ಯಕ್ಷ ಲೋಕದಲ್ಲಿ ಹಾಸ್ಯಗಾರ ಜಯರಾಮ ಆಚಾರ್ಯ ಇನ್ನಿಲ್ಲ!
– ಬೆಂಗಳೂರಲ್ಲಿ ವಿಧಿ ವಶ: ಊರಿನಲ್ಲಿ ಇಂದು ಅಂತ್ಯ ಸಂಸ್ಕಾರ
– ಯಕ್ಷಗಾನ ಕ್ಷೇತ್ರಕ್ಕೆ ಅಪಾರ ಸೇವೆ ಸಲ್ಲಿಸಿದ್ದ ಕಲಾವಿದ
– ನಾಯಕರು, ಕಲಾವಿದರ ಸಂತಾಪ: ನುಡಿ ನಮನ
NAMMUR EXPRESS NEWS
ಬಂಟ್ವಾಳ: ಹಾಸ್ಯ ಕಲಾವಿದ ಬಂಟ್ವಾಳ ಬಂಟ್ವಾಳ: ಯಕ್ಷಗಾನ ಪ್ರದರ್ಶನಕ್ಕೆಂದು ಬೆಂಗಳೂರಿಗೆ ತೆರಳಿದ್ದ ತೆಂಕುತಿಟ್ಟಿನ ಪ್ರಸಿದ್ಧ ಹಾಸ್ಯ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ (67) ಅವರು ಸೋಮವಾರ ಮುಂಜಾನೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ, ಹಿರಿಯ ಕಲಾವಿದ ಚಂದ್ರಶೇಖರ ಧರ್ಮಸ್ಥಳ ಅವರ ನೇತೃತ್ವದ ತಂಡದಲ್ಲಿ ನಡೆಯಬೇಕಿದ್ದ ಯಕ್ಷಗಾನ ಕಾರ್ಯಕ್ರಮದಲ್ಲಿ ಭಾಗವಹಿಸಲು ಬೆಂಗಳೂರಿನ ಆರ್ ಕೆ ಭಟ್ಟರ ಮನೆಗೆ ತೆರಳಿದ್ದರು. ಇಂದು ಬೆಳಗ್ಗೆ ಅವರಿಗೆ ಹೃದಯ ಸ್ತಂಭನವಾದಾಗ ಜತೆಗಿದ್ದ ಕಲಾವಿದರು ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಇದೀಗ ಸ್ಥಳೀಯ ಆಸ್ಪತ್ರೆಯಲ್ಲಿರುವ ಮೃತ ದೇಹ ಆರ್.ಕೆ ಭಟ್ಟರ ಮನೆಗೆ ಅಂತಿಮ ದರ್ಶನಕ್ಕೆ ತರಲಾಗುವುದು. ಬಳಿಕ ಆಂಬುಲೆನ್ಸ್ ಮೂಲಕ ಊರಿಗೆ ಸಾಗಲಿದೆ ಎಂದು ಭಾಗವತರಾದ ಗಿರೀಶ್ ರೈ ಕಕ್ಕೆ ಪದವು ತಿಳಿಸಿದ್ದಾರೆ. ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಸೇರಿದಂತೆ ಕಲಾವಿದರು ಸಂತಾಪ ವ್ಯಕ್ತಪಡಿಸಿದ್ದಾರೆ.
ಕಲಾವಿದನ ಕಲಾ ಸೇವೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ರಂಗದ ದಿಗ್ಗಜ ಹಾಸ್ಯ ಕಲಾವಿದ ಜಯರಾಮ ಆಚಾರ್ಯ ಬಂಟ್ವಾಳ ಅವರು ವೇಷ, ಭೂಷಣ, ಸಂಗೀತ, ನೃತ್ಯ ಮುಂತಾದ ಹಲವು ಕಲಾ ಪ್ರಕಾರಗಳ ಯಕ್ಷಗಾನದಲ್ಲಿ ಮೇರು ಕಲಾವಿದರಾಗಿದ್ದರು. 7ನೇ ತರಗತಿ ವಿದ್ಯಾಭ್ಯಾಸಗೈದಿದ್ದರೂ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಸಂಪಾದಿರುವ ಮೂಲಕ, ಶ್ರದ್ದೆ ಮತ್ತು ಕಠಿಣ ಪರಿಶ್ರಮ,ಛಲವಿದ್ದರೆ, ಯಶಸ್ಸು ಕಟ್ಟಿಟ್ಟ ಬುತ್ತಿ ಎನ್ನುವ ಮಾತಿಗೆ ಇವರು ಸಾಕ್ಷಿಯಾಗಿದ್ದರು. ಕಟೀಲು, ಎಡನೀರು, ಕದ್ರಿ, ಮತರು, ಸುಂಕದ ಕಟ್ಟೆ ಸೇರಿದಂತೆ 11 ಯಕ್ಷಗಾನ ಮೇಳಗಳಲ್ಲಿ ತಿರುಗಾಟ ನಡೆಸಿದ ಬಂಟ್ವಾಳ ಜಯಾರಾಮ ಆಚಾರ್ಯ ಅವರು ಹೊಸನಗರ ಮೇಳದಲ್ಲಿ 10 ವರ್ಷಗಳಿಂದ ಬಣ್ಣ ಹಚ್ಚುತ್ತಿದ್ದರು. ಅನೇಕ ಕಾರ್ಯಕ್ರಮಗಳಲ್ಲಿ ಯಕ್ಷಗಾನ ಮಾಡಿದ್ದರು.