ಟಾಪ್ 4 ನ್ಯೂಸ್ ಕರಾವಳಿ
ಕಾಪು: ವಿವಾಹಿತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ.
– ಕಾರ್ಕಳ: ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್
– ಉದ್ಯಾವರ: ರೈಲಿನಿಂದ ಬಿದ್ದು ಅಪರಿಚಿತ ಮಹಿಳೆ ಮೃತ್ಯು
ಕಾಸರಗೋಡು: ಕುವೈತ್ ಅಗ್ನಿ ಅವಘಡ
– ಹುಟ್ಟೂರಿಗೆ ತಲುಪಿದ ಇಬ್ಬರ ಪಾರ್ಥಿವ ಶರೀರ
NAMMUR EXPRESS NEWS
ಕಾಪು: ವಿವಾಹಿತ ಮಹಿಳೆಯೊಬ್ಬರು ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಪು ತಾಲೂಕಿನ ಮಲ್ಲಾರು ಚುಕ್ಕು ತೋಟ ಎಂಬಲ್ಲಿ ಇಂದು ಮುಂಜಾನೆ ನಡೆದಿದೆ. ಮಲ್ಲಾರು ಚುಕ್ಕು ತೋಟ ನಿವಾಸಿ ಮೋಸಿನಾ (34) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಇವರು ತಂದೆಯ ನಿಧನ ನಂತರ ಖಿನ್ನತೆಗೊಳಗಾಗಿದ್ದರು ಎನ್ನಲಾಗಿದೆ. ಇವರಿಗೆ 7 ವರ್ಷ ಹಾಗೂ 1 ವರ್ಷ 9 ತಿಂಗಳ ಮಗುವಿದೆ. ಪತಿಯ ಮನೆಯಲ್ಲಿದ್ದ ಇವರು, ಇಂದು ಮುಂಜಾನೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಉಡುಪಿ ಜಿಲ್ಲಾ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿಯ ಸಹಾಯದಿಂದ ಮಹಿಳೆಯ ವೃತ್ತ ದೇಹವನ್ನು ಮೇಲೆತ್ತಲಾಯಿತು. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ಕಾರ್ಕಳ: ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್
ಕಾರ್ಕಳ : ನ್ಯಾಯಾಲಯಕ್ಕೆ ಹಾಜರಾಗದೆ ವಿದೇಶಕ್ಕೆ ಹೋಗಿ ತಲೆಮರೆಸಿಕೊಂಡಿದ್ದ ದನ ಕಳ್ಳತನ ಪ್ರಕರಣದ ಆರೋಪಿ ಕುಕ್ಕುಂದೂರು ಜಯಂತಿ ನಗರ ನಾಲ್ಕನೇ ಕ್ರಾಸ್ನ ನಿವಾಸಿ ಮೊಹಮ್ಮದ್ ರಫೀಕ್ (33) ಎಂಬಾತನನ್ನು ಕಾರ್ಕಳ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. 2021ರಲ್ಲಿ ವಿದೇಶಕ್ಕೆ ಪಲಾಯನ ಮಾಡಿದ್ದ ರಫೀಕ್ ವಿರುದ್ಧ ನ್ಯಾಯಾಲಯ ಬಂಧನ ವಾರಂಟ್ ಜಾರಿ ಮಾಡಿತ್ತು. ಇತ್ತೀಚೆಗೆ ಈತ ವಿದೇಶದಿಂದ ಬಂದಿರುವ ಕುರಿತು ಖಚಿತ ಮಾಹಿತಿ ಮೇರೆಗೆ ಪೊಲೀಸ್ ನಿರೀಕ್ಷಕ ನಾಗೇಶ್ ಕೆ. ಹಾಗೂ ಉಪನಿರೀಕ್ಷಕ ಧನಂಜಯ್ ಮತ್ತು ಲೋಲಾಕ್ಷ ಅವರ ಮಾರ್ಗದರ್ಶನದಲ್ಲಿ ಕಾರ್ಕಳ ನಗರ ಠಾಣೆ ಸಿಬ್ಬಂದಿ ರಮೇಶ್ ಹಾಗೂ ವಿಶ್ವಜಿತ್ ಬ್ರಹ್ಮಾವರ ಪೊಲೀಸರ ಸಹಾಯದೊಂದಿಗೆ ಬ್ರಹ್ಮಾವರ ಬೈಕಾಡಿಯಿಂದ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ 14 ದಿನಗಳವರೆಗೆ ನ್ಯಾಯಾಂಗ ಬಂಧಿನ ವಿಧಿಸಿದೆ. ರಫೀಕ್ ವಿರುದ್ಧ ಹೆಬ್ರಿ ಠಾಣೆಯಲ್ಲಿ 1, ಬಜ್ಜೆ ಠಾಣೆಯಲ್ಲಿ 2 ದನ ಕಳ್ಳತನ ಪ್ರಕರಣ ಹಾಗೂ ಚಿಕ್ಕಮಗಳೂರಿನ ಲಿಂಗದಹಳ್ಳಿ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.
– ಉದ್ಯಾವರ: ರೈಲಿನಿಂದ ಬಿದ್ದು ಅಪರಿಚಿತ ಮಹಿಳೆ ಮೃತ್ಯು
ಉದ್ಯಾವರ: ರೈಲಿನಿಂದ ಬಿದ್ದು ಅಪರಿಚಿತ ಮಹಿಳೆಯೋರ್ವಳು ಮೃತ ಪಟ್ಟ ಘಟನೆ ಉದ್ಯಾವರದಲ್ಲಿ ನಡೆದಿದೆ. ಉದ್ಯಾವರ ಪಾಪನಾಶಿನಿ ಹೊಳೆಯ ರೈಲ್ವೇ ಟ್ರ್ಯಾಕ್ನ ಕಂಬದ ನಡುವೆ ಮೃತದೇಹ ಶುಕ್ರವಾರ ಸಂಜೆ ಪತ್ತೆಯಾಗಿದೆ. ಬೆಳಗ್ಗಿನ ಜಾವ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಉತ್ತರ ಭಾರತದ ಮೂಲದ ಮಹಿಳೆ ರೈಲಿನಿಂದ ಬಿದ್ದು ಅಥವಾ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿರ ಬೇಕೆಂದು ಶಂಕಿಸಲಾಗಿದೆ. ಮಹಿಳೆಯ ಮೃತ ದೇಹ ಸಂಪೂರ್ಣ ನಜ್ಜುಗುಜ್ಜಾಗಿದ್ದು ಢಿಕ್ಕಿ ಹೊಡೆದ ರಭಸಕ್ಕೆ ಮೃತ ದೇಹವು ರೈಲ್ವೇ ಟ್ರ್ಯಾಕ್ ಮತ್ತು ಹೊಳೆಗೆ ಹಾಕಿರುವ ಬೃಹತ್ ಕಂಬದ ಬೀಮ್ನೊಳಗೆ ಹೋಗಿ ಬಿದ್ದಿದೆ. ಸಂಪೂರ್ಣ ನಜ್ಜುಗುಜ್ಜಾಗಿದ್ದ ಮಹಿಳೆಯ ಮೃತದೇಹವನ್ನು ಕಾಪು ಪೊಲೀಸರು ಮತ್ತು ರೈಲ್ವೇ ಪೊಲೀಸರ ಉಪಸ್ಥಿತಿಯಲ್ಲಿ ಉಡುಪಿ ಅಜ್ಜರಕಾಡು ಶವಾಗಾರಕ್ಕೆ ಸಾಗಿಸಲಾಗಿದೆ. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಕಾಸರಗೋಡು: ಕುವೈತ್ ಅಗ್ನಿ ಅವಘಡ
– ಹುಟ್ಟೂರಿಗೆ ತಲುಪಿದ ಇಬ್ಬರ ಪಾರ್ಥಿವ ಶರೀರ
ಕಾಸರಗೋಡು: ಕುವೈತ್ ನಲ್ಲಿ ನಡೆದ ಅಗ್ನಿ ಅವಘಡದಲ್ಲಿ ಮೃತಪಟ್ಟ ಕಾಸರಗೋಡು ಚೆರ್ಕಳ ಕುಂಡಡ್ಕದ ಕೆ . ರಂಜಿತ್ ( 34) ಹಾಗೂ ತ್ರಿಕ್ಕರಿಪುರ ಇಳಂಬಚ್ಚಿಯ ಕೇಳು ( 55) ರವರ ಮೃತದೇಹಗಳನ್ನು ಶುಕ್ರವಾರ ರಾತ್ರಿ ಊರಿಗೆ ತಲಪಿಸಲಾಯಿತು. ಕೊಚ್ಚಿಯಿಂದ ಅಂಬ್ಯುಲೆನ್ಸ್ ಮೂಲಕ ಮೃತದೇಹಗಳನ್ನು ತರಲಾಯಿತು.ರಂಜಿತ್ ರವರ ಮೃತದೇಹ ರಾತ್ರಿ 9 ಗಂಟೆ ಸುಮಾರಿಗೆ ಚೆರ್ಕಳ ಕುಂಡಡ್ಕದ ಮನೆಗೆ ತಲಪಿಸಲಾಯಿತು. ಜಿಲ್ಲಾಧಿಕಾರಿ ಕೆ . ಇಂಪಾಶೇಖರ್, ಶಾಸಕರಾದ ಎನ್ . ಎ ನೆಲ್ಲಿಕುನ್ನು, ಸಿ . ಎಚ್ ಕುಂ ಇಂಬು, ಚೆಂಗಳ ಗ್ರಾಮ ಪಂಚಾಯತ್ ಅಧ್ಯಕ್ಷ ಖದರ್ ಬದರಿಯಾ ಹಾಗೂ ಜನಪ್ರತಿನಿಧಿಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು , ಅಧಿಕಾರಿಗಳು ಅಂತಿಮ ನಮನ ಸಲ್ಲಿಸಿದರು. ಕೇಳು ರವರ ಮೃತದೇಹವನ್ನು 8. 15 ರ ಸುಮಾರಿಗೆ ತೃಕ್ಕರಿಪುರದ ಮನೆಗೆ ತಲಪಿಸಿದ್ದು ಶಾಸಕ ರಾಜಗೋಪಾಲನ್, ಉಪ ಜಿಲ್ಲಾಧಿಕಾರಿ ಸೂಫಿಯಾನ್ ಅಹಮ್ಮದ್, ಹೊಸದುರ್ಗ ತಹಶೀಲ್ದಾರ್ ಎಂ ಮಾಯಾ ಹಾಗೂ ಇನ್ನಿತರ ನಾಯಕರು ಅಧಿಕಾರಿಗಳು ಅಂತಿಮ ನಮನ ಸಲ್ಲಿಸಿದರು ಅಂತಿಮ ದರ್ಶನಕ್ಕೆ ಆಪಾರ ಸಂಖ್ಯೆಯಲ್ಲಿ ಜನ ಆಗಮಿಸಿದ್ದರು. ಮೃತದೇಹಗಳನ್ನು ಶುಕ್ರವಾರ ಬೆಳಿಗ್ಗೆ 10.30 ರ ಸುಮಾರಿಗೆ ಕೊಚ್ಚಿಯ ನೆಡುಂಬಾಶ್ಮೀರಿ ವಿಮಾನ ನಿಲ್ದಾಣದಕ್ಕೆ ವಿಶೇಷ ವಿಮಾನದಲ್ಲಿ ತರಲಾಯಿತು. ಕೇರಳೀಯರ 24 ಸೇರಿದಂತೆ 46 ಮಂದಿಯ ಮೃತದೇಹಗಳನ್ನು ಒಂದೇ ವಿಮಾನದಲ್ಲಿ ತರಲಾಯಿತು,. ಕೇಂದ್ರ ವಿದೇಶಾಂಗ ಖಾತೆ ರಾಜ್ಯ ಸಚಿವ ಕೀರ್ತಿವರ್ಧನ್ ಸಿಂಗ್ ಹಾಗೂ ಇತರ ಅಧಿಕಾರಿಗಳು ಜೊತೆಗಿದ್ದರು. ವಿಮಾನ ನಿಲ್ದಾಣದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಪ್ರತಿಪಕ್ಷ ನಾಯಕ ವಿ . ಡಿ ಸತೀಶನ್, ರಾಜ್ಯದ ಸಚಿವರು ಹಾಗೂ ಸಂಸದರು ಅಂತಿಮ ನಮನ ಸಲ್ಲಿಸಿದರು. ಕೇರಳದ 24 ಮತ್ತು ತಮಿಳುನಾಡಿನ 7 ಮೃತದೇಹಗಳನ್ನು ವಿಶೇಷ ಅಂಬ್ಯಲೆನ್ಸ್ ಮೂಲಕ ಕೊಂಡೊಯ್ಯಲಾಯಿತು. ಕರ್ನಾಟಕದ ಓರ್ವ ಸೇರಿದಂತೆ ಉಳಿದ ರಾಜ್ಯಗಳ ಮೃತದೇಹಗಳನ್ನು ವಿಮಾನ ಮೂಲಕ ದೆಹಲಿಗೆ ಕೊಂಡೊಯ್ಯಲಾಯಿತು