ಡಿಗ್ರಿ ಕೋರ್ಸ್ ಗಳಿಗೂ ಸಿಇಟಿ ಪರೀಕ್ಷೆ!
– ರಾಜ್ಯದ ಖಾಸಗಿ ವಿವಿಗಳಲ್ಲಿ ಹೊಸ ನಿಯಮ
– ಉನ್ನತ ಶಿಕ್ಷಣ ಇಲಾಖೆಯ ಮಹತ್ವದ ನಿರ್ಧಾರ
– ಮುಂದಿನ ವರ್ಷದಿಂದಲೇ ಜಾರಿ
NAMMUR EXPRESS NEWS
ಬೆಂಗಳೂರು : ಉನ್ನತ ಶಿಕ್ಷಣ ಇಲಾಖೆಯು ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದ್ದು, ರಾಜ್ಯದ ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಸಾಮಾನ್ಯ ಪದವಿ ಕೋರ್ಸ್ ಗಳಿಗೂ ಸಿಇಟಿ ಪರೀಕ್ಷೆ ನಡೆಸಲು ಮುಂದಾಗಿದೆ.
ಹೌದು, ವೃತ್ತಿಪರ ಕೋರ್ಸ್ ಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಸುತ್ತಿರುವ ಮಾದರಿಯಲ್ಲಿಯೇ ಖಾಸಗಿ ವಿವಿಗಳಲ್ಲಿ ಪದವಿ ಕೋರ್ಸ್ ಗಳಿಗೂ ಸಿಇಟಿ ಪರೀಕ್ಷೆ ನಡೆಸಲು ಉನ್ನತ ಶಿಕ್ಷಣ ಇಲಾಖೆ ನಿರ್ಧರಿಸಿದೆ.
ಖಾಸಗಿ ಕಾಲೇಜುಗಳಲ್ಲಿ ಪದವಿ ಸೀಟುಗಳಲ್ಲಿ ಶೇ.40 ರಷ್ಟು ಸೀಟುಗಳನ್ನು ಸರ್ಕಾರಕ್ಕೆ ಬಿಟ್ಟುಕೊಡಬೇಕೆಂದು ಉನ್ನತ ಶಿಕ್ಷಣ ಇಲಾಖೆ ತಿಳಿಸಿದ್ದು, ಇದಕ್ಕೆ ಒಪ್ಪಿಗೆ ನೀಡಿರುವ ಖಾಸಗಿ ವಿವಿಗಳು, ಕೇಂದ್ರ ಮಟ್ಟದಲ್ಲಿ ಐಐಟಿಗಳಿಗೆ ನಡೆಸುವ ಸಾಮಾನ್ಯ ವಿಶ್ವವಿದ್ಯಾಲಯಗಳ ಪ್ರವೇಶ ಪರೀಕ್ಷೆ ಮಾದರಿ ಅನುಸರಿಸಿ ಸೀಟು ಹಂಚಿಕೆ ಮಾಡುವಂತೆ ಸರ್ಕಾರಕ್ಕೆ ಬೇಡಿಕೆ ಇಟ್ಟಿವೆ.
ರಾಜ್ಯದ ಖಾಸಗಿ ವಿಶ್ವವಿದ್ಯಾಲಯಗಳು 2024-25ರ ಶೈಕ್ಷಣಿಕ ವರ್ಷದಿಂದ ಸಾಮಾನ್ಯ ಪ್ರವೇಶ ಪರೀಕ್ಷೆಯ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಪ್ರವೇಶಿಸುವ ಸಾಧ್ಯತೆಯಿದೆ. ಕರ್ನಾಟಕ ರಾಜ್ಯ ಖಾಸಗಿ ವಿಶ್ವವಿದ್ಯಾಲಯಗಳ ಸಂಘ (ಕೆಎಸ್ ಪಿಯುಎ) ಈ ಕುರಿತು ಉನ್ನತ ಶಿಕ್ಷಣ ಸಚಿವರಿಗೆ ಭರವಸೆ ನೀಡಿದೆ.
ಉನ್ನತ ಶಿಕ್ಷಣ ಇಲಾಖೆಯು ಎಲ್ಲಾ ಖಾಸಗಿ ವಿಶ್ವವಿದ್ಯಾಲಯಗಳಿಗೆ ಪತ್ರ ಬರೆದಿದ್ದು, ವೃತ್ತಿಪರ ಕೊರ್ಸ್ ಗಳಿಗೆ ಪ್ರವೇಶದ ಹೊಸ ವಿಧಾನವನ್ನು ತಮ್ಮ ವೆಬ್ ಸೈಟ್ ಗಳಲ್ಲಿ ಪ್ರಕಟಿಸುವಂತೆ ನಿರ್ದೇಶಿಸಿದೆ.