ಮೈಸೂರು ಟಾಪ್ 3 ನ್ಯೂಸ್..!
– ವಿವಾಹಿತ ಮಹಿಳೆಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದವ ಕೊಲೆ: ಅಕ್ಕ-ತಮ್ಮ ಅರೆಸ್ಟ್!
– ಹೆಣ್ಣು ಮಕ್ಕಳಿಗೆ ಪಾಲು ನೀಡಿದಕ್ಕೆ ಮಗನಿಂದ ತಂದೆ ಮೇಲೆ ಹಲ್ಲೆ!
– ಹಿರಿಯ ಸ್ವಾಮೀಜಿ ಕೊಂದ ಆರೋಪಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ!
NAMMUR EXPRESS NEWS
ಮೈಸೂರು: ವಿವಾಹಿತ ಮಹಿಳೆಗೆ ಬ್ಲ್ಯಾಕ್ಮೇಲ್ ಮಾಡುತ್ತಿದ್ದ ವ್ಯಕ್ತಿಯನ್ನು ಸಿಮೆಂಟ್ ಇಟ್ಟಿಗೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ಪಟ್ಟಣದಲ್ಲಿ ನಡೆದಿದೆ. ಹೆಚ್.ಡಿ.ಕೋಟೆ ತಾಲೂಕಿನ ಸಿದ್ದಯ್ಯನಹುಂಡಿ ನಿವಾಸಿ ರಾಜೇಶ್(32) ಕೊಲೆ ಆದ ವ್ಯಕ್ತಿ. ಪ್ರೇಮಾ ಎಂಬ ವಿವಾಹಿತ ಮಹಿಳೆಗೆ ಮೃತ ರಾಜೇಶ್ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ. ಹೀಗಾಗಿ ಪ್ರೇಮಾ ಹಾಗೂ ಆಕೆಯ ಸಹೋದರ ಶಿವು ಇಬ್ಬರೂ ಸೇರಿಕೊಂಡು ಕೃತ್ಯ ಎಸಗಿದ್ದು ಪೊಲೀಸರು ಇಬ್ಬರನ್ನೂ ಅರೆಸ್ಟ್ ಮಾಡಿದ್ದಾರೆ. 15 ವರ್ಷದ ಹಿಂದೆ ಪ್ರೇಮಾಗೆ ಮದುವೆ ಆಗಿತ್ತು. ಮೈಸೂರಿನ ಕ್ಯಾತಮಾರನಹಳ್ಳಿಯ ನಿವಾಸಿಯಾಗಿರುವ ಪ್ರೇಮಾ ನಂಜನಗೂಡಿನ ಶ್ರೀರಾಂಪುರ ನಿವಾಸಿ ಜೊತೆ ಮದುವೆ ಮಾಡಿಕೊಂಡಿದ್ದರು. ಒಂದು ತಿಂಗಳ ಹಿಂದೆ ಪ್ರೇಮಾ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದ. ಈ ವೇಳೆ ಪ್ರೇಮಾ ಪತಿಯ ಸ್ನೇಹಿತ ರಾಜೇಶ್ ಪರಿಚಯ ಆಗಿತ್ತು. ಪರಿಚಯ ಸಲುಗೆಯಾಗಿ ಇಬ್ಬರು ಆತ್ಮೀಯವಾಗಿದ್ದರು. ಕೆಲ ದಿನಗಳ ಬಳಿಕ ಇಬ್ಬರ ನಡುವೆ ಭಿನ್ನಾಭಿಪ್ರಾಯ ಆಗಿತ್ತು. ರಾಜೇಶ್, ಪ್ರೇಮಾಗೆ ಬ್ಲ್ಯಾಕ್ಮೇಲ್ ಮಾಡಿ ಬೆದರಿಸುತ್ತಿದ್ದ. ಇದರಿಂದ ಬೇಸತ್ತು ಸಿಮೆಂಟ್ ಇಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದಾರೆ. ಪ್ರೇಮಾ, ಆಕೆಯ ಸೋದರ ಶಿವು ಸೇರಿಕೊಂಡು ರಾಜೇಶ್ ಕೊಲೆ ಮಾಡಿದ್ದಾಗಿ ನಂಜನಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಣ್ಣು ಮಕ್ಕಳಿಗೆ ಪಾಲು ನೀಡಿದಕ್ಕೆ ಮಗನಿಂದ ತಂದೆ ಮೇಲೆ ಹಲ್ಲೆ
ಮೈಸೂರು: ಹುಣಸೂರು ತಾಲೂಕಿನ ದೊಡ್ಡಹೆಜ್ಜೂರು ಗ್ರಾಮದಲ್ಲಿ ಜವರಯ್ಯ ಎಂಬುವವರ ಮೇಲೆ ಸ್ವಂತ ಮಗನೇ ಹಲ್ಲೆ ನಡೆಸಿದ್ದಾನೆ. ಜವರಯ್ಯ ಅವರಿಗೆ ಮೂರು ಹೆಣ್ಣು, ನಾಲ್ಕು ಗಂಡು ಮಕ್ಕಳಿದ್ದಾರೆ. ಜವರಯ್ಯ ಅವರು ತಲಾ ಒಂದು ಎಕರೆ ಜಮೀನನ್ನು ತಮ್ಮ ಮಕ್ಕಳಿಗೆ ಹಂಚಿದ್ದರು. ಇದನ್ನು ವಿರೋಧಿಸಿ ಹಿರಿಯ ಮಗ ಸಿದ್ದಲಿಂಗಯ್ಯ ಕೋರ್ಟ್ ಮೊರೆ ಹೋಗಿದ್ದ. ನಿನ್ನೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ತಂದೆ ಜವರಯ್ಯ ಬಳಿ ಬಂದು ಹೆಣ್ಣು ಮಕ್ಕಳಿಗೆ ಪಾಲು ಕೊಡಬೇಡಿ ಎಂದು ಧಮ್ಕಿ ಹಾಕಿ ಜಗಳ ಮಾಡಿದ್ದ. ಜಗಳದ ವೇಳೆ ಮಚ್ಚಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ಜವರಯ್ಯಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸಿದ್ದಲಿಂಗಯ್ಯ ವಿರುದ್ಧ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಿರಿಯ ಸ್ವಾಮೀಜಿ ಕೊಂದ ಆರೋಪಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ
ಮೈಸೂರು: ಮೈಸೂರಿನ ಸಿದ್ದಾರ್ಥನಗರದಲ್ಲಿ ಅನ್ನದಾನೇಶ್ವರ ಮಠದ ಶ್ರೀ ಶಿವಾನಂದ ಸ್ವಾಮೀಜಿ ಅವರ ಆಪ್ತ ಸಹಾಯಕನಿಂದಲೇ ಬರ್ಬರವಾಗಿ ಕೊಂದು ಹಾಕಿದ್ದ. ಕೊಲೆ ಪ್ರಕರಣದಲ್ಲಿ ಬಂಧಿಯಾಗಿರುವ ಆರೋಪಿ ರವಿ ಸೋಮವಾರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಅಸ್ವಸ್ಥಗೊಂಡಿದ್ದ ಆರೋಪಿ ರವಿಯನ್ನು ಪೊಲೀಸರು ಕೆಆರ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕುಡಿತದ ಚಟಕ್ಕೆ ಒಳಗಾಗಿದ್ದ ರವಿಗೆ ಶಿವಾನಂದ ಸ್ವಾಮೀಜಿ ಬುದ್ಧಿವಾದ ಹೇಳಿದ್ದರು. ಸ್ವಾಮೀಜಿ ಕುಡಿಯಲು ಹಣ ನೀಡಲಿಲ್ಲ ಎಂಬ ಕಾರಣಕ್ಕೆ ರವಿ ಕೊಲೆ ಮಾಡಿದ್ದ ಎನ್ನಲಾಗಿದೆ. ಸದ್ಯ ಆರೋಪಿ ರವಿ ಗುಣಮುಖನಾದ ಬಳಿಕ ಪೊಲೀಸರು ತನಿಖೆಯನ್ನು ಮುಂದುವರಿಸಲಿದ್ದಾರೆ.
ಏನಿದು ಪ್ರಕರಣ?: ಸೋಮವಾರ (ಜೂ.10) ಮೈಸೂರಿನಲ್ಲಿ ಹಿರಿಯ ಸ್ವಾಮೀಜಿಯೊಬ್ಬರ ಬರ್ಬರ ಕೊಲೆಯಾಗಿತ್ತು. ಮೈಸೂರಿನ ಸಿದ್ದಾರ್ಥನಗರದಲ್ಲಿರುವ ಅನ್ನದಾನೇಶ್ವರ ಮಠದ ಶಿವಾನಂದ (90) ಸ್ವಾಮೀಜಿ ಕೊಲೆಯಾದವರು. ಶಿವಾನಂದ ಸ್ವಾಮೀಜಿ ಅವರ ಸಹಾಯಕನಾಗಿದ್ದ ಭದ್ರತಾ ಸಿಬ್ಬಂದಿಯಿಂದಲೇ ಕೊಲೆ ನಡೆದಿತ್ತು.
ರವಿ (60) ಎಂಬಾತನಿಂದ ಈ ಕೃತ್ಯ ನಡೆದಿತ್ತು. ಶಿವಾನಂದ ಸ್ವಾಮೀಜಿಯನ್ನು ಮಾರಕಾಸ್ತ್ರದಿಂದ ಚುಚ್ಚಿ ಕೊಲೆ ಮಾಡಲಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ನಜರ್ಬಾದ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಮಂಚದ ಮೇಲೆ ಮಲಗಿದ್ದಲ್ಲೇ ಶಿವಾನಂದ ಸ್ವಾಮೀಜಿಗೆ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು.