ಹೊಸ ವರ್ಷದಂದೇ ತೀರ್ಥಹಳ್ಳಿ ರಾಮೇಶ್ವರನ ತೆಪ್ಪೋತ್ಸವ
– ರಾಜ್ಯದ ವಿವಿಧ ಭಾಗದಿಂದ ಲಕ್ಷ ಲಕ್ಷ ಜನ ಭೇಟಿ
– ಡಿ. 30ಕ್ಕೆ ಸ್ನಾನ, ಡಿ.31ಕ್ಕೆ ರಥೋತ್ಸವ, ಜ.1ಕ್ಕೆ ತೆಪ್ಪೋತ್ಸವ
ಮಲೆನಾಡಿಗರ ಹೆಮ್ಮೆಯ ಪ್ರತೀಕವಾಗಿರುವ ತೀರ್ಥಹಳ್ಳಿ ರಾಮೇಶ್ವರ ದೇವರ ತೆಪ್ಪೋತ್ಸವ ಈ ಬಾರಿ ಹೊಸ ವರ್ಷದಂದು ಆಗಮಿಸುತ್ತಿದೆ. ಮಲೆನಾಡ ತೀರ್ಥಹಳ್ಳಿ ರಾಮೇಶ್ವರ ದೇವರ ಜಾತ್ರೆ ಎಂದರೆ ಎಲ್ಲಿಲ್ಲದ ಸಂಭ್ರಮ ಮನೆ ಮಾಡಲಿದ್ದು, ಮಲೆನಾಡಿಗರು ವಿಶೇಷವಾಗಿ ಸಜ್ಜುಗೊಳ್ಳುತ್ತಾರೆ. ರಾಜ್ಯದ ವಿವಿಧ ಭಾಗದಿಂದ ಸಾವಿರಾರು ಜನ ಆಗಮಿಸುತ್ತಾರೆ.
ಪರಶುರಾಮನಿಗೆ ದೋಷ ಮುಕ್ತಿ ಕೊಟ್ಟ ತೀರ್ಥಹಳ್ಳಿ
ಮಾತೃ ಹತ್ಯೆ ಪಾಪ ಪರಿಹಾರ ದೋಷದಿಂದ,ಮುಕ್ತಿ ಕಂಡ ಸಂತಸದಲ್ಲಿ ಪರಶುರಾಮನಿಂದ ತೀರ್ಥಹಳ್ಳಿ ತುಂಗಾ ನದಿ ತೀರದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಶ್ರೀರಾಮೇಶ್ವರ ದೇವಸ್ಥಾನ,ಮಲೆನಾಡಿನ ಭಾಗದ ಜನರಿಗೆ ಆರಾಧ್ಯ ದೈವವಾಗಿದೆ. ನದಿಯ ದಡದಲ್ಲಿ ಕಲ್ಲಿನಿಂದ ಕಟ್ಟಲ್ಪಟ್ಟ ರಾಮೇಶ್ವರ ದೇವಾಲಯವಿದೆ.
ಎಳ್ಳಮಾವಾಸ್ಯೆ ಜಾತ್ರೆ ಯಾವತ್ತು ಏನೇನು?
ಕೊಡಲಿಯನ್ನು ತೊಳೆದ ದಿನ ಮಾರ್ಗಶಿರ ಅಮಾವಾಸ್ಯೆಯಾದ ಕಾರಣ ಎಳ್ಳಮಾವಾಸ್ಯೆ ಎಂದು ಪ್ರತಿವರ್ಷ ಆಚರಿಸಲಾಗುತ್ತದೆ. ಈ ಬಾರಿ ತೀರ್ಥಹಳ್ಳಿ ಎಳ್ಳಮವಾಸ್ಯೆ ಜಾತ್ರೆ 30 ಡಿಸಂಬರ್ 2024 ರಂದು ಆರಂಭವಾಗಲಿದೆ. ಆ ದಿನ ಉತ್ಸವ ಮೂರ್ತಿಯನ್ನು ಹೊಳೆಗೆ ತೆಗೆದುಕೊಂಡು ಹೋಗಿ ಅಭಿಷೇಕ ಪೂಜೆಗಳನ್ನು ಮಾಡಿ ದೇವಾಲಯಕ್ಕೆ ತಂದು ಪೂಜಿಸುತ್ತಾರೆ. ಮಾರನೆಯ ದಿನ 31 ಡಿಸಂಬರ್ 2024 ರಥೋತ್ಸವದ ಆಚರಣೆ ಮಾಡಲಾಗುತ್ತದೆ. ಉತ್ಸವ ಮೂರ್ತಿಯನ್ನು ಅಲಂಕರಿಸಿ ದೇವಸ್ಥಾನದ ರಥದಲ್ಲಿ ಕೂರಿಸಿ ರಥೋತ್ಸವ ಆಚರಿಸಲಾಗುತ್ತದೆ. 1 ಜನವರಿ 2025 ಹೊಸ ವರ್ಷದಂದದೇ ತೀರ್ಥಹಳ್ಳಿಯಲ್ಲಿ ತೆಪ್ಪೋತ್ಸವ ಆಚರಿಸಲಾಗುತ್ತದೆ. ಜಾತ್ರೆಯ ಪ್ರಾರಂಭದ ದಿನ ತುಂಗಾ ನದಿಯ ರಾಮಕೊಂಡದಲ್ಲಿ ಭಕ್ತರು ಸ್ನಾನ ಮಾಡುತ್ತಾರೆ. ಎರಡನೇ ದಿನ ರಾಮೇಶ್ವರ ದೇವರ ರಥೋತ್ಸವ ಜರುಗುತ್ತದೆ. ಮೂರನೇ ದಿನ ರಾತ್ರಿ ತುಂಗಾ ನದಿಯಲ್ಲಿ ರಾಮೇಶ್ವರ ದೇವರ ತೆಪ್ಪೋತ್ಸವ ಜರುಗುತ್ತದೆ. ಇಲ್ಲಿಗೆ ಮೂರು ದಿನದ ಜಾತ್ರೆ ಮುಕ್ತಾಯಗೊಳ್ಳುತ್ತದೆ.
ರಾಜ್ಯದ ವಿವಿಧ ಭಾಗದಿಂದ ಜನರ ಆಗಮನ
ತೀರ್ಥಹಳ್ಳಿ ತೆಪ್ಪೋತ್ಸವಕ್ಕಾಗಿ ತೀರ್ಥಹಳ್ಳಿ ಪಟ್ಟಣ ಮದುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತದೆ. ಲವಲವಿಕೆಯಿಂದ ಜಾತ್ರೆಗೆ ಬರುವ ಯುವಪೀಳಿಗೆಯಿಂದ ಹಿಡಿದು,ವಯೋವೃದ್ಧರು ಸಜ್ಜಾಗುವ ಹಬ್ಬ ರಾಮೇಶ್ವರ ಜಾತ್ರೆ. ನಾಡ ಜಾತ್ರೆ ಎಂದು ಪ್ರಸಿದ್ಧಿಗೊಂಡಿರುವ ತುಂಗಾ ತೀರದ ಸುಗ್ಗಿ ಕಾಲದ ನಡುವೆ ಹಿಗ್ಗು ತರುವುದಕ್ಕಾಗಿ ಈ ಜಾತ್ರೆ ಆರಂಭಗೊಳ್ಳುತ್ತದೆ ಎಂದು ಪುರಾಣ ಪ್ರಸಿದ್ಧ ಹಿನ್ನಲೆಯಿದೆ. ಇಲ್ಲಿನ ಜನರು ಸೇರಿದಂತೆ ರಾಜ್ಯದ ಮೂಲೆ ಮೂಲೆಯಿಂದ ಭಕ್ತರು ಆಗಮಿಸಿ ತೀರ್ಥಹಳ್ಳಿ ಎಳ್ಳಮವಾಸ್ಯೆ ಜಾತ್ರೆಯ ಸೊಬಗನ್ನು ಕಣ್ತುಂಬಿಕೊಳ್ಳುತ್ತಾರೆ.