ಹಾಸನದಲ್ಲಿ ಕಾಂಗ್ರೆಸ್ ಸಮಾವೇಶಕ್ಕೆ ಜನ ಸಾಗರ!
– ಸಿಎಂ, ಡಿಕೆಶಿ ಭಾಷಣಕ್ಕೆ ಜನರ ಶಿಳ್ಳೆ: ಹಾಸನದ ಹಲವೆಡೆ ಟ್ರಾಫಿಕ್ ಜಾಮ್ ಜಾಮ್
– ಸಿಎಂ ಬದಲು ವಿಚಾರ: ಸಿದ್ದರಾಮಯ್ಯ ಹೇಳಿದ್ದೇನು..?
NAMMUR EXPRESS NEWS
ಬೆಂಗಳೂರು: ಕರ್ನಾಟಕದಲ್ಲಿ ನಡೆದ ಮೂರೂ ಉಪಚುನಾವಣೆಗಳಲ್ಲಿ ಭರ್ಜರಿ ಗೆಲುವು ದಾಖಲಿಸಿ ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್, ಜೆಡಿಎಸ್ ಭದ್ರಕೋಟೆ ಎಂದೇ ಹೇಳಲಾದ ಹಾಸನದಲ್ಲಿ ಬೃಹತ್ ಸಮಾವೇಶ ಆಯೋಜಿಸಿದ್ದು ಸಾವಿರಾರು ಜನ ಸೇರಿದ್ದು, ಇಡೀ ಹಾಸನದಲ್ಲಿ ಎಲ್ಲೆಲ್ಲಿ ನೋಡಿದರೂ ಜನ ಸಾಗರವೇ ಕಂಡು ಬಂದಿತು.
ಮುಖ್ಯಮಂತ್ರಿಯ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಹಾಸನ ಉಸ್ತುವಾರಿ ಸಚಿವ ರಾಜಣ್ಣ ಸೇರಿದಂತೆ ಅನೇಕ ಸಚಿವರು, ಹಿರಿಯ ಕಾಂಗ್ರೆಸ್ ನಾಯಕರು ಸಮಾವೇಶದಲ್ಲಿ ಭಾಗವಹಿಸಿದ್ದರು.
– ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳನ್ನು ನಿಲ್ಲಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪೋಷಣೆ
ಹಾಸನ : ನಮ್ಮ ಸರ್ಕಾರದ ಐದು ಗ್ಯಾರಂಟಿಗಳನ್ನು ಪಡೆದಿರುವುದಕ್ಕೆ ಫಲಾನುಭವಿಗಳನ್ನು ಅವಮಾನಿಸುತ್ತಿರುವ ಬಿಜೆಪಿ-ಜೆಡಿಎಸ್ ಪರಮ ಜನದ್ರೋಹಿಗಳು. ಯಾವುದೇ ಕಾರಣಕ್ಕೂ ನಾವು ಗ್ಯಾರಂಟಿಗಳನ್ನು ನಿಲ್ಲಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದರು.
ಹಾಸನದಲ್ಲಿ ನಡೆದ ಬೃಹತ್ ಜನಕಲ್ಯಾಣೋತ್ಸವ ಸಮಾವೇಶವದಲ್ಲಿ ಮಾತನಾಡುತ್ತಾ, “ಡಾ.ರಾಜ್ ಅವರು ಅಭಿಮಾನಿ ದೇವರು ಎಂದು ಹೇಳುತ್ತಿದ್ದರು. ನಮಗೆ ಮತದಾರರ ಬಂಧುಗಳೇ ದೇವರು,” ಎನ್ನುತ್ತಾ ಉಪ ಚುನಾವಣೆಯಲ್ಲಿ ಮೂರಕ್ಕೆ ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ʼಆಶೀರ್ವದಿಸಿದ್ದಕ್ಕೆʼ ಧನ್ಯವಾದ ಅರ್ಪಿಸಿದರು. ಹಾಸನದ ಮಹಾನ್ ನಾಯಕರ ಮೊಮ್ಮಗ ನಿಖಿಲ್ ಕುಮಾರಸ್ವಾಮಿಯನ್ನು ಚನ್ನಪಟ್ಟಣದಲ್ಲಿ , ಮಾಜಿ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಅವರ ಮೊಮ್ಮಗನನ್ನು ಶಿಗ್ಗಾಂವಿಯಲ್ಲಿ ಜನ ಸೋಲಿಸಿ ನಮಗೆ ಆಶೀರ್ವದಿಸಿದ್ದಾರೆ ಮುಖ್ಯಮಂತ್ರಿ ಹೇಳಿದ್ದಾರೆ. “ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಆಗುವಷ್ಟು ಬಹುಮತ ಈ ರಾಜ್ಯದ ಜನರೆ ಯಾವತ್ತೂ ಕೊಟ್ಟಿಲ್ಲ. ಒಮ್ಮೆ ಕಾಂಗ್ರೆಸ್ ಬೆಂಬಲದಲ್ಲಿ ಮತ್ತೊಮ್ಮೆ ಬಿಜೆಪಿ ಬೆಂಬಲದಲ್ಲಿ ಮುಖ್ಯಮಂತ್ರಿ ಆದರು. ಬಳಿಕ ಎರಡೂ ಪಕ್ಷಗಳಿಗೆ ವಂಚಿಸಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ಸುಭದ್ರ ಸರ್ಕಾರ ಕೊಟ್ಟಿದೆ. ಮಾತ್ರವಲ್ಲ ಕಾಂಗ್ರೆಸ್ ಸರ್ಕಾರ ಬಂದಾಗಲೆಲ್ಲಾ ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ. 2013 ರಲ್ಲಿ ಕೊಟ್ಟ ಮಾತಿನಂತೆ ಹಲವಾರು ಭಾಗ್ಯಗಳನ್ನು ಜಾರಿ ಮಾಡಿದೆವು. ಈ ಬಾರಿ ಐದಕ್ಕೆ ಐದೂ ಗ್ಯಾರಂಟಿಗಳ ಜೊತೆಗೆ ಪ್ರಣಾಳಿಕೆಯಲ್ಲಿ ಘೋಷಿಸಿದ ಎಲ್ಲಾ ಗ್ಯಾರಂಟಿಗಳನ್ನೂ ಈಡೇರಿಸುತ್ತಿದ್ದೇವೆ,” ಎಂದು ಸಿದ್ದರಾಮಯ್ಯ ಹೇಳಿದ್ದಾರೆ. “ಬಿಜೆಪಿಯಾಗಲಿ, ಜೆಡಿಎಸ್ ಆಗಲಿ ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ. ಪ್ರಧಾನಿ ಮೋದಿ ಅವರ ಸರ್ಕಾರ ನಾವು ದುಡ್ಡು ಕೊಡ್ತೀವಿ ಅಂದರೂ ಅಕ್ಕಿ ಕೊಡಲಿಲ್ಲ. ಇಂಥಾ ಜನದ್ರೋಹಿ ಸರ್ಕಾರ ಬಿಜೆಪಿಯದ್ದು. ನಾವು ಐದು ಗ್ಯಾರಂಟಿಗಳಿಗಾಗಿ 56 ಸಾವಿರ ಕೋಟಿ ರೂಪಾಯಿಯನ್ನು ರಾಜ್ಯದ ಜನರ ಖಾತೆಗೆ ನೇರವಾಗಿ ಹಾಕುತ್ತಿದ್ದೇವೆ. ಈ ಐದು ಗ್ಯಾರಂಟಿಗಳನ್ನು ಪಡೆಯುತ್ತಿರುವ ಫಲಾನುಭವಿಗಳನ್ನು ಅವಮಾನಿಸುತ್ತಿರುವ ಬಿಜೆಪಿ-ಜೆಡಿಎಸ್ ದೊಡ್ಡ ಜನದ್ರೋಹಿಗಳು. ಕೇಂದ್ರದಲ್ಲಿ ಮಂತ್ರಿಯಾಗಿರುವ ಹೆಚ್.ಡಿ.ಕುಮಾರಸ್ವಾಮಿಯವರು ಮೇಕೆದಾಟು ವಿಚಾರದಲ್ಲಿ ಮೌನ ಆಗಿರುವುದು ಏಕೆ? ಬೆಂಗಳೂರಿನ ಜನತೆಗೆ ನೀರು ಬೇಕಾಗಿದೆ. ಕೊಡಿಸಲಿ,” ಎಂದು ಸವಾಲು ಹಾಕಿದರು. ದೇವೇಗೌಡರು ರಾಜಕೀಯವಾಗಿ ಒಕ್ಕಲಿಗ ನಾಯಕರನ್ನು ನಿರಂತರವಾಗಿ ಮುಗಿಸುತ್ತಿದ್ದಾರೆ. ಬಚ್ಚೇಗೌಡರು, ವೈ.ಕೆ.ರಾಮಯ್ಯ, ಬೈರೇಗೌಡರು, ಕೃಷ್ಣಪ್ಪ, ಚಲುವರಾಯಸ್ವಾಮಿ ಸೇರಿ ಎಷ್ಟು ಮಂದಿ ಒಕ್ಕಲಿಗ ನಾಯಕರನ್ನು ದೇವೇಗೌಡರು ರಾಜಕೀಯವಾಗಿ ಮುಗಿಸಿದರು. ಒಕ್ಕಲಿಗ ನಾಯಕರಾಗಿದ್ದ ಕೃಷ್ಣಪ್ಪ ಅವರು ಆಗಲೇ ಈ ಪಾಪದ ಹೊರೆಯನ್ನು ಹೊರಬೇಕಾಗುತ್ತದೆ ಎಂದು ದೇವೇಗೌಡರಿಗೆ ಹೇಳಿದ್ದರು. ಈಗ ಒಕ್ಕಲಿಗ ನಾಯಕ ಕೃಷ್ಣಪ್ಪ ಅವರ ಮಾತು ನಿಜವಾಗಿದೆ. ನಾನು ಮತ್ತು ಜಾಲಪ್ಪ ಒಟ್ಟಾಗಿ ರಾಮಕೃಷ್ಣಹೆಗಡೆಯವರ ಬದಲಿಗೆ ದೇವೇಗೌಡರನ್ನು ಮುಖ್ಯಮಂತ್ರಿ ಮಾಡಿದೆವು. ಆಮೇಲೆ ನನ್ನನ್ನೇ ಪಕ್ಷದಿಂದ ಉಚ್ಚಾಟಿಸಿದರು,” ಎಂದು ಟೀಕಿಸಿದರು.
ಹಾಸನ ಮತ್ತೆ ಕಾಂಗ್ರೆಸ್ ತೆಕ್ಕೆಗೆ
“ಕಾಂಗ್ರೆಸ್ ಸರ್ಕಾರ ಮಾತ್ರ ಸುಭದ್ರ ಸರ್ಕಾರ ಕೊಡಲು ಸಾಧ್ಯ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಹಾಸನ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಜಯಭೇರಿಗಳಿಸಲಿದೆ. ಇದು ಶತಸಿದ್ದ ಎಂದರು. ಹಾಸನದಲ್ಲಿ ಈ ಮಟ್ಟದ ದೊಡ್ಡ ಜನ ಕಲ್ಯಾಣ ಕಾಂಗ್ರೆಸ್ ಸಮಾವೇಶ ಹಿಂದೆಂದೂ ಆಗಿರಲಿಲ್ಲ. ಇದರಲ್ಲಿ ಸ್ವಾಭಿಮಾನಿ ಒಕ್ಕೂಟಗಳು, ಕಾಂಗ್ರೆಸ್ಸೇತರ ಸಂಘಟನೆಗಳು ಮತ್ತು ಕಾಂಗ್ರೆಸ್ ಪಕ್ಷ ಒಟ್ಟಾಗಿ ಶ್ರಮಿಸಿದ್ದಾರೆ,” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸಿಎಂ ಬದಲು ವಿಚಾರ: ಸಿದ್ದರಾಮಯ್ಯ ಹೇಳಿದ್ದೇನು?
ಕೆ.ಆರ್.ಪೇಟೆಯಲ್ಲಿ ಈ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಸಿಎಂ ಬದಲಾವಣೆಗೆ ಸಂಬಂಧಿಸಿದಂತೆ ಹೈಕಮಾಂಡ್ ಮಟ್ಟದಲ್ಲಿ ಯಾವುದೇ ಒಪ್ಪಂದವಾಗಿಲ್ಲ. ಆದರೆ ನಾವು ಹೈಕಮಾಂಡ್ ನಿರ್ಧಾರಕ್ಕೆ (ಭವಿಷ್ಯದಲ್ಲಿ) ಬದ್ಧರಾಗುತ್ತೇವೆ ಎಂದು ಅವರು ಸುದ್ದಿಗಾರರಿಗೆ ಉತ್ತರಿಸಿದರು. ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, ನಮ್ಮ ಸಿಎಂ ನಿರ್ಧಾರವೇ ಅಂತಿಮ, ಅದಕ್ಕೆ ನನ್ನ ಅಭ್ಯಂತರವಿಲ್ಲ ಎಂದು ಹೇಳಿದ್ದರು.
ಗುರುವಾರದ ರ್ಯಾಲಿಯನ್ನು ಸಿದ್ದರಾಮಯ್ಯನವರ ಬೆಂಬಲಿಗರು ಶೋಷಿತ ಸಮುದಾಯಗಳ ಒಕ್ಕೂಟದ ಅಡಿಯಲ್ಲಿ ಮೊದಲು ಯೋಜಿಸಲಾಗಿತ್ತು. ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ದಲಿತರ ಸಂಕ್ಷಿಪ್ತ ರೂಪವಾದ ಅಹಿಂದ ಸಂಘಟನೆ ಸಿದ್ದರಾಮಯ್ಯ ಅವರ್ನು ಬೆಂಬಲಿಸಲು ಈ ಸಮಾವೇಶ ಆಯೋಜಿಸಲಾಗಿತ್ತು. ಇದಕ್ಕೆ ‘ಸ್ವಾಭಿಮಾನಿ ಸಮಾವೇಶ’ ಎಂದು ಹೆಸರಿಡಲಾಗಿತ್ತು ಆದರೆ ಸಿದ್ದರಾಮಯ್ಯ ಅವರಿಗೆ ಬೆಂಬಲ ನೀಡಲು ಕಾರ್ಯಕ್ರಮ ರೂಪಿಸಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡರೊಬ್ಬರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅನಾಮಧೇಯ ಪತ್ರ ಬರೆದಿದ್ದಾರೆ ಎನ್ನಲಾಗಿದೆ. ಸ್ವಾಭಿಮಾನಿ ಮೈತ್ರಿಕೂಟ ಮತ್ತು ಕಾಂಗ್ರೆಸ್ ಆಶ್ರಯದಲ್ಲಿ ಸಮಾವೇಶ ನಡೆಯಲಿದೆ ಎಂದು ಹೇಳಿದ ಶಿವಕುಮಾರ್ ಅದನ್ನು ಕಾಂಗ್ರೆಸ್ ಪಕ್ಷದ ಸಮಾವೇಶವನ್ನಾಗಿ ಪರಿವರ್ತಿಸಿ ಜನಕಲ್ಯಾಣ ಸ್ವಾಭಿಮಾನಿ ಸಮಾವೇಶ ಎಂದು ಮರುನಾಮಕರಣ ಮಾಡಿದರು, ಇದು ಸಿದ್ದರಾಮಯ್ಯ ಬೆಂಬಲಿಗರಿಗೆ ಇಷ್ಟವಾಗಿಲ್ಲ. ಶೋಷಿತ ಸಮುದಾಯಗಳ ಒಕ್ಕೂಟವು ಜನವರಿಯಲ್ಲಿ ಕಿತ್ತೂರು ಕರ್ನಾಟಕ ಪ್ರದೇಶದಲ್ಲಿ, ಬಹುಶಃ ಬೆಳಗಾವಿಯಲ್ಲಿ ವಿಶೇಷ ಸಮಾವೇಶವನ್ನು ಯೋಜಿಸುತ್ತಿದೆ. ಹಾಸನ ಸಮಾವೇಶದಲ್ಲಿ ಹಲವು ಒಕ್ಕೂಟ ಮುಖಂಡರು ಪಾಲ್ಗೊಳ್ಳುವ ಸಾಧ್ಯತೆ ಕಡಿಮೆಯಿದೆ, ಇದು ತಮ್ಮ ನಾಯಕತ್ವದ ಸ್ಥಾನಮಾನಕ್ಕೆ ಧಕ್ಕೆ ತರಲಿದೆ ಎಂದು ಭಾವಿಸಿದ್ದಾರೆ ಎಂದು ಒಕ್ಕೂಟದ ಸಂಚಾಲಕರಾದ ಕುರುಬ ಮುಖಂಡ ರಾಮಚಂದ್ರಪ್ಪ, ಡಿಎಸ್ಎಸ್ ಮುಖಂಡ ಮಾವಳ್ಳಿ ಶಂಕರ್ ತಿಳಿಸಿದ್ದಾರೆ.
ಈ ಹಿಂದೆ ಅಹಿಂದ ಸಮಾವೇಶ ನಂತರ ಹಿಂದುಳಿದ ವರ್ಗದ ಸಮಾವೇಶವಾಯಿತು. ಸ್ವಾಭಿಮಾನಿ ಸಮಾವೇಶ ಈಗ ಕಾಂಗ್ರೆಸ್ ಸಮಾವೇಶ ಎಂದು ಬದಲಾಗಿದೆ ಎಂದು ನಾಯಕರೊಬ್ಬರು ಹೇಳಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸೇರಿದಂತೆ ಶಿವಕುಮಾರ್ ಬೆಂಬಲಿಗರು ಸಮಾವೇಶವನ್ನು ಮತದಾರರಿಗೆ ಕೃತಜ್ಞತೆ ಸಲ್ಲಿಸಲು ಬಳಸಿಕೊಳ್ಳುತ್ತಿದ್ದಾರೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸ್ವಾಭಿಮಾನಿ ಮೈತ್ರಿಕೂಟ ಕಾಂಗ್ರೆಸ್ ಸಮಾವೇಶಕ್ಕೆ ಹೆಚ್ಚಿನ ಜನರನ್ನು ಕರೆತರಲಿದೆ ಎಂದು ಸಿಎಂ ಹೇಳಿಕೆ ನೀಡಿದ್ದು, ಒಕ್ಕಲಿಗರು ಹಳೆ ಮೈಸೂರು ಭಾಗದಲ್ಲಿ ಪ್ರವಾಸ ಕೈಗೊಂಡು ಜನರನ್ನು ಸಜ್ಜುಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದರೆ ಸಂತೋಷವಾಗುತ್ತದೆ, ಆದರೆ ಕಾಂಗ್ರೆಸ್ ಸಮಾವೇಶವನ್ನು ಮುನ್ನಡೆಸುತ್ತದೆ ಎಂದು ಶಿವಕುಮಾರ್ ಹೇಳಿದರು.