ಟಾಪ್ 4 ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು: ಕೆರೆಗೆ ಬಿದ್ದ ಕಾರು: ಓರ್ವ ಸಾವು
– ಮೂಡಿಗೆರೆ: ಗೊಬ್ಬರದ ಟ್ರ್ಯಾಕ್ಟರ್ ಪಲ್ಟಿ
– ಎನ್. ಆರ್. ಪುರ: ವಿಷ ಸೇವಿಸಿ ಆತ್ಮಹತ್ಯೆ
– ಎನ್.ಆರ್ ಪುರ: ಕಾಡಿನಲ್ಲಿ ಅಂದರ್ ಬಹರ್: ಕೇಸ್
NAMMUR EXPRESS NEWS
ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕೆರೆಗೆ ಬಿದ್ದ ಘಟನೆ ಅಂಬಳೆ ಕೆರೆಯಲ್ಲಿ ನಡೆದಿದೆ. ದಿನೇಶ್ (33) ಕಾರ್ನೊಳಗೆ ಸಿಲುಕಿ ಸಾವನ್ನಪ್ಪಿದ್ದಾರೆ. ಕಾರ್ನಲ್ಲಿದ್ದ ಮತ್ತೊರ್ವ ಸಂತೋಷ್ ಪಾರಾಗಿದ್ದಾರೆ. ಚಿಕ್ಕಮಗಳೂರಿನಿಂದ ಅಂಬಳೆ ಗ್ರಾಮಕ್ಕೆ ಇಬ್ಬರು ಕಾರಿನಲ್ಲಿ ತೆರಳುತ್ತಿದ್ದರು. ಇಂದು ಬೆಳಗ್ಗಿನ ಜಾವ ಅವರಿದ್ದ ಕಾರು ಏಕಾಏಕಿ ಕೆರೆಗೆ ಬಿದ್ದಿದೆ. ಪರಿಣಾಮ ದಿನೇಶ್ ಅಲ್ಲೇ ಸಾವನ್ನಪ್ಪಿದ್ದಾರೆ. ದಿನೇಶ್ ಹಾಗೂ ಸಂತೋಷ್ ಅಂಬಳೆ ಮೂಲದವರು. ದಿನೇಶ್ ಚಿಕ್ಕಮಗಳೂರಿನಲ್ಲಿ ಬಟ್ಟೆ ಅಂಗಡಿ ನಡೆಸುತ್ತಿದ್ದರು. ಅಗ್ನಿ ಶಾಮಕ ದಳ ಹಾಗೂ ಗ್ರಾಮಾಂತರ ಪೊಲೀಸರ ನೇತೃತ್ವದಲ್ಲಿ ಸಂತೋಷ್ ಮೃತದೇಹವನ್ನ ನೀರಿನಿಂದ ಹೊರ ತೆಗೆದಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ಮೂಡಿಗೆರೆ: ಗೊಬ್ಬರ ತುಂಬಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ ಪಲ್ಟಿ
ಮೂಡಿಗೆರೆ: ಗೊಬ್ಬರ ತುಂಬಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿ ಓರ್ವ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಒಕ್ಕಳ್ಳಿ ಬಳಿ ನಡೆದಿದೆ. ಸತೀಶ್ (28) ಸ್ಥಳದಲ್ಲೇ ಮೃತಪಟ್ಟ ವ್ಯಕ್ತಿ. 50 ಚೀಲಕ್ಕೂ ಹೆಚ್ಚು ಗೊಬ್ಬರ ತುಂಬಿಕೊಂಡು ಬಣಕಲ್ ನಿಂದ ಸಾರಗೋಡು ಗ್ರಾಮಕ್ಕೆ ಹೋಗುತ್ತಿದ್ದ ಟ್ರ್ಯಾಕ್ಟರ್, ರಸ್ತೆಯ ಇಳಿಜಾರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಪಲ್ಟಿಯಾದ ರಭಸಕ್ಕೆ ಟ್ರ್ಯಾಕ್ಟರ್ ಸಂಪೂರ್ಣ ಉಲ್ಟಾವಾಗಿದೆ. ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಟ್ರ್ಯಾಕ್ಟರ್ ನಲ್ಲಿದ್ದ ಇನ್ನೊಬ್ಬ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
– ಎನ್. ಆರ್. ಪುರ: ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ
ಎನ್. ಆರ್. ಪುರ: ತಾಲೂಕಿನ ನಾಗಲಾಪುರ ಗ್ರಾಮದ ಹೊಸಕೆರೆ ಎಚ್.ತಿಪ್ಪೇಸ್ವಾಮಿ(54) ಎಂಬುವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಡ್ರೈವಿಂಗ್ ಕೆಲಸ ಮಾಡಿಕೊಂಡಿದ್ದ ತಿಪ್ಪೇಸ್ವಾಮಿ ಅವರು ಮೇ 18 ರಂದು ಮನೆಯಲ್ಲಿ ಕ್ರಿಮಿನಾಶಕ ಕುಡಿದಿದ್ದರು. ತಕ್ಷಣ ಅವರ ಪತ್ನಿ ಗ್ರೇಸಿ ಅವರು ಎನ್ ಆರ್ ಪುರ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದರು. ವೈದ್ಯರ ಸಲಹೆ ಮೇರೆಗೆ ಶಿವಮೊಗ್ಗ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತರ ಪತ್ನಿ ಪೊಲೀಸರಿಗೆ ನೀಡಿದ ದೂರಿನಲ್ಲಿ,ನನ್ನ ಗಂಡ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು ಶಿವಮೊಗ್ಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಕಳೆದ 3 ತಿಂಗಳಿಂದ ಮಾನಸಿಕ ಖಾಯಿಲೆ ಜಾಸ್ತಿಯಾಗಿತ್ತು. ತಮಗೆ ಬಂದ ಖಾಯಿಲೆ ಗುಣವಾಗಲಿಲ್ಲ ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
– ಎನ್.ಆರ್ ಪುರ: ಕಾಡಿನಲ್ಲಿ ಅಂದರ್ ಬಹರ್, ಐವರ ಮೇಲೆ ಪ್ರಕರಣ
ನರಸಿಹಂರಾಜಪುರ: ಮೆಣಸೂರು ಗ್ರಾಮ ಪಂಚಾಯಿತಿಯ ಬಡಗಬೈಲು ಗ್ರಾಮದ ಕಾಡಿನಲ್ಲಿ ಅಕ್ರಮವಾಗಿ ಇಸ್ಪೀಟ್ ಆಟ ಆಡುತ್ತಿದ್ದ 5 ಜನರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮಾಹಿತಿ ಮೇರೆಗೆ ಪೊಲೀಸರು ಅಳಲಗೆರೆ ಕಾಡಿಗೆ ಹೋಗಿ ನೋಡಿದಾಗ ಇಸ್ಪೀಟ್ ಆಟ ಆಡುತ್ತಿರುವುದು ಕಂಡು ಬಂದಿದೆ. ಸ್ಥಳದಲ್ಲಿದ್ದ 4510 ರುಪಾಯಿ, ಇಸ್ಪೀಟು ಎಲೆಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಕಾರ್ಯಾಚರಣೆಯಲ್ಲಿ ಪೊಲೀಸ್ ಠಾಣಾಧಿಕಾರಿ ನಿರಂಜನ ಗೌಡ, ಪೊಲೀಸ್ ಸಿಬ್ಬಂದಿಗಳಾದ ಗಿರೀಶ್, ರಾಜೇಶ್, ಸ್ವರೂಪ್ ಪಾಲ್ಗೊಂಡಿದ್ದರು.