ಟಾಪ್ ನ್ಯೂಸ್ ಕರಾವಳಿ
ನೈತಿಕ ಹೊಣೆ ಹೊತ್ತು ಹರೀಶ್ ಪೂಂಜಾ ರಾಜೀನಾಮೆಗೆ ಕಾಂಗ್ರೆಸ್ ಪಟ್ಟು
– ಉಡುಪಿಯಲ್ಲಿ ಜೂ.4ರಂದು ನಿಷೇಧಾಜ್ಞೆ ಜಾರಿಗೊಳಿಸಿ ಡಿಸಿ ಆದೇಶ
– ಮಂಗಳೂರಿನಿಂದ ತೆರಳಿದ್ದ ಟ್ಯಾಂಕರ್ನಲ್ಲಿ ಗ್ಯಾಸ್ ಲೀಕ್!
NAMMUR EXPRESS NEWS
ಮಂಗಳೂರು: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಜನಪ್ರತಿನಿಧಿ ಎಂಬುದನ್ನು ಮರೆತು ಪೊಲೀಸರ ಮೇಲೆ ದರ್ಪ ತೋರಿದ ಹಿನ್ನಲೆಯಲ್ಲಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿ. ತಾಕತ್ತಿದ್ದರೆ ಅವರು ಮತ್ತೆ ಚುನಾವಣೆ ಎದುರಿಸಲಿ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಕೆ. ಹರೀಶ್ ಕುಮಾರ್ ಆಗ್ರಹಿಸಿದ್ದಾರೆ. ಮಂಗಳೂರಿನ ಪಕ್ಷದ ಕಚೇರಿಯಲ್ಲಿ ಮಾತನಾಡಿ, ಶಾಸಕರಾಗಿರುವ ಹರೀಶ್ ಪೂಂಜಾ ಅವರು ರೌಡಿಯಂತೆ ವರ್ತಿಸಿ ಬೆಳ್ತಂಗಡಿ ತಾಲೂಕಿಗೆ ಅಪಮಾನ ಮಾಡಿದ್ದಾರೆ. ಧರ್ಮಸ್ಥಳದ ರತ್ನವರ್ಮ ಹೆಗ್ಗಡೆ, ವೈಕುಂಠ ಬಾಳಿಗಾ, ಸುಂದರ ಗೌಡ, ಗಂಗಾಧರ ಗೌಡ, ಕೆ. ಚಿದಾನಂದ, ಸುಬ್ರಹ್ಮಣ್ಯ ಗೌಡ, ವೆಂಕಟ್ರಮಣ ಗೌಡ, ವಸಂತ ಬಂಗೇರಾ ಇವರೆಲ್ಲರೂ ಶಾಸಕರಾಗಿ ಬೆಳ್ತಂಗಡಿಯನ್ನು ಗೌರವಯುತವಾಗಿ ಪ್ರತಿನಿಧಿಸಿದ್ದಾರೆ. ಆದರೆ ಎರಡನೇ ಬಾರಿಗೆ ಶಾಸಕರಾಗಿರುವ ಹರೀಶ್ ಪೂಂಜಾ ಅವರು ಮಾತ್ರ ಜನವಿರೋಧಿಯಾಗಿ ಹಾಗೂ ಅಧಿಕಾರದ ಎಲ್ಲೆ ಮೀರಿ ವರ್ತಿಸಿದ್ದಾರೆ ಎಂದರು.
ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಹಾಗೂ ಅನೇಕ ಕೇಸ್ಗಳನ್ನು ಮೈಮೇಲೆ ಹಾಕಿಸಿಕೊಂಡಿರುವ ರೌಡಿ ಶೀಟರ್ ಒಬ್ಬನನ್ನು ಪೊಲೀಸರು ಬಂಧಿಸಿದಾಗ ಶಾಸಕ ಪೂಂಜಾ ಠಾಣೆಗೆ ಹೋಗಿ ಪೊಲೀಸರ ಮೇಲೆ ತಮ್ಮ ದರ್ಪ ತೋರಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಈ ಹಿಂದೆ ಕೂಡ ಪೂಂಜಾ ಅವರು ಅರಣ್ಯ ಅಧಿಕಾರಿಗಳ ವಿರುದ್ಧ ತಮ್ಮ ದರ್ಪವನ್ನು ತೋರಿಸಿ ಕರ್ತವ್ಯಕ್ಕೂ ಅಡ್ಡಿಪಡಿಸಿದ್ದರು ಎಂದು ಆರೋಪಿಸಿದರು. ಹರೀಶ್ ಪೂಂಜಾ ಅವರು ಸಿಎಂ ಸಿದ್ದರಾಮಯ್ಯನವರ ಬಗ್ಗೆಯೂ ಕೆಟ್ಟದಾಗಿ ಮಾತನಾಡಿದ್ದಾರೆ. ಸಿದ್ದರಾಮಯ್ಯನವರ ಕಾರ್ಯವೈಖರಿ ಬ್ಗೆ ಮಾತನಾಡುವ, ಅವರನ್ನು ಟೀಕಿಸುವ ಶೈಲಿಯನ್ನು ಪ್ರಶ್ನಿಸುವ ಮಟ್ಟಿಗೆ ಪೂಂಜಾ ಬೆಳೆದಿಲ್ಲ. ಅವರಿಗೆ ಇನ್ನೂ ಪ್ರಾಯ ಆಗಿಲ್ಲ. ಅವರಿನ್ನೂ ಬಹಳಷ್ಟು ಕಲಿಯಲಿಕ್ಕಿದೆ. ಅವರು ರಾಜಕೀಯವಾಗಿ ಪ್ರಬುದ್ಧತೆ ಪಡೆದುಕೊಳ್ಳಲಿ ಎಂದರು.
ಉಡುಪಿಯಲ್ಲಿ ಜೂ.4ರಂದು ನಿಷೇಧಾಜ್ಞೆ ಜಾರಿಗೊಳಿಸಿ ಡಿಸಿ ಆದೇಶ
ಜೂ.4ರಂದು ಬ್ರಹ್ಮಗಿರಿಯ ಸೇಂಟ್ ಸಿಸಿಲಿಸ್ ವಿದ್ಯಾಸಂಸ್ಥೆಯಲ್ಲಿ ಲೋಕಸಭೆ ಚುನಾವಣೆ ಮತ ಎಣಿಕೆ ಕಾರ್ಯ ನಡೆಯಲಿರುವ ಹಿನ್ನಲೆಯಲ್ಲಿ ಅಂದು ಬೆಳಗ್ಗೆ 5ರಿಂದ ಮಧ್ಯರಾತ್ರಿ 12ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಉಡುಪಿ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಆದೇಶ ಹೊರಡಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಐದು ಮಂದಿ ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಗುಂಪು ಸೇರುವುದು, ತಿರುಗುವುದು ಹಾಗೂ ಮೆರವಣಿಗೆ-ಸಭೆ ಸಮಾರಂಭಗಳನ್ನು ನಡೆಸುವುದನ್ನು ನಿಷೇಧಿಸಲಾಗಿದೆ. ಮತ ಎಣಿಕೆ ಕೇಂದ್ರದ ಆವರಣದ ಸುತ್ತಲಿನ 100 ಮೀಟರ್ ವ್ಯಾಪ್ತಿಯನ್ನು ಪಾದಚಾರಿ ವಲಯ ಎಂದು ಗುರುತಿಸಲಾಗಿದೆ. ಈ ಸಂದರ್ಭದಲ್ಲಿ ಯಾವುದೇ ವಾಹನಗಳಿಗೆ ಪ್ರವೇಶ ಹಾಗೂ ಪಾರ್ಕಿಂಗ್ ಮಾಡಲು ಅವಕಾಶ ಇರುವುದಿಲ್ಲ.
ಅಲ್ಲದೆ ಯಾವುದೇ ರೀತಿಯ ಸಾರ್ವಜನಿಕ ಮೆರವಣಿಗೆ, ವಿಜಯೋತ್ಸವ, ಕರಾಳೋತ್ಸವ, ಪ್ರತಿಭಟನೆ ಹಾಗೂ ವಿಜಯೋತ್ಸವದ ಅಂಗವಾಗಿ ಸಾರ್ವಜನಿಕ ಸಭೆ, ಸಮಾರಂಭಗಳನ್ನು ಹಾಗೂ ಯಾವುದೇ ರೀತಿಯ ಘೋಷಣೆ ಕೂಗುವುದನ್ನು ಹಾಗೂ ಮತ ಎಣಿಕೆ ಫಲಿತಾಂಶದ ವಿಜಯೋತ್ಸವದ ಸಮಯದಲ್ಲಿ ಪಟಾಕಿ, ಸಿಡಿಮದ್ದು ಸಿಡಿಸುವುದನ್ನು ನಿಷೇಧಿಸಲಾಗಿರುತ್ತದೆ. ಅಲ್ಲದೆ, ಈ ಅವಧಿಯಲ್ಲಿ ಧ್ವನಿವರ್ಧಕಗಳನ್ನು ಕೂಡ ಬಳಸುವಂತಿಲ್ಲ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.
