ಹೆಣ್ಣು ಮಗುವೆಂದು ಮಾತ್ರೆ ಸೇವಿಸಿ ಗರ್ಭಪಾತ
– ಸ್ಕ್ಯಾನಿಂಗ್ ಸೆಂಟರ್ ಸೀಜ್
– ಸುಳ್ಯ: ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ
– ಮೂಲ್ಕಿ: ಚಿಪ್ಪು ಹೆಕ್ಕಲು ಹೋದ ಯುವಕರ ತಂಡ
ಓರ್ವ ನೀರುಪಾಲು, ಇಬ್ಬರ ರಕ್ಷಣೆ
NAMMUR EXPRESS NEWS
ಹೆಣ್ಣು ಮಗುವೆಂದು ಭಾವಿಸಿ, ಮಾತ್ರೆ ಸೇವಿಸಿ ಗಂಡು ಮಗುವಿನ ಗರ್ಭಪಾತವಾದ ಘಟನೆ ಕೋಲಾರ ಜಿಲ್ಲೆಯ ಮಾಲೂರು ನಗರದಲ್ಲಿ ನಡೆದಿದೆ. ಕೆಜಿಎಫ್ ತಾಲೂಕಿನ ಆಡಂಪಲ್ಲಿ ನಿವಾಸಿ ಮುರುಗೇಶ್ ಹಾಗೂ ಅನಿತಾ ದಂಪತಿಯ 3 ತಿಂಗಳ ಮಗು ಮೃತಪಟ್ಟಿದೆ. ಸೋಮವಾರ ದಂಪತಿ ಮಾಲೂರು ನಗರದ ಸಂಜನಾ ಖಾಸಗಿ ಆಸ್ಪತ್ರೆಗೆ ಸ್ಕ್ಯಾನಿಂಗ್ ಗೆಂದು ತೆರಳಿದ್ದರು. ಈ ಹಿಂದಿನ 2 ಮಕ್ಕಳು ಹೆಣ್ಣಾಗಿದ್ದು, ಮೂರನೇಯದ್ದು ಗಂಡು ಮಗುವಾಗಲಿ ಎಂದು ದಂಪತಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ವೇಳೆ ಹೊಟ್ಟೆಯಲ್ಲಿರುವ ಹೆಣ್ಣು ಮಗುವನ್ನು ಗಂಡಾಗಿ ಪರಿವರ್ತನೆ ಮಾಡಿಸುವುದಾಗಿ ಹೇಳಿ ವೈದ್ಯರು ಮಾತ್ರೆಗಳನ್ನು ಕೊಟ್ಟಿದ್ದಾರೆ ಎಂದು ಇದೀಗ ಪೋಷಕರು ಆರೋಪ ಮಾಡುತ್ತಿದ್ದಾರೆ. ಹೆಣ್ಣು ಮಗುವೆಂದು ಸುಳ್ಳು ಹೇಳಿ 25 ಸಾವಿರ ಹಣ ಪಡೆದು ವಂಚಿಸಿದ್ದಾರೆಂದು ತಂದೆ ಮುರುಗೇಶ್ ಆರೋಪ ಮಾಡಿದ್ದಾರೆ.
ಇತ್ತ ಆಸ್ಪತ್ರೆ ಸಿಬ್ಬಂದಿ ಹಾಗೂ ವೈದ್ಯರು, ನಾವು ಗರ್ಭಪಾತಕ್ಕೆ ಮಾತ್ರೆ ಕೊಟ್ಟೆ ಇಲ್ಲ ಎಂದು ಹೇಳುತ್ತಿದ್ದಾರೆ. ಆಸ್ಪತ್ರೆಯಲ್ಲಿ ಭ್ರೂಣ ಲಿಂಗದ ಸ್ಕ್ಯಾನಿಂಗ್ ಮಾಡಿಸಿ ಸಾವಿರಾರು ಹಣ ಪೀಕುತ್ತಿರುವ ಆರೋಪ ಕೂಡ ಕೇಳಿಬಂದಿದೆ. ಹೀಗಾಗಿ ಆಸ್ಪತ್ರೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮಾಲೂರು ತಾಲೂಕು ವೈದ್ಯಾದಿಕಾರಿಗೆ ಮುರುಗೇಶ್ ದೂರು ನೀಡಿದ್ದಾರೆ. ಈ ಬೆನ್ನಲ್ಲೇ ಸ್ಕ್ಯಾನಿಂಗ್ ಸೆಂಟರ್ ಸೀಜ್ ಮಾಡಲಾಗಿದೆ. ಡಿಹೆಚ್ಓ ಜಗದೀಶ್ ನೇತೃತ್ವದಲ್ಲಿ ಮಾಲೂರು ಪಟ್ಟಣದ ಸಂಜನಾ ಆಸ್ಪತ್ರೆ ಸ್ಕ್ಯಾನಿಂಗ್ ಸೆಂಟರ್ ಸೀಜ್ ಮಾಡಲಾಗಿದೆ. ಘಟನೆ ಸಂಬಂಧ ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ಸುಳ್ಯ: ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ
ಸುಳ್ಯ: ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ನೆಟ್ಟಾರಿನಲ್ಲಿ ವರದಿಯಾಗಿದೆ. ಮೃತರನ್ನು ನೆಟ್ಟಾರು ನಿವಾಸಿ ಚರಣ್ ಎಂದು ಗುರುತಿಸಲಾಗಿದೆ. ಈತ ಸುಳ್ಯದ ಶಿಕ್ಷಣ ಸಂಸ್ಥೆಯೊಂದರ ವಿದ್ಯಾರ್ಥಿ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.
