ರಘುಪತಿ ಭಟ್ ಬಿಜೆಪಿಯಿಂದ ಉಚ್ಚಾಟನೆ!
– 5 ಬಾರಿ ಉಡುಪಿ ಕ್ಷೇತ್ರದ ಶಾಸಕರಾಗಿದ್ದ ನಾಯಕ ಪಕ್ಷದಿಂದ ಹೊರಕ್ಕೆ
– ನೈರುತ್ಯ ಪದವೀಧರ ಕ್ಷೇತ್ರದಿಂದ ಬಂಡಾಯ ಸ್ಪರ್ಧೆ ಹಿನ್ನೆಲೆ ಕ್ರಮ
NAMMUR EXPRESS NEWS
ವಿಧಾನ ಪರಿಷತ್ನ ನೈರುತ್ಯ ಪದವೀಧರ ಕ್ಷೇತ್ರದಿಂದ ಟಿಕೆಟ್ ಸಿಗದ ಹಿನ್ನಲೆ ಬಂಡಾಯವೆದ್ದು ಪಕ್ಷೇತರರಾಗಿ ಸ್ಪರ್ಧಿಸಿರುವ ಉಡುಪಿ ಮಾಜಿ ಶಾಸಕ ರಘುಪತಿ ಭಟ್ ಅವರನ್ನು ಬಿಜೆಪಿ ಪಕ್ಷದಿಂದ ಇದೀಗ ಶಿಸ್ತು ಉಲ್ಲಂಘಿಸಿರುವ ಕಾರಣ ನೀಡಿ ಉಚ್ಚಾಟನೆ ಮಾಡಲಾಗಿದೆ. ಸುಮಾರು 5 ಬಾರಿ ಶಾಸಕರಾಗಿರುವ ರಘುಪತಿ ಭಟ್ ಅವರನ್ನು ಬಿಜೆಪಿಯಿಂದ 6 ವರ್ಷಗಳ ಕಾಲ ಉಚ್ಚಾಟಿಸಿ ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜು ಪಾಟೀಲ್ ಆದೇಶ ಹೊರಡಿಸಿದ್ದಾರೆ. ಪಕ್ಷದಲ್ಲಿನ ಎಲ್ಲ ಜವಾಬ್ದಾರಿಗಳಿಂದಲೂ ಈ ತಕ್ಷಣದಿಂದ ಜಾರಿಗೆ ಬರುವಂತೆ ಅವರನ್ನು ಬಿಡುಗಡೆಗೊಳಿಸಲಾಗಿದೆ. ರಘುಪತಿ ಭಟ್ಗೆ ರಾಜಕೀಯ ನಿವೃತ್ತಿ ಘೋಷಿಸುವಂತೆ ನಿನ್ನೆಯಷ್ಟೇ ಬಿಜೆಪಿ ರಾಜ್ಯ ಕಾರ್ಯದರ್ಶಿಗಳಾದ ಸುನಿಲ್ ಕುಮಾರು ಅವರು 24 ತಾಸು ಗಡುವು ನೀಡಿದ್ದರು.
ಈ ಗಡುವು ಕೊಟ್ಟ ಬಳಿಕವೂ ತಾವು ಪರಿಷತ್ ಚನಾವಣೆಗೆ ಪದವೀಧರ ಕ್ಷೇತ್ರದಿಂದ ಹಿಂದೆ ಸರಿಯುವುದಿಲ್ಲ ಎಂದು ಪುನರುಚ್ಚರಿಸಿದ್ದರು. ಉಡುಪಿ ಭಾಗದಲ್ಲಿ ಬಿಜೆಪಿ ಪಕ್ಷವನ್ನು ಸಂಘಟನಾತ್ಮಕವಾಗಿ ಬೆಳೆಸುವಲ್ಲಿ ಸಾಕಷ್ಟು ಕೊಡುಗೆ ನೀಡಿರುವ ರಘುಪತಿ ಭಟ್ ಇದೀಗ ಬಿಜೆಪಿಯೇ ಹೊರ ಹಾಕಿರುವುದು ಅವರ ಅಭಿಮಾನಿಗಳಿಗೆ ತೀವ್ರ ಬೇಸರ ಉಂಟು ಮಾಡಿದೆ.