ತುಂಬಿದ ಹಳ್ಳದಲ್ಲಿ ಕೃಷಿಕ ತೇಲಿ ಹೋಗಿ ಸಾವು!
– ಹಳ್ಳದಲ್ಲಿ ತೇಲಿ ಹೋಗಿ ಸಾವು: ಇಂದು ಶವ ಪತ್ತೆ
– ತೀರ್ಥಹಳ್ಳಿ ತಾಲೂಕಿನ ದೇವಂಗಿ ಬಳಿ ಘಟನೆ
– ಖ್ಯಾತ ಯಕ್ಷಗಾನ ಕಲಾವಿದ ಪ್ರಸನ್ನ ಅವರ ತಂದೆ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಲ್ಲಿ ಮಳೆಗೆ ನಾಲ್ಕನೇ ಬಲಿಯಾಗಿದೆ. ದೇವಂಗಿ ಬಳಿ ಉಂಟೂರು ಹಳ್ಳ ದಾಟುವಾಗ ತೇಲಿ ಹೋಗಿ ರೈತರೊಬ್ಬರು ಮೃತಪಟ್ಟಿದ್ದಾರೆ. ಬುಧವಾರ ತೋಟದಲ್ಲಿ ಶವ ಸಿಕ್ಕಿದೆ. ಕೃಷ್ಣಮೂರ್ತಿ ನಾಯ್ಕ್ (55) ಮೃತರು. ಇವರು ಮಂದಾರ್ತಿ ಮೇಳದ ಪ್ರಸಿದ್ಧ ಯಕ್ಷಗಾನ ಕಲಾವಿದ ಪ್ರಸನ್ನ ಅವರ ತಂದೆ. ಮೃತರು ಒಂದು ಹೆಣ್ಣು ಮತ್ತು ಒಂದು ಗಂಡು ಮಕ್ಕಳನ್ನು ಆಗಲಿದ್ದಾರೆ.
ಹಳ್ಳದಲ್ಲಿ ತೇಲಿ ಹೋಗಿದ್ದರು!
ಉಂಟೂರು ಹಳ್ಳ ಭಾರೀ ನೀರು ಹರಿಯುತ್ತಿದ್ದು ಮಂಗಳವಾರ ಸಂಜೆ ಕೆಲಸಕ್ಕೆ ಹೋಗಿ ಬರುವಾಗ ನಾಪತ್ತೆಯಾಗಿದ್ದರು. ಮನೆಯವರೆಲ್ಲ ರಾತ್ರಿ ಇಡೀ ಹುಡುಕಿದರೂ ಪತ್ತೆಯಾಗಿರಲಿಲ್ಲ. ಮಂಗಳವಾರ ಸುರಿದ ಮಳೆಗೆ ಹಳ್ಳದಲ್ಲಿ ನೆರೆ ಬಂದಿತ್ತು. ಕಾಲು ಜಾರಿ ಹಳ್ಳಕ್ಕೆ ಬಿದ್ದು ತೇಲಿ ಹೋಗಿದ್ದು ಬುಧವಾರ ಶವ ಪತ್ತೆಯಾಗಿದೆ. ಬಡ ಕುಟುಂಬಕ್ಕೆ ಪರಿಹಾರ ನೀಡಲು ಗ್ರಾಮಸ್ಥರು ಒತ್ತಾಯಿಸಿದ್ದಾರೆ.