ಕರಾವಳಿ ಟಾಪ್ ನ್ಯೂಸ್
– ಕುಂದಾಪುರದಲ್ಲಿ ಹಾಡಹಗಲೇ ಕಳ್ಳತನ!
– ಉಡುಪಿ: ಆನ್ಲೈನ್ನಲ್ಲಿ ವ್ಯವಹಾರ: 86 ಲಕ್ಷ ರೂ. ವಂಚನೆ
– ಮಂಗಳೂರು: ಅಪಘಾತ, ಮಾನವೀಯತೆ ಮೆರೆದ ಮಹಿಳಾ ಪೊಲೀಸ್
– ಕಾಸರಗೋಡು: ಡಿವೈಎಫ್ಐ ಮಾಜಿ ಸದಸ್ಯೆ ಮೇಲೆ ವಂಚನೆ ದೂರು
– ಕಾರ್ಕಳ: ರಬ್ಬರ್ ಎಸ್ಟೇಟ್ಗಳಲ್ಲಿ ಶಂಕಿತ ಬಾಂಗ್ಲಾದೇಶಿಗರು?!
NAMMUR EXPRESS NEWS
ಕುಂದಾಪುರ: ನಗರದ ಹಂಗಳೂರು ಬ್ರಹ್ಮ ದೇವಸ್ಥಾನ ರಸ್ತೆಯ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ನಗದು ಸಹಿತ ಪರಾರಿಯಾದ ಘಟನೆ ಅ. 24 ಮಧ್ಯಾಹ್ನ ನಡೆದಿದೆ. ಇಲ್ಲಿನ ನಿವಾಸಿ ಜಗದೀಶ್ ಚಂದ್ರ ನಾಯರ್ ಎಂಬುವವರ ಮನೆಯಲ್ಲಿ ಕಳವು ನಡೆದಿದೆ. ಜಗದೀಶ್ ರಾವ್ ಅವರು ಕೆಲಸ ಮುಗಿಸಿಕೊಂಡು ಮಧ್ಯಾಹ್ನ ಊಟ ಮಾಡಿ ತಮ್ಮ ಕೆಲಸಕ್ಕೆ ತೆರಳಿದ್ದರು. ಸುಮಾರು 4 ಗಂಟೆಗೆ ಜಗದೀಶ್ ಪತ್ನಿ ಮಗಳನ್ನು ಶಾಲೆಯಿಂದ ಕರೆದುಕೊಂಡು ಮನೆಗೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ. ಹಗಲಲ್ಲಿಯೇ ಕಳ್ಳತನ ನಡೆದ ಬಗ್ಗೆ ಸುತ್ತಲಿನ ಜನರು ಆತಂಕಕ್ಕೊಳಗಾಗಿದ್ದಾರೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಕೆ ಕೈಗೆತ್ತಿಕೊಂಡಿದ್ದಾರೆ.
* ಉಡುಪಿ: ಆನ್ಲೈನ್ನಲ್ಲಿ ವ್ಯವಹಾರ ನಡೆಸಿ 86 ಲಕ್ಷ ರೂ. ವಂಚನೆ!!
ಉಡುಪಿ: ಷೇರು ಮಾರುಕಟ್ಟೆಯಲ್ಲಿ ಅಧಿಕ ಲಾಭಾಂಶ ನೀಡುವ ಭರವಸೆ ನೀಡಿ, ಆನ್ಲೈನ್ನಲ್ಲೇ ವ್ಯವಹಾರ ನಡೆಸಿ 86,80,000ರೂ.ಗಳನ್ನು ಅಪರಿಚಿತರೊಬ್ಬರು ವಂಚಿಸಿರುವುದಾಗಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಉಪ್ಪುಂದ ಗ್ರಾಮದ ಭಾಸ್ಕರ್ (40) ಅವರು ಶೇರು ಮಾರುಕಟ್ಟೆಯ ಬಗ್ಗೆ ಆನ್ಲೈನ್ನಲ್ಲಿ ಸರ್ಚ್ ಮಾಡುತಿದ್ದಾಗ ಯಾರೋ ಅಪರಿಚಿತರು ವಾಟ್ಸ್ಅಪ್ ಗ್ರೂಪ್ಗೆ ತನ್ನನ್ನು ಸೇರಿಸಿದ್ದು, ಅವರು ಕಳುಹಿಸಿದ ಲಿಂಕ್ ಕ್ಲಿಕ್ ಮಾಡಿದಾಗ ವಿವಿಧ ಗ್ರೂಪ್ಗೆ ಸೇರಿಸಲ್ಪಟ್ಟು ಶೇರು ಮಾರುಕಟ್ಟೆಯಲ್ಲಿ ಅಧಿಕ ಲಾಭಾಂಶದ ನಂಬಿಕೆ ಹುಟ್ಟಿಸಿ ಹಣ ಹೂಡಿಕೆಗೆ ಪ್ರೇರೇಪಿಸಿದ್ದು, ಅದರಂತೆ ಅವರು ಸೂಚಿಸಿದ ವಿವಿಧ ಖಾತೆಗಳಿಗೆ 86 ಲಕ್ಷ ರೂ. ಹಣ ಡಿಪಾಸಿಟ್ ಮಾಡಿದ್ದು, ನಂಬಿಕೆ ದ್ರೋಹ ಮಾಡಿರುವುದಾಗಿ ಭಾಸ್ಕರ್ ದೂರಿನಲ್ಲಿ ತಿಳಿಸಿದ್ದಾರೆ.
* ಮಂಗಳೂರು: ಸ್ಕೂಟರ್ನಲ್ಲೇ ಆಸ್ಪತ್ರೆ ದಾಖಲಿಸಿದ ಮಹಿಳಾ ಪೊಲೀಸ್!
ಮಂಗಳೂರು: ಅ. 23ಕ್ಕೆ ನಸುಕಿನ ಜಾವ ನಗರದ ಕೆಪಿಟಿ ಬಟಿ ಬಳಿ ನಡೆದ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯನ್ನು ಮಹಿಳಾ ಪೊಲೀಸ್ ಸಿಬ್ಬಂದಿ ತನ್ನ ಸ್ಕೂಟರ್ನಲ್ಲೇ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.
ಕದ್ರಿ ಪೊಲೀಸ್ ಠಾಣೆಯಲ್ಲಿ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮುರ್ಶಿದಾ ಬಾನು ಮಹಿಳಾ ಪೊಲೀಸ್ ಸಿಬ್ಬಂದಿ. ಅವರು ಮುಂಜಾನೆ ನಾಲ್ಕು ಗಂಟೆಯ ವೇಳೆಗೆ ಕರ್ತವ್ಯಕ್ಕೆ ತೆರಳುತ್ತಿದ್ದಾಗ ಕೆಪಿಟಿ ಬಳಿಯ ವ್ಯಾಸನಗರ ತಿರುವಿನಲ್ಲಿ ರಸ್ತೆ ಬದಿ ನಿಂತಿದ್ದ ಟ್ರಕ್ಗೆ ಕೋಳಿ ಸಾಗಾಟದ ಪಿಕಪ್ ವಾಹನ ಢಿಕ್ಕಿಯಾಗಿದ್ದು, ಪರಿಣಾಮ ಪಿಕಪ್ ವಾಹನದ ಕ್ಲೀನರ್ ತೀವ್ರ ಗಾಯಗೊಂಡಿದ್ದರು. ಘಟನೆಯಲ್ಲಿ ಚಾಲಕನಿಗೂ ಪೆಟ್ಟಾಗಿದ್ದು, ಏನೂ ಮಾಡಲಾಗದ ಸ್ಥಿತಿಯಲ್ಲಿದ್ದರು.
ಈ ವೇಳೆ ಸ್ಕೂಟರ್ನಲ್ಲಿ ಠಾಣೆಗೆ ತೆರಳುತ್ತಿದ್ದ ಮುರ್ಶಿದಾ ಬಾನು ಅವರು ಚಾಲಕನ ಬೊಬ್ಬೆ ಕೇಳಿ ಹತ್ತಿರ ಹೋಗಿದ್ದು, ಗಾಯಗೊಂಡಿದ್ದ ಆತನನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ಆಟೋ ಸಿಗದ ಕಾರಣ ತನ್ನ ಸ್ಕೂಟರ್ನಲ್ಲಿಯೇ ಒಂದು ಕೈಯಲ್ಲಿ ಆತನನ್ನು ಹಿಡಿದುಕೊಂಡು ಆಸ್ಪತ್ರೆಗೆ ತಲುಪಿದ್ದಾರೆ. ಅಲ್ಲಿ ಉರ್ವ ಠಾಣೆಯ ಪೊಲೀಸರು ಇದ್ದುದರಿಂದ ಅವರ ಸಹಾಯದಿಂದ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
* ಕಾಸರಗೋಡು: ಡಿವೈಎಫ್ಐ ಮಾಜಿ ಸದಸ್ಯೆ ಮೇಲೆ ದೂರು!
