ಒಂದೇ ಕಾರಲ್ಲಿ ಸಿದ್ದು, ಡಿಕೆಶಿ ಧರ್ಮಸ್ಥಳಕ್ಕೆ ತೆರಳಿ ಸ್ವಾಮಿ ದರ್ಶನ!
– ಸರ್ಕಾರಕ್ಕೆ ಒಂದು ವರ್ಷ ಹಿನ್ನೆಲೆ: ವಿಶೇಷ ಪೂಜೆ ಸಲ್ಲಿಕೆ
– ಹರೀಶ್ ಪೂಂಜಾ ಪ್ರಕರಣ: ಕಾನೂನು ಎಲ್ಲರಿಗೂ ಒಂದೇ ಎಂದ ಸಿಎಂ
NAMMUR EXPRESS NEWS
ಧರ್ಮಸ್ಥಳ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಈ ಹಿಂದೆ ಸರ್ಕಾರದ ಬಹುನಿರೀಕ್ಷೆಯ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಸಂದರ್ಭದಲ್ಲಿ ಇಬ್ಬರು ಒಟ್ಟಾಗಿ ಮೈಸೂರಿನ ಶ್ರೀ ಚಾಮುಂಡಿ ತಾಯಿ ದರ್ಶನ ಪಡೆದಿದ್ದರು. ಇದೀಗ ಮತ್ತೆ ಈ ಇಬ್ಬರು ಮುಂಚೂಣಿ ನಾಯಕರು ಧರ್ಮಸ್ಥಳಕ್ಕೆ ಶನಿವಾರ ಮಧ್ಯಾಹ್ನ ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿ ದರ್ಶನ ಪಡೆಯುವ ಜತೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರ್ಣಗೊಂಡಿದೆ. ಈ ಹಿನ್ನಲೆಯಲ್ಲಿ ಮಂಜುನಾಥ ಸ್ವಾಮಿ ಅನುಗ್ರಹ ಪಡೆಯುವುದಕ್ಕೆ ಇಬ್ಬರು ನಾಯಕರು ಮಂಜುನಾಥ ಸ್ವಾಮಿ ದರ್ಶನ ಪಡೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಿಎಂ ಜತೆಗೆ ಸಚಿವರಾದ ಕೆ.ವೆಂಕಟೇಶ್, ಭೈರತಿ ಸುರೇಶ್, ವಿಧಾನ ಪರಿಷತ್ ಸದಸ್ಯ ಕೆ.ಗೋವಿಂದರಾಜು, ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಸೇರಿ ಹಲವು ನಾಯಕರು ಇದ್ದರು. ಬಳಿಕ ಸಿದ್ದರಾಮಯ್ಯ & ಡಿಕೆ ಶಿವಕುಮಾರ್ ಅವರು ಶ್ರೀ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಧರ್ಮಸ್ಥಳ ಭೇಟಿಯ ನಂತರ ಇಬ್ಬರು ಒಂದೇ ಕಾರಿನಲ್ಲಿ ಮಂಗಳೂರಿಗೆ ತೆರಳಿದ್ದು ಅಲ್ಲಿ ಅವರು ಸ್ಪೀಕರ್ ಯುಟಿ ಖಾದರ್ ಅವರ ಸಹೋದರನ ಪುತ್ರಿ ವಿವಾಹ ಸಮಾರಂಭದಲ್ಲಿ ಭಾಗಿಯಾದರು.
ಹರೀಶ್ ಪೂಂಜಾ ಬೆದರಿಕೆ ಪ್ರಕರಣ
ಕಾನೂನು ಎಲ್ಲರಿಗೂ ಒಂದೇ: ಸಿಎಂ ಸಿದ್ದರಾಮಯ್ಯ
ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಪೊಲೀಸರಿಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಸಿ 353ರ ಪ್ರಕಾರ ಎಫ್ಐಆರ್ ದಾಖಲಿಸಲಾಗಿದ್ದು, ಕಾನೂನು ಎಲ್ಲರಿಗೂ ಒಂದೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮಂಗಳೂರಿನ ವಿಮಾನ ನಿಲ್ದಾನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಬಿಜೆಪಿ ಶಾಸಕ ಹರೀಶ್ ಪೂಂಜಾ ಅವರ ಬಂಧನಕ್ಕೆ ಕಾಂಗ್ರೆಸ್ ಒತ್ತಡ ಹೇರುತ್ತಿದೆ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿ, ಕಾನೂನು ಎಲ್ಲರಿಗೂ ಒಂದೇ. ಐಪಿಸಿ 353ರ ಪ್ರಕಾರ ಎಫ್ ಐ ಆರ್ ನ್ನು ದಾಖಲಿಸಲಾಗಿದ್ದು, ಅದು ಜಾಮೀನುರಹಿತ ಅಪರಾಧವಾಗಿರುತ್ತದೆ. ಈ ಕಾನೂನಿನಂತೆ 7 ವರ್ಷ ಜೈಲುವಾಸದ ಶಿಕ್ಷೆ ನೀಡುವ ಅವಕಾಶವಿದೆ.
ಆದರೆ ಹರೀಶ್ ಪೂಂಜಾ ಅವರು ಶಾಸಕರೆಂದ ಮಾತ್ರಕ್ಕೆ ಅವರ ಮೇಲಿನ ಆರೋಪವನ್ನು ಅಲ್ಲಗೆಳೆಯಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. ಹರೀಶ್ ಪೂಂಜಾ ಅವರಿಗೆ ಸ್ಟೇಷನ್ ಬೇಲ್ ದೊರಕಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಪೊಲೀಸರ ಮೇಲೆ ಬೆದರಿಕೆ ಹಾಕಿರುವ 2 ಪ್ರಕರಣಗಳು ಅವರ ಮೇಲೆ ದಾಖಲಾಗಿದೆ. ಶಾಸಕರಾದರೆ ಪೊಲೀಸರ ಮೇಲೆ ಬೆದರಿಕೆ ಹಾಕಬಹುದೇ ಎಂದು ಮುಖ್ಯಮಂತ್ರಿಗಳು ಮರುಪ್ರಶ್ನಿಸಿದರು.