ಕುಂದಾಪುರ: ಬಾಲ್ಯವಿವಾಹ ಪೋಕ್ಸೊ ಕೇಸ್ – ಮೂವರು ಜೈಲಿಗೆ.!
– ಮಂಗಳೂರು : ಮೂಗುತಿ ರಿಪೇರಿಗೆ ಬಂದಾಕೆ ಚಿನ್ನ ಎಗರಿಸಿದಳು
– ಮಂಗಳೂರು: ಮನೆ ಬಾಗಿಲು ಮುರಿದು ನುಗ್ಗಿದ ಕಳ್ಳರು ನಗ-ನಗದು ಕಳವು
– ಮಂಗಳೂರು: ವ್ಯಕ್ತಿಗೆ ಬರೋಬ್ಬರಿ 1.05 ಕೋಟಿ ಪಂಗನಾಮ ಹಾಕಿದ ಅಪರಿಚಿತ.!!
NAMMUR EXPRESS NEWS
ಕುಂದಾಪುರ: ಬಾಲ್ಯವಿವಾಹದ ಪ್ರಕರಣದಲ್ಲಿ ಬಾಲಕಿ ತಂದೆ ಸಂತೋಷ್ ಶೆಟ್ಟಿ, ಬಾವ ರಾಜೇಶ್ ಶೆಟ್ಟಿ ಹಾಗೂ ಮದುವೆಯಾದ ವ್ಯಕ್ತಿ ತೊಂಭಟ್ಟು ನಿವಾಸಿ ಭರತ್ ಶೆಟ್ಟಿಯ ಸಹಿತ ಮೂವರ ವಿರುದ್ಧ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೂವರಿಗೂ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಅಪ್ರಾಪ್ತೆಗೆ 17 ವರ್ಷ 8 ತಿಂಗಳಾಗಿದ್ದು, ವಿವಾಹ ಮಾಡಿಕೊಂಡಿರುವ ಆರೋಪಿ ಭರತ್ ಶೆಟ್ಟಿಗೆ 37 ವರ್ಷವಾಗಿದೆ ಎಂದು ತಿಳಿದುಬಂದಿದೆ. ಬಾಲಕಿಯ ತಂದೆ ಸಂತೋಷ್ ಶೆಟ್ಟಿ ಹಾಗೂ ಬಾವ ರಾಜೇಶ್ ಶೆಟ್ಟಿ ಸೇರಿ ಆರೋಪಿ ಭರತ್ ಶೆಟ್ಟಿಯೊಂದಿಗೆ ವಿವಾಹ ಮಾಡಿದ್ದಾರೆ. ಅಪ್ರಾಪ್ತೆ ಹಾಗೂ ಆರೋಪಿ ಭರತ್ ಶೆಟ್ಟಿ ಪರಸ್ಪರ ಪ್ರೀತಿಸುತ್ತಿದ್ದರು. ಈ ನಡುವೆ ಯುವತಿ ತನ್ನನ್ನು ಮದುವೆಯಾಗಬೇಕು ಎಂದು ಆರೋಪಿ ಭರತ್ ಶೆಟ್ಟಿಯನ್ನು ಒತ್ತಾಯಿಸುತ್ತಿದ್ದಾಳೆನ್ನಲಾಗಿದೆ. ಆದರೆ ಆಕೆಯ ಮನೆಯವರು ಇದಕ್ಕೆ ಒಪ್ಪದಿದ್ದುದಕ್ಕೆ, ಮದುವೆ ಮಾಡಿ ಕೊಡದೇ ಇದ್ದರೆ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಂದೆಯ ಬಳಿ ಹೇಳಿಕೊಂಡಿದ್ದಳೆನ್ನಲಾಗಿದೆ. ಕೂಲಿ ಕೆಲಸ ಮಾಡಿಕೊಂಡಿದ್ದ ಬಾಲಕಿಯ ತಂದೆ ಮಗಳ ಮಾತಿಗೆ ಹೆದರಿ, ತನ್ನ ದೊಡ್ಡ ಮಗಳ ಗಂಡ ರಾಜೇಶ್ ಶೆಟ್ಟಿ (ಅಳಿಯ) ಯೊಂದಿಗೆ ವಿಷಯ ಪ್ರಸ್ತಾಪಿಸಿದ್ದು, ಬಳಿಕ ದಿಕ್ಕು ಕಾಣದೇ ಆರೋಪಿ ಭರತ್ ಶೆಟ್ಟಿಯ ಜೊತೆ ಹಾಲಾಡಿ ಗ್ರಾಮದ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ಮೇ ೨೧ರಂದು ರಾತ್ರಿ ೮ ಗಂಟೆಗೆ ವಿವಾಹ ಮಾಡಿಸಿದ್ದಾರೆನ್ನಲಾಗಿದೆ. ಆದರೆ ಮದುವೆಗೆ ತಾಯಿ ಒಪ್ಪಿಗೆ ಇಲ್ಲದ್ದರಿಂದ ಮದುವೆಯ ಬಳಿಕ ಮಗಳನ್ನು ಮನೆಗೆ ಸೇರಿಸಿಕೊಳ್ಳದ ಕಾರಣ, ಆರೋಪಿ ಭರತ್ ಶೆಟ್ಟಿ ಆಕೆಯನ್ನು ತೊಂಬಟ್ಟಿನ ತನ್ನ ಮನೆಗೆ ಕರೆದೊಯ್ದಿದ್ದ. ಬಾಲ್ಯ ವಿವಾಹ ನಡೆದಿರುವ ಬಗ್ಗೆ ಕುಂದಾಪುರದ ಸಹಾಯಕ ಶಿಶು ಅಭಿವೃದ್ದಿ ಇಲಾಖೆಯ ಯೋಜನಾಧಿಕಾರಿ ರೂಪಾ ಬಂಗೇರ ಅವರಿಗೆ ದೂರು ಬಂದಿದ್ದು, ಅದರಂತೆ ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಬಳಿಕ ರೂಪಾ ಬಂಗೇರ ನೀಡಿದ ದೂರಿನಂತೆ ಶಂಕರನಾರಾಯಣ ಠಾಣೆಯಲ್ಲಿ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
– ಮಂಗಳೂರು : ಮೂಗುತಿ ರಿಪೇರಿಗೆ ಬಂದಾಕೆ ಚಿನ್ನ ಎಗರಿಸಿದಳು
ಮಂಗಳೂರು : ಚಿನ್ನದಂಗಡಿಗೆ ಮೂಗುತಿ ರಿಪೇರಿಗೆಂದು ಬಂದ ಮಹಿಳೆ 3.54 ಲಕ್ಷ.ರೂ. ಮೌಲ್ಯದ ಚಿನ್ನವನ್ನು ಕಳವು ಮಾಡಿರುವ ಘಟನೆ ಕುಲಶೇಖರದಲ್ಲಿ ನಡೆದಿದೆ. ಮಹಿಳೆ ಅಂಗಡಿಗೆ ಬಂದು ಬೆಂಡಾದ ತನ್ನ ಮೂಗುತಿಯನ್ನು ಸರಿ ಮಾಡಿಕೊಡುವಂತೆ ಹೇಳಿದ್ದರು. ಅಂಗಡಿಯ ಮಾಲಿಕರು ಒಳಗಿನ ಕೋಣೆಗೆ ಹೋಗಿ 10 ನಿಮಿಷದಲ್ಲಿ ಮೂಗುತಿಯನ್ನು ಸರಿ ಮಾಡಿ ತಂದುಕೊಟ್ಟರು. ಆಕೆಯಿಂದ ರಿಪೇರಿಯ ಹಣ ಪಡೆದಿರಲಿಲ್ಲ. ಆಕೆ ಅಲ್ಲಿಂದ ಹೋದ ಬಳಿಕ ಮಾಲಿಕರು ಈ ಹಿಂದೆ ತಯಾರಿಸಿದ ಗ್ರಾಹಕರ ಚಿನ್ನ ಮತ್ತು ಮಾರಾಟ ಮಾಡಲು ಶೋಕೇಸ್ನ ಒಳಗೆ ಬಾಕ್ಸ್ನಲ್ಲಿ ಇಟ್ಟಿದ್ದ ಚಿನ್ನವನ್ನು ಪರಿಶೀಲಿಸಿದಾಗ ಅಲ್ಲಿರಲಿಲ್ಲ. ಬಾಕ್ಸ್ ನೋಡಿದಾಗ 1 ಚಿನ್ನದ ರೋಪ್ ಸರ, ವಿವಿಧ ಡಿಸೈನ್ 5 ಉಂಗುರಗಳು, ಬೆಂಡೋಲೆ, ಚಿನ್ನದ ಪದಕ, ಮೂಗುತಿಗಳು ಸೇರಿದಂತೆ ಸುಮಾರು 3.54 ಲಕ್ಷ. ರೂ ಮೌಲ್ಯದ ಒಟ್ಟು ಸುಮಾರು 59 ಗ್ರಾಂ ಚಿನ್ನ ಕಳವಾಗಿತ್ತು ಎಂದು ಕದ್ರಿ ಠಾಣೆಗೆ ದೂರು ನೀಡಲಾಗಿದೆ.
– ಮಂಗಳೂರು: ಮನೆ ಬಾಗಿಲು ಮುರಿದು ನುಗ್ಗಿದ ಕಳ್ಳರು ನಗ-ನಗದು ಕಳವು
ಮಂಗಳೂರು : ಕೊಣಾಜೆ ಸಮೀಪದ ಮೋಡಿಜೇರ ಎಂಬಲ್ಲಿ ಕಳ್ಳರು ಮನೆಯೊಂದರ ಬಾಗಿಲು ಮುರಿದು ಕಪಾಟಿನಲ್ಲಿದ್ದ ನಗನಗದು ಕಳ್ಳತನ ನಡೆಸಿದ ಘಟನೆ ನಡೆದಿದೆ. ಕೊಣಾಜೆ ಗ್ರಾಮದ ಮೋಡಿಜೇರ ನಿವಾಸಿ ಚಂದ್ರ ಎಂಬವರ ಮನೆಯಲ್ಲಿ ಕಳ್ಳತನ ಕೃತ್ಯ ನಡೆದಿದೆ. ಮನೆಯಲ್ಲಿ ಚಂದ್ರ ಹಾಗೂ ಅವರ ಸಹೋದರಿ ಮಾತ್ರ ವಾಸವಾಗಿದ್ದು ಇಬ್ಬರು ಕೂಡಾ ಕೆಲಸಕ್ಕೆ ಹೋಗಿದ್ದ ವೇಳೆ ಕಳ್ಳರು ಕಳ್ಳತನ ನಡೆಸಿದ್ದಾರೆ. ಮಧ್ಯಾಹ್ನದ ವೇಳೆ ಘಟನೆ ಸಂಭವಿಸಿದೆ ಎನ್ನಲಾಗಿದೆ. ಮನೆಯ ಮುಂಭಾಗದ ಬಾಗಿಲು ಮುರಿದ ಕಳ್ಳರು ಒಳನುಗ್ಗಿ ಎರಡು ಕಪಾಟುಗಳನ್ನು ಒಡೆದಿದ್ದಾರೆ. ಅದರಲ್ಲಿದ್ದ ಅಪಾರ ಮೌಲ್ಯದ ಚಿನ್ನವನ್ನು ಅಲ್ಲದೆ ಸುಮಾರು ಆರು ಸಾವಿರದಷ್ಟು ನಗದನ್ನು ಕೂಡಾ ಕಳ್ಳತನ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಸಂಜೆಯ ವೇಳೆಗೆ ಮನೆಮಂದಿ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಕೊಣಾಜೆ ಪೊಲೀಸರು, ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
– ಮಂಗಳೂರು: ವ್ಯಕ್ತಿಗೆ ಬರೋಬ್ಬರಿ 1.05 ಕೋಟಿ ಪಂಗನಾಮ ಹಾಕಿದ ಅಪರಿಚಿತ.!!
ಮಂಗಳೂರು: ಅಪರಿಚಿತನೋರ್ವನ ಮಾತು ನಂಬಿ ಕ್ರಿಸ್ಟೋ ಕರೆನ್ಸಿ ವ್ಯವಹಾರಕ್ಕೆ ಕೈಹಾಕಿ ಉಪ್ಪಿನಂಗಡಿ ಬಳಿಯ ಇಚ್ಲಂಪಾಡಿ ನಿವಾಸಿ ಯುವಕನೊಬ್ಬ ಒಂದು ಕೋಟಿ ರೂ ಗೂ ಅಧಿಕ ದುಡ್ಡು ಕಳಕೊಂಡಿದ್ದಾನೆ. ಇಚ್ಲಂಪಾಡಿ ಗ್ರಾಮದ ಕೆಡೆಂಬೈಲು ಪುಲಿಕ್ಕಲ್ ನ 43 ವರ್ಷದ ವ್ಯಕ್ತಿ ಹಣ ಕಳಕೊಂಡವರು. ಮೇ 25ರಂದು ಟೆಲಿಗ್ರಾಮ್ ನಲ್ಲಿ ಅಪರಿಚಿತನೊಬ್ಬ ಪರಿಚಯವಾಗಿದ್ದಾನೆ. ಆತ ಕ್ರಿಸ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭ ಬರುವುದಾಗಿ ನಂಬಿಸಿದ್ದಾನೆ. ಅದರಂತೆ, ಅಮೆರಿಕದ ಕ್ರಿಸ್ಟೋ ಕರೆನ್ಸಿಗೆ ಹಣ ಹೂಡಿಕೆ ಮಾಡಲು ಬಿನೇನ್ಸ್ ಆ್ಯಪ್ ಮತ್ತು ಡಿಫೈ ಆ್ಯಪ್ ಡೌನ್ಹೋಡ್ ಮಾಡುವಂತೆ ತಿಳಿಸಿದ್ದಾನೆ. ಅಪರಿಚಿತ ಹೇಳಿದಂತೆ ವ್ಯಕ್ತಿ ತಮ್ಮ ಮೊಬೈಲ್ ನಲ್ಲಿ ಎರಡೂ ಆ್ಯಪ್ ಗಳನ್ನು ಡೌನ್ಫೋಡ್ ಮಾಡಿ, ಅಪರಿಚಿತನ ಸೂಚನೆಯಂತೆ ತನ್ನ ಬ್ಯಾಂಕ್ ಖಾತೆಗಳಿಂದ 1,05,79,711 ರೂ ಹಣ ವರ್ಗಾಯಿಸಿದ್ದಾರೆ. ಕ್ರಿಸ್ಟೋ ಕರೆನ್ಸಿಯಲ್ಲಿ ಟ್ರೇಡಿಂಗ್ ಮಾಡುವುದಕ್ಕಾಗಿ ಆ್ಯಪ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಿದ್ದರು. ಆದರೆ, ಆ ಬಳಿಕ ಹಣ ಹಿಂತಿರುಗಿ ತೆಗೆಯಲಾಗದೇ ಇದ್ದಾಗ ಅವರಿಗೆ ತಾವು ಮೋಸ ಹೋಗಿರುವುದು ತಿಳಿದುಬಂದಿದೆ. ಈ ಬಗ್ಗೆ ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.