– ಮೂಲ್ಕಿ: ಚಿಪ್ಪು ಹೆಕ್ಕಲು ಹೋದ ಯುವಕರ ತಂಡ
ಓರ್ವ ನೀರುಪಾಲು, ಇಬ್ಬರ ರಕ್ಷಣೆ
ಮಂಗಳೂರು: ಕೊಳಚಿ ಕಂಬಳ ಬೀಚ್ ಬಳಿಯಿಂದ ಸಸಿಹಿತ್ಲು ಮುಂಡಾ ಬೀಚ್ ಬಳಿಯ ಸಮುದ್ರದ ಅಳಿವೆ ಬಾಗಿಲಿನಲ್ಲಿ ಚಿಪ್ಪು ಹೆಕ್ಕಲು ಹೋದ ಯುವಕರ ತಂಡದಲ್ಲಿ ಓರ್ವ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದು ಶೋಧ ಕಾರ್ಯ ಮುಂದುವರಿದಿದೆ. ನಾಪತ್ತೆಯಾದ ಯುವಕನನ್ನು ಬಜಪೆಯ ಅದ್ಯಪಾಡಿಯ ಹಳೆ ವಿಮಾನ ನಿಲ್ದಾಣ ಬಳಿಯ ನಿವಾಸಿ ಅಭಿಲಾಷ್(24) ಎಂದು ಗುರುತಿಸಲಾಗಿದೆ. ಭಾನುವಾರ ಬೆಳಗ್ಗೆ ಬಜಪೆಯ ಆದ್ಯಪಾಡಿಯ ಹಾಗೂ ಹತ್ತಿರದ ಪ್ರದೇಶದ ಸುಮಾರು 10 ಮಂದಿ ಚಿಪ್ಪು ಹೆಕ್ಕಲು ಬಂದಿದ್ದರು. ಶಾಂಭವಿ ನದಿಯಲ್ಲಿ ನೀರಿನ ಇಳಿತವಿದ್ದ ಕಾರಣ ಸುಮಾರು ಎರಡು ಕಿಲೋಮೀಟರ್ ನಡೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.
ಈ ಸಂದರ್ಭ ಸಸಿಹಿತ್ಲು ಮುಂಡಾ ಬೀಚ್ ಅಳಿವೆ ಬಾಗಿಲು ಬಳಿ ನೀರಿನ ಆಳ ಗೊತ್ತಾಗದೆ ಈಜು ಬಾರದ ಧನುಷ್ ಮತ್ತು ಜೀವನ್ ಎಂಬವರು ನೀರಿನಲ್ಲಿ ಮುಳುಗಿದ್ದು ಅವರನ್ನು ರಕ್ಷಿಸಲು ಈಜಲು ಗೊತ್ತಿದ್ದ ಅಭಿಲಾಷ್ ಮುಂದಾಗಿದ್ದು ಅವರನ್ನು ರಕ್ಷಿಸುವ ಯತ್ನದಲ್ಲಿ ಉಳಿದವರ ಕಣ್ಣೆದುರೇ ನೀರಿನ ರಭಸಕ್ಕೆ ತಾನು ನೀರಿನಲ್ಲಿ ಮುಳುಗಿದ್ದಾರೆ ಎನ್ನಲಾಗಿದೆ. ಈ ಸಂದರ್ಭ ಉಳಿದವರ ಬೊಬ್ಬೆ ಕೇಳಿ ಸ್ಥಳಕ್ಕೆ ಹೆಜಮಾಡಿ ಮೀನುಗಾರರ ತಂಡದ ಸದಾಶಿವ ಕೋಟ್ಯಾನ್ ಧಾವಿಸಿ ಧನುಷ್ ಮತ್ತು ಜೀವನ್ರವರನ್ನು ರಕ್ಷಿಸಿದ್ದಾರೆ. ಆದರೆ ನೀರಿನಲ್ಲಿ ಮುಳುಗಿದ ಅಭಿಲಾಷ್ ಪತ್ತೆಯಾಗಿಲ್ಲ. ಅಭಿಲಾಶ್ ಅವಿವಾಹಿತನಾಗಿದ್ದು ಮಂಗಳೂರು ರೈಲ್ವೇ ಯಲ್ಲಿ ಗುತ್ತಿಗೆದಾರನಾಗಿ ಕಾರ್ಯನಿರ್ವಹಿಸುತ್ತಿದ್ದ. ಭಾನುವಾರ ರಜಾ ದಿನವಾದ ಕಾರಣ ಚಿಪ್ಪು ಹೆಕ್ಕಲು ಬಂದಿದ್ದ ಎಂದು ಮಿತ್ರರು ಹೇಳಿದ್ದಾರೆ. ಅಭಿಲಾಶ್ ಪತ್ತೆಗೆ ಎಸ್ಡಿಆರ್ಎಫ್ ತಂಡ, ಕರಾವಳಿ ಕಾವಲು ಪಡೆಯ ಹೆಜ್ಮಾಡಿ, ಮುಲ್ಕಿ ಹಾಗೂ ಸುರತ್ಕಲ್ ಪೊಲೀಸರ ತಂಡ ಶ್ರಮಿಸುತ್ತಿದ್ದಾರೆ.