ವಿಧಾನ ಪರಿಷತ್ನ ಆರು ಸ್ಥಾನಗಳಿಗೆ ಚುನಾವಣೆ ಕ್ಷಣಗಣನೆ!
– ಬಂಡಾಯದಿಂದಾಗಿ ಕುತೂಹಲ ಮೂಡಿಸಿರುವ ನೈರುತ್ಯ ಪದವೀಧರ, ಶಿಕ್ಷಕರ ಕ್ಷೇತ್ರ
– ಕಾಂಗ್ರೆಸ್, ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳಿಗೆ ಬಂಡಾಯದ ಬಿಸಿ!
ವಿಶೇಷ ವರದಿ: ಸುರೇಶ್ ಮಂಗಳೂರು
NAMMUR EXPRESS NEWS
ಒಂದೆಡೆ ಲೋಕಸಭೆ ಚುನಾವಣೆಯ ಫಲಿತಾಂಶದ ಕಾತರ; ಇನ್ನೊಂದೆಡೆ ವಿಧಾನ ಪರಿಷತ್ನ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಯ ಕಾವು; ಇನ್ನೊಂದೆಡೆ, ವಿಧಾನಸಭೆಯಿಂದ ವಿಧಾನ ಪರಿಷತ್ಗೆ ಆಯ್ಕೆಯಾಗುವ ಅಭ್ಯರ್ಥಿಗಳಿಂದ ಟಿಕೆಟ್ಗಾಗಿ ತೀವ್ರ ಲಾಬಿ-ಪೈಪೋಟಿ. ಒಟ್ಟಾರೆ ಕರ್ನಾಟಕ ಈಗ ಅಕ್ಷರಶಃ ಚುನಾವಣೆಯ ಪರ್ವದಲ್ಲಿದೆ.
ಆದರೆ, ಲೋಕಸಭೆ ಚುನಾವಣೆ ಫಲಿತಾಂಶಕ್ಕೂ ಮೊದಲು ಕರ್ನಾಟಕದ ಪಾಲಿಗೆ ಜೂ.3ರಂದು ನಡೆಯಲಿರುವ ಪರಿಷತ್ನ 6 ಸ್ಥಾನಗಳಿಗೆ ನಡೆಯಲಿರುವ ಮತದಾನ ಕೂಡ ನಿರ್ಣಾಯಕವಾದದ್ದು. ಈ ಆರು ಸ್ಥಾನಗಳ ಪೈಕಿ ಕರಾವಳಿಯನ್ನು ಪ್ರತಿನಿಧಿಸುವ ನೈರುತ್ಯ ಪದವೀಧರ ಹಾಗೂ ನೈರುತ್ಯ ಶಿಕ್ಷಕರ ಎರಡು ಸ್ಥಾನಗಳಿಗೂ ಮತದಾನಕ್ಕೆ ಇನ್ನು ಕೇವಲ ಒಂದು ದಿನವಷ್ಟೇ ಬಾಕಿಯಿದೆ. ವಿಶೇಷವೆಂದರೆ, ಈ ಬಾರಿಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಅತ್ಯಂತ ಹೆಚ್ಚು ಗಮನಸೆಳೆದಿರುವ ಕ್ಷೇತ್ರ ನೈರುತ್ಯ ಕ್ಷೇತ್ರ. ಅದಕ್ಕೆ ಮುಖ್ಯ ಕಾರಣ ಇಲ್ಲಿನ ಬಂಡಾಯದ ಸ್ಪರ್ಧೆ.
ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಕೊಡಗು, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳನ್ನು ಒಳಗೊಂಡಂತೆ ಒಟ್ಟು ಐದು ಲೋಕಸಭಾ ಹಾಗೂ 30 ವಿಧಾನಸಭಾ ವ್ಯಾಪ್ತಿಯನ್ನು ಹೊಂದಿರುವ ಕ್ಷೇತ್ರ ನೈರುತ್ಯ ಕ್ಷೇತ್ರ. ಈ ಕ್ಷೇತ್ರದ ಪದವೀಧರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರದಿಂದ ಬಿಜೆಪಿ ಹಾಗೂ ಕಾಂಗ್ರೆಸ್ ತಮ್ಮ ಅಧಿಕೃತ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಪದವೀಧರ ಕ್ಷೇತ್ರದಿಂದ ಬಿಜೆಪಿಯು ಶಿವಮೊಗ್ಗದ ಧನಂಜಯ ಸರ್ಜಿ ಅವರಿಗೆ ಟಿಕೆಟ್ ನೀಡಿದ್ದು, ಶಿಕ್ಷಕರ ಕ್ಷೇತ್ರದಿಂದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಹಾಗೂ ಹಾಲಿ ಸದಸ್ಯ ಭೋಜೇಗೌಡರನ್ನು ಕಣಕ್ಕಿಳಿಸಿದೆ. ಆದರೆ, ಪದವೀಧರ ಕ್ಷೇತ್ರವನ್ನು ತೆಗೆದುಕೊಂಡಾಗ ಬಿಜೆಪಿಯಲ್ಲಿದ್ದ ರಘುಪತಿ ಭಟ್ ಅವರು ಪ್ರಮುಖ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಅವರಿಗೆ ಬಿಜೆಪಿ ಟಿಕೆಟ್ ಕೊಡದ ಕಾರಣಕ್ಕೆ ಇದೀಗ ಬಂಡಾಯವಾಗಿ ಸ್ಪರ್ಧಿಸಿದ್ದು, ಚುನಾವಣಾ ಕಣಕ್ಕೂ ಹೆಚ್ಚು ಕುತೂಹಲಕ್ಕೆ ಕಾರಣವಾಗಿದೆ.
ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಲೆಕ್ಕಾಚಾರ!
ಈ ಬಾರಿ ಈ ಪದವೀಧರ ಕ್ಷೇತ್ರದ ಫಲಿತಾಂಶದ ಲೆಕ್ಕಾಚಾರಗಳು ಉಲ್ಟಾ ಆದರೂ ಅಚ್ಚರಿಯಿಲ್ಲ. ಏಕೆಂದರೆ, ಪ್ರತಿ ಸಲವೂ ನೈರುತ್ಯ ಪದವೀಧರ ಕ್ಷೇತ್ರವನ್ನು ದಕ್ಷಿಣ ಕನ್ನಡ ಅಥವಾ ಉಡುಪಿ ಭಾಗದವರಿಗೆ ಬಿಜೆಪಿ ಟಿಕೆಟ್ ನೀಡುತ್ತಿತ್ತು. ಈ ಚುನಾವಣೆಯಲ್ಲಿ ಅದನ್ನು ಮಲೆನಾಡಿನ ಧನಂಜಯ ಅವರಿಗೆ ನೀಡಿರುವುದು ಸಹಜವಾಗಿಯೇ ಕರಾವಳಿ ಭಾಗದ ಪದವೀಧರ ಟಿಕೆಟ್ ಆಕಾಂಕ್ಷಿಗಳಲ್ಲಿ ಹಾಗೂ ಮತದಾರರಲ್ಲಿ ಅಸಮಾಧಾನಕ್ಕೆ ಎಡೆಮಾಡಿದೆ. ಇದೇ ಕಾರಣಕ್ಕೆ ರಘುಪತಿ ಭಟ್ ಕೂಡ ಬಂಡಾಯವೆದ್ದು ಕಣಕ್ಕಿಳಿದಿದ್ದು, ತಾವು ಕರಾವಳಿ ಭಾಗದವರು ಎನ್ನುವ ಮೂಲಕ ತಮ್ಮ ವೈಯಕ್ತಕ ವರ್ಚಸ್ಸಿನಿಂದ ಒಂದಷ್ಟು ವೋಟ್ ಪಡೆಯಬಹುದು ಎನ್ನುವ ಲೆಕ್ಕಾಚಾರ ಕೂಡ ಹಾಕಿಕೊಂಡಿದೆ. ಒಂದುವೇಳೆ, ಪಕ್ಷವನ್ನು ಬದಿಗಿಟ್ಟು ಕರಾವಳಿ ಭಾಗದ ಮತದಾರರು ರಘುಪತಿ ಅವರಿಗೆ ಮತ ನೀಡಿದರೆ ಅದು ಬಿಜೆಪಿಯ ಅಧಿಕೃತ ಅಭ್ಯರ್ಥಿ ಸರ್ಜಿ ಅವರಿಗೆ ಹಿನ್ನಡೆಯಾಗುವ ಸಾಧ್ಯತೆಯಿದೆ.
ಇನ್ನೊಂದೆಡೆ ಈ ಕಾಂಗ್ರೆಸ್ನಿಂದ ನೈರುತ್ಯ ಪದವೀಧರ ಕ್ಷೇತ್ರದಿಂದ ಬಿಜೆಪಿಯಿಂದ ಪಕ್ಷಾಂತರ ಮಾಡಿರುವ ಆಯನೂರು ಮಂಜುನಾಥ್ ಅವರು ಸ್ಪರ್ಧಾ ಕಣದಲ್ಲಿದ್ದಾರೆ. ಇಲ್ಲಿಯೂ ಬಂಡಾಯದ ಬಿಸಿಯಿದ್ದು, ಎಸ್ಪಿ ದಿನೇಶ್ ಅವರು ಬಂಡಾಯದ ಬಾವುಟ ಹಾರಿಸಿದ್ದಾರೆ. ಹೀಗಿರುವಾಗ, ಎರಡು ಪಕ್ಷದಲ್ಲಿ ಪದವೀಧರ ಕ್ಷೇತ್ರದ ಬಂಡಾಯ ಉಂಟಾಗಿರುವುದು ಮೂರನೇ ಅಭ್ಯರ್ಥಿಗೆ ವರದಾನ ಆಗು ಸಾಧ್ಯತೆಯಿದೆ. ಹೀಗಾಗಿ, ನೈರುತ್ಯ ಪದವೀಧರ ಕ್ಷೇತ್ರದ ಚುನಾವಣಾ ಫಲಿತಾಂಶವು ಯಾರಿಗೆ ವಿಜಯಲಕ್ಷ್ಮಿಯನ್ನು ಒಲಿಸಲಿದೆ ಎನ್ನುವುದು ಕೂಡ ಕುತೂಹಲ ಮೂಡಿಸಿದೆ.
ಶಿಕ್ಷಕರ ಕ್ಷೇತ್ರದಲ್ಲಿ ರಾಜಕೀಯ ಏನಿದೆ?
ಇನ್ನು ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿಯು ಮೈತ್ರಿ ಅಭ್ಯರ್ಥಿಯಾಗಿ ಭೋಜೇಗೌಡರನ್ನು ಕಣಕ್ಕಿಳಿಸಿದ್ದು, ಕಾಂಗ್ರೆಸ್ನಿಂದ ಕೆಕೆ ಮಂಜುನಾಥ್ ಅವರು ಕಣದಲ್ಲಿದ್ದಾರೆ. ಪದವೀಧರ ಕ್ಷೇತ್ರಕ್ಕೆ ಹೋಲಿಸಿದರೆ ಶಿಕ್ಷಕರ ಕ್ಷೇತ್ರದಲ್ಲಿ ಎರಡೂ ಪಕ್ಷದಲ್ಲಿ ಬಂಡಾಯದ ಬಿಸಿ ಕಡಿಮೆಯಿದೆ.
2018ರ ಪರಿಷತ್ ಫಲಿತಾಂಶ ಏನಾಗಿತ್ತು?
2018ರಲ್ಲಿ ನಡೆದ ನೈರುತ್ಯ ಪದವೀಧದ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಆಯನೂರು ಮಂಜುನಾಥ್ 25,250 ಮತ ಪಡೆದು ಜಯಗಳಿಸಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಎಸ್ಪಿ ದಿನೇಶ್ 12,838 ಮತಗಳನ್ನು ಗಳಿಸಿದ್ದರು. ಹಾಗೆಯೇ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಎಸ್ಎಲ್ ಭೋಜೇಗೌಡರು 8,647 ಮತ ಪಡೆದು ಗೆಲುವು ಸಾಧಿಸಿದ್ದರೆ, ಬಿಜೆಪಿಯ ಕ್ಯಾ. ಗಣೇಶ್ ಕಾರ್ಣಿಕ್ ಅವರು 5,812 ಮತಗಳನ್ನು ಗಳಿಸಿದ್ದರು. ಈ ಬಾರಿ ನೈರುತ್ಯ ಶಿಕ್ಷಣ ಕ್ಷೇತ್ರದಿಂದ 8 ಅಭ್ಯರ್ಥಿಗಳು ಹಾಗೂ ನೈರುತ್ಯ ಪದವೀಧರ ಕ್ಷೇತ್ರದಿಂದ 10 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು 79 ಮತಗಟ್ಟೆಗಳಿದ್ದು, 23,402 ಮತದಾರರು ಇದ್ದಾರೆ. ಅದರಲ್ಲಿ 10,487 ಪುರುಷ & 12915 ಮಹಿಳಾ ಮತದಾರರು ಇದ್ದಾರೆ. ಹಾಗೆಯೇ ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಒಟ್ಟು 108 ಮತಗಟ್ಟೆ ಇದ್ದು, 85089 ಮತದಾರರು ಇದ್ದಾರೆ.
ನೈರುತ್ಯ ಶಿಕ್ಷಕರ ಕ್ಷೇತ್ರ ಕಣದಲ್ಲಿರುವ ಅಭ್ಯರ್ಥಿಗಳು ಇವರು
ಎಸ್.ಎಲ್.ಭೋಜೆಗೌಡ-ಬಿಜೆಪಿ-ಜೆಡಿಎಸ್ ಮೈತ್ರಿ, ಡಾ.ಕೆ.ಕೆ ಮಂಜುನಾಥ್ ಕುಮಾರ್-ಕಾಂಗ್ರೆಸ್, ಪಕ್ಷೇತರರು: ಡಾ.ಅರುಣ್ ಹೊಸಕೊಪ್ಪ, ಡಾ. ನರೇಶ್ಚಂದ್ ಹೆಗ್ಡೆ, ನಂಜೇಶ್ ಬೆಣ್ಣೂರು, ಭಾಸ್ಕರ ಶೆಟ್ಟಿ .ಟಿ, ಕೆ.ಕೆ. ಮಂಜುನಾಥ್ ಕುಮಾರ್, ಡಾ.ಎಸ್.ಆರ್. ಹರೀಶ್ ಆಚಾರ್ಯ.
ನೈರುತ್ಯ ಪದವೀಧರರ ಕ್ಷೇತ್ರದ ಕಣದಲ್ಲಿರುವ ಅಭ್ಯರ್ಥಿಗಳು ಇವರು
ಆಯನೂರು ಮಂಜುನಾಥ-ಕಾಂಗ್ರೆಸ್, ಡಾ.ಧನಂಜಯ ಸರ್ಜಿ-ಬಿಜೆಪಿ, ಜಿ.ಸಿ.ಪಾಟೀಲ್-ಸರ್ವ ಜನತಾ ಪಾರ್ಟಿ. ಪಕ್ಷೇತರರು: ದಿನಕರ ಉಳ್ಳಾಲ್, ಎಸ್.ಪಿ. ದಿನೇಶ್, ಬಿ. ಮಹಮ್ಮದ್ ತುಂಬೆ, ಕೆ. ರಘುಪತಿ ಭಟ್, ಡಾ.ಶೇಕ್ ಬಾವ ಮಂಗಳೂರು, ಷಡಾಕ್ಷರಪ್ಪ ಜಿ.ಆರ್, ಷಹಾರಾಜ್ ಮುಜಾಹಿದ್ ಸಿದ್ದಿಕ್ಕಿ.