ಸ್ವಚ್ಛ, ಸುಂದರ ಬಜ್ಪೆಗಾಗಿ ಹೋರಾಟ!
– ಮೇ 20ರಂದು ಕಸ ಇಟ್ಟುಕೊಂಡು ಪ್ರತಿಭಟನೆ
– ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆ ಸಿದ್ಧತೆ
NAMMUR EXPRESS NEWS
ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆ ವತಿಯಿಂದ ದಿನಾಂಕ 20/05/24 ರ ಸೋಮವಾರ ಬೆಳಿಗ್ಗೆ 10 ಗಂಟೆಗೆ ಬಜ್ಪೆ ಪಟ್ಟಣ ಪಂಚಾಯತ್ ನಲ್ಲಿ ಅಸಮರ್ಪಕ ಕಸ ವಿಲೇವಾರಿ ವಿರುದ್ಧ ಕಾಲ್ನಡಿಗೆ ಹೋರಾಟ ಹಮ್ಮಿಕೊಂಡಿದೆ. ಇತ್ತೀಚಿಗೆ ಜಾಥಾಕ್ಕೆ ಹೆದರಿ ಇದೀಗ ಅಲ್ಲಲ್ಲಿ ಅಲ್ಪಸ್ವಲ್ಪ ಕಸ ತೆಗೆದು ತೇಪೆ ಹಾಕುವುದನ್ನು ಬಜ್ಪೆ ನಾಗರಿಕರ ಹೋರಾಟ ಸಮಿತಿ ಖಂಡಿಸಿದೆ. ಬಜ್ಪೆ ಪಟ್ಟಣ ಪಂಚಾಯತ್ ನಲ್ಲಿ ಒಂದು ವ್ಯವಸ್ಥಿತ ವಾಗಿ ಕಸವಿಲೇವಾರಿಗೆ ಬೇಕಾದ ವ್ಯವಸ್ಥೆ ಮಾಡುವವರೆಗೆ, ನಮ್ಮ ಹೋರಾಟ ನಿಲ್ಲದು. ಇಲ್ಲಿ ನಮಗೆ ಶಾಶ್ವತ ಪರಿಹಾರ ಅಗತ್ಯ ,ಶಾಶ್ವತ ಪರಿಹಾರ ಸಿಗುವವರೆಗೆ,ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆ ,ಬಜ್ಪೆ ನಾಗರಿಕರ ಪರವಾಗಿರುತ್ತದೆ. ಬಜ್ಪೆ ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೆ ಏರಿದ ಮೇಲೆ, ನಮ್ಮ ಮನೆಗಳಿಗೆ, ಅಂಗಡಿಗಳಿಗೆ, ಅಂಗಡಿ ಪರವಾನಿಗೆಗಳ ಟ್ಯಾಕ್ಸ್ಗಳು ಸುಮಾರು 3 ಪಟ್ಟು ಜಾಸ್ತಿಯಾಗಿದೆ
ಚುನಾವಣೆ ನಡೆಯದೇ 2ವರ್ಷ!
ಪಟ್ಟಣ ಪಂಚಾಯತ್ಗೆ ಚುನಾವಣೆ ಆಗದೆ, ಸುಮಾರು 2 ವರ್ಷಗಳೇ ಕಳೆದು ಹೋದವು. ಅಲ್ಲಿ ಏನಿದ್ದರೂ ಅಧಿಕಾರಿಗಳದೇ ಕಾರುಬಾರು. ಕಸದ ಹಣವನ್ನು ನಮ್ಮಿಂದ ಕಸಿದುಕೊಳ್ಳುವ ಪಟ್ಟಣ ಪಂಚಾಯ್ತಿಗೆ ದಿನವೂ ಮನೆ ಮನೆ ಕಸ ವಿಲೇವಾರಿ ಮಾಡಬೇಕು, ಅದಕ್ಕಾಗಿ ಬೇಕಾದ ಸೌಲಭ್ಯ ಕ್ರೋಢೀಕರಿಸಬೇಕು ಅನ್ನುವಷ್ಟು ಜ್ಞಾನವಿಲ್ಲದ ಅಧಿಕಾರಿಗಳು, ತಮಗೆ ಏನು ಬಿದ್ದೇ ಹೋಗಿಲ್ಲ ಅನ್ನುವಂಥ ಮನೋಭಾವನೆ ಇರುವ ಅಧಿಕಾರಿಗಳಿಗೆ ಬುದ್ದಿ ಕಲಿಸಬೇಕಾದ ಕೆಲಸ ನಾಗರೀಕರಾಗಿ ನಾವು ಮಾಡಬೇಕಾಗುತ್ತದೆ. ಇತ್ತೀಚೆಗೆ ಲೋಕಸಭಾ ಚುನಾವಣೆ ಘೋಷಣೆ ಆದಾಗಿನಿಂದ ಮನೆ ಮನೆ ಕಲಸ ವಿಲೇವಾರಿ ಆಗದೆ, ನಮ್ಮ ಮನೆಗಳ ಕಸದಲ್ಲಿ ಹುಳಗಳಾಗುವುದನ್ನು ನಾವು ಕಣ್ಣಾರೆ ಕಂಡಿದ್ದೇವೆ. ಪಟ್ಟಣ ಪಂಚಾಯತ್ ವ್ಯಾಪ್ತಿಯ ಎಲ್ಲಾ ಮನೆಗಳು, ಹೋಟೆಲ್ಗಳು ಮತ್ತು ಅಂಗಡಿಗಳ ಬಾಡಿಗೆದಾರರು ಮತ್ತು ಮಾಲೀಕರ ದಿನನಿತ್ಯದ ಗೋಳು ಅನ್ನುವುದು ನಮಗೆಲ್ಲರಿಗೆ ಗೊತ್ತೇ ಇದೆ.
ಇದೆಲ್ಲವನ್ನು ಮನಗಂಡ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆ ಎಂಬ ಹೋರಾಟ ಸಮಿತಿಯನ್ನು ಕಳೆದ ಬಜ್ಪೆ ಪೇಟೆಯ ಕಿನ್ನಿಪದವಿನಿಂದ ಹಿಡಿದು ಚೆಕ್ಪೋಸ್ಟ್ ತನಕದ ರಸ್ತೆಯ ಅವ್ಯವಸ್ಥೆ ಮತ್ತು ಕಳಪೆ ಕಾಮಗಾರಿ ವಿರುದ್ಧ ಹೋರಾಟ ಮಾಡಲು ಸಮಿತಿ ರಚಿಸಿ, ಹಗಲು ರಾತ್ರಿ ಅವಿರತ ಹೋರಾಟ ಮಾಡಿದರ ಫಲ ಈಗ ಸುಗಮವಾಗಿ ವಾಹನಗಳು ಓಡಾಡಲು ವ್ಯವಸ್ಥೆ ಆಗಿದೆ.
ಇದೀಗ ಬಜ್ಪೆ ಪಟ್ಟಣ ಪಂಚಾಯತಿನ ಅಸಮರ್ಪಕ ಕಸ ವಿಲೇವಾರಿ ಬಗ್ಗೆ ನಾವು ಮಾನ್ಯ ಜಿಲ್ಲಾಧಿಕಾರಿಗಳು, ತಹಶೀಲ್ದಾರ್, ಮುಖ್ಯಾಧಿಕಾರಿ ಮತ್ತು ಸಂಬಂಧ ಪಟ್ಟ ಇಲಾಖೆಗಳಿಗೆ ಮನವಿ ಕೊಟ್ಟರೂ ಏನೂ ಪ್ರಯೋಜನವಾಗದ ಹಿನ್ನಲೆ, ಬಜ್ಪೆ ನಾಗರಿಕರ ಹೋರಾಟ ಸಮಿತಿ ದಿನಾಂಕ 13-5-2024ರಂದು ತುರ್ತು ಸಭೆ ಸೇರಿ, ದಿನಾಂಕ 20.5.2024ರ ಸೋಮವಾರ ಬೆಳಿಗ್ಗೆ 10 ಗಂಟೆಯಿಂದ ಕಿನ್ನಿಪದವು ಜಂಕ್ಷನ್ನಿಂದ ಬಟ್ಟೆ ಬಸ್ಸು ನಿಲ್ದಾಣ ವೃತ್ತವಾಗಿ ಪಟ್ಟಣ ಪಂಚಾಯತ್ವರೆಗೆ, ನಮ್ಮ ನಮ್ಮ ಮನೆಯ ಕಸಗಳನ್ನು ಹಿಡಿದುಕೊಂಡು, ಕಾಲ್ನಡಿಗೆ ಮೂಲಕ ಪಟ್ಟಣ ಪಂಚಾಯತ್ವರೆಗೆ ತಲುಪಿ, ನಮ್ಮ ಕಸವನ್ನು ಪಂಚಾಯತ್ ಅಂಗಳಕ್ಕೆ ಹಾಕುವ ಮೂಲಕ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ ಎಚ್ಚರಿಸುವ ಮೂಲಕ ನಮ್ಮ ಬೇಡಿಕೆಯನ್ನು ಪರಿಹರಿಸಿಕೊಳ್ಳೋಣ. ಅದಕ್ಕಾಗಿ ಬಜ್ಪೆ ನಾಗರಿಕರಾದ ನಾವೆಲ್ಲ ದಿನಾಂಕ 20.05.2024ರ ಒಂದು ಗಂಟೆ ನಮ್ಮ ಕೆಲಸಗಳನ್ನು ಬದಿಗಿಟ್ಟು ಸ್ವಚ್ಛ ಸುಂದರ ಬಜ್ಪೆಗಾಗಿ ಹೋರಾಟ ಮಾಡೋಣ ಎಂದು ಸಮಿತಿ ಕರೆ ನೀಡಿದೆ.