ರಘುಪತಿ ಭಟ್ ಅವರಿಗೆ ಬಿಜೆಪಿ ಗೆಟ್ ಔಟ್?!
– ಬಿಜೆಪಿ ಪಕ್ಷದಿಂದ ರಘುಪತಿ ಭಟ್ ಉಚ್ಛಾಟನೆಗೆ ಶಿಫಾರಸು
– ಬಂಡಾಯವೆದ್ದಿರುವ ಬಿಜೆಪಿ ಮಾಜಿ ಶಾಸಕರಿಗೆ ಸಂಕಷ್ಟ
– 24 ಗಂಟೆಯೊಳಗೆ ಕಣದಿಂದ ಹಿಂದೆ ಸರಿಯದಿದ್ದರೆ ಶಿಸ್ತುಕ್ರಮ: ಸುನಿಲ್ ಕುಮಾರ್
NAMMUR EXPRESS NEWS
ವಿಧಾನ ಪರಿಷತ್ನ ನೈರುತ್ಯ ಪದವೀಧದರ ಕ್ಷೇತ್ರದಿಂದ ಟಿಕೆಟ್ ಸಿಗದೆ ಬಂಡಾಯವೆದ್ದು ಪಕ್ಷೇತರರಾಗಿ ಕಣಕ್ಕಿಳಿದಿರುವ ಮಾಜಿ ಶಾಸಕ ರಘುಪತಿ ಭಟ್ ಅವರಿಗೆ ಇದೀಗ ಸಂಕಷ್ಟ ಎದುರಾಗಿದೆ. ತಾನು ಬಿಜೆಪಿಯಲ್ಲಿ ಇದ್ದುಕೊಂಡೇ ಪರಿಷತ್ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಗೆದ್ದ ಬಳಿಕವೂ ಬಿಜೆಪಿ ಸದಸ್ಯನಾಗಿಯೇ ಮುಂದುವರಿಯುವುದಾಗಿ ರಘುಪತಿ ಭಟ್ ಹೇಳಿದ್ದರು. ಆದರೆ, ರಘುಪತಿ ಭಟ್ ವಿರುದ್ಧ ಇದೀಗ ಬಿಜೆಪಿ ಉಡುಪಿ ಜಿಲ್ಲಾ ಘಟಕವು ತಿರುಗಿಬಿದ್ದಿದ್ದು, ಈ ಕೂಡಲೇ ರಘುಪತಿ ಭಟ್ ಅವರನ್ನು ಬಿಜೆಪಿ ಪಕ್ಷದಿಂದಲೇ ಉಚ್ಛಾಟನೆ ಮಾಡುವಂತೆ ಬಿಜೆಪಿಯ ರಾಜ್ಯ ಸಮಿತಿಗೆ ಶಿಫಾರಸು ಮಾಡಿದೆ.
ರಘುಪತಿ ಭಟ್ ಅವರು ಪಕ್ಷದ ವಿರುದ್ಧ ಬಂಡಾಯವೆದ್ದು ಬಿಜೆಪಿ ಕಾರ್ಯಕರ್ತರ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳುತ್ತಿರುವುದರಿಂದ ಗೊಂದಲ ಸೃಷ್ಟಿಯಾಗಿದೆ. ಇದು ಮತದಾರರಲ್ಲಿಯೂ ಗೊಂದಲಕ್ಕೆ ಕಾರಣವಾಗಲಿದ್ದು, ಅವರನ್ನು ಬಿಜೆಪಿಯಿಂದ ಉಚ್ಛಾಟನೆ ಮಾಡುವಂತೆ ಶಿಫಾರಸು ಮಾಡಿರುವುದಾಗಿ ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ತಿಳಿಸಿದ್ದಾರೆ.
