ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನೂತನ ಬಂಡಿರಥ ಆಗಮನ.!
– ಭವ್ಯ ಮೆರವಣಿಗೆಯೊಂದಿಗೆ ಕಾಶಿಕಟ್ಟೆ ಮಹಾಗಣಪತಿ ಸನ್ನಿಧಾನದಲ್ಲಿ ಸ್ವಾಗತ
NAMMUR EXPRESS NEWS
ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ವೇಮೂ ಸಾಯಿ ಶ್ರೀನಿವಾಸ್ ರಾಮಲಿಂಗೇಶ್ವರ ರಾವ್ ಸೇವಾರೂಪದಲ್ಲಿ ಶ್ರೀ ದೇವರಿಗೆ ಸಮರ್ಪಿಸುವ ನೂತನ ಬಂಡಿರಥವು ಭಕ್ತಿ ಸಡಗರದ ಭವ್ಯ ಮೆರವಣಿಗೆಯೊಂದಿಗೆ ಮಂಗಳವಾರ ಸಂಜೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿತು. ಆನೆ, ಬಿರುದಾವಳಿ ಮತ್ತು ಬ್ಯಾಂಡ್ ವಾದ್ಯಗಳ ನಿನಾದದೊಂದಿಗೆ ರಥವನ್ನು ಕ್ಷೇತ್ರಕ್ಕೆ ಬರಮಾಡಿಕೊಳ್ಳಲಾಯಿತು. ಸೋಮವಾರ ಸಂಜೆ ಕ್ಷೇತ್ರಕ್ಕಾಗಮಿಸಿದ ರಥವನ್ನು ಭಕ್ತಿಪೂರ್ವಕವಾಗಿ ಕಾಶಿಕಟ್ಟೆ ಮಹಾಗಣಪತಿ ಸನ್ನಿಧಾನದಲ್ಲಿ ಸ್ವಾಗತಿಸಲಾಯಿತು. ಆರಂಭದಲ್ಲಿ ಶ್ರೀ ಮಹಾಗಣಪತಿಗೆ ಪೂಜೆ ನೆರವೇರಿಸಿದ ಬಳಿಕ ಪುರೋಹಿತ ಪ್ರಸಾದ್ ಕಲ್ಲೂರಾಯ ನೂತನ ಬಂಡಿ ರಥಕ್ಕೆ ಪೂಜೆ ನೆರವೇರಿಸಿದರು.
ಬಳಿಕ ಶ್ರೀ ದೇವಳದ ಆಡಳಿತಾಧಿಕಾರಿ ಮತ್ತು ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ನೂತನ ರಥಕ್ಕೆ ಪುಷ್ಪಾರ್ಚನೆ ಮಾಡಿದರು. ಬಳಿಕ ರಥಶಿಲ್ಪಿ ರಾಜಗೋಪಾಲ ಆಚಾರ್ಯ ಕೋಟೇಶ್ವರ, ಶ್ರೀ ದೇವಳದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪ್ರಶಾಂತ್ ಪಕ್ಕಳ,ಗ್ರಾ.ಪಂ.ಸದಸ್ಯ ಹರೀಶ್.ಎಸ್.ಇಂಜಾಡಿ, ಸೇವಾರ್ಥಿಗಳ ಆಪ್ತರಾದ ಮೋಹನದಾಸ ರೈ, ರಥ ನೀಡುವಲ್ಲಿ ಸಹಕರಿಸಿದ ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯ ಶ್ರೀವತ್ಸ ಬೆಂಗಳೂರು, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರುಗಳಾದ ಸತೀಶ್ ಕೂಜುಗೋಡು, ಲೋಲಾಕ್ಷ ಕೈಕಂಬ, ಜಿಲ್ಲಾ ಧಾರ್ಮಿಕ ಪರಿಷತ್ ಮಾಜಿ ಸದಸ್ಯೆ ವಿಮಲಾ ರಂಗಯ್ಯ, ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಕೃಷ್ಣಮೂರ್ತಿ ಭಟ್ ನೂತನ ರಥಕ್ಕೆ ಪುಷ್ಪಾರ್ಚನೆ ಮಾಡಿದರು. ಬಳಿಕ ಕಾಶಿಕಟ್ಟೆಯಿಂದ ಭಕ್ತಿ ಪೂರ್ವಕವಾದ ಭವ್ಯ ಮೆರವಣಿಗೆಗೆ ಶ್ರೀ ದೇವಳದ ಆಡಳಿತಾಧಿಕಾರಿ ಜುಬಿನ್ ಮೊಹಪಾತ್ರ ಚಾಲನೆ ನೀಡಿದರು.