ಕರಾವಳಿ ನ್ಯೂಸ್
ಸುಬ್ರಹ್ಮಣ್ಯ: ಮರ ಬಿದ್ದು, ಭಾರೀ ಅನಾಹುತ: ತಪ್ಪಿದ ಘಟನೆ
– ಬೆಳ್ತಂಗಡಿ:ವಿದ್ಯಾರ್ಥಿಯ ಹನಿಟ್ರ್ಯಾಪ್ ಯತ್ನಿಸಿದ ಮಹಿಳೆ
– ಪುತ್ತೂರು: ಮಾದಕ ವಸ್ತು ಸಾಗಾಟ ಪ್ರಕರಣ; ಆರೋಪಿಗೆ ಜಾಮೀನು
ಸುಬ್ರಹ್ಮಣ್ಯ/ಸುಳ್ಯ : ಸುಳ್ಯ ಹಾಗೂ ಸುಬ್ರಹ್ಮಣ್ಯ ಪರಿಸರದಲ್ಲಿ ನ. 4 ರಂದು ಅಪರಾಹ್ನ ಉತ್ತಮ ಮಳೆಯಾಗಿದೆ.
ಕುಕ್ಕೆ ಸುಬ್ರಹ್ಮಣ್ಯ ಪರಿಸರದ ಕುಮಾರಪರ್ವತ ತಪ್ಪಲು ಹಾಗೂ ಕುಕ್ಕೆ ಸುಬ್ರಹ್ಮಣ್ಯ ಪರಿಸದಲ್ಲಿ ಸಂಜೆ ಒಂದೂವರೆ ತಾಸು ಮಳೆಯಾಗಿದ್ದು, ದರ್ಪಣ ತೀರ್ಥ ನದಿಯಲ್ಲಿ ಭಾರೀ ನೀರು ಹರಿದು ಬಂತು. ಸುಬ್ರಹ್ಮಣ್ಯ, ಕೊಲ್ಲಮೊಗ್ರು, ಬಿಳಿನೆಲೆ, ಹರಿಹರ ಪಲ್ಲತ್ತಡ್ಕ, ಬಳ್ಪ, ಎಡಮಂಗಲ, ಸುಳ್ಯದಲ್ಲೂ ಸಂಜೆ ಮಳೆಯಾಗಿದೆ.
ಸುಳ್ಯ ತಾಲೂಕಿನ ಮರ್ಕಂಜದ ಕೊರ್ಟಡ್ಕದಲ್ಲಿ ರಸ್ತೆಗೆ ಮರ ಬಿದ್ದು ಭಾರೀ ಅನಾಹುತ ತಪ್ಪಿದ ಘಟನೆ ಸಂಭವಿಸಿದೆ. ಕೆಲವು ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ.
ಬೆಳ್ತಂಗಡಿ: ಹದಿ ಹರೆಯದ ವಿದ್ಯಾರ್ಥಿಯ ಹನಿಟ್ರ್ಯಾಪ್’ಗೆ ಯತ್ನಿಸಿದ ಮಹಿಳೆ.!!
ಬೆಳ್ತಂಗಡಿ : ಫೇಸ್ಬುಕ್ ಫ್ರೆಂಡ್ಸ್ ಬಳಗದಲ್ಲಿದ್ದ ಮಹಿಳೆಯೋರ್ವಳು ಹದಿ ಹರೆಯದ ವಿದ್ಯಾರ್ಥಿಯೋರ್ವನನ್ನು ಹನಿಟ್ರ್ಯಾಪ್ ಮಾಡಿ ಹಣಕ್ಕಾಗಿ ಬ್ಲ್ಯಾಕ್ಮೇಲ್ ಮಾಡಲೆತ್ನಿಸಿದ ಪ್ರಕರಣ ವರದಿಯಾಗಿದ್ದು, ಕಂಗೆಟ್ಟ ವಿದ್ಯಾರ್ಥಿಯನ್ನು ಪೊಲೀಸ್ ಇಲಾಖೆ ಸಕಾಲಿಕ ಕ್ರಮದಿಂದ ರಕ್ಷಿಸಿದ ಘಟನೆ ವರದಿಯಾಗಿದೆ.
