ಕರಾವಳಿ ಟಾಪ್ ನ್ಯೂಸ್
– ಸುರತ್ಕಲ್: ಕೊಠಡಿಯಲ್ಲಿ ಕೂಡಿ ಹಾಕಿ ವಿದ್ಯಾರ್ಥಿಗೆ ರ್ಯಾಗಿಂಗ್ ಹಲ್ಲೆ!
– 10 ವಿದ್ಯಾರ್ಥಿಗಳ ಮೇಲೆ ಎಫ್ಐಆರ್
– ವಿಟ್ಲ: ಅನಾರೋಗ್ಯದಿಂದ ಯುವತಿ ಮೃತ್ಯು
– ಉಡುಪಿ: ಕಾರ್ಕಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ನಿಧನ
NAMMUR EXPRESS NEWS
ಸುರತ್ಕಲ್: ಮಂಗಳೂರು ಹೊರವಲಯದ ಮುಕ್ಕ ಶ್ರೀನಿವಾಸ ಕಾಲೇಜಿನಲ್ಲಿ ರ್ಯಾಗಿಂಗ್ ನಡೆದಿದೆ. ಕಾಲೀಜಿನ ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗೆ ರ್ಯಾಗಿಂಗ್ ಮಾಡಿ ಹಲ್ಲೆ ನಡೆಸಿದ್ದು ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಲೇಜಿನಲ್ಲಿ ಮೊದಲನೇ ವರ್ಷದ ವೈದ್ಯಕೀಯ ಮನೋಶಾಸ್ತ್ರ ವ್ಯಾಸಂಗ ಮಾಡುತ್ತಿರುವ 19 ವರ್ಷದ ವಿದ್ಯಾರ್ಥಿ ರ್ಯಾಗಿಂಗ್ ಪಿಡುಗಿಗೆ ಒಳಗಾದ ವಿದ್ಯಾರ್ಥಿಯಾಗಿದ್ದು ನವೆಂಬರ್ 25 ರಂದು ಕಾಲೇಜಿನ ಹಿರಿಯ ವಿದ್ಯಾರ್ಥಿ ಸಿದಾಯಿಸ್ ಎಂಬಾತ ಲೊಕೇಶನ್ ಕಳುಹಿಸಿ, ಅಲ್ಲಿಗೆ ಬರುವಂತೆ ಕಿರಿಯ ವಿದ್ಯಾರ್ಥಿಗೆ ತಿಳಿಸಿದ್ದಾನೆ.
ಆತ ತನ್ನ ಇತರ ಸ್ನೇಹಿತರನ್ನು ಕರೆದುಕೊಂಡು ನಿಗದಿತ ಸ್ಥಳಕ್ಕೆ ತೆರಳಿದ್ದಾನೆ. ಹಿರಿಯ ವಿದ್ಯಾರ್ಥಿಯ ಕೊಠಡಿಯೊಳಗೆ ಹೋದ ಬಳಿಕ, ಅಲ್ಲಿಯೇ ಇದ್ದ ಸಿದಾಯಿಸ್, ಅಮಲ್ ಕೃಷ್ಣ ಹಾಗೂ ಸಾಜೀದ್ ಅವರುಗಳು ಅವಾಚ್ಯ ಶಬ್ದಗಳಿಂದ ಕಿರಿಯ ವಿದ್ಯಾರ್ಥಿಗಳಿಗೆ ರೇಗಿಸಿದ್ದಾರೆ. ಬಳಿಕ ಕೊಠಡಿ ಬಾಗಿಲನ್ನು ಮುಚ್ಚಿ ಕಿರಿಯ ವಿದ್ಯಾರ್ಥಿಗೆ ಹಾಡಲು ಮತ್ತು ನೃತ್ಯ ಮಾಡಲು ಹೇಳಿದ್ದಾರೆ. ಇದಕ್ಕೆ ಕಿರಿಯ ವಿದ್ಯಾರ್ಥಿ ತೀವ್ರ ವಿರೋಧ ವ್ಯಕ್ತಪಡಿಸಿ ಪ್ರತಿರೋಧ ಒಡ್ಡಿದಾಗ ಹಿರಿಯ ವಿದ್ಯಾರ್ಥಿಗಳಾದ ಸಿದಾಯಿಸ್, ಅಮಲ್ ಕೃಷ್ಣ ಹಾಗೂ ಸಾಜಿದ್ ಆತನ ಕೆನ್ನೆಗೆ ಹೊಡೆದು ಹಲ್ಲೆ ನಡೆಸಿದ್ದಾರೆ. ನಂತರ ಸಹ ವಿದ್ಯಾರ್ಥಿಗಳು ಕೊಠಡಿಗೆ ಬಂದು ಇಲ್ಲಿ ನಡೆದ ವಿಷಯವನ್ನು ಕಾಲೇಜು ಮಂಡಳಿ ಹಾಗೂ ಪೊಲೀಸರಿಗೆ ತಿಳಿಸಿದಲ್ಲಿ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ. ಮನೆಗೆ ಬಂದ ಕಿರಿಯ ವಿದ್ಯಾರ್ಥಿ ಭಯದಿಂದ ಯಾರ ಬಳಿಯೂ ಈ ವಿಷಯವನ್ನು ಹಂಚಿಕೊಂಡಿರಲಿಲ್ಲ. ಮರುದಿನ ಬೆಳಿಗ್ಗೆ ಎಚ್ಚರವಾದಾಗ ಆತನ ಎಡಕಿವಿಯಲ್ಲಿ ರಕ್ತ ಬಂದಿರುವುದನ್ನು ಕಂಡು ಕಾಲೇಜಿನಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ. ಬಳಿಕ ವಿದ್ಯಾರ್ಥಿ ಕಾಲೇಜಿನ ಡೀನ್ ಹಾಗೂ ಆ್ಯಂಟಿ ರ್ಯಾಗಿಂಗ್ ಕಮಿಟಿಗೆ ದೂರು ನೀಡಿದ್ದಾನೆ. ಕಿರಿಯ ವಿದ್ಯಾರ್ಥಿ ನೀಡಿದ ದೂರಿನ ಆಧಾರದ ಮೇಲೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.
* ವಿಟ್ಲ: ಅನಾರೋಗ್ಯದಿಂದ ಯುವತಿ ಮೃತ್ಯು
ಮಂಗಳೂರು: ವಿಟ್ಲದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಯುತಿಯೊಬ್ಬರೂ ಮೃತಪಟ್ಟ ಘಟನೆ ನ.28ರ ಗುರುವಾರ ನಡೆದಿದೆ. ಮೃತಪಟ್ಟ ಯುವತಿ ವಿಟ್ಲ ಕುಂಡಡ್ಕ ಪಾದೆ ನಿವಾಸಿ ದಿ.ನಾರಾಯಣ ಮೂಲ್ಯ ಅವರ ಪುತ್ರಿ ರಕ್ಷಿತಾ(20).
ಮೃತರು ತಾಯಿ, ಅಕ್ಕ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
* ಉಡುಪಿ: ಕಾರ್ಕಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ನಿಧನ
ಉಡುಪಿ : ಬೋಳಾರ್ ಗುಡ್ಡೆ ಕಲಾಯಿಬೈಲ್ ನಿವಾಸಿ, ಉದ್ಯಾವರ ಗ್ರಾಮ ಪಂಚಾಯತ್ ನ ಹಿರಿಯ ಸದಸ್ಯ ಲಾರೆನ್ಸ್ ಡೆಸಾರವರ ಪತ್ನಿ, ಕಾರ್ಕಳ ಸಹಿತ ವಿವಿಧ ತಾಲೂಕಿನ ಶಾಲೆಗಳಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಜುಲಿಯಾನ ಹೆಲೆನ್ ರೆಬೆಲ್ಲೋ ಡೆಸಾ ಇಂದು ಮುಂಜಾನೆ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನ ಹೊಂದಿದರು. ಅವರಿಗೆ 56 ವರ್ಷ ವಯಸ್ಸಾಗಿತ್ತು.
ಉದ್ಯಾವರದ ಸಂತ ಫ್ರಾನ್ಸಿಸ್ ಕ್ಸೇವಿಯರ್ ಹಿರಿಯ ಪ್ರಾಥಮಿಕ ಶಾಲೆ ಸಹಿತಾ ವಿವಿಧ ಶಾಲೆಗಳಲ್ಲಿ ಸಹ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಇವರು, ಕಳೆದ ಹಲವು ವರ್ಷಗಳಿಂದ ಕಾರ್ಕಳ ಬೈಲೂರಿನ ಮೈನ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಅತ್ಯಂತ ಸರಳ ಸ್ವಭಾವದವರಾಗಿದ್ದ ಇವರು, ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕಿಯಾಗಿದ್ದರು. ಲಯನ್ಸ್ ಕ್ಲಬ್ ಉದ್ಯಾವರ ಇಲ್ಲಿ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಇವರು, ಕ್ರೀಡೆಯಲ್ಲಿಯೂ ಹಲವು ಪದಕಗಳನ್ನು ಜಯಿಸಿದ್ದರು. ಮೃತರು, ಉದ್ಯಾವರ ಸಂತ ಫ್ರಾನ್ಸಿಸ್ ಕ್ಸೇವಿಯರ್ ದೇವಾಲಯದ ಪಾಲನ ಮಂಡಳಿಯ ಉಪಾಧ್ಯಕ್ಷರಾಗಿರುವ ಪತಿ ಲಾರೆನ್ಸ್ ಡೆಸಾ, ಪುತ್ರ, ಪುತ್ರಿ, ವಿದ್ಯಾರ್ಥಿ ಸಮುದಾಯ ಸಹಿತ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಶನಿವಾರ ಉದ್ಯಾವರ ಚರ್ಚಿನಲ್ಲಿ ನಡೆಯಲಿದೆ.