ಕ್ರಷರ್ ಕಲ್ಲುಪುಡಿ ಘಟಕದ ವಿರುದ್ಧ ಸಿಡಿದೆದ್ದ ಗ್ರಾಮಸ್ಥರು!
– ಬಿದರಗೋಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಘಟನೆ
– ತೀರ್ಥಹಳ್ಳಿ ತಾಲ್ಲೂಕು ಕಚೇರಿಯಲ್ಲಿ ಗ್ರಾಮಸ್ಥರ ಪ್ರತಿಭಟನೆ
– ಪ್ರಭಾವಿ ವ್ಯಕ್ತಿಗಳ ಕೈವಾಡದಿಂದ ಅಕ್ರಮ: ಗ್ರಾಮಸ್ಥರ ಶಂಕೆ
– ಪಶ್ಚಿಮ ಘಟ್ಟದ ತಪ್ಪಲಲ್ಲಿ ಮತ್ತೆ ಕಲ್ಲು ಗಣಿಗಾರಿಕೆ?
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕು, ಆಗುಂಬೆ ಹೋಬಳಿ, ಬಿದರಗೋಡು ಗ್ರಾಮದ ಸ.ನಂ.73ರಲ್ಲಿನ ಪರಿಭಾವಿತ ಅರಣ್ಯ ಪ್ರದೇಶದಲ್ಲಿ ಕಲ್ಲುಗಣಿ ಗುತ್ತಿಗೆ ಮತ್ತು ಸ್ಟೋನ್ ಕ್ರಷರ್ ಕಲ್ಲುಪುಡಿ ಘಟಕಕ್ಕೆ ಮಂಜೂರು ಮಾಡುವ ವಿಚಾರದಲ್ಲಿ ಗ್ರಾಮಸ್ಥರು ಇದೀಗ ಹೋರಾಟದ ಹಾದಿ ಹಿಡಿದಿದ್ದಾರೆ. ನ.6ರಂದು ತಾಲ್ಲೂಕು ಕಚೇರಿ ಮುಂದೆ ಗ್ರಾಮಸ್ಥರು ಪ್ರತಿಭಟನೆಯ ಮೂಲಕ ಮನವಿ ನೀಡಿ ಈ ಗಣಿ ಗಾರಿಕೆ ಮತ್ತು ಕೃಷರ್ ನಮ್ಮ ಗ್ರಾಮಕ್ಕೆ ಬೇಡ ಎಂದು ಪಟ್ಟು ಹಿಡಿದ್ದಾರೆ.
ಉದ್ಯಾನವನ ಮತ್ತು ಆಗುಂಬೆ ಮಳೆ ಕಾಡು ಪ್ರದೇಶಕ್ಕೆ ಹೊಂದಿಕೊಂಡಿದ್ದು, ಪಶ್ಚಿಮ ಘಟ್ಟ ಪ್ರದೇಶದ ಪಕ್ಕದಲ್ಲಿದ್ದು, ಜನರ ಜೀವನ ಜೊತೆಗೆ ಜೀವ ವೈವಿಧ್ಯತೆಗಳಿಗೆ ತೊಂದರೆ ಉಂಟಾಗುತ್ತಿದೆ.
