ಕರಾವಳಿ ಟಾಪ್ ನ್ಯೂಸ್
– ಮಂಗಳೂರು: ಶಾಲಾ ರಿಕ್ಷಾ ಮತ್ತು ಪಿಕಪ್ ನಡುವೆ ಅಪಘಾತ, ಬಾಲಕಿ ಸಾವು!
– ಮಂಗಳೂರು: ಸರಕಾರಿ ಮರದ ದಿಮ್ಮಿ ಅಕ್ರಮ ಸಾಗಾಟ.!
– ಮಂಗಳೂರು: ಅಂಬರ್ ಗ್ರೀಸ್ ಅಕ್ರಮ ಸಾಗಾಟ – ಇಬ್ಬರು ಆರೋಪಿಗಳ ಬಂಧನ!
NAMMUR EXPRESS NEWS
ಮಂಗಳೂರು : ಶಾಲಾ ಮಕ್ಕಳನ್ನು ಕೊಂಡೊಯ್ಯುವ ರಿಕ್ಷಾ ಮತ್ತು ಪಿಕಪ್ ನಡುವೆ ಸಂಭವಿಸಿದ ಅಪಘಾತದಲ್ಲಿ 4ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಸಾವನ್ನಪ್ಪಿರುವ ಘಟನೆ ಬೆಳ್ಮ ಗ್ರಾಮದ ಕಲ್ಪಾದೆ ಎಂಬಲ್ಲಿ ಅ. 24ರಂದು ಸಂಭವಿಸಿದೆ.
ಬಡಕಬೈಲು ನಿವಾಸಿ ಮಹಮ್ಮದ್ ಬಿ ಮೋನು ಮತ್ತು ಮುನ್ಝಿಯಾ ದಂಪತಿ ಪುತ್ರಿ ಆಯಿಷಾ ವಹಿಬಾ (11 ) ಮೃತ ವಿದ್ಯಾರ್ಥಿನಿ. ಮದಕ ಭಾಗದಿಂದ ದೇರಳಕಟ್ಟೆ ನೇತಾಜಿ ಶಾಲೆಗೆ ಮಕ್ಕಳನ್ನು ಕರೆತರುವ ಆಟೋ ರಿಕ್ಷಾಗೆ ಕಲ್ಪಾದೆ ತಲುಪುತ್ತಿದ್ದಂತೆ ಎದುರಿನಿಂದ ಅತಿ ವೇಗ ದಿಂದ ಬಂದ ಪಿಕಪ್ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮ ರಿಕ್ಷಾ ಪಲ್ಟಿಯಾಗಿ ಆಯಿಷಾ ವಹಿಬಾ ಗಂಭೀರವಾಗಿ ಗಾಯಗೊಂಡಿದ್ದು, ಆಕೆಯನ್ನು ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಮೃತಪಟ್ಟಿದ್ದಾಳೆ.
ರಿಕ್ಷಾದಲ್ಲಿದ್ದ ಇತರ ಮೂವರು ವಿದ್ಯಾರ್ಥಿಗಳು ಅಲ್ಪಸ್ವಲ್ಪ ಗಾಯಗೊಂಡಿದ್ದಾರೆ. ರಿಕ್ಷಾ ಚಾಲಕನಿಗೂ ಗಾಯವಾಗಿದೆ. ಗಾಯಾಳುಗಳನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಂಗಳೂರು: ಸರಕಾರಿ ಮರದ ದಿಮ್ಮಿ ಅಕ್ರಮ ಸಾಗಾಟ.!
ಮಂಗಳೂರು: ನಗರದ ಕದ್ರಿ ಲೋಕೋಪಯೋಗಿ ಇಲಾಖೆಯ ವಸತಿ ಗೃಹದಲ್ಲಿರುವ ಮರಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದುದನ್ನು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ಕಾರ್ಯಕರ್ತರು ಪತ್ತೆ ಹಚ್ಚಿದ ಘಟನೆ ಅ. 23ರಂದು ರಾತ್ರಿ ನಡೆದಿದೆ. ಲೋಕೋಪಯೋಗಿ ಇಲಾಖೆಯ ಅಧೀನದಲ್ಲಿದ್ದ ಎರಡು ಮರಗಳ ರೆಂಬೆಗಳನ್ನು ಕಡಿಯಲು ಅರಣ್ಯ ಇಲಾಖೆಗೆ ಅನುಮತಿ ಪಡೆಯಲಾಗಿತ್ತು ಎನ್ನಲಾಗಿದೆ. ಆದರೆ ದೇವದಾರ್ ಮತ್ತು ಸಾಗುವಾನಿ ಸಹಿತ 8 ಮರಗಳಿಗೆ ಕೊಡಲಿಯೇಟು ಹಾಕಿದ್ದಲ್ಲದೆ ಮರದ ದಿಮ್ಮಿಗಳನ್ನು ಖಾಸಗಿ ವಾಹನದಲ್ಲಿ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿತ್ತು ಎಂದು ಹೇಳಲಾಗಿದೆ.
