ಕಾಫಿ ನಾಡಲ್ಲಿ ಪ್ರತಿಷ್ಠಾಪಿಸಿದ ದುರ್ಗಾದೇವಿ ಜಲಸ್ತಂಭನ
– ಜಗತ್ಪ್ರಸಿದ್ಧ ಶೃಂಗೇರಿ ಶರನ್ನವರಾತ್ರಿ,ಹೊರನಾಡು,ಬಾಳೆಹೊನ್ನೂರು ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ದಸರಾ ಸಂಭ್ರಮ
– ಇತಿಹಾಸದಲ್ಲೇ ಪ್ರಥಮ ಬಾರಿಗೆ ಬಾಳೆಹೊನ್ನೂರಿನಲ್ಲಿ ಭದ್ರಾರತಿ, ಶೃಂಗೇರಿ ಉತ್ಸವದಲ್ಲಿ ಕಣ್ಮನಸೆಳೆದ ಸ್ಥಬ್ಥ ಚಿತ್ರಗಳು
NAMMUR EXPRESS NEWS
ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯಾದ್ಯಂತ ದಸರಾ ಅದ್ದೂರಿಯಾಗಿ ತೆರೆಕಂಡಿದೆ.
ಶೃಂಗೇರಿ,ಹೊರನಾಡು,ಚಿಕ್ಕಮಗಳೂರಿನ ವಿವಿಧ ದೇವಾಲಯಗಳು ಸೇರಿದಂತೆ ಎಲ್ಲಾ ತಾಲೂಕಿನಲ್ಲಿ ಪ್ರತಿಷ್ಠಾಪಿಸಿದ ದುರ್ಗಾದೇವಿಯ ಜಲಸ್ತಂಭನ ಹಾಗೂ ರಥೋತ್ಸವ ನಡೆಯಿತು.
ಬೀಕನಹಳ್ಳಿಯಲ್ಲಿ ಚಾಮುಂಡೇಶ್ವರಿ ಮೆರವಣಿಗೆ..!!
ಚಿಕ್ಕಮಗಳೂರು: ಬೀಕನಹಳ್ಳಿ ದಸರಾ ಮಹೋತ್ಸವ ಪ್ರಯುಕ್ತ ಶನಿವಾರ ರಾತ್ರಿ ದೀಪಾಲಂಕಾರದಿಂದ ಗ್ರಾಮ ಕಂಗೊಳಿಸುತ್ತಿತ್ತು. ಚಿಕ್ಕಮಕ್ಕಳು ಆರತಿ ತಟ್ಟೆಯೊಂದಿಗೆ ಮೆರವಣಿಗೆಯಲ್ಲಿ ಸಾಗಿದರು, ಯುವಜನರು ಹಾಗೂ ಗ್ರಾಮಸ್ಥರು ಡಿಜೆ ಹಾಡಿಗೆ ಕುಣಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು. ಬೀಕನಹಳ್ಳಿಯಲ್ಲಿ ಶನಿವಾರ ರಾತ್ರಿ ದಸರಾ ಮೆರವಣಿಗೆಗೆ ಶಾಸಕ ಎಚ್.ಡಿ.ತಮ್ಮಯ್ಯ ಚಾಲನೆ ನೀಡಿದರು,ಎಂಎಲ್ಸಿ ಸಿ.ಟಿ ರವಿ,ಗಾಯತ್ರಿ ಶಾಂತೇಗೌಡ,ದೇವಸ್ಥಾನ ಸಮಿತಿಯ ಹೆಚ್.ಪಿ ಮಂಜೇಗೌಡ ಇತರರು ಉಪಸ್ಥಿತರಿದ್ದರು.ತಾಯಿ ಚಾಮುಂಡೇಶ್ವರಿಯ ಮೆರವಣಿಗೆ ಬನ್ನಿಮಂಟಪದವರೆಗೆ ಸಾಗಿ ನಂತರ ಅಲ್ಲಿ ಅಂಬು ಹೊಡೆಯಲಾಯಿತು.
ವಿಯಪುರದಲ್ಲಿ ಶ್ರೀದುರ್ಗಾದೇವಿ ವಿಸರ್ಜನೆ..!!
ನಗರದ ವಿಜಯಪುರದಲ್ಲಿ ಪ್ರತಿಷ್ಠಾಪಿಸಿದ್ದ ಶ್ರೀ ದುರ್ಗಾದೇವಿ ಮೂರ್ತಿಯನ್ನು ಶನಿವಾರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ರಾತ್ರಿ ನಗರದ ಹೊರವಲಯದ ಇಂದಾವರ ಕೆರೆಯಲ್ಲಿ ವಿಸರ್ಜಿಸಲಾಯಿತು. ವಿಜಯದಶಮಿಯಂದು ಸಂಜೆ 6 ಗಂಟೆಗೆ ಬೃಹತ್ ದೀಪಾಲಂಕಾರದ ಮಂಟಪದಲ್ಲಿ ದೇವಿಯನ್ನು ಕೂರಿಸಿ, ವಾದ್ಯಗಳೊಂದಿಗೆ ಮೆರವಣಿಗೆ ನಡೆಸಲಾಯಿತು. ಶ್ರೀ ದುರ್ಗಾದೇವಿ ಮೂರ್ತಿ ಮನೆಗಳ ಸಮೀಪ ಬರುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಕುಟುಂಬ ಸಮೇತ ಪೂಜೆ ಸಲ್ಲಿಸಿದರು. ಅಲ್ಲಲ್ಲಿ ಮುಖ್ಯಬೀದಿಗಳಲ್ಲಿ ಯುವಕರ ತಂಡವು ವಿವಿಧ ಬಗೆಯ ಹೂವಿನ ಹಾರಗಳನ್ನು ದೇವಿಗೆ ಅರ್ಪಿಸಿದರು. ಅಲ್ಲಲ್ಲಿ ಯುವಕರ ತಂಡ ಮೆರವಣಿಗೆಯಲ್ಲಿ ಸಾಗಿದ ಭಕ್ತಾದಿಗಳಿಗೆ ಉಪಾಹಾರ ವ್ಯವಸ್ಥೆ ಕಲ್ಪಿಸಿದ್ದರು. ಶ್ರೀ ದುರ್ಗಾದೇವಿ ಮೆರವಣಿಗೆ ರಾತ್ರಿ 11.45ಕ್ಕೆ ಒಕ್ಕಲಿಗರ ಭವನದ ಸಮೀಪ ಆಗಮಿಸಿದ ವೇಳೆ ಮಹಿಷಾಸುರ ದಹನ ನಡೆಯಿತು. ಬಳಿಕ ಇಂದಾವರ ಕೆರೆಯಲ್ಲಿ ಮೂರ್ತಿಯ ವಿಸರ್ಜನೆ ಮಾಡಲಾಯಿತು.
ಕೊಪ್ಪ,ಎನ್ ಆರ್ ಪುರದಲ್ಲಿ ಸಂಭ್ರದ ದುರ್ಗಾ ವಿಸರ್ಜನೆ
ಕೊಪ್ಪ ಹಾಗೂ ಎನ್ ಆರ್ ಪುರ ತಾಲೂಕಿನಲ್ಲಿ ಪ್ರತಿಷ್ಠಾಪಿಸಿದ ದುರ್ಗಾದೇವಿಯನ್ನು ಸಕಲ ಧಾರ್ಮಿಕ ವಿಧಿವಿಧಾನಗಳು,ಭವ್ಯ ಮೆರವಣಿಗೆಯೊಂದಿಗೆ ಜಲಸ್ತಂಭನಗೊಳಿಸಲಾಯಿತು.
ಬಾಳೆಹೊನ್ನೂರಿನಲ್ಲಿ ಭದ್ರಾರತಿ
ಪಟ್ಟಣದ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿ ಶರನ್ನವರಾತ್ರಿ ಮಹೋತ್ಸವ ಅಂಗವಾಗಿ ಶನಿವಾರ ರಾತ್ರಿ ಭದ್ರಾನದಿ ದಡದಲ್ಲಿ ಆಯೋಜಿಸಿದ್ದ ಭದ್ರಾರತಿ ಧಾರ್ಮಿಕ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು. ಬಾಳೆಹೊನ್ನೂರು ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಭದ್ರಾ ನದಿಗೆ ಭದ್ರಾರತಿ ನಡೆಸಿದ್ದು, ಮೊದಲು ಕಲಶ ರೂಪದಲ್ಲಿ ಗಂಗೆಯನ್ನು ಪ್ರತಿಷ್ಠಾಪಿಸಿ ವಿಶೇಷ ಧಾರ್ಮಿಕ ಪೂಜಾ ಕೈಂಕರ್ಯಗಳೊಂದಿಗೆ ಪೂಜೆ ಸಲ್ಲಿಸಿ. ಬಳಿಕ ಕಾಶಿ, ಹರಿದ್ವಾರ, ಋಷಿಕೇಶದಲ್ಲಿ ನಡೆಯುವ ಗಂಗಾರತಿ ಮಾದರಿಯಲ್ಲಿ ತುಂಬಿ ಹರಿಯುವ ಭದ್ರಾ ನದಿಗೆ ಪಂಚ ಅರ್ಚಕರ ಸಮ್ಮುಖದಲ್ಲಿ ಧೂಪಾರತಿ ನೆರವೇರಿಸಿ ವಿಶೇಷವಾಗಿ ಅಲಂಕೃತವಾದ ಪಂಚಲೋಹದ ಆರತಿ ತಟ್ಟೆಯಲ್ಲಿ ಭದ್ರೆಗೆ ಆರತಿ ಬೆಳಗಲಾಯಿತು. ನಂತರ ಶಂಖ, ಜಾಗಟೆ, ಡಮರುಗ, ಚಾಮರದ ಸೇವೆ ನೆರವೇರಿಸಲಾಯಿತು. ಬಳಿಕ ನೆರೆದಿದ್ದ ಸಾವಿರಾರು ಜನರು ಭದ್ರಾ ನದಿಯ ಒಡಲಿಗೆ ವಿವಿಧ ಪುಷ್ಪಗಳನ್ನು ಅರ್ಪಿಸಿದರು. ಅರ್ಚಕರಾದ ಸುಬ್ರಹ್ಮಣ್ಯ ಭಟ್, ಪ್ರಶಾಂತ್ ಭಟ್, ನಂದನ್ ಭಟ್, ಉತ್ತಮೇಶ್ವರ, ಪ್ರಸನ್ನಭಟ್, ಅಭಿಷೇಕ್ ಭಟ್ ಭದ್ರಾರತಿಯ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.
ಶೃಂಗೇರಿ ರಥೋತ್ಸವದಲ್ಲಿ ಕಣ್ಮನಸೆಳೆದ ಸ್ಥಬ್ಧಚಿತ್ರಗಳು
ಶಾರದಾ ಶರನ್ನವರಾತ್ರಿಯ ಮಹಾರಥೋತ್ಸವದಲ್ಲಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ಸೇರಿದಂತೆ ಅನೇಕ ಸ್ಥಬ್ಥ ಚಿತ್ರಗಳು ಜನರನ್ನು ಆಕರ್ಷಿಸಿದವು. ರಕ್ತೇಶ್ವರಿ ಇಂಜಿನಿಯರಿಂಗ್ ವರ್ಕ್ಸ್ ರಮೇಶ್ ಹಾಗೂ ಕಲಾವಿದ ಕಾಂಚೀನಗರ ಸಂದೇಶ್ ರವರ ಕೈಚಳಕದಿಂದ ಮೂಡಿದ ಹಿರಣ್ಯಕಷ್ಯಪು ಮರ್ದನ ಮಾಡುತ್ತಿರುವ ಉಗ್ರನರಸಿಂಹ, ಶೃಂಗೇರಿ ಬಿಜಿಎಸ್ ಶಾಲೆ ವಿದ್ಯಾರ್ಥಿನಿ ಸ್ತುತಿ ಆಚಾರ್ಯ ಧರಿಸಿದ್ದ ಶ್ರೀಶಾರದೆಯ ವೇಷ, ಶೃಂಗೇರಿಯ ಕಿರುತೆರೆಯ ಕಲಾವಿದ ರೇವಂತ್ ನಾಯಕ್ ಧರಿಸಿದ್ದ ಭಜರಂಗಿ ವೇಷ,ಮರಗಾಲು ಕುಣಿತಗಳಂತಹ ಅನೇಕ ಸ್ಥಬ್ದಚಿತ್ರಗಳು ನೆರೆದಿದ್ದ ಜನರ ಮೆಚ್ಚುಗೆಗೆ ಪಾತ್ರವಾದವು.