ಕಾಸರಗೋಡು: ಕೇಂದ್ರ-ರಾಜ್ಯ ಸರಕಾರಿ ಸಂಸ್ಥೆಗಳಲ್ಲಿ ಉದ್ಯೋಗ ದೊರಕಿಸಿಕೊಡುವುದಾಗಿ ನಂಬಿಸಿ ಹಲವರಿಂದ ಕೋಟ್ಯಂತರ ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಶೇಣಿ ಬಲ್ತಕಲ್ಲು ನಿವಾಸಿ ಸಚಿತಾ ರೈ (27) ವಿರುದ್ಧ ಬದಿಯಡ್ಕ ಪೊಲೀಸರು ಇನ್ನೊಂದು ಕೇಸು ದಾಖಲಿಸಿಕೊಂಡಿದ್ದಾರೆ.
ಪಳ್ಳತ್ತಡ್ಕ ಉಕ್ಕಿನಡ್ಕ ಬಳ್ಳಂಬೆಟ್ಟು ನಿವಾಸಿ ಶ್ವೇತಾ ಕುಮಾರಿ ನೀಡಿದ ದೂರಿನಂತೆ ಈ ಕೇಸು ದಾಖಲಿಸಲಾಗಿದೆ. ಕೇಂದ್ರೀಯ ವಿದ್ಯಾಲಯದಲ್ಲಿ ಉದ್ಯೋಗ ದೊರಕಿಸಿಕೊಡುವುದಾಗಿ ಭರವಸೆ ನೀಡಿ ಸೆ. 25ರಂದು ಎರಡೂವರೆ ಲಕ್ಷ ರೂ. ಪಡೆದು ವಂಚಿಸಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ. ಇದರೊಂದಿಗೆ ಸಚಿತಾ ರೈ ವಿರುದ್ಧ ದಾಖಲಾದ ಕೇಸುಗಳ ಸಂಖ್ಯೆ 8 ಕ್ಕೇರಿದೆ.ಡಿವೈಎಫ್ಐ ಮಾಜಿ ಜಿಲ್ಲಾ ಸಮಿತಿ ಸದಸ್ಯೆಯಾಗಿದ್ದ ಸಚಿತಾ ರೈ ಬಾಡೂರು ಎಎಲ್ಪಿ ಶಾಲೆ ಅಧ್ಯಾಪಕಿಯಾಗಿದ್ದು, ವಂಚನೆ ಪ್ರಕರಣದಲ್ಲಿ ಕೇಸು ದಾಖಲಿಸಿಕೊಳ್ಳುವುದರೊಂದಿಗೆ ಈಕೆ ತಲೆಮರೆಸಿಕೊಂಡಿದ್ದಾಳೆ. ಮೊದಲಿಗೆ ಎರ್ನಾಕುಳಂನಲ್ಲಿ ತಲೆಮರೆಸಿಕೊಂಡಿದ್ದ ಸಚಿತಾ, ಪ್ರಸ್ತುತ ಉಡುಪಿಯ ರಹಸ್ಯ ಕೇಂದ್ರವೊಂದರಲ್ಲಿ ಇರುವುದಾಗಿ ಪೊಲೀಸರಿಗೆ ಸುಳಿವು ದೊರೆತಿದೆ. ತಲೆಮರೆಸಿಕೊಂಡಿರುವ ಸಚಿತಾ ರೈಯನ್ನು ಪತ್ತೆ ಹಚ್ಚಲು ಕಾಸರಗೋಡು ಡಿವೈಎಸ್ಪಿ ಸಿ.ಕೆ. ಸುನಿಲ್ ಕುಮಾರ್ ನೇತೃತ್ವದಲ್ಲಿ ಪ್ರತ್ಯೇಕ ತನಿಖಾ ತಂಡವನ್ನು ರೂಪಿಸಲಾಗಿದೆ. ಈ ತಂಡದಲ್ಲಿ ಕುಂಬಳೆ ಠಾಣೆ ಇನ್ಸ್ಪೆಕ್ಟರ್, ಮಂಜೇಶ್ವರ, ಬದಿಯಡ್ಕ ಠಾಣೆಯ ಎಸ್.ಐ., ಸಿಬ್ಬಂದಿ ಇದ್ದಾರೆ.
* ಕಾರ್ಕಳ: ರಬ್ಬರ್ ಎಸ್ಟೇಟ್ಗಳು ಶಂಕಿತ ಬಾಂಗ್ಲಾದೇಶಿಗರ ಭದ್ರ ನೆಲೆ
ಕಾರ್ಕಳ: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಪ್ರಜೆಗಳನ್ನು ಪತ್ತೆ ಹಚ್ಚುತ್ತಿರುವ ಕಾರ್ಯ ಚುರುಕಾಗಿದೆ. ಈ ನಡುವೆ ಉಭಯ ಜಿಲ್ಲೆಗಳ ವಿವಿಧ ಕ್ಷೇತ್ರಗಳಲ್ಲಿ ಇನ್ನಷ್ಟು ಮಂದಿ ಶಂಕಿತ ಬಾಂಗ್ಲಾದೇಶಿಯರು ವಾಸವಿರುವ ಶಂಕೆ ವ್ಯಕ್ತವಾಗಿದೆ. ಸಾವಿರಾರು ಬಾಂಗ್ಲಾ ಪ್ರಜೆಗಳು ಅಕ್ರಮವಾಗಿ ಉಭಯ ಜಿಲ್ಲೆಗಳ ರಬ್ಬರ್ ತೋಟಗಳಲ್ಲಿ ಉಳಿದುಕೊಂಡಿರುವ ಸಾಧ್ಯತೆಯಿದೆ. ಅದರಲ್ಲೂ ಕೊಡಗು, ದ.ಕ. ಗಡಿಭಾಗದ ಕಡಮಕಲ್ಲು, ಕೂಜುಮಲೆ ಸಹಿತ ವಿವಿಧ ಭಾಗಗಳ ರಬ್ಬರ್ ಎಸ್ಟೇಟ್ನಲ್ಲಿ ನೂರಾರು ಮಂದಿ ವಲಸೆ ಕಾರ್ಮಿಕರಿದ್ದು, ಇವರಲ್ಲಿ ಬಾಂಗ್ಲಾದೇಶಿಯರೂ ಇರುವ ಸಾಧ್ಯತೆ ಎದೆ ಇನ್ನಲಾಗಿದೆ.ಕೊಡಗು ಮತ್ತು ದ.ಕ. ಜಿಲ್ಲೆಯ ಗಡಿಭಾಗದ ಕಡಮಕಲ್ಲು-ಕೂಜುಮಲೆ ಎಸ್ಟೇಟ್ಗಳನ್ನು ಕೇರಳದ ಕಂಪೆನಿಗಳು ನಡೆಸುತ್ತಿವೆ. ಇಲ್ಲಿನ ರಬ್ಬರ್ ತೋಟಗಳಲ್ಲಿ ಅಸ್ಸಾಂ, ಛತ್ತಿಸ್ಗಡ, ಒಡಿಶಾ, ಝಾರ್ಖಂಡ್ ರಾಜ್ಯಗಳಿಗೆ ಸೇರಿದ 650ಕ್ಕೂ ಅಧಿಕ ಕಾರ್ಮಿಕರಿದ್ದಾರೆ. 1902ರಲ್ಲಿ ಅರಣ್ಯ ಇಲಾಖೆಯಿಂದ 99 ವರ್ಷಗಳ ಲೀಸಿಗೆ ಪಡೆಯಲಾಗಿತ್ತು. ಇಲ್ಲಿನ ಕಾರ್ಮಿಕರ ಪೈಕಿ 200ರಷ್ಟು ಮಕ್ಕಳೇ ಆಗಿದ್ದಾರೆ. ಇವರು ಶಿಕ್ಷಣ ವಂಚಿತರಾಗಿದ್ದಾರೆ ಎನ್ನಲಾಗಿದೆ.