ಟಾಪ್ 3 ನ್ಯೂಸ್ ಕರ್ನಾಟಕ
ತುಮಕೂರು : ಗ್ಯಾಸ್ ಸಿಲಿಂಡರ್ ಸ್ಫೋಟ
– 7 ದಿನ ನರಳಾಡಿ ಪ್ರಾಣಬಿಟ್ಟ ಇಬ್ಬರು ಗಾಯಾಳುಗಳು
– ವಿಜಯನಗರ: ಅಮಾಯಕ ಬಾಲಕನ ಜೀವ ತೆಗೆದ ಆಸ್ಪತ್ರೆಗೆ ಬೀಗ!
– ಮಂಡ್ಯ : ಹೋಮ ಕುಂಡದ ಬೆಂಕಿಯಿಂದ ಅನಾಹುತ
– ಶ್ರೀರಂಗಪಟ್ಟಣದಲ್ಲಿ ಜೇನು ದಾಳಿಯಿಂದ ಪ್ರವಾಸಿಗರ ಸ್ಥಿತಿ ಗಂಭೀರ
NAMMUR EXPRESS NEWS
ತುಮಕೂರು: ಅಡುಗೆ ಮಾಡುವ ಸಂದರ್ಭದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಆರು ಮಂದಿ ಗಂಭೀರ ಗಾಯಗೊಂಡಿದ್ದ ಘಟನೆ ತುಮಕೂರಿನ ಕುಣಿಗಲ್ ಪಟ್ಟಣದ ಸಂತೆಬೀದಿಯಲ್ಲಿ ಮೇ 17ರ ಸಂಜೆ ನಡೆದಿತ್ತು. ಕುಣಿಗಲ್ನ ಕೋಟೆ ಪ್ರದೇಶದ ಸಿಂಗ್ ಬೀದಿಯ ಮನೆಯಲ್ಲಿ ಸಿಲಿಂಡರ್ ಸ್ಫೋಟದಿಂದಾಗಿ ತೀವ್ರವಾಗಿ ಗಾಯಗೊಂಡಿದ್ದ ಇಬ್ಬರು ಆಸ್ಪತ್ರೆಯಲ್ಲಿ ಮೇ 23ರಂದು ಮೃತಪಟ್ಟಿದ್ದಾರೆ. ಶಿವಣ್ಣ (45) ಮತ್ತು ಕುಶಾಲ್ ನಟರಾಜ್ (11) ಮೃತ ದುರ್ದೈವಿಗಳು. ರವಿಕುಮಾರ್ ಎಂಬುವವರ ಮನೆಯಲ್ಲಿ ಅಡುಗೆ ಮಾಡುವಾಗ ಸಿಲಿಂಡರ್ ಸ್ಫೋಟಗೊಂಡಿತ್ತು. ಸ್ಫೋಟದ ತೀವ್ರತೆಗೆ ಮನೆಯಲ್ಲಿದ್ದ ದಿನಸಿ ಸಾಮಗ್ರಿ ಹಾಗೂ ಕಿಟಕಿ ಬಾಗಿಲುಗಳು ಛಿದ್ರಗೊಂಡು, ಗೋಡೆಗಳು ಬಿರುಕು ಬಿಟ್ಟಿದ್ದವು. ಘಟನೆಯಲ್ಲಿ ಮನೆಯಲ್ಲಿದ್ದ ರವಿಕುಮಾರ್ ಪತ್ನಿ ಶೃತಿ (45) ಮಕ್ಕಳಾದ ಕುಶಾಲ್ (11) ಹೇಮಲತಾ (16) ಅವರಿಗೆ ಗಂಭೀರ ಗಾಯವಾಗಿತ್ತು.