ಈ ಹಿಂದೆ ಕೂಡ ಬಿದರಗೋಡು ಗ್ರಾಮದ ಸ.ನಂ 73 ರಲ್ಲಿ ಕಾನೂನು ಉಲ್ಲಂಘಿಸಿ ಪರವಾನಗಿ ನವೀಕರಣಗೊಳ್ಳದಿದ್ದರೂ ಹಲವಾರು ವರ್ಷಗಳ ಕಾಲ ಕಲ್ಲು ಗಣಿಗಾರಿಕೆ ನಡೆಸಿ, ಕೋಟ್ಯಾಂತರ ರೂಪಾಯಿಗಳ ಸರ್ಕಾರಿ ಸಂಪತ್ತನ್ನು ಲೂಟಿ ಮಾಡಲಾಗಿದೆ.ಇಲಾಖೆಯ ಮಾರ್ಗಸೂಚಿಗಳನ್ನು ಕಡೆಗಣಿಸಿದ ಪರಿಣಾಮವಾಗಿ ಅರಣ್ಯನಾಶ, ಕಲುಷಿತ ವಾತಾವರಣ, ಮನೆಗಳಿಗೆ ಹಾನಿ ಕೃಷಿ ಭೂಮಿಗೆ ಹಾಗೂ ಕುಡಿಯುವ ನೀರಿನ ತೊಂದರೆ ಸೃಷ್ಟಿ ಮಾಡಲಾಗಿದೆ.ನಿಯೋಜಿತ ಕ್ರಷರ್( ಕಲ್ಲು ಪುಡಿಮಾಡುವ ಘಟಕ) ಮಾಡಲು ನಿರ್ಧರಿಸಿರುವ ಪ್ರದೇಶವು ಜನವಸತಿ ಪ್ರದೇಶದಿಂದ ಕೇವಲ 100 ಮೀಟರ್ ಅಂತರದಲ್ಲಿದೆ. ರಾಜ್ಯ ಹೆದ್ದಾರಿಯಿಂದ 500 ಮೀಟರ್ ಅಂತರದಲ್ಲಿದೆ. ಈ ಪ್ರದೇಶವು ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯ ಗಡಿ ಭಾಗವಾಗಿದ್ದು ಶೃಂಗೇರಿ ತಾಲ್ಲೂಕಿನ ಅಸನಬಾಳು ಗ್ರಾಮದ ಸ.ನಂ 117ರ ಸೆಕ್ಷನ್(4) ರ ನೋಟಿಫೈಡ್ ಪ್ರದೇಶದಲ್ಲಿ ಸೇರಿಕೊಂಡಿದೆ. ಇದರಿಂದ ತೊಂದರೆ ಅನುಭವಿಸುತ್ತಿರುವ ಜನ ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಳ್ಳುತೇವೆ ಎಂದು ಅಲಳನ್ನು ತೋಡಿಕೊಂಡಿದ್ದಾರೆ.
ಸದರಿ ಕ್ರಷರ್( ಕಲ್ಲು ಪುಡಿಮಾಡುವ ಘಟಕ)ದ ಶೃಂಗೇರಿ ತಾಲ್ಲೂಕು ಮತ್ತು ತೀರ್ಥಹಳ್ಳಿ ಗಡಿಭಾಗದಲಿರುವುದರಿಂದ ಶೃಂಗೇರಿ ಮತ್ತು ತೀರ್ಥಹಳ್ಳಿ ತಾಲ್ಲೂಕಿನ ನಾಗರೀಕರಿಗೆ ಅತೀವ ತೊಂದರೆಯಾಗುತ್ತಿದ್ದು ತಕ್ಷಣವೇ ಎಚ್ಚೆತ್ತುಕೊಂಡು ಯಾವುದೇ ಪರವಾನಗಿ ಮಂಜೂರು ಮಾಡಬಾರದಾಗಿಯೂ, ಮಾಡಿದ್ದಲ್ಲಿ ಗ್ರಾಮಸ್ಥರಾದ ನಾವು ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುವುದೆಂದು ಮನವಿ ಮೂಲಕ ತಿಳಿಸಿದ್ದಾರೆ.ಗ್ರಾಮಸ್ಥರ ಹಿತ ಮತ್ತು ನೆಮ್ಮದಿಗಾಗಿ, ಜಾನುವಾರುಗಳ ಮತ್ತು ಅರಣ್ಯ ರಕ್ಷಣೆಯ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಮುಂದೆ ಆಗಬಹುದಾದ ಅನಾಹುತಗಳಿಂದ ಗ್ರಾಮಸ್ಥರನ್ನು ಕಾಪಾಡಿ ಎಂದು ಬಿದರಗೋಡು, ಬಾಳೆಹಳ್ಳಿ, ಹಸನಬಾಳು ಗ್ರಾಮಸ್ಥರು ಕೋರಿದ್ದಾರೆ. ಮನವಿ ಸ್ವೀಕರಿಸಿ ತಹಸೀಲ್ದಾರರು ಸಮಸ್ಯೆಗೆ ಪರಿಹಾರ ಒದಗಿಸಿ ಕೊಡುವುದಾಗಿ ಭರವಸೆ ನೀಡಿದ್ದು, ಒಂದು ವೇಳೆ ನಿರ್ಲಕ್ಷಿಸಿದಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.