ಇದೇ ವಿಚಾರವಾಗಿ ಪಕ್ಷದ ವತಿಯಿಂದ ಪ್ರಕಟಣೆಯನ್ನು ಕೂಡ ನೀಡಲಾಗಿದ್ದು, ಪಕ್ಷಕ್ದಕೆ ಮುಜುಗರ ಉಂಟು ಮಾಡುವ ಯಾವುದೇ ಪದಾಧಿಕಾರಿಗಳು ಅಥವಾ ಕಾರ್ಯಕರ್ತರ ವತರ್ತನೆಯನ್ನು ಸಹಿಸುವುದಕ್ಕೆ ಸಾಧ್ಯವಿಲ್ಲ. ಪಕ್ಷದ ಶಿಸ್ತು-ಸಿದ್ಧಾಂತದಡಿ ಎಲ್ಲರೂ ಸಮಾನರಾಗಿದ್ದು, ಪಕ್ಷ ವಿರೋಧಿ ಚಟುವಟಿಕೆಗಳ ವಿರುದ್ಧ ಸೂಕ್ತ ಕ್ರಮ ಜರುಗಿಸುವುದಾಗಿ ಅವರು ತಿಳಿಸಿದ್ದಾರೆ. ಇನ್ನು ಬಿಜೆಪಿ ಅಧಿಕೃತ ಅಭ್ಯರ್ಥಿ ಡಾ.ಧನಂಜ ಸರ್ಜಿ ಹಾಗೂ ಶಿಕ್ಷಕರ ಕ್ಷೇತ್ರದಿಂದ ಎನ್ಡಿಎ ಅಭ್ಯರ್ಥಿಯಾಗಿ ಎಸ್ಎಲ್ ಭೋಜೇಗೌಡರು ಸ್ಪರ್ಧೆ ಮಾಡಿದ್ದು, ಅವರಿಬ್ಬರು ಕೂಡ ಈ ಬಾರಿ ಚುನಾವಣೆಯಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಕಿಶೋರ್ ಕುಮಾರ್ ಹೇಳಿದ್ದಾರೆ.
24 ಗಂಟೆಯೊಳಗೆ ಕಣದಿಂದ ಹಿಂದೆ ಸರಿಯದಿದ್ದರೆ ರಘುಪತಿ ಭಟ್ ವಿರುದ್ಧ ಶಿಸ್ತುಕ್ರಮ: ಸುನಿಲ್ ಕುಮಾರ್
ಬಿಜೆಪಿ ವಿರುದ್ಧ ಬಂಡಾಯವೆದ್ದು, ನೇರುತ್ಯ ಪದವೀಧರ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಿರುವ ಮಾಜಿ ಶಾಸಕ ರಘುಪತಿ ಭಟ್ ಅವರು 24 ಗಂಟೆಯೊಳಗೆ ಕಣದಿಂದ ಹಿಂದೆ ಸರಿಯದಿದ್ದರೆ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ತಿಳಿಸಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಸುನಿಲ್ ಕುಮಾರ್, ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ವಿರುದ್ಧ ಬಂಡಾಯವಾಗಿ ಸ್ಪರ್ಧಿಸಿರುವ ರಘುಪತಿ ಭಟ್ ಅವರು ಕೂಡಲೇ ನಿವೃತ್ತಿಯನ್ನು ಘೋಷಿಸಬೇಕು. ಇಲ್ಲದಿದ್ದರೆ ಪಕ್ಷದ ನಿಯಮ ಉಲ್ಲಂಘಿಸಿದ ಆಧಾರದ ಮೇಲೆ ಶಿಸ್ತುಕ್ರಮ ಜರುಗಿಸುವುದು ಅನಿವಾರ್ಯವಾಗಿದೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ಪಕ್ಷ ವಿರೋಧಿ ಚಟುವಟಿಕೆ ಅಥವಾ ಪಕ್ಷಕ್ಕೆ ಮುಜುಗರ ಉಂಟು ಮಾಡುವ ಯಾರೇ ಇದ್ದರೂ ಅವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುತ್ತದೆ. ಪಕ್ಷದಲ್ಲಿ ಎಲ್ಲರಿಗೂ ಒಂದೇ ಕ್ರಮ. ಹಾಗಾಗಿ, ಒಬ್ಬರಿಗೆ ಒಂದು ನಿಯಮ; ಇನ್ನೊಬ್ಬರಿಗೆ ಮತ್ತೊಂದು ನಿಯಮ ಅಂತ ಇಲ್ಲ. ರಘುಪತಿ ಭಟ್ ಅವರು ತಮ್ಮ ಬೇಸರವನ್ನು ಬಿಟ್ಟು ಬಂಡಾಯದಿಂದ ಹಿಂದೆ ಸರಿಯುತ್ತಾರೆ ಎಂಬ ವಿಶ್ವಾಸವಿದೆ. ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ಸ್ಪರ್ಧೆ ಮಾಡಿದರೆ ಅಂಥವರ ವಿರುದ್ಧ ಶಿಸ್ತುಕ್ರಮವನ್ನು ಜರುಗಿಸಬೇಕಾಗಿರುವುದು ಅನಿವಾರ್ಯ ಎಂದು ಹೇಳಿದರು