ಶಿರಾಡಿ ಘಾಟಿಯಲ್ಲಿ ಭೀಕರ ಅಪಘಾತಕ್ಕೆ ತಾಯಿ-ಮಗ ಬಲಿ!
– ಮದುವೆ ಕಾರ್ಯಕ್ರಮಕ್ಕೆಂದು ಬೆಂಗಳೂರಿಗೆ ತೆರಳಿ ವಾಪಾಸ್ ವೇಳೆ ದುರಂತ
– ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಮೂಲದ ಕುಟುಂಬ
NAMMUR EXPRESS NEWS
ಶಿರಾಡಿ: ಬೆಂಗಳೂರು ಮಂಗಳೂರು ಸಂಪರ್ಕಿಸುವ ಶಿರಾಡಿ ಘಾಟ್ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಮಂಗಳವಾರ ಮುಂಜಾನೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಒಂದೇ ಕುಟುಂಬದ ತಾಯಿ-ಮಗ ದಾರುಣವಾಗಿ ಸಾವನ್ನಪ್ಪಿದ್ದಾರೆ. ಬೆಂಗಳೂರಿನಿಂದ ಮಂಗಳೂರು ಕಡೆಗೆ ಬರುತ್ತಿದ್ದ ಇನ್ನೋವಾ ಕಾರು ಹಾಗೂ ಕಂಟೈನರ್ ನಡುವೆ ಶಿರಾಡಿ ಘಾಟಿ ಪ್ರದೇಶದಲ್ಲಿ ಪರಸ್ಪರ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಮೃತರನ್ನು ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಬೊಂಡಾಲದ ಶಬ್ಬಿರ್ ಎಂಬವರ ಮಗ ಮೊಹಮ್ಮದ್ ಶಫೀಕ್(20) ಹಾಗೂ ಅವರ ಪತ್ನಿ ಸಫಿಯಾ(50) ಎಂದು ಗುರುತಿಸಲಾಗಿದೆ. ಮದುವೆ ಕಾರ್ಯಕ್ರಮಕ್ಕೆಂದು ಬೆಂಗಳೂರಿಗೆ ತೆರಳಿದ್ದ ಬಂಟ್ವಾಳ ತಾಲೂಕಿನ ಈ ಕುಟುಂಬಸ್ಥರು ವಾಪಾಸು ಬರುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ.
ಇನ್ನು ಇನ್ನೋವಾದಲ್ಲಿ ಒಟ್ಟು ಆರು ಮಂದಿ ಪ್ರಯಾಣಿಸಿದ್ದು, ಬಹುತೇಕ ಎಲ್ಲರಿಗೂ ಗಂಭೀರವಾದ ಗಾಯಗಳಾಗಿದೆ. ಗಾಯಗೊಂಡ ಎಲ್ಲರನ್ನೂ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾರನಹಳ್ಳಿಯಿಂದ ಸುಮಾರು 8 ಕಿಮೀ. ದೂರದಲ್ಲಿ ಸಕಲೇಶಪುರದಿಂದ ಮಂಗಳೂರು ಕಡೆಗೆ ಬರುವ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿರುವುದಾಗಿ ವರದಿಯಾಗಿದೆ. ಪೊಲೀಸರು ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.