ಮಂಗಳೂರಿನಿಂದ ತೆರಳಿದ್ದ ಟ್ಯಾಂಕರ್ನಲ್ಲಿ ಗ್ಯಾಸ್ ಲೀಕ್!
ಚಲಿಸುತ್ತಿದ್ದ ಟ್ಯಾಂಕರ್ ನಿಂದ ಅನಿಲ ಸೋರಿಕೆ ಉಂಟಾಗಿ ಸಾಕಷ್ಟು ಆತಂಕಕ್ಕೆ ಕಾರಣವಾದ ಘಟನೆ ಕಾಸರಗೋಡಿನ ಕಾಞ೦ಗಾಡ್ ಸಮೀಪದ ಚಿತ್ತಾರಿಯಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ. ಈ ಘಟನೆಯಿಂದ ಮುಂಜಾಗ್ರತಾ ಕ್ರಮವಾಗಿ 500 ಮೀಟರ್ ದೂರದ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ. ಅಲ್ಲದೆ, ಈ ಮಾರ್ಗದ ಸಂಚಾರವನ್ನು ಕೂಡ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಬೆಳಗ್ಗೆ ಸುಮಾರು 9.30ಕ್ಕೆ ಟ್ಯಾಂಕರ್ನಿಂದ ಏಕಾಏಕಿ ಭಾರೀ ಪ್ರಮಾಣದ ಅನಿಲ ಸೋರಿಕೆಯಾಗುತ್ತಿರುವುದನ್ನು ಗಮನಿಸಿದ ಚಾಲಕ ಕೂಡಲೇ ಸಮಯಪ್ರಜ್ಞೆ ಮೆರೆದು ಟ್ಯಾಂಕರ್ನ್ನು ನಿಲ್ಲಿಸಿದ್ದಾರೆ. ಬಳಿಕ ಕಂಪೆನಿ ಅಧಿಕಾರಿಗಳಿಗೆ ಮತ್ತು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಧಾವಿಸಿ ಬಂದ ಅಗ್ನಿಶಾಮಕದಳದವರು ಸುಮಾರು 10 ಗಂಟೆ ವೇಳೆಗೆ ಗ್ಯಾಸ್ ಸೋರಿಕೆಯನ್ನು ತಡೆಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಸೋರಿಕೆ ಕಂಡು ಬಂದ ಕೂಡಲೇ ಟ್ಯಾಂಕರನ್ನು ಚಾಲಕ ರಸ್ತೆ ಬದಿ ನಿಲುಗಡೆ ಗೊಳಿಸಿದ್ದರಿಂದ ಭಾರೀ ದುರಂತ ತಪ್ಪಿದೆ . ಸೋರಿಕೆಯಾದ ಟ್ಯಾಂಕರ್ ನಲ್ಲಿರುವ ಅನಿಲವನ್ನು ಮೂರು ಟ್ಯಾಂಕರ್ ಗಳಿಗೆ ವರ್ಗಾಹಿಸುವ ಪ್ರಕ್ರಿಯೆಯು ಸದ್ಯ ನಡೆಯುತ್ತಿದೆ. ರಾತ್ರಿವರೆಗೆ ಈ ಕಾರ್ಯ ನಡೆಯುವ ಸಾಧ್ಯತೆಯಿದೆ.ಈ ಕಾರ್ಯಾಚರಣೆಯಲ್ಲಿ ಮಂಗಳೂರಿನಿಂದ ಅಧಿಕಾರಿಗಳ ತಂಡ ಕೂಡ ಸ್ಥಳಕ್ಕೆ ಆಗಮಿಸಿದ್ದು , ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಈ ಟ್ಯಾಂಕರ್ ಮಂಗಳೂರಿನಿಂದ ಕೋಜಿಕ್ಕೋಡ್ ಗೆ ತೆರಳುತ್ತಿತ್ತು.