ಹೈಡ್ರಮಾದ ಬಳಿಕ ಕೊನೆಗೂ ಠಾಣೆಗೆ ಹಾಜರಾದ ಶಾಸಕ ಪೂಂಜ!
– ಬೆಳ್ತಂಗಡಿ ಠಾಣೆಗೆ ಶಾಸಕ ಹರೀಶ್ ಪೂಂಜ ಹಾಜರು: ಸ್ಟೇಶನ್ ಬೇಲ್ ಮೇಲೆ ಬಿಡುಗಡೆ
– ಏನಿದು ಕೇಸ್…? ಯಾಕೆ ಠಾಣೆಗೆ ಹಾಜರು..?
NAMMUR EXPRESS NEWS
ಪೊಲೀಸರಿಗೆ ಬೆದರಿಕೆ, ಕರ್ತವ್ಯಕ್ಕೆ ಅಡ್ಡಿ ಮತ್ತು ಅನುಮತಿ ಪಡೆಯದೆ ಪ್ರತಿಭಟನೆ ನಡೆಸಿದ ಆರೋಪದಲ್ಲಿ ಎಫ್.ಐ.ಆರ್ ದಾಖಲಾಗಿರುವ ಹಿನ್ನಲೆಯಲ್ಲಿ , ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಬುಧವಾರ ರಾತ್ರಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ. ರಾತ್ರಿ ೯.೩೦ ರ ಸುಮಾರಿಗೆ ಸ್ಟೇಷನ್ ಗೆ ಬಂದು ವಿಚಾರಣೆ ಎದುರಿಸಿದರು. ಬಂಧನದ ವಿಚಾರವಾಗಿ ದಿನವಿಡೀ ನಡೆದ ಹೈಡ್ರಮಾದ ಬಳಿಕ ರಾತ್ರಿ ವೇಳೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ಶರಣಾಗಿದ್ದು ಪೊಲೀಸ್ ವಿಚಾರಣೆ ಬಳಿಕ ಸ್ಟೇಷನ್ ಬೇಲ್ ಮೇಲೆ ಬಿಡುಗಡೆಯಾಗಿದ್ದಾರೆ. ಅಕ್ರಮ ಕಲ್ಲು ಗಣಿಗಾರಿಕೆ ಪ್ರಕರಣದಲ್ಲಿ ಬಿಜೆಪಿ ಕಾರ್ಯಕರ್ತನ ಬಂಧನಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಬಿಜೆಪಿ ಶಾಸಕ ಹರೀಶ್ ಪೂಂಜಾ ಅವರ ನಿವಾಸಕ್ಕೆ ಪೊಲೀಸರು ತೆರಳಿದ್ದಾಗ ದೊಡ್ಡ ಹೈಡ್ರಾಮವೇ ನಡೆದಿತ್ತು. ಬುಧವಾರ ಬೆಳಗ್ಗೆಯಿಂದ ರಾತ್ರಿ ೭.೩೦ರ ವೇಳೆಗೆ ಕಾದರೂ ಅವರನ್ನು ವಶಕ್ಕೆ ಪಡೆಯಲು ಬೆಂಬಲಿಗರು ಅವಕಾಶ ನೀಡಿರಲಿಲ್ಲ.
ಈ ವೇಳೆ ಸ್ಥಳದಲ್ಲಿದ್ದ ದಕ್ಷಿಣ ಕನ್ನಡ ಜಿಲ್ಲಾ ಸಂಸದರಾದ ನಳೀನ್ ಕುಮಾರ್ ಕಟೀಲ್ ರವರು, ತಾನೇ ಖುದ್ದಾಗಿ ಹರೀಶ್ ಪೂಂಜಾರನ್ನು ವಿಚಾರಣೆಗೆ ಠಾಣೆಗೆ ಕಳುಹಿಸುವುದಾಗಿ ಪೊಲೀಸರಿಗೆ ವಿನಂತಿಸಿಕೊಂಡಿದ್ದರು. ಹೀಗಾಗಿ ತಕ್ಷಣ ಠಾಣೆಗೆ ಹಾಜರಾಗುವಂತೆ ನೊಟೀಸ್ ನೀಡಿ ಪೊಲೀಸರು ಹಿಂತಿರುಗಿದರು. ಅದರಂತೆ ಸಂಸದರು ಆರೋಪಿತರಾದ ಹರೀಶ್ ಪೂಂಜಾರನ್ನು ಪೊಲೀಸರೊಂದಿಗೆ ಠಾಣೆಗೆ ಕಳುಹಿಸಿದ್ದು, ಬಳಿಕ ಪೊಲೀಸರ ವಿಚಾರಣೆ ಎದುರಿಸಿದರು. ಈ ವೇಳೆ ಕೆಲ ಬಿಜೆಪಿ ಮುಖಂಡರು ಹಾಜರಿದ್ದರು.
ಪ್ರತಿಭಟನೆ ಸಭೆಯಲ್ಲಿ ಪೊಲೀಸರಿಗೆ ನಿಂದಿಸಿ ಜೀವ ಬೆದರಿಕೆ ಹಾಕಿದ, ಹಾಗೂ ಠಾಣೆಗೆ ನುಗ್ಗಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ಪ್ರಕರಣ ದಾಖಲಾಗಿತ್ತು. ಕಲಂ:143, 147, 341, 504, 506 ಜೊತೆಗೆ 149 ಐ.ಪಿ.ಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರನ್ನು ಬೆಳ್ತಂಗಡಿ ಠಾಣೆಯಲ್ಲಿ ವಿಚಾರಣೆ ನಡೆಸಿ, ಸ್ಟೇಶನ್ ಜಮೀನಿನಲ್ಲಿ ಬಿಡುಗಡೆ ಮಾಡಲಾಗಿರುತ್ತದೆ ಎಂದು ಜಿಲ್ಲಾ ಎಸ್ಪಿ ರಿಷ್ಯಂತ್ ಸಿಂಗ್ ರಾತ್ರಿ 10.45ಕ್ಕೆ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.