ಈ ವಿದ್ಯಮಾನದಿಂದ ಆತಂಕಕ್ಕೊಳಗಾದ ವಿದ್ಯಾರ್ಥಿಯು ಈ ವಿಚಾರವನ್ನು ಮಾಧ್ಯಮ ಪ್ರತಿನಿಧಿಯೋರ್ವರ ಗಮನಕ್ಕೆ ತಂದಿದ್ದು, ಅವರು ಪ್ರಕರಣದ ಬಗ್ಗೆ ಪೊಲೀಸ್ ಇಲಾಖೆಯ ಹಾಗೂ ಸೈಬರ್ ಕ್ರೈಮ್ ವಿಭಾಗಕ್ಕೆ ಮಾಹಿತಿಯನ್ನು ತಕ್ಷಣವೇ ರವಾನಿಸಲು ಸಲಹೆ ನೀಡಿದರು. ಈ ಮಧ್ಯೆ ಸಂಬಂಧಪಟ್ಟ ಖಾತೆಗಳನ್ನು ಬ್ಲಾಕ್ ಮಾಡುವ ಸಲಹೆಗಳನ್ನು ವಿದ್ಯಾರ್ಥಿಗೆ ಪೊಲೀಸ್ ಅಧಿಕಾರಿಗಳು ನೀಡಿದರು. ಪೊಲೀಸ್ ಇಲಾಖೆಯ ಗಮನಕ್ಕೆ ತಮ್ಮ ಕೃತ್ಯದ ಬಗ್ಗೆ ಮಾಹಿತಿ ಲಭಿಸಿದೆ ಎಂಬ ಸುಳಿವು ಸಿಕ್ಕಾಕ್ಷಣ ವಿದ್ಯಾರ್ಥಿಯನ್ನು ಬೆದರಿಸುವ ಕಾರ್ಯದಿಂದ ವಿಮುಖವಾದ ತಂಡ ಬಳಸಿದ ಮೂರು ಸಂಖ್ಯೆಯನ್ನು ನಿಷ್ಕ್ರಿಯಗೊಳಿಸಿದೆ. ಅಲ್ಲದೆ ಬೆದರಿಕೆಗೆ ತುತ್ತಾದ ವಿದ್ಯಾರ್ಥಿಯನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬ್ಲಾಕ್ ಮಾಡಿದೆ. ತಮಗೆ ತಿಳಿಯದಂತೆ ವೀಡಿಯೊ ಕರೆ ಸ್ವೀಕರಿಸಿದ ಮಾತ್ರಕ್ಕೆ ತಮ್ಮ ಅಶ್ಲೀಲ ವೀಡಿಯೊವೊಂದು ಸಿದ್ಧವಾಗಿ ಅದನ್ನು ತಮ್ಮ ಮಾನಹಾನಿಗೆ ಬಳಸುವ ಬೆದರಿಕೆಯೊಡ್ಡುವ, ಆ ಮೂಲಕ ಹಣಕ್ಕಾಗಿ ಪೀಡಿಸುವ ಜಾಲಗಳು ಸಕ್ರೀಯವಾಗಿದ್ದು, ಈ ಜಾಲಕ್ಕೆ ಸಿಲುಕಿದರೂ ಭಯಪಡದೆ ಪೊಲೀಸ್ ಇಲಾಖೆಯ ಸೈಬರ್ ಕ್ರೈಂ ಸಹಾಯ ಸಂಖ್ಯೆ 1930ಕ್ಕೆ ಸಂಪರ್ಕಿಸಿ ಸಹಾಯ ಯಾಚಿಸಬಹುದೆಂದು ಪೊಲೀಸರು ತಿಳಿಸಿದ್ದಾರೆ.
ಪುತ್ತೂರು: ಮಾದಕ ವಸ್ತು ಎಂಡಿಎಂಎ ಸಾಗಾಟ ಪ್ರಕರಣ; ಆರೋಪಿಗೆ ಜಾಮೀನು
ಪುತ್ತೂರು: ರಿಕ್ಷಾವೊಂದರಲ್ಲಿ ನಿಷೇಧಿತ ಮಾದಕ ವಸ್ತು ಎಂಡಿಎಂಎ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿ ಸಿನಾನ್ಗೆ ಪುತ್ತೂರಿನ ಐದನೇ ಹೆಚ್ಚುವರಿ ಸತ್ರ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ನೆಕ್ಕಿಲಾಡಿ ಎಂಬಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಬಂಟ್ವಾಳ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ ರಿಕ್ಷಾದಲ್ಲಿ 18 ಸಾವಿರ ರೂ. ಮೌಲ್ಯದ ನಿಷೇಧಿತ ಎಂಡಿ ಎಂಎಯ ಮಾದಕ ವಸ್ತು ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿತ್ತು. ರಿಕ್ಷಾದಲ್ಲಿದ್ದ ಇಬ್ಬರು ಆರೋಪಿಗಳು ಮಾದಕ ಪದಾರ್ಥವನ್ನು ಸಿನಾನ್ ಎಂಬಾಂತ ನೀಡಿರುವುದಾಗಿ ಹೇಳಿಕೆ ನೀಡಿದ್ದರು. ತಲೆಮರೆಸಿಕೊಂಡಿದ್ದ ಆರೋಪಿ ಸಿನಾನ್ ನನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿನಾನ್ಗೆ ಪುತ್ತೂರು ಜಿಲ್ಲಾ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.