2 ವಾರದ ಹಿಂದೆ ಮೃತಪಟ್ಟ ವ್ಯಕ್ತಿ ಶವ ಮೇಲೆತ್ತಿದ ಪೊಲೀಸರು!
– ಸಹಜ ಸಾವಲ್ಲ ಎಂದು ಮಂಜೇಶ್ವರ ಠಾಣೆಯ ಪೊಲೀಸರಿಗೆ ದೂರು
– ಈಗ ಮತ್ತೆ ತನಿಖೆ… ಏನಿದು ಪ್ರಕರಣ..?
NAMMUR EXPRESS NEWS
ವಿಟ್ಲ: ಕೆಲವು ದಿನಗಳ ಹಿಂದೆ ಮೃತಪಟ್ಟ ವ್ಯಕ್ತಿಯೊಬ್ಬರ ಸಾವಿನ ಬಗ್ಗೆ ಅನುಮಾನ ವ್ಯಕ್ತವಾದ ಹಿನ್ನಲೆಯಲ್ಲಿ ಇದೀಗ ದಫನ ಮಾಡಿದ್ದ ಮೃತದೇಹವನ್ನು ಪೊಲೀಸರ ಸಮ್ಮುಖದಲ್ಲಿ ಮೇಲೆತ್ತಿರುವ ಅಪರೂಪದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ವಿಟ್ಲದಲ್ಲಿ ನಡೆದಿದೆ. ಕನ್ಯಾನ ಬಳಿಯ ಸುಂಕದಕಟ್ಟೆ ಮಜೀರ್ಪಳ್ಳ ನಿವಾಸಿ ಅಶ್ರಫ್(44) ಅವರು ಮೇ 6ರಂದು ಮೃತಪಟ್ಟಿದ್ದರು. ಅದೇದಿನ ಸಂಜೆ ಕನ್ಯಾಯ ಬಂಡಿತ್ತಡ್ಕದ ರಹ್ಮಾನಿಯಾ ಜಮ್ಮಾ ಮಸೀದಿಯಲ್ಲಿ ಅವರ ಮೃತದೇಹವನ್ನು ದಫನ ಮಾಡಲಾಗಿತ್ತು. ಆದರೆ ಅಶ್ರಫ್ ಅವರ ಸಾವಿನ ಬಗ್ಗೆ ಸಹೋದರ ಇಬ್ರಾಹಿಂ ಅವರು ಇದೀಗ ಸಂಶಯ ವ್ಯಕ್ತಪಡಿಸಿದ್ದಾರೆ. ಇದು ಸಹಜವಾದ ಸಾವು ಅಲ್ಲ ಎಂಬುದಾಗಿ ಆರೋಪಿಸಿ ಅವರು ಮಂಜೇಶ್ವರ ಠಾಣೆಯ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಎರಡು ವಾರಗಳ ಹಿಂದೆ ದಫನ ಮಾಡಲಾಗಿದ್ದ ಶವವನ್ನು ಮೇಲೆತ್ತಿ ಮರಣೋತ್ತರ ಪರೀಕ್ಷೆ ನಡೆಸಲು ನಿರ್ಧರಿಸಿದ್ದಾರೆ.
ಪೊಲೀಸ್ ಇಲಾಖೆಯಿಂದ ಮರು ತನಿಖೆ!
ನ್ಯಾಯಾಲಯ ನೀಡಿರುವ ಆದೇಶದ ಹಿನ್ನಲೆಯಲ್ಲಿ ಪೊಲೀಸರು ಈ ಸಾವಿನ ಪ್ರಕರಣದ ತನಿಖೆಗೆ ಮುಂದಾಗಿದ್ದಾರೆ. ಅದರಂತೆ ಮಂಗಳೂರಿನ ಯೆನಪೋಯಾ ಆಸ್ಪತ್ರೆ ಫಾರೆನ್ಸಿಕ್ ವಿಭಾಗದ ಸಿಬ್ಬಂದಿ, ಕಾಸರಗೋಡು ಆರೋಗ್ಯ ಇಲಾಖೆ ಅಧಿಕಾರಿಗಳ ನೆರವಿನೊಂದಿಗೆ ಗುರುವಾರ ಬೆಳಗ್ಗೆ ಅಶ್ರಫ್ ಮೃತದೇಹದ ಕಳೆಬರಹವನ್ನು ಹೊರತೆಗೆಯಲಾಗಿದೆ. ಮೃತ ಅಶ್ರಫ್ ಅವರು ತಮ್ಮ ನಿವಾಸದ ಸಮೀಪ ಗೂಡಂಗಡಿ ನಡೆಸುತ್ತಿದ್ದು, ಮೇ 5ರಂದು ರಾತ್ರಿ ಗೂಡಂಗಡಿ ಮುಚ್ಚಿದ ಬಳಿಕ ಆಹಾರ ಸೇವನೆ ಮಾಡಿ ನಿದ್ರೆ ಮಾಡಿದ್ದರು. ಮರುದಿನ ಬೆಳಗ್ಗೆ ಅವರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಪತ್ನಿ ಮಾಹಿತಿ ನೀಡಿದ್ದರು. ಅಶ್ರಫ್ ಸಾವಿನ ಸಂದರ್ಭದಲ್ಲಿ ಸಹೋದರ ಇಬ್ರಾಹಿಂ ಪುಣೆಯಲ್ಲಿ ಇದ್ದರು. ಈ ಕಾರಣದಿಂದ ಸಹೋದರನ ಸಾವಿನ ಬಗ್ಗೆ ಅನುಮಾನ ಇರುವುದಾಗಿ ತನಿಖೆ ನಡೆಸುವಂತೆ ಕೋರಿ ದೂರು ದಾಖಲಿಸಿದ್ದಾರೆ.