ಇನ್ನು ಸಿಲಿಂಡರ್ ಸ್ಫೋಟದ ಶಬ್ಧ ಕೇಳಿ ಮನೆಯೊಳಗೆ ಬಂದ ಪಕ್ಕದ ಮನೆಯ ಮಂಜಮ್ಮ(42), ಶಿವಣ್ಣ(45), ಸಮೀನಾ (46) ಎಂಬುವವರಿಗೂ ಬೆಂಕಿ ತಗುಲಿ ಗಂಭೀರ ಗಾಯಗಳಾಗಿತ್ತು. ಗಾಯಳುಗಳನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಜಿಡ್ಡಿಗೆರೆ ಗ್ರಾಮದ ಶಿವಣ್ಣ ಕುಣಿಗಲ್ನಲ್ಲಿ ನಟರಾಜ್ ಎಂಬುವರ ಬಾಡಿಗೆ ಮನೆಯಲ್ಲಿದ್ದರು. ತರಕಾರಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಶಿವಣ್ಣ, ನಟರಾಜ್ ಮನೆಯಲ್ಲಿ ಸಿಲಿಂಡರ್ ಸ್ಫೋಟಗೊಂಡಾಗ ಬೆಂಕಿ ನಂದಿಸಲು ಹೋಗಿ ತೀವ್ರ ಸುಟ್ಟಗಾಯಗಳಾಗಿತ್ತು. ಈ ವೇಳೆ ನಟರಾಜ್ ಅವರ ಮಗ ಕುಶಾಲ್ ಕೂಡ ಗಾಯಗೊಂಡಿದ್ದ. ಇದೀಗ ಇವರಿಬ್ಬರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಇನ್ನುಳಿದ ಇಬ್ಬರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
– ವಿಜಯನಗರ: ಅಮಾಯಕ ಬಾಲಕನ ಜೀವ ತೆಗೆದ ಆಸ್ಪತ್ರೆಗೆ ಬೀಗ!
ವಿಜಯನಗರ : ಅಮಾಯಕ ರೋಗಿಗಳ ಜೀವ ತೆಗೆದ ಆರೋಪದ ಹಿನ್ನೆಲೆಯಲ್ಲಿ, ಹೊಸಪೇಟೆಯ ಶರಣಂ ಆಸ್ಪತ್ರೆ ಮುಚ್ಚಲು ಆದೇಶ ನೀಡಲಾಗಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆಯ ಅಮರಾವತಿಯಲ್ಲಿರುವ ಶರಣಂ ಆಸ್ಪತ್ರೆಯಲ್ಲಿ ಗೌತಮ್ (9) ಎನ್ನುವ ಬಾಲಕ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ. ಅಂದೇ ಮೃತನ ಬಂಧುಗಳು ಆಸ್ಪತ್ರೆ ಎದುರು ಶವವಿಟ್ಟು ಪ್ರತಿಭಟನೆ ಮಾಡಿದ್ದರು. ವೈದ್ಯರ ನಿರ್ಲಕ್ಷ್ಯದಿಂದ ಸಾವಾಗಿದೆ ಎಂದು ಆರೋಪಿಸಿ ಶವ ಇಟ್ಟು ಪ್ರತಿಭಟನೆ ಮಾಡಿದ್ದರು. ಈ ಹಿಂದೆಯೂ ಈ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಕೆಲವು ಸಾವುಗಳು ಸಂಭವಿಸಿರುವ ಆರೋಪಗಳು ಇವೆ. ಆಗಲೂ ಆಸ್ಪತ್ರೆ ಎದುರು ಪಾಲಕರು ಶವವಿಟ್ಟು ಪ್ರತಿಭಟನೆ ಮಾಡಿದ್ದರು. ಶವವಿಟ್ಟು ಪ್ರತಿಭಟನೆ ಮಾಡಿದಾಗ ಶಾಸಕ ಗವಿಯಪ್ಪ, DHO ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಪದೇ ಪದೆ ನಿರ್ಲಕ್ಷ್ಯ ತೋರಿದ ಖಾಸಗಿ ಆಸ್ಪತ್ರೆ ವಿರುದ್ಧ ಇದೀಗ ಆರೋಗ್ಯ ಇಲಾಖೆ ಸಮರ ಸಾರಿದೆ. ಸಾವಿನ ವರದಿ ಆಧರಿಸಿ ವಿಜಯನಗರ ಜಿಲ್ಲಾಡಳಿತ ಡೆತ್ ಆಡಿಟ್ಗೆ ಆದೇಶ ನೀಡಿತ್ತು. ವಿಜಯನಗರ ಡಿಸಿ ದಿವಾಕರ್ ಎಂಎಸ್ ಆರೋಗ್ಯ ಇಲಾಖೆಗೆ ತನಿಖೆಗೆ ಸೂಚಿಸಿದ್ದರು. ತನಿಖೆಯ ಬಳಿಕ, ರೋಗಿಗಳ ಜತೆ ಚೆಲ್ಲಾಟವಾಡುವ ಖಾಸಗಿ ಆಸ್ಪತ್ರೆಗೆ ಸದ್ಯ ಜಿಲ್ಲಾಡಳಿತ ಬ್ರೇಕ್ ಹಾಕಿದೆ. ಸದ್ಯ ಆಸ್ಪತ್ರೆಯಲ್ಲಿರುವ ರೋಗಿಗಳನ್ನು ಬೇರೆಕಡೆ ಸ್ಥಳಾಂತರ ಮಾಡಲು ಸೂಚಿಸಿದೆ. KPM ಕಾಯಿದೆಯು ಖಾಸಗಿ ಆಸ್ಪತ್ರೆಗಳನ್ನು ರಾಜ್ಯ ಸರ್ಕಾರದ ಅಧಿಕಾರದ ವ್ಯಾಪ್ತಿಯೊಳಗೆ ತರುತ್ತಿದ್ದು, ಆರೋಗ್ಯ ಸೇವೆಯಲ್ಲಿ ಕಳಪೆ ಗುಣಮಟ್ಟ, ನಿರ್ಲಕ್ಷ್ಯ, ಸೇವಾ ನ್ಯೂನತೆಗಳು ಕಂಡುಬಂದಲ್ಲಿ ತಕ್ಕ ಕ್ರಮಗಳನ್ನು ಕೈಗೊಳ್ಳುವ ಅಧಿಕಾರವನ್ನು ಜಿಲ್ಲಾಡಳಿತಕ್ಕೆ ನೀಡುತ್ತದೆ.
– ಹೋಮ ಕುಂಡದ ಬೆಂಕಿಯಿಂದ ಅನಾಹುತ
• ಶ್ರೀರಂಗಪಟ್ಟಣದಲ್ಲಿ ಜೇನು ದಾಳಿಯಿಂದ ಪ್ರವಾಸಿಗರ ಸ್ಥಿತಿ ಗಂಭೀರ
ಮಂಡ್ಯ : ಶ್ರೀರಂಗಪಟ್ಟಣ ಸಮೀಪದ ಕಾವೇರಿ ಸಂಗಮ ಬಳಿಯ ಕಾವೇರಿ ನದಿ ದಡದಲ್ಲಿ ಪ್ರವಾಸಿಗರು ಪೂಜೆ ಸಲ್ಲಿಸುವ ವೇಳೆ ಜೇನುಹುಳು ದಾಳಿ ನಡೆಸಿದೆ. ಘಟನೆಯಲ್ಲಿ ಮೂರು ಮಂದಿ ವೃದ್ಧರ ಸ್ಥಿತಿ ಗಂಭೀರವಾಗಿದ್ದು ಸುಮಾರು 10 ಮಂದಿ ಗಾಯಗೊಂಡಿದ್ದಾರೆ. ಬೆಂಗಳೂರು ಮೂಲದ ಸುಮಾರು 15ಕ್ಕೂ ಹೆಚ್ಚು ಮಂದಿ ಟೆಂಪೋ ಟ್ರಾವೆಲರ್ನಲ್ಲಿ ಆಗಮಿಸಿ ಕಾವೇರಿ ನದಿ ತಟದಲ್ಲಿ ಪೂಜಾ ಕೈಂಕರ್ಯಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಈ ವೇಳೆ ಹೋಮ ಕುಂಡಕ್ಕೆ ಬೆಂಕಿ ಹಾಕಲಾಗಿದೆ. ಹೆಚ್ಚಿನ ಪ್ರಮಾಣದ ಹೊಗೆಯಿಂದಾಗಿ ಮರದಲ್ಲಿ ಕಟ್ಟಿದ್ದ ಜೇನುಗೂಡಿನಿಂದ ಜೇನು ಹುಳುಗಳು ಎದ್ದು ಜನರಿಗೆ ಕಚ್ಚಲು ಆರಂಭಿಸಿದೆ. ಎಲ್ಲರೂ ಮುಸುಕು ಹಾಕಿಕೊಂಡು ಸಂಗಮದಲ್ಲಿ ದಿಕ್ಕಾಪಾಲಾಗಿ ಓಡಿದರೂ ಬಿಡದೇ ಜೇನುಹುಳುಗಳು ಸಿಕ್ಕ ಸಿಕ್ಕವರಿಗೆ ಕಚ್ಚಿ ಗಾಯಗೊಳಿಸಿವೆ.
ನೀರಲ್ಲಿ ಅವಿತರು ಬಿಡದ ಜೇನು: ಕೆಲವರು ಜೇನುಹುಳುಗಳಿಂದ ರಕ್ಷಣೆಗಾಗಿ ಕಾವೇರಿ ನದಿಗಿಳಿದು ನೀರಲ್ಲಿ ಮುಳುಗಿ ಅವಿತುಕೊಂಡಿದ್ದರು. ಆದರೂ ಬಿಡದ ಜೇನುಹುಳುಗಳ ದಾಳಿ ನಡೆಸಿದವು. ಹೀಗಾಗಿ ಪ್ರವಾಸಿಗರು ಸ್ಥಳದಿಂದ ಪರಾರಿಯಾಗಲು ಆಲೋಚಿಸಿ ಹುಳುಗಳಿಂದ ಕಚ್ಚಿಸಿಕೊಳ್ಳುತ್ತಲೇ ತಮ್ಮ ವಾಹನದ ಮೂಲಕ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಬಂದು ಸೇರಿದ್ದಾರೆ. ಜೇನುಹುಳುಗಳ ದಾಳಿಯಿಂದ ತಲೆ, ಕೈಕಾಲುಗಳು ಊದಿಸಿಕೊಂಡು ಬಂದ ರೋಗಿಗಳಿಗೆ ಶ್ರೀರಂಗಪಟ್ಟಣ ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಮಾರುತಿ ನೇತೃತ್ವದಲ್ಲಿ ವೈದ್ಯರು ಸೂಕ್ತ ಚಿಕಿತ್ಸೆ ನೀಡಿದ್ದಾರೆ. ಬೆಂಗಳೂರಿನ ಮೂಲದ ಸಂತೋಷ್ ಕುಮಾರ್, ರಾಜೇಶ್, ಭದ್ರಿನಾಥ್, ಭರಣಿ, ಲಕ್ಷ್ಮಿನಾರಾಯಣ್, ಸಂತೋಷ್ ಕುಮಾರ್, ಪ್ರಸಾದ್, ದೀಪಕ್, ಅಶೋಕ್, ರಾಮಾನುಜ ಸೇರಿದಂತೆ ಮೂರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸುಮಾರು 10 ಮಂದಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಪೂಜೆ ಮಾಡಲು ಬಂದಿದ್ದ ಅರ್ಚಕರಿಗೂ ಜೇನುಹುಳುಗಳ ದಾಳಿಗೆ ಒಳಗಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಎಲ್ಲರಿಗೂ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆತಿರುವುದರಿಂದ ಹೆಚ್ಚಿನ ಅನಾಹುತ ತಪ್ಪಿದೆ ಎಂದು ವೈದ್ಯರು ತಿಳಿಸಿದ್ದಾರೆ.