ಇನ್ಮುಂದೆ ಬೈಕಲ್ಲಿ ಮಕ್ಕಳಿಗೆ ಸೇಫ್ಟಿ ಬೆಲ್ಟ್ ಕಡ್ಡಾಯ!
– ವಾಹನ ಸವಾರರ ಸುರಕ್ಷತೆಗಾಗಿ ಸರ್ಕಾರದ ನಿಯಮ
– ನಿಯಮ ಉಲ್ಲಂಘಿಸಿದ್ರೆ ಬೀಳುತ್ತದೆ ದಂಡ: ಏನೇನು ನಿಯಮ?
NAMMUR EXPRESS NEWS
ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬೈಕ್ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ವಾಹನ ಸವಾರರ ಸುರಕ್ಷತೆಗಾಗಿ ಸರ್ಕಾರ ಹಾಗೂ ಸಾರಿಗೆ ಇಲಾಖೆ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇತ್ತೀಚೆಗೆ 4 ವರ್ಷದ ಒಳಗಿನ ಮಕ್ಕಳನ್ನು ಶಾಲೆ ಅಥವಾ ಇತರೆ ಕೆಲಸಗಳಿಗೆ ಹಿಂದೆ, ಮುಂದೆ ಕೂರಿಸಿಕೊಂಡು ಬೈಕ್ ಚಲಾವಣೆ ಮಾಡುವ ವಾಹನ ಸವಾರರಿಗೆ ಬಿಸಿ ಮುಟ್ಟಿಸಲು ಸಾರಿಗೆ ಇಲಾಖೆ ಮುಂದಾಗಿದೆ. 4 ವರ್ಷ ಒಳಗಿನ ಮಕ್ಕಳನ್ನು ಬೈಕ್ಗಳಲ್ಲಿ ಕರೆದುಕೊಂಡು ಹೋಗುವಾಗ ಶಿಶು ಕವಚ ಹಾಕದಿದ್ದರೆ ಕೇಸ್ ಹಾಗೂ ದಂಡವನ್ನು ಸಾರಿಗೆ ಇಲಾಖೆ ಹಾಕುತ್ತಿದೆ. ಮಕ್ಕಳಿಗೆ ಸೇಫ್ಟಿ ಬೆಲ್ಟ್ ಹಾಕದ ಪೋಷಕರಿಗೆ 1,000 ರೂ. ದಂಡ ಹಾಕುತ್ತಿದೆ. ಕೇಂದ್ರ ಮೋಟಾರು ವಾಹನ ಕಾಯ್ದೆ 2019ರ ಅನ್ವಯ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುವ ಮಕ್ಕಳು ಸೇಫ್ಟಿ ಧಾರಣೆ ಮಾಡುವುದು ಕಡ್ಡಾಯ. ಈ ಬಗ್ಗೆ ಸಾರಿಗೆ ಇಲಾಖೆ ಎಲ್ಲಾ ಜಿಲ್ಲಾ ಕೇಂದ್ರ ಹಾಗೂ ಆರ್ಟಿಒಗಳಲ್ಲಿ ಜಾಗೃತಿ ಮೂಡಿಸಿದ್ದಾರೆ. ಈ ಹಿಂದೆಯೂ ಈ ಕಾಯ್ದೆ ಜಾರಿಯಲ್ಲಿತ್ತು. ಆದರೆ ಸಮರ್ಪಕವಾಗಿ ಜಾರಿಯಾಗದ ಹಿನ್ನೆಲೆ, ಹೈಕೋರ್ಟ್ ಗೆ ಪಿಐಎಲ್ ಸಲ್ಲಿಕೆಯಾದಾಗ ಕೇಂದ್ರ ಸರ್ಕಾರ ಅಧಿಸೂಚನೆಯಂತೆ ರಾಜ್ಯದಲ್ಲಿ ಈ ಯೋಜನೆ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸಾರಿಗೆ ಇಲಾಖೆಗೆ ಸೂಚಿಸಿದೆ.