ಒತ್ತುವರಿ ತೆರವು ವಿರುದ್ಧ ಸಿಡಿದೆದ್ದ ರೈತ ಸಂಘಟನೆಗಳು!
– ಮಲೆನಾಡ ನೈಸರ್ಗಿಕ ಕೃಷಿ ವಿರುದ್ಧ ಸರ್ಕಾರದ ನಿಲುವು
– ಮಳೆ ಹಾನಿ ಅವೈಜ್ಞಾನಿಕ ಪರಿಹಾರ ವಿರುದ್ದ ಆಕ್ರೋಶ
– ಮಲೆನಾಡಲ್ಲಿ ಜೋರಾಗಲಿದೆ ರೈತ ಹೋರಾಟ?!
NAMMUR EXPRESS NEWS
ತೀರ್ಥಹಳ್ಳಿ: ಒತ್ತುವರಿ ತೆರವು, ಮಳೆ ಹಾನಿ ಅವೈಜ್ಞಾನಿಕ ಪರಿಹಾರ ಸೇರಿ ಸರ್ಕಾರಗಳ ಧೋರಣೆ ವಿರುದ್ಧ ಇದೀಗ ರೈತರು ಹೋರಾಟಕ್ಕೆ ಮುಂದಾಗಿದ್ದಾರೆ.
‘ಸಮಾನ ಮನಸ್ಕರು’ ಹಾಗೂ ತೀರ್ಥಹಳ್ಳಿ ತಾಲ್ಲೂಕಿನ ಎಲ್ಲಾ ರಾಜಕೀಯ ಪಕ್ಷಗಳ ಮುಂದಾಳುಗಳು, ಕರ್ನಾಟಕ ರಾಜ್ಯ ರೈತ ಸಂಘ: ತೀರ್ಥಹಳ್ಳಿ, ಕರ್ನಾಟಕ ರಕ್ಷಣಾ ವೇದಿಕೆ, ದಲಿತ ಸಂಘರ್ಷ ಸಮಿತಿ, ಮಲೆನಾಡು ಸಂಘರ್ಷ ಕ್ರಿಯಾ ಸಮಿತಿ, ತೀರ್ಥಹಳ್ಳಿ ಇವರ ಸಮಾಲೋಚನಾ ಸಭೆ ತೀರ್ಥಹಳ್ಳಿ ಮಯೂರ ಹೋಟೆಲ್ ಸಭಾಂಗಣ.ದಲ್ಲಿ ಶುಕ್ರವಾರ ನಡೆಯಿತು.
ಮಳೆಗಾಲ ಕೇಡುಗಾಲ ತಂದಿದೆ. ಮಳೆಗಾಲ ಇನ್ನೂ ಎರಡು ತಿಂಗಳು ಇರುವುದಾದರು ಈಗಾಗಲೇ ದಾಖಲೆ ಮೀರಿ ಮಳೆ ಸುರಿದು ಭತ್ತ, ಬಾಳೆ, ಅಡಿಕೆ, ಕಾಳುಮೆಣಸು ಮುಂತಾದ ಬೆಳೆಗಳು ನಾಶವಾಗುತ್ತಿವೆ. ಇವುಗಳಿಗೆ ಪರಿಹಾರ ಒದಗಿಸಲು ಸರ್ಕಾರದ ಮೇಲೆ ರೈತರು ಒತ್ತಾಯ ಹೇರಬೇಕು. ಹಲವು ಕಡೆ ಭೂಕುಸಿತ ಸಂಭವಿಸುತ್ತಿದ್ದು ಇದಕ್ಕೆ ವೈಜ್ಞಾನಿಕ ಕಾರಣಗಳನ್ನು ಹೇಳುವ ಬದಲು ದುರುಳರು ಮಲೆನಾಡಿನ ರೈತರ ಕಡೆಗೆ ಕೈ ತೋರಿಸಿ ಜೀವನೋಪಾಯಕ್ಕೆ ಒತ್ತುವರಿ ಕೃಷಿ ಮಾಡಿರುವುದನ್ನು ಸರ್ಕಾರ ತೆರವು ಕಾರ್ಯಾಚರಣೆಗೆ ಮುಂದಾಗಿದೆ. ಇದನ್ನು ವಿರೋಧಿಸಬೇಕು. ಹಾಗೂ ತೆರವು ಕಾರ್ಯಾಚರಣೆಯನ್ನು ಈ ಕೂಡಲೇ ನಿಲ್ಲಿಸಬೇಕು. ಪರಸ್ಪರ ರಾಜಕೀಯ ಟೀಕೆ, ವೈಯಕ್ತಿಕ ದೂಷಣೆ ಮಾಡಬಾರದು. ಒತ್ತುವರಿ ತೆರವು ನಿಲ್ಲಿಸಲು ಒಗ್ಗಟ್ಟಾಗಿ ಹೋರಾಡಬೇಕು ಎಂದು ನಿರ್ಧಾರ ಮಾಡಲಾಯಿತು.
ರೈತ ಸಂಘದ ಅಧ್ಯಕ್ಷರಾದ ಕೋಡ್ಲು ವೆಂಕಟೇಶ್ ಮತ್ತು ಪ್ರಧಾನ ಕಾರ್ಯದರ್ಶಿ ಹೊರಬೈಲು ರಾಮಕೃಷ್ಣ ಸೇರಿ ಹತ್ತಾರು ಸಂಘಟನೆಗಳ ಪ್ರಮುಖರು ಹಾಜರಿದ್ದರು.
ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಣ್ಣ ರೈತರ ವಿರುದ್ಧ ಸರ್ಕಾರ ಕ್ರಮ ಕೈಗೊಂಡರೆ ದೊಡ್ಡ ಹೋರಾಟಕ್ಕೆ ರೈತ ಸಂಘಟನೆಗಳು ಸಿದ್ಧತೆ ನಡೆಸಿವೆ.