ಟಾಪ್ ನ್ಯೂಸ್ ಕರಾವಳಿ: ಏನೇನ್ ಆಯ್ತು?
– ಪುತ್ತೂರು : ಗುಜರಿ ವ್ಯಾಪಾರ ನೆಪದಲ್ಲಿ ಕಳವು!
– ಸುಳ್ಯ: ಹಾವು ಕಚ್ಚಿ ಮಹಿಳೆ ಮೃತ್ಯು
– ಚಾರ್ಮಾಡಿ: ಬಸ್ಸಿಗೆ ಅಡ್ಡ ಬಂದ ಕಾಡಾನೆ!
– ಬ್ರಹ್ಮಾವರ: ಸರಕಾರಿ ಉದ್ಯೋಗದ ಆಮಿಷ: ಹಣ ವಂಚನೆ
– ಕಾಸರಗೋಡು: ಕುವೈಟ್ ಬೆಂಕಿ ದುರಂತ: ಇಬ್ಬರು ವ್ಯಕ್ತಿಗಳು ಸಾವು
NAMMUR EXPRESS NEWS
ಪುತ್ತೂರು: ಸರ್ವೆ ಗ್ರಾಮದ ಸೊರಕೆಯಲ್ಲಿ ಗುಜರಿ ಹೆಕ್ಕುವ ನೆಪದಲ್ಲಿ ಬಂದ ಅಪರಿಚಿತರು ಮನೆ ಬಳಿಯಿದ್ದ ಪಂಪು ಹಾಗೂ ಇತರ ಕೆಲವು ವಸ್ತುಗಳನ್ನು ಮನೆಯವರ ಗಮನಕ್ಕೆ ಬಾರದ ರೀತಿಯಲ್ಲಿ ಕದ್ದೊಯ್ದ ಘಟನೆ ನಡೆದಿದೆ. ಸೊರಕೆ ನಿವಾಸಿ ಅಬ್ಬಾಸ್ ಅವರ ಮನೆಗೆ ಆಪೆ ರಿಕ್ಷಾವೊಂದರಲ್ಲಿ ಬಂದ ಮೂವರು ಗುಜಿರಿ ಸಾಮಾನುಗಳು ಇದೆಯಾ ಎಂದು ಕೇಳಿದ್ದಾರೆ. ಇಲ್ಲ ಎಂದು ಮನೆಯವರು ಹೇಳಿದ್ದಾರೆ. ಬಂದ ಮೂವರ ಪೈಕಿ ಇಬ್ಬರು ಗುಜರಿ ಇದೆಯಾ ಎಂದು ಅಲ್ಪ ದೂರಕ್ಕೆ ಹೋಗಿದ್ದು ಓರ್ವ ಮನೆಯ ಬಳಿಯೇ ನಿಂತುಕೊಂಡಿದ್ದ. ಕೆಲ ಹೊತ್ತಿನ ಬಳಿಕ ಅವರೆಲ್ಲರೂ ಅಲ್ಲಿಂದ ತೆರಳಿದ್ದು ಮನೆಮಂದಿ ಹೊರಗೆ ಬಂದು ನೋಡಿದಾಗ ಮನೆಯ ಎದುರುಗಡೆ ಇದ್ದ ಪಂಪು ಕಣ್ಮರೆಯಾಗಿತ್ತು. ಮನೆಯ ಅನತಿ ದೂರದಲ್ಲಿರುವ ಹಳೆಯ ಮನೆಗೆ ಹೋಗಿ ನೋಡಿದಾಗ ಅಲ್ಲಿಂದ ಬಕೆಟ್, ಹಾರೆ, ಪಿಕ್ಕಾಸು ಮೊದಲಾದವುಗಳು ಕಾಣೆಯಾಗಿತ್ತು. ವಿಚಾರವನ್ನು ಮನೆಯವರು ಇತರರಿಗೆ ತಿಳಿಸುತ್ತಿದ್ದಂತೆ ಸೊರಕೆಯ ಉಮ್ಮರ್ ಎಂಬವರ ಮನೆ ಬಳಿಯಿದ್ದ ಹಳೆಯ ಫ್ರಿಡ್ಜ್ನ ಒಳಭಾಗದ ಸಾಮಾನುಗಳನ್ನು ವಿಂಗಡಿಸಿ ಅದನ್ನೂ ತೆಗೆದುಕೊಂಡು ಹೋಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಸರ್ವೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿದು ಬಂದಿದೆ. ಗುಜಿರಿ ಮತ್ತಿತರ ವ್ಯಾಪಾರ ಮಾಡಿಕೊಂಡು ಬರುವ ಅಪರಿಚಿತರ ಬಗ್ಗೆ ಜಾಗ್ರತೆ ವಹಿಸಬೇಕಾಗಿದೆ ಎನ್ನುವ ಮಾತುಗಳು ಕೇಳಿ ಬಂದಿದೆ.
– ಸುಳ್ಯ: ಹಾವು ಕಚ್ಚಿ ಮಹಿಳೆ ಮೃತ್ಯು
ಸುಳ್ಯ : ಬೆಳ್ಳಾರೆ ಸಮೀಪದ ಬೂಡು ಎಂಬಲ್ಲಿ ಮಹಿಳೆಯೋರ್ವರಿಗೆ ಹಾವು ಕಚ್ಚಿ ಮೃತಪಟ್ಟ ಘಟನೆ ನಡೆದಿದೆ. ಬೂಡು ಚೋಮ ಎಂಬವರ ಪತ್ನಿ ಸುಶೀಲ ಎಂಬವರು ನೆಟ್ಟಾರಿನ ಮನೆಯೊಂದರಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದಾಗ ಸಂಜೆ ಹಾವು ಕಚ್ಚಿದ್ದು ಅವರನ್ನು ತಕ್ಷಣ ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಅವರಿಗೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
– ಚಾರ್ಮಾಡಿಯಲ್ಲಿ ಸರ್ಕಾರಿ ಬಸ್ಸಿಗೆ ಅಡ್ಡ ಬಂದ ಕಾಡಾನೆ, ಕಂಗಾಲಾದ ಪ್ರಯಾಣಿಕರು
ಚಾರ್ಮಾಡಿ: ಇತ್ತೀಚಿನ ದಿನಗಳಲ್ಲಿ ಚಾರ್ಮಾಡಿ ಪರಿಸರದಲ್ಲಿ ಕಾಡಾನೆಗಳ ಉಪಟಳ ಜೋರಾಗಿದ್ದು ರಾತ್ರಿ ಹೊತ್ತು ಚಾರ್ಮಾಡಿ ಮಾರ್ಗವಾಗಿ ಸಂಚರಿಸಿದರೆ ಕಾಡಾನೆಗಳ ಹಾವಳಿ ಸರ್ವೇ ಸಾಮಾನ್ಯ ಎಂಬಂತಾಗಿದೆ. ಅದೇ ರೀತಿ ಬುಧವಾರ ರಾತ್ರಿ ಚಾರ್ಮಾಡಿ ಘಾಟಿಯ 7 ಮತ್ತು 8ನೇ ತಿರುವಿನಲ್ಲಿ ಬಸ್ಸು ಸಂಚರಿಸುವ ವೇಳೆ ಏಕಾಏಕಿ ಕಾಡಾನೆ ಬಸ್ಸಿಗೆ ಅಡ್ಡ ಬಂದು ನಿಂತಿದೆ, ಕೂಡಲೇ ಎಚ್ಚೆತ್ತ ಬಸ್ಸು ಚಾಲಕ ಬಸ್ಸನ್ನು ನಿಲ್ಲಿಸಿದ್ದಾನೆ ಈ ವೇಳೆ ಬಸ್ಸಿನಲ್ಲಿದ್ದ ಪ್ರಯಾಣಿಕರು ಬಸ್ಸಿನ ಎದುರು ನಿಂತಿದ್ದ ಆನೆಯನ್ನು ಕಂಡು ಗಾಬರಿಗೊಂಡಿದ್ದಾರೆ, ಸುಮಾರು ಅರ್ಧ ಗಂಟೆಗಳ ಕಾಲ ರಸ್ತೆಯಲ್ಲೇ ನಿಂತ ಕಾಡಾನೆ ಬಳಿಕ ಅರಣ್ಯಕ್ಕೆ ಪ್ರವೇಶ ಮಾಡಿದೆ ಇದರಿಂದ ಚಾರ್ಮಾಡಿ ಘಾಟಿಯಲ್ಲಿ ಸುಮಾರು ಎರಡು ಕಿಲೋಮೀಟರ್ ದೂರದವರೆಗೆ ಟ್ರಾಫಿಕ್ ಜಾಮ್ ಉಂಟಾಗಿತ್ತು.ಕಳೆದ ಎರಡು ತಿಂಗಳಿನಿಂದ ಕಾಡಾನೆಯೊಂದು ಈ ಪರಿಸರದಲ್ಲಿ ಬೀಡು ಬಿಟ್ಟಿದ್ದು ಹಗಲಿರುಳೆನ್ನದೇ ಚಾರ್ಮಾಡಿ ರಸ್ತೆಯಲ್ಲಿ ಸಂಚಾರ ಮಾಡುತ್ತಿದೆ ಅಲ್ಲದೆ ಪಕ್ಕದ ಗ್ರಾಮಗಳಿಗೂ ದಾಳಿ ಮಾಡಿದೆ ಎಂದು ಅಲ್ಲಿನ ನಿವಾಸಿಗಳು ಹೇಳಿದ್ದಾರೆ. ಆದಷ್ಟು ಬೇಗ ಕಾಡಾನೆಯನ್ನು ಸ್ಥಳಾಂತರಿಸುವಂತೆ ಇಲ್ಲಿನ ಸ್ಥಳೀಯರು ಅರಣ್ಯ ಇಲಾಖೆಗೆ ಆಗ್ರಹಿಸಿದ್ದಾರೆ.
ಬ್ರಹ್ಮಾವರ: ಸರಕಾರಿ ಉದ್ಯೋಗದ ಆಮಿಷ: ವ್ಯಕ್ತಿಗೆ ಲಕ್ಷಾಂತರ ರೂ.ವಂಚನೆ..!
ಬ್ರಹ್ಮಾವರ: ಉನ್ನತ ಸರಕಾರಿ ಹುದ್ದೆ ನೀಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ 35 ಲಕ್ಷ ರೂ ಹಣ ಪಡೆದು ವಂಚಿಸಿರುವ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವಂಚನೆಗೊಳಗಾದ ವ್ಯಕ್ತಿ ಬ್ರಹ್ಮಾವರದ ಆರೂರು ಗ್ರಾಮದ ಕೃಷ್ಣ ಎಂದು ಗುರುತಿಸಲಾಗಿದೆ. ಈ ಬಗ್ಗೆ ವಂಚನೆಗೆ ಒಳಗಾದ ಕೃಷ್ಣ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಇವರಿಗೆ 2020ರಲ್ಲಿ ಹುಲ್ಲಪ್ಪಾ ಯಾನೆ ಕುಮಾರ್ ಎಂಬವರು ತಾನು ಅರಣ್ಯ ಮಂತ್ರಿಯವರ ವಾಹನ ಚಾಲಕನಾಗಿ ಕೆಲಸ ಮಾಡಿಕೊಂಡಿರುವುದಾಗಿ ಪರಿಚಯಿಸಿಕೊಂಡಿದ್ದ. ಬಳಿಕ ತನ್ನ ಇಬ್ಬರು ಆತ್ಮೀಯರು ಅವರು ಬೆಂಗಳೂರಿನಲ್ಲಿ ಪ್ರಭಾವ ಹೊಂದಿರುತ್ತಾರೆ ಎಂಬುದಾಗಿ ತಿಳಿಸಿದ್ದ. ಜೊತೆಗೆ ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡಿಕೊಂಡಿದ್ದ ಕೃಷ್ಣ ಅವರ ಮಗನಿಗೆ ಕೆಲಸದಲ್ಲಿ ಉನ್ನತ ಹುದ್ದೆಗೆ ಹೋಗಲು ಸಹಾಯ ಮಾಡುತ್ತೇವೆ ಅದಕ್ಕೆ ತುಂಬಾ ಹಣ ಖರ್ಚಾಗುತ್ತದೆ ಎಂದು ನಂಬಿಸಿದ್ದರು. ಇದನ್ನು ನಂಬಿದ ಕೃಷ್ಣ ಅವರು ಆರೋಪಿಗಳಿಗೆ 2021 ರ ಎಪ್ರೀಲ್- ಮಾರ್ಚ್ 2022 ರ ಮಧ್ಯಾವಧಿಯಲ್ಲಿ ಹಂತ ಹಂತವಾಗಿ ಒಟ್ಟು 35 ಲಕ್ಷ ರೂ. ಹಣವನ್ನು ನೀಡಿದ್ದಾರೆ. ಆದರೆ ಆರೋಪಿಗಳು ಪಡೆದ ಹಣವನ್ನು ನೀಡಿದೇ ಉದ್ಯೋಗವನ್ನು ನೀಡಿದೇ ವಂಚಿಸಿರುವುದಾಗಿ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುವೈಟ್ ಬೆಂಕಿ ದುರಂತ: ಕಾಸರಗೋಡು ಮೂಲದ ಇಬ್ಬರು ವ್ಯಕ್ತಿಗಳು ಸಾವು
ಕುವೈಟ್ನಲ್ಲಿ ನಡೆದ ಭೀಕರ ಅಗ್ನಿ ದುರಂತದಲ್ಲಿಸುಮಾರು 50 ಮಂದಿ ಮೃತಪಟ್ಟಿದ್ದು, ಆ ಪೈಕಿ ಹಲವು ಮಂದಿ ಭಾರತೀಯರು ಕೂಡ ಸೇರಿದ್ದಾರೆ. ಬೆಂಕಿಯ ಕೆನ್ನಾಲೆಗೆ ಸಿಲುಕಿ ಮೃತಪಟ್ಟಿರುವ ಹಲವರ ಗುರುತು ಈಗಾಗಲೇ ಪತ್ತೆಯಾಗಿದೆ.
ಹೀಗಿರುವಾಗ, ನಿನ್ನೆಯ ದುರಂತದಲ್ಲಿ ಕಾಸರಗೋಡಿನ ಇಬ್ಬರು ನಿವಾಸಿಗಳು ಕೂಡ ಮೃತಪಟ್ಟಿದ್ದಾರೆ. ಇಲ್ಲಿನ ರಂಜಿತ್(25) & ಕೇಳು ಪೊನ್ಮಲೆರಿ(55) ಬೆಂಕಿ ಬಿದ್ದಿದ್ದ ಕಟ್ಟಡದೊಳಗೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ. ತೃಕ್ಕರಿಪುರ ನಿವಾಸಿ ನಳಿನಾಕ್ಷಿ ಅವರಿಗೂ ಗಾಯವಾಗಿದ್ದು, ಸದ್ಯಕ್ಕೆ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರಂಜಿತ್ ಅವರು 10 ವರ್ಷಗಳಿಂದ ಕುವೈಟ್ನಲ್ಲಿ ದುಡಿಯುತ್ತಿದ್ದರು. ಅದೇರೀತಿ ಪೊನ್ಮಲೆರಿ ಅವರು ಎನ್ಬಿಟಿಸಿ ಗುಂಪಿನ ಕಂಪೆನಿಯಲ್ಲಿ ಪ್ರೊಡಕ್ಷನ್ ಎಂಜಿನಿಯರ್ ಆಗಿದ್ದರು. ಸದ್ಯದ ಮಾಹಿತಿಯಂತೆ ಕೇರಳದ 11 ಮಂದಿ ಸಾವುಗೀಡಾಗಿರುವುದಾಗಿರುವುದು ದೃಢಪಟ್ಟಿದೆ.