ಟಾಪ್ ನ್ಯೂಸ್ ಕರಾವಳಿ
-ಬೆಳ್ತಂಗಡಿ : ಬಿಜೆಪಿ ಯುವ ಮುಖಂಡ ರಾಜೇಶ್ ನಿಡ್ಡಾಜೆ ಮೇಲೆ ತಲವಾರು ದಾಳಿ ಪ್ರಕರಣ: ಆರೋಪಿ ಕಾಂಗ್ರೇಸ್ ಮುಖಂಡ ಅರೆಸ್ಟ್
– ಬಂಟ್ವಾಳ: ಕಾಂಕ್ರೀಟ್ ಕೆಲಸದ ಸಂದರ್ಭ ಆಯತಪ್ಪಿ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದ ಕಾರ್ಮಿಕ ಸಾವು
– ಉಳ್ಳಾಲ: ಪಟಾಕಿ ಸಿಡಿಸಿದ ವಿಚಾರ ಬಜರಂಗದಳ ಕಾರ್ಯಕರ್ತನಿಗೆ ಹಲ್ಲೆ
– ಬೆಳ್ತಂಗಡಿ: ಬೈಕ್ ಗೆ ಕಾರು ಢಿಕ್ಕಿ, ಸವಾರ ಸ್ಥಳದಲ್ಲೇ ಮೃತ್ಯು!
NAMMUR EXPRESS NEWS
ಬೆಳ್ತಂಗಡಿ: ಯುವ ಉದ್ಯಮಿ, ತಾಲೂಕು ಎಸ್.ಟಿ. ಮೋರ್ಚಾ ಅಧ್ಯಕ್ಷ ರಾಜೇಶ್ ನಿಡ್ಡಾಜೆ(33) ಮೇಲೆ ಕಾಯರ್ತಡ್ಕದಲ್ಲಿ ಜೂ.4ರಂದು ಸಂಜೆ ತಲವಾರಿನಿಂದ ದಾಳಿ ನಡೆದಿದೆ. ಬೆಳ್ತಂಗಡಿ ಯುವ ಉದ್ಯಮಿ, ತಾಲೂಕು ಎಸ್.ಟಿ. ಮೋರ್ಚಾ ಅಧ್ಯಕ್ಷ ರಾಜೇಶ್ ನಿಡ್ಡಾಜೆ ಮೇಲೆ ಜೂ.4 ರಂದು ರಾತ್ರಿ ಮಾರಾಣಾಂತಿಕ ಹಲ್ಲೆ ನಡೆಸಿ ಕೊಲೆ ಯತ್ನ ನಡೆಸಿದ ಆರೋಪಿಯನ್ನು ಬಂಧಿಸುವಲ್ಲಿ ಧರ್ಮಸ್ಥಳ ಪೊಲೀಸರು ಯಶಸ್ವಿಯಾಗಿದ್ದಾರೆ. ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಕಾಯರ್ತಡ್ಕದಲ್ಲಿ ಕಾಂಗ್ರೆಸ್ ಮುಖಂಡ ಕಳೆಂಜ ನಿವಾಸಿ ಕುಶಾಲಪ್ಪ ಗೌಡ ಕಜೆ(48) ಎಂಬವರು ರಾಜೇಶ್ ಎಮ್.ಕೆ ಮೇಲೆ ಕ್ಷುಲ್ಲಕ ಕಾರಣಕ್ಕೆ ಜಾತಿ ನಿಂದನೆ ಮಾಡಿ, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿ, ಚಿನ್ನ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂ.5 ರಂದು ಆರೋಪಿ ಕುಶಾಲಪ್ಪ ಗೌಡ ಅವರನ್ನು ಧರ್ಮಸ್ಥಳ ಪೊಲೀಸರು ಬಂಧಿಸಿ ಮಂಗಳೂರು ಸೆಷನ್ಸ್ ಕೋರ್ಟ್ ನ್ಯಾಯಧೀಶರ ಮನೆಗೆ ರಾತ್ರಿ ಹಾಜರುಪಡಿಸಿದ್ದು, ನ್ಯಾಯಾಧೀಶರು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಧರ್ಮಸ್ಥಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
– ಬಂಟ್ವಾಳ: ಮನೆಯೊಂದರ ಮಹಡಿಯಲ್ಲಿ ಕಾಂಕ್ರೀಟ್ ಕೆಲಸ ಮಾಡುತ್ತಿದ್ದ ಕಾರ್ಮಿಕರೋರ್ವರು ಆಯತಪ್ಪಿ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಘಟನೆ ಬಂಟ್ವಾಳದಲ್ಲಿ ನಡೆದಿದೆ. ಅಮ್ಟಾಡಿ ಗ್ರಾ.ಪಂ.ವ್ಯಾಪ್ತಿಯ ತಡ್ಯಾಲು ನಿವಾಸಿ ಪ್ರಕಾಶ್ ಸಾವನ್ನಪ್ಪಿದ ವ್ಯಕ್ತಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಇವರನ್ನು ಕೂಡಲೇ ತುಂಬೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆಗೆ ಸ್ಪಂದಿಸದೆ ಅವರು ಕೊನೆಯುಸಿರೆಳೆದರು ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ. ಅಮ್ಟಾಡಿ ಗ್ರಾ.ಪಂ.ಸದಸ್ಯನಾಗಿದ್ದ ಇವರು ಸಾಮಾಜಿಕವಾಗಿ ಉತ್ತಮ ಕೆಲಸಗಾರನಾಗಿದ್ದರು. ಬಡಾಜೆ ಎಂಬಲ್ಲಿ ಮನೆಯೊಂದರ ಎರಡನೇ ಮಹಡಿಗೆ ಇವರು ಸೇರಿ ಒಟ್ಟು ಮೂರು ಮಂದಿ ಕಾಂಕ್ರೀಟ್ ಕೆಲಸ ಮಾಡುತ್ತಿದ್ದರು. ಆದರೆ ಏಕಾಏಕಿ ಕಾಂಕ್ರೀಟ್ ಹಲಗೆಗಳು ಮತ್ತು ಜಾಕ್ ಗಳು ಮುರಿದು ಬಿದ್ದ ಪರಿಣಾಮ ಇಬ್ಬರು ಕೆಳಗೆ ಹಾರಿದ್ದಾರೆ. ಪ್ರಕಾಶ್ ಮಾತ್ರ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಮೂವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆಯಾದರೂ ಗಂಭೀರವಾಗಿ ಗಾಯಗೊಂಡಿದ್ದ ಪ್ರಕಾಶ್ ದಾರಿ ಮಧ್ಯೆ ಸಾವನ್ನಪ್ಪಿದ ಬಗ್ಗೆ ತಿಳಿಸಿದ್ದಾರೆ. ಉಳಿದಂತೆ ಇನ್ನಿಬ್ಬರು ಕೆಲಸಗಾರರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.
– ಉಳ್ಳಾಲ: ಪಟಾಕಿ ಸಿಡಿಸಿದ ವಿಚಾರ ಬಜರಂಗದಳ ಕಾರ್ಯಕರ್ತನಿಗೆ ಹಲ್ಲೆ
ಉಳ್ಳಾಲ: ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಪಟಾಕಿ ಸಿಡಿಸಿದ ವಿಚಾರದಲ್ಲಿ ಬಜರಂಗದಳ ಕಾರ್ಯಕರ್ತನಿಗೆ ಹಲ್ಲೆ ನಡೆಸಿರುವ ಘಟನೆ ಕುಂಪಲ ಕೇಸರಿನಗರ ಎಂಬಲ್ಲಿ ಸಂಭವಿಸಿದೆ. ಕುಂಪಲ ನಿವಾಸಿ ಬಜರಂಗದಳ ಕಾರ್ಯಕರ್ತ ಪ್ರವೀಣ್ ಪೂಜಾರಿ ಯಾನೆ ಪಿಟ್ಟಿ (39) ಎಂಬವರ ಮೇಲೆ ಹಲ್ಲೆ ನಡೆದಿದೆ. ಇವರಿಗೆ ಸ್ಥಳೀಯ ಸಂಘವೊಂದರಲ್ಲಿ ಸದಸ್ಯರಾಗಿರುವ ಪ್ರಸ್ತುತ ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡಿದ್ದ ಗೌತಮ್ ಹಲ್ಲೆ ನಡೆಸಿದ ಆರೋಪಿ ಜೂ. 4 ರಂದು ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಪಟಾಕಿ ಸಿಡಿಸಿದ ವಿಚಾರದಲ್ಲಿ ಬಜರಂಗದಳ ಹಾಗೂ ಸ್ಥಳೀಯ ಸಂಸ್ಥೆಯೊಂದರ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದಿದ್ದು, ಈ ಸಂಬಂಧ ಕೆಲಸದಿಂದ ವಾಪಸ್ಸಾಗುತ್ತಿದ್ದ ಪ್ರವೀಣ್ ಪೂಜಾರಿ ಅವರನ್ನು ಅಡ್ಡಗಟ್ಟಿದ ಗೌತಮ್ ಹಲ್ಲೆ ನಡೆಸಿ ದೂಡಿದ್ದು, ಪರಿಣಾಮ ಚರಂಡಿಗೆ ಬಿದ್ದ ಪ್ರವೀಣ್ ತಲೆಗೆ ಗಾಯವಾಗಿದೆ. ಗಾಯಾಳುವನ್ನು ತೊಕ್ಕೊಟ್ಟು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳ್ಳಾಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
– ಬೆಳ್ತಂಗಡಿ: ಬೈಕ್ ಗೆ ಕಾರು ಢಿಕ್ಕಿ, ಸವಾರ ಸ್ಥಳದಲ್ಲೇ ಮೃತ್ಯು
ಬೆಳ್ತಂಗಡಿ: ಬೈಕ್ ಗೆ ಕಾರು ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ರೆಖ್ಯ ಗ್ರಾಮದ ನೇಲ್ಯಡ್ಕ ಎಂಬಲ್ಲಿ ನಡೆದಿದೆ.ಮೃತ ಸವಾರನನ್ನು ಬೆಳ್ತಂಗಡಿ ತಾಲೂಕು ರೆಖ್ಯ ಗ್ರಾಮ ನಿವಾಸಿ ರವೀಂದ್ರ (48) ಎಂದು ಗುರುತಿಸಲಾಗಿದೆ. ಬೈಕ್ ಸವಾರ ಎಂಜಿರದಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಮನೆ ಕಡೆಗೆ ಬರುತ್ತಿದ್ದ ವೇಳೆ ಬೆಂಗಳೂರಿನಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.