-ರಾಜ್ಯದಲ್ಲಿ ಫಸ್ಟ್ ಡೇ 24,300 ಮಂದಿಗೆ ಲಸಿಕೆ
- ಪ್ರಧಾನಿ ನರೇಂದ್ರ ಮೋದಿ ಅವರಿಂದ ಬೆಳಗ್ಗೆ 10.30ಕ್ಕೆ ಚಾಲನೆ
ಬೆಂಗಳೂರು: ಮಹಾಮಾರಿ ಕೊರೋನಾ ದ ಆರ್ಭಟವು ದಿನೇ ದಿನೇ ಹೆಚ್ಚಾಗಿದ್ದು, ಕೋವಿಡ್-19 ವಿರುದ್ಧ ಭಾರತದ ಲಸಿಕಾ ಅಭಿಯಾನಕ್ಕೆ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರು ಬೆಳಗ್ಗೆ 10.30ಕ್ಕೆ ಚಾಲನೆ ನೀಡಲಿದ್ದಾರೆ. ದೇಶದಲ್ಲಿ ಒಟ್ಟು 3 ಲಕ್ಷ ಮಂದಿ ಮೊದಲ ದಿನ ಲಸಿಕೆ ಸ್ವೀಕರಿಸಲಿದ್ದಾರೆ. ರಾಜ್ಯದಲ್ಲಿ 24,300 ಜನರಿಗೆ ವ್ಯಾಕ್ಸಿನ್ ದೊರೆಯಲಿದೆ.
ಸೋಂಕಿನ ಮೊದಲ ಪ್ರಕರಣ ಕಾಣಿಸಿಕೊಂಡ ಬರೋಬ್ಬರಿ 10 ತಿಂಗಳು 8 ದಿನಗಳ ಬಳಿಕ ನಡೆಯುತ್ತಿರುವ ಈ ಲಸಿಕಾ ಅಭಿಯಾನದ ಬಗ್ಗೆ ಭಾರಿ ಕುತೂಹಲ ಮೂಡಿದ್ದು, ರಾಜ್ಯದಲ್ಲಿ 243 ಕೇಂದ್ರಗಳು ಲಸಿಕೆ ವಿತರಣೆಗೆ ಸರ್ವ ರೀತಿಯಲ್ಲಿಸಜ್ಜಾಗಿವೆ. ಮೂರು ಹಂತಗಳಲ್ಲಿನಡೆಯುವ ಲಸಿಕೆ ವಿತರಣೆಯ ಮೊದಲ ಭಾಗದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ವ್ಯಾಕ್ಸಿನ್ ನೀಡಲಾಗುತ್ತದೆ.
ರಾಜ್ಯದ ಮೊದಲ ಲಸಿಕೆಯನ್ನು ಬೆಂಗಳೂರಿನ ಆಸ್ಪತ್ರೆಯಲ್ಲಿ ಗ್ರೂಪ್ ಡಿ ದರ್ಜೆ ನೌಕರ/ಪೌರ ಕಾರ್ಮಿಕ ಪಡೆಯಲಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಲಸಿಕೆ ಪಡೆದವರು ಅರ್ಧ ತಾಸು ಲಸಿಕೆ ಕೇಂದ್ರದಲ್ಲೇ ಕುಳಿತುಕೊಳ್ಳಬೇಕು. ಈ ವೇಳೆ ಏನಾದರೂ ಆರೋಗ್ಯ ಸಮಸ್ಯೆ ಕಂಡುಬಂದಲ್ಲಿ ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಐದೇ ನಿಮಿಷದಲ್ಲಿ ಕರೆದೊಯ್ಯಲು ಅನುಕೂಲವಾಗುವಂತೆ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಮಿಷನ್ನ ನಿರ್ದೇಶಕಿ ಡಾ. ಅರುಂಧತಿ ಚಂದ್ರಶೇಖರ್ ತಿಳಿಸಿದ್ದಾರೆ.