- ಆಸ್ಪತ್ರೆಗೆ ದಾಖಲಾಗಿದ್ದ ರಜನೀಕಾಂತ್
- 15 ದಿನ ವಿಶ್ರಾಂತಿ ಸೂಚಿಸಿದ ವೈದ್ಯರು!
ಹೈದರಾಬಾದ್: ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಅವರ ಆರೋಗ್ಯ ಸ್ಥಿರವಾಗಿದ್ದು, ಭಾನುವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದೀಗ ಅವರ ಹೊಸ ಪಕ್ಷ ಘೋಷಣೆ ಕಾತುರ ಹೆಚ್ಚಾಗಿದೆ. ಆದರೆ ವೈದ್ಯರು ವಿಶ್ರಾಂತಿ ಹೇಳಿದ್ದಾರೆ.
ಅಧಿಕ ರಕ್ತದೊತ್ತಡದಿಂದ ರಜನಿಕಾಂತ್ ಅವರನ್ನು ಶುಕ್ರವಾರ (ಡಿ.25) ಬೆಳಗ್ಗೆ ಹೈದರಾಬಾದ್ನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಪೋಲೋ ಆಸ್ಪತ್ರೆ ಹೆಲ್ತ್ ಬುಲೆಟಿನ್ ರಿಲೀಸ್ ಮಾಡಿದ್ದು, ರಜನಿಕಾಂತ್ ಆರೋಗ್ಯ ಸ್ಥಿರವಾಗಿದೆ, ಆರೋಗ್ಯ ಸುಧಾರಿಸಿದೆ. ರಕ್ತದೊತ್ತಡ ನಿಯಂತ್ರಣಕ್ಕೆ ಬಂದಿದೆ. ಇನ್ನೂ ಹೆಚ್ಚಿನ ವಿಶ್ರಾಂತಿ ಅಗತ್ಯವಿದೆ. ಯಾವುದೇ ಒತ್ತಡ ಇರಬಾರದು ಹೀಗಾಗಿ 1 ವಾರ ಸಂಪೂರ್ಣ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಸತತ ಚಿತ್ರೀಕರಣದಿಂದ ರಜನಿಕಾಂತ್ ಅವರ ರಕ್ತದ ಒತ್ತಡದಲ್ಲಿ ಏರಿಳಿತ ಕಂಡು ಬಂದಿದೆ ಎಂದು ಆಸ್ಪತ್ರೆ ಮಂಡಳಿ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿತ್ತು.
ರಜನಿಕಾಂತ್ ಡಿಸೆಂಬರ್ 13ರಿಂದ ಹೈದರಾಬಾದ್ ನಲ್ಲಿದ್ದು, ಅಣ್ಣಾತೆ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಬಿಡುವಿಲ್ಲದೆ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಅಣ್ಣಾತೆ ಸಿನಿಮಾ ಸೆಟ್ನಲ್ಲಿ ಎಂಟು ಜನರಿಗೆ ಕೊರೊನಾ ವೈರಸ್ ತಗುಲಿದ್ದು, ಕೂಡಲೇ ಚಿತ್ರೀಕರಣ ಸ್ಥಗಿತಗೊಳಿಸಲಾಗಿತ್ತು. ಸೆಟ್ನಲ್ಲಿ ಕೋವಿಡ್ ಪತ್ತೆಯಾದ ಕಾರಣ ರಜನಿಕಾಂತ್ ಅವರಿಗೂ ಕೊರೊನಾ ಪರೀಕ್ಷೆ ಮಾಡಲಾಗಿದ್ದು, ವರದಿ ನೆಗೆಟಿವ್ ಬಂದಿದೆ. ಡಿಸೆಂಬರ್ 31ರಂದು ರಾಜಕೀಯ ಪಕ್ಷದ ಹೆಸರನ್ನು ಘೋಷಿಸಲಿರುವ ಕಾರಣ, ಬೇಗ ಚಿತ್ರೀಕರಣ ಮುಗಿಸುವ ಸಲುವಾಗಿ ದಿನಕ್ಕೆ 14 ಗಂಟೆಗಳ ಕಾಲ ರಜನಿ ಕೆಲಸ ಮಾಡ್ತಿದ್ದರು ಎಂದು ಹೇಳಲಾಗಿದೆ. ಪಕ್ಷ ಘೋಷಣೆಗೆ ತಯಾರಿ ಸಹ ನಡೆಸಿದ್ದಾರೆ. ಆದರೀಗ ವೈದ್ಯರು ಸಂಪೂರ್ಣ ವಿಶ್ರಾಂತಿ ಮಾಡಬೇಕೆಂದು ಸೂಚಿಸಿದ್ದಾರೆ. ಹೀಗಾಗಿ ಅವರ ನಡೆ ಮಹತ್ವ ಪಡೆದಿದೆ.