ಶಿಕ್ಷಕರ ಬೇಡಿಕೆ ಈಡೇರಿಕೆಗೆ ಹೋರಾಟಕ್ಕೆ ಸಜ್ಜು!
– ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ವತಿಯಿಂದ ಆರಗ ಜ್ಞಾನೇಂದ್ರ ಅವರಿಗೆ ಮನವಿ
– ಸೇವಾ ಜೇಷ್ಠತೆಯ ಆಧಾರದ ಮೇಲೆ ಬಡ್ತಿ ನೀಡುವ ಕುರಿತು ಹೋರಾಟ
NAMMUR EXPRESS NEWS
ತೀರ್ಥಹಳ್ಳಿ: ಕರ್ನಾಟಕ ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ವತಿಯಿಂದ ಬಹುದಿನಗಳ ಶಿಕ್ಷಕರ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯ ಮಟ್ಟದ ಹೋರಾಟದ ರೂಪರೇಷೆಗಳು ಸಿದ್ಧಗೊಳ್ಳುತ್ತಿವೆ.
2017ರ ಹೊಸ ವೃಂದ ಮತ್ತು ನೇಮಕಾತಿ ನಿಯಮಗಳನ್ನು 2016ಕ್ಕಿಂತ ಮೊದಲು ನೇಮಕಾತಿಯಾದವರಿಗೆ ಪೂರ್ವಾನ್ವಯಗೊಳಿಸಬಾರದು ಹಾಗೂ ಇದರಿಂದ ಪ್ರಾಥಮಿಕ ಶಾಲಾ ಸೇವಾ ನಿರತ ಶಿಕ್ಷಕರಿಗಾಗಿರುವ ಅನ್ಯಾಯವನ್ನು ಸರಿಪಡಿಸುವ ಕುರಿತು, ಅರ್ಹ ಪ್ರಾಥಮಿಕ ಶಾಲಾ ಶಿಕ್ಷಕರಿಗೆ 2016ರ ಪೂರ್ವದಂತೆ ಅರ್ಹತೆಯ ಆಧಾರದ ಮೇಲೆ ಪ್ರೌಢ ಶಾಲೆಗೆ ಬಡ್ತಿ ನೀಡುವ ಕುರಿತು, ಪ್ರಾಥಮಿಕ ಶಾಲಾ ಶಿಕ್ಷಕರಿಗೆ 2016ರ ಪೂರ್ವದಂತೆ ಮುಖ್ಯಗುರುಗಳ ಹಾಗೂ ಹಿರಿಯ ಮುಖ್ಯ ಗುರುಗಳ ಹುದ್ದೆಗೆ ಸೇವಾ ಜೇಷ್ಠತೆಯ ಆಧಾರದ ಮೇಲೆ ಬಡ್ತಿ ನೀಡುವ ಕುರಿತು ಈಗಾಗಲೇ ಶಿಕ್ಷಕ ಸಂಘ ಹೋರಾಟಕ್ಕೆ ಸಜ್ಜುಗೊಂಡಿದೆ.
ಸರ್ಕಾರ ಹಾಗೂ ಸಂಬಂಧಿಸಿದವರಲ್ಲಿ ನ್ಯಾಯಯುತವಾಗಿ ಒತ್ತಾಯಿಸುವುದೇನೆಂದರೆ, ಕರ್ನಾಟಕ ರಾಜ್ಯವು ಶಾಲಾ ಶಿಕ್ಷಣದಲ್ಲಿ ಅನೇಕ ಹೊಸ ಉಪಕ್ರಮಗಳನ್ನು ತರುವುದರ ಮೂಲಕ ದೇಶದಲ್ಲಿ ಮಾದರಿಗಳನ್ನು ನಿರ್ಮಿಸಿದೆ. ಕಾಲಕಾಲಕ್ಕೆ ಆಗುವ ಶೈಕ್ಷಣಿಕ ಬದಲಾವಣೆಗಳನ್ನು ನಮ್ಮ ರಾಜ್ಯದಲ್ಲೂ ಶಾಲಾ ಶಿಕ್ಷಣ ಇಲಾಖೆ ಸಮರ್ಪಕವಾಗಿ ನಿರ್ವಹಿಸುತ್ತಾ ಬಂದಿರುವುದು ಶ್ಲಾಘನೀಯ. ಕರ್ನಾಟಕ ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ ಸುಮಾರು 1,88,532 ಶಿಕ್ಷಕರಲ್ಲಿ ಹಿರಿಯ ಮುಖ್ಯ ಶಿಕ್ಷಕರು, ಮುಖ್ಯ ಶಿಕ್ಷಕರು. ಸಹ ಶಿಕ್ಷಕರು, ವಿಶೇಷ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಾ 1 ರಿಂದ 7, 1 ರಿಂದ 8ನೇ ತರಗತಿಗಳನ್ನು ಸಮರ್ಥವಾಗಿ ನಿರ್ವಹಣೆ ಮಾಡುತ್ತಾ ಬಂದಿದ್ದಾರೆ.
NCTE ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿಯ ಶಿಫಾರಸ್ಸುಗಳಿಗೆ ಅನುಕೂಲವಾಗುವಂತೆ ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಯ ಪದನಾಮವನ್ನು ಬದಲಾಯಿಸಿ, ಹೊಸ ವೃಂದ ಹಾಗೂ ವೃಂದ ಬಲವನ್ನು ನಿರ್ಧರಿಸುವ ರಿತು ವಿಶೇಷ ರಾಜ್ಯ ಪತ್ರವನ್ನು ಪತ್ರ ಸಂಖ್ಯೆ:434 ದಿನಾಂಕ:20-05-2017ರಂದು ಹೊರಡಿಸಿದ ಪ್ರಾಥಮಿಕ ಶಾಲಾ ಸಹ ಶಿಕ್ಷಕ ವೃಂದವನ್ನು ಮುಖ್ಯವಾಗಿ ಪ್ರಾಥಮಿಕ ಶಾಲಾ ಶಿಕ್ಷಕರು 1 ರಿಂದ 5ಕ್ಕೆ 1,12,467 ಹಾಗೂ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು 6 ರಿಂದ 8ಕ್ಕೆ 51,781 ಎಂದು ವೃಂದವಾರು ಹುದ್ದೆಗಳನ್ನು ಮಂಜೂರಿಸಿ ಆದೇಶಿಸಿದೆ. ತತ್ಪರಿಣಾಮವಾಗಿ 2016ಕ್ಕಿಂತ ಮೊದಲು 1 ರಿಂದ 7, 1 ರಿಂದ 8 ವೃಂದಕ್ಕೆ ನೇಮಕಾತಿಯಾದ ಎಲ್ಲಾ ಸಹ ಶಿಕ್ಷಕರು ಪ್ರಾಥಮಿಕ ಶಾಲಾ ಶಿಕ್ಷಕರು 1 ರಿಂದ 5 ಎಂದು ಪರಿಗಣಿಸಿದ್ದು, ಶಿಕ್ಷಕರಿಗೆ ತೀವ್ರ ಅನ್ಯಾಯವಾಗಿದೆ.
ಉಲ್ಲೇಖ (1)ರ 2017ರ ಹೊಸ ವೃಂದಬಲ ನಿಗದಿಯಾಗುವವರೆಗೆ ಪ್ರಾಥಮಿಕ ಶಾಲಾ ಸಹ ಶಿಕ್ಷಕ ವೃಂದದಿಂದ ಪ್ರೌಢಶಾಲಾ ಸಹ ಶಿಕ್ಷಕ ಗ್ರೇಡ್-2 ವೃಂದಕ್ಕೆ ನಿಯಮಿತವಾಗಿ ಬಡ್ತಿ ನೀಡುವಲ್ಲಿ ಯಾವುದೇ ಸಮಸ್ಯೆಗಳು ಇರಲಿಲ್ಲ. ಪ್ರಾಥಮಿಕ ಶಾಲೆಗಳಲ್ಲಿ 2017ರ ಹೊಸ ವೃಂದಬಲ ನಿಗದಿಯಿಂದಾಗಿ ಪ್ರೌಢಶಾಲಾ ಸಹ ಶಿಕ್ಷಕರು ಗ್ರೇಡ್-2 ವೃಂದಕ್ಕೆ ಬಡ್ತಿ ನೀಡುವಾಗ ಗೊಂದಲಗಳು ಉಂಟಾದುದ್ದನ್ನು ನಮ್ಮ ಸಂಘಟನೆಯು ಬಲವಾಗಿ ತಿಳಿಸುತ್ತಾ ಬಂದಿದ್ದರೂ, ಅದನ್ನು ಪರಿಹರಿಸದೇ, ಮುಂದೂಡುತ್ತಾ ಬರಲಾಗಿದೆ. ಈಗ ಅದನ್ನು ಖಂಡಿಸಿ ಸಂಘವು ಹೋರಾಟಕ್ಕೆ ಕರೆ ನೀಡಿದ್ದು ತೀರ್ಥಹಳ್ಳಿಯಲ್ಲಿ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಮನವಿ ಸಲ್ಲಿಸಿದೆ.
ಸಂಘದ ಅಧ್ಯಕ್ಷರಾದ ಮಹಾಬಲೇಶ್ವರ ಹೆಗಡೆ ಸೇರಿದಂತೆ ಹಲವರು ಇದ್ದರು.