಾಗಿದ್ದೇನೆ ಎಂದು ರಘುಪತಿ ಭಟ್ ಸಾಮಾಜಿಕ ಮಾಧ್ಯಮದಲ್ಲಿ ಟಿಕೆಟ್ ಕೈ ತಪ್ಪಿದ್ದರ ಬಗ್ಗೆ ನೋವು ತೋಡಿಕೊಂಡಿದ್ದರು