ಹರೀಶ್ ಪೂಂಜಾ ತರಾಟೆಗೆ ತೆಗೆದುಕೊಂಡ ಹೈಕೋರ್ಟ್!
– ಪೊಲೀಸರಿಗೆ ಕಾನೂನಿನಡಿ ಕೆಲಸ ಮಾಡಲು ಬಿಡಿ
– ಶಾಸಕರಾಗಿ ಠಾಣೆ ಮುಂದೆ ಪ್ರತಿಭಟಿಸುವುದು ಸರಿಯೇ?: ಕೋರ್ಟ್
NAMMUR EXPRESS NEWS
ಬೆಳ್ತಂಗಡಿ: ಬೆಳ್ತಂಗಡಿಯ ಅಕ್ರಮ ಗಣಿಗಾರಿಕೆ ಹಾಗೂ ಸ್ಫೋಟಕಗಳ ದಾಸ್ತಾನು ಮಾಡಿದ್ದ ಆರೋಪದಡಿ ಬಿಜೆಪಿ ಮುಖಂಡ ಶಶಿರಾಜ್ ಶೆಟ್ಟಿ ಬಂಧನದ ನಂತರ ಶಾಸಕ ಹರೀಶ್ ಪೂಂಜಾ ಅವರ ಮೇಲೆ ದಾಖಲಾಗಿರುವ ಎರಡು ಪ್ರಕರಣಗಳ ವಿಚಾರಣೆ ನಡೆಸಿದ ಹೈಕೋರ್ಟ್ ಶಾಸಕರನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವುದಾಗಿ ವರದಿಯಾಗಿದೆ. ಪೂಂಜಾ ಅವರ ವಿರುದ್ಧದ ಎರಡು ಪ್ರಕರಣಗಳನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರಿದ್ದ ನ್ಯಾಯಪೀಠ ಶಾಸಕರ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪೊಲೀಸರು ಯಾವುದೇ ವ್ಯಕ್ತಿಯನ್ನು ಬಂಧಿಸಿದಾಗ ಸ್ಥಳೀಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮೊರೆ ಹೋಗಬಹುದು. ಅಕ್ರಮ ಬಂಧನ ಮಾಡಿದ್ದಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದು. ಆದರೆ, ಜನಪ್ರತಿನಿಧಿ ಎಂಬ ಕಾರಣಕ್ಕೆ ಠಾಣೆ ಮುಂದೆ ಹೋಗಿ ಪ್ರತಿಭಟನೆ ನಡೆಸುವುದು ಎಷ್ಟು ಸರಿ. ಅಲ್ಲದೆ ಶಾಸಕರು ಕಾನೂನು ಮಾಡುವ ಕೆಲಸವನ್ನು ಮಾಡಬೇಕು. ಅದುಬಿಟ್ಟು ನ್ಯಾಯಾಲಯದ ಕೆಲಸದಲ್ಲಿ ಮಾಡುವುದಕ್ಕೆ ಮುಂದಾಗುವುದು ಎಷ್ಟು ಸರಿಯ ಎಂದು ಕೋರ್ಟ್ ಪ್ರಶ್ನಿಸಿದೆ.
ಜನಪ್ರತಿನಿಧಿಯಾಗಿ ಈ ರೀತಿಯ ವರ್ತನೆ ಸರಿಯಲ್ಲ. ಪ್ರಸ್ತುತ ದಿನಗಳಲ್ಲಿ ಪೊಲೀಸರ ವಿರುದ್ಧ ಧರಣಿ ಮಾಡುವುದು, ಕಲ್ಲು ಎಸೆಯುವುದು, ಕರ್ತವ್ಯಕ್ಕೆ ಅಡ್ಡಿಪಡಿಸುವುದು ಸಾಮಾನ್ಯವಾಗಿದೆ. ಯಾವುದೋ ಒಂದು ಪ್ರಕರಣದಲ್ಲಿ ಪೊಲೀಸರಿಂದ ತೊಂದರೆಯಾಗಿರಬಹದು. ಆದರೆ, ಪೊಲೀಸರನ್ನು ನಾವು ರಕ್ಷಣೆ ಮಾಡಬೇಕು. ಇಲ್ಲದಿದ್ದರೆ ಅವರಿಗೆ ಕೆಲಸ ಮಾಡುವುದು ಕಷ್ಟ ಎನ್ನುವ ಅಭಿಪ್ರಾಯವನ್ನು ಕೂಡ ನ್ಯಾಯಪೀಠ ಇದೇ ವೇಳೆ ವ್ಯಕ್ತಪಡಿಸಿದೆ.