ವಸಂತ ಬಂಗೇರಾ ನಾಡು ಕಂಡ ಮಾದರಿ ರಾಜಕಾರಣಿ
– ಬೆಳ್ತಂಗಡಿ ಬಸ್ ನಿಲ್ದಾಣಕ್ಕೆ ಬಂಗೇರಾ ಅವರ ಹೆಸರು
– ಉತ್ತರ ಕ್ರಿಯೆ ಕಾರ್ಯಕ್ರಮದಲ್ಲಿ ಸಿಎಂ ಭರವಸೆ
NAMMUR EXPRESS :
ಮಾಜಿ ಶಾಸಕ ವಸಂತ ಬಂಗೇರಾ ಅವರ ಹೆಸರನ್ನು ಚಿರಸ್ಥಾಯಿಯಾಗಿರಿಸಲು ಬೆಳ್ತಂಗಡಿ ಬಸ್ ನಿಲ್ದಾಣಕ್ಕೆ ಅವರ ಹೆಸರಿಡಲು ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಗುರುವಾಯನಕೆರೆಯ ಎಫ್ಎಂ ಗಾರ್ಡನ್ ಸಭಾಂಗಣದಲ್ಲಿ ಇಂದು ನಡೆದ ವಸಂತ ಬಂಗೇರಾ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಬಳಿಕ ಮಾತನಾಡಿದ ಅವರು, ಬಂಗೇರಾ ಅವರ ಪ್ರತಿಮೆ ಸ್ಥಾಪಿಸಿ ಅದನ್ನು ವೃತ್ತದಲ್ಲಿ ಸ್ಥಾಪಿಸಬೇಕೆಂಬ ಬಂಗೇರಾ ಅಭಿಮಾನಿಗಳ ಬೇಡಿಕೆಗೂ ಸರ್ಕಾರ ಸ್ಪಂದಿಸಲಿದೆ. ವಸಂತ ಬಂಗೇರಾ ಹಾಗೂ ನಾನು ಒಟ್ಟಿಗೆ ವಿಧಾನಸಭೆಯನ್ನು ಪ್ರವೇಶಿಸಿದ್ದೆವು. ಅವರು ಕೊನೆಯವರೆಗೂ ನನಗೆ ಸ್ನೇಹಿತರಾಗಿದ್ದರು. ಅವರ ಅಗಲಿಗೆಯು ನನಗೆ ವೈಯಕ್ತಿಕವಾಗಿ ತುಂಬಾ ದುಃಖ ತಂದಿದೆ. ಸದಾ ನೇರ, ನಿಷ್ಠುರ, ಸತ್ಯ ನುಡಿಯುವ ವಿಶೇಷವಾದ ಗುಣವು ಬಂಗೇರಾ ಅವರಲ್ಲಿ ಇತ್ತು ಎಂದು ಸ್ಮರಿಸಿದರು.
ಬಂಗೇರಾ ಅವರು ಯಾವತ್ತು ಕೂಡ ತಮ್ಮ ವೈಯಕ್ತಿಕ ಕೆಲಸ-ಕಾರ್ಯಗಳಿಗಾಗಿ ನನ್ನ ಬಳಿ ಬರಲೇ ಇಲ್ಲ. ಪ್ರತಿ ಬಾರಿ ಬರುವಾಗಲೂ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಈಡೇರಿಸಲು ಬೇಡಿಕೆ ಮುಂದಿಡುತ್ತಿದ್ದರು. ಐದು ಬಾರಿ ಶಾಸಕರಾಗಿದ್ದರೂ ಎಂದಿಗೂ ಅವರು ಸಚಿವರಾಗಬೇಕೆಂದು ಲಾಬಿ ಮಾಡಿರಲಿಲ್ಲ. ಹೀಗಾಗಿ, ವಸಂತ ಬಂಗೇರಾ ಅವರು ಕೇವಲ ಬೆಳ್ತಂಗಡಿಗೆ ಮಾತ್ರವಲ್ಲ ಇಡೀ ರಾಜ್ಯಕ್ಕೆ ಮಾದರಿ ರಾಜಕಾರಣಿ ಎಂದು ಸಿಎಂ ಬಂಗೇರಾ ಅವರ ರಾಜಕೀಯ ಬದುಕಿನ ಬಗ್ಗೆ ಗುಣಗಾನ ಮಾಡಿದರು.
ಮಾಜಿ ಸಚಿವರಾದ ಜನಾರ್ದನ ಪೂಜಾರಿ, ಸ್ಪೀಕರ್ ಯುಟಿ ಖಾದರ್, ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕರಾದ ಜೆಆರ್ ಲೋಬೋ, ಶಂಕುತಲಾ ಶೆಟ್ಟಿ, ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾಂಗ್ರೆಸ್ನಿಂದ ಅಭಿವೃದ್ಧಿ ಶೂನ್ಯವೆಂದು ಬಜೆಟ್ ಓದದ ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ
– ಮಂಗಳೂರಿನಲ್ಲಿ ಬಿಜೆಪಿ ನಾಯಕರ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ತಿರುಗೇಟು
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದಿಂದ ಅಭಿವೃದ್ಧಿಯಾಗಿರುವುದು ಬರೀ ಶೂನ್ಯ ಎಂದು ಬಿಜೆಪಿಯವರು ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿಯ ಬಜೆಟ್ನಲ್ಲಿ ರಾಜ್ಯ ಸರ್ಕಾರವು 1.20 ಲಕ್ಷ ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ನೀರಾವರಿಗೆ 18,000 ಕೋಟಿ ವೆಚ್ಚ ಮಾಡಲಾಗಿದೆ. ಅದು ಕಡಿಮೆಯೇ? ಹೀಗಿರುವಾಗ, ಸರ್ಕಾರ ಏನು ಅಭಿವೃದ್ಧಿ ಮಾಡಿಲ್ಲ ಎಂದರೆ ಏನು ಅರ್ಥ? ಬಿಜೆಪಿಯವರು ಬಜೆಟ್ ಓದುವುದಿಲ್ಲ, ಆರ್ಥಿಕತೆ ಬಗ್ಗೆ ಅವರಿಗೆ ಏನು ಕೂಡ ತಿಳಿದುಕೊಂಡಿಲ್ಲ. ಹೀಗಾಗಿ, ಕಾಂಗ್ರೆಸ್ ಸರ್ಕಾರದಲ್ಲಿ ಅಭಿವೃದ್ಧಿ ಶೂನ್ಯ ಎಂಬುದಾಗಿ ಸುಳ್ಳು ಹಬ್ಬಿಸುತ್ತಿದ್ದಾರೆ ಎಂದರು.
ದೇಶಕ್ಕೆ ಕೇವಲ ರಾಜಕೀಯ ಸ್ವಾತಂತ್ರ್ಯ ಬಂದರೆ ಸಾಲದು, ಆರ್ಥಿಕ, ಸಾಮಾಜಿಕ ಶಕ್ತಿ ಬಂದಾಗ ಮಾತ್ರ ರಾಜಕೀಯ ಸ್ವಾತಂತ್ರ್ಯಕ್ಕೆ ಅರ್ಥ ಬರುತ್ತದೆ ಎಂದು ಸಂವಿಧಾನಶಿಲ್ಪಿ ಅಂಬೇಡ್ಕರ್ ಹೇಳಿದ್ದರು. ಈ ಬಗ್ಗೆ ಬಿಜೆಪಿಯವರಿಗೆ ತಿಳಿದಿದೆಯೇ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದ್ದಾರೆ. ಇನ್ನು ನಿನ್ನೆ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನಮ್ಮ ಸಾಧನೆಗಳನ್ನು ಜನರ ಮುಂದಿರಿಸಿದ್ದೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.