ಅಪಾಯದ ಮುನ್ಸೂಚನೆ ಅರಿತುಕೊಂಡ ಚಾಲಕ ಹೊಗೆ ಬಜಾರ್ನ ಡಿಪೋ ಆವರಣದಲ್ಲಿ ವಾಹನ ನಿಲ್ಲಿಸಿದ ಎನ್ನಲಾಗಿದೆ. ಅಪಾಯಕಾರಿಯಾದ ಎರಡು ಮರದ ರೆಂಬೆಗಳನ್ನು ಮಾತ್ರ ಕಡಿಯಲು ಅನುಮತಿ ಕೇಳಿದವರು ಬಳಿಕ 8 ಮರಗಳನ್ನು ಉರುಳಿಸಿದರು.
ಅಷ್ಟೇ ಅಲ್ಲ ಮರದ ದಿಮ್ಮಿಗಳನ್ನು ವಾಹನದಲ್ಲಿಟ್ಟು ಅದರ ಮೇಲೆ ಪ್ಲಾಸ್ಟಿಕ್ ಹೊದಿಕೆ ಹಾಕಿ ರಾತ್ರಿ ವೇಳೆ ಸಾಗಾಟ ಮಾಡುವ ಅಗತ್ಯ ಏನಿತ್ತು? ಅಕ್ರಮವಾಗಿ ಯಾಕೆ ಸಾಗಾಟ ಮಾಡಬೇಕು? ಇದರ ಹಿಂದೆ ಯಾರ್ಯಾರು ಇದ್ದಾರೆ ಎಂಬುದರ ಬಗ್ಗೆ ತನಿಖೆಯಾಗಬೇಕು? ಬೇಲಿಯೇ ಎದ್ದು ಹೊಲ ಮೇಯ್ದರೆ ಹೇಗೆ? ಎಂದು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ಕಾರ್ಯಕರ್ತರು ಪ್ರಶ್ನಿಸಿದ್ದಾರೆ.
ಮಂಗಳೂರು: ಅಂಬರ್ ಗ್ರೀಸ್ ಅಕ್ರಮ ಸಾಗಾಟ – ಇಬ್ಬರು ಆರೋಪಿಗಳ ಬಂಧನ!
ಮಂಗಳೂರು: ತಿಮಿಂಗಿಲದ ವಾಂತಿ ಅಕ್ರಮವಾಗಿ ಸಾಗಿಸುತ್ತಿದ್ದ ಇಬ್ಬರ ಬಂಧನವಾಗಿದೆ. ಬೆಂಗಳೂರಿನಿಂದ ತಮಿಳುನಾಡಿಗೆ ಕಾರಿನಲ್ಲಿ ತಿಮಿಂಗಿಲದ ವಾಂತಿ (ಅಂಬರ್ ಗ್ರೀಸ್) ಅಕ್ರಮವಾಗಿ ಸಾಗಿಸುತ್ತಿದ್ದ ಇಬ್ಬರನ್ನು ಕೊಳ್ಳೇಗಾಲ ಪೊಲೀಸರು ಕೊಳ್ಳೇಗಾಲದ ಹೊಸ ಅಣಗಳ್ಳಿ ಸಮೀಪ ಬಂಧಿಸಿದ್ದಾರೆ. ಮೈಸೂರು ಆಶೋಕಪುರಂ ನಿವಾಸಿ ವಸಂತ ಕುಮಾರ್ (50), ರಾಮನಗರ ಜಿಲ್ಲೆಯ ಮೂಲದ ವೈರಮುಡಿ (40) ಬಂಧಿತ ಆರೋಪಿಗಳಾಗಿದ್ದಾರೆ. ಸಾಗಾಟದ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಪೊಲೀಸರು ವಿಚಾರಣೆಗಿಳಿದಿದ್ದು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರನ್ನು ತಡೆದು ಪರಿಶೀಲಿಸಿದಾಗ ಕಾರಿನ ಡಿಕ್ಕಿಯಲ್ಲಿ 4.386 ಕೆಜಿ ತಿಮಿಂಗಿಲ ವಾಂತಿ ಅಂದರೆ ಅಂಬರ್ ಗ್ರೀಸ್ ಪತ್ತೆಯಾಗಿದೆ. ಪೊಲೀಸರು ತಿಮಿಂಗಿಲ ವಾಂತಿಯನ್ನು ವಶಪಡಿಸಿಕೊಂಡಿದ್